More

    ಭ್ರೂಣ ಹತ್ಯೆ ಪ್ರಕರಣಗಳಿಗೆ ಕಡಿವಾಣ ಅಗತ್ಯ



    ಹಾಸನ : ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಭ್ರೂಣ ಹತ್ಯೆ ಪ್ರಕರಣಗಳಿಗೆ ಕಡಿವಾಣ ಹಾಕಬೇಕು ಎಂದು ಶಾಸಕ ಸಿ.ಎನ್.ಬಾಲಕೃಷ್ಣ ಹೇಳಿದರು.

    ಚನ್ನರಾಯಪಟ್ಟಣ ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಭಾರತೀಯ ಅಂಚೆ ಇಲಾಖೆ ಹಾಸನ ವಿಭಾಗದ ವತಿಯಿಂದ ಶುಕ್ರವಾರ ಏರ್ಪಡಿಸಿದ್ದ ಸುಕನ್ಯಾ ಸಮೃದ್ಧಿ ಮಹೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

    ಹೆಣ್ಣು ಮಕ್ಕಳು ಮನೆಯ ಬೆಳಕು, ಗಂಡು ಮಗುವಿನ ಹುಟ್ಟಿಗೆ ಪ್ರಾಮುಖ್ಯತೆ ನೀಡುವ ಭರದಲ್ಲಿ ಹೆಣ್ಣು ಭ್ರೂಣ ಹತ್ಯೆ ಮಾಡುವುದು ಸರಿಯಲ್ಲ. ತಾಯಿ, ಅಕ್ಕ-ತಂಗಿ, ಸ್ನೇಹಿತೆ ಹಾಗೂ ಸಂಗಾತಿ ಸ್ಥಾನದಲ್ಲಿ ನಿಂತು ಕೈಹಿಡಿದು ಬದುಕು ಮುನ್ನಡೆಸುವ ಶಕ್ತಿಯ ರೂಪ ಹೆಣ್ಣು. ಹೆಣ್ಣು ಸಂತಾನ ಉಳಿಸಿ ಬೆಳೆಸಬೇಕು ಎಂದು ತಿಳಿಸಿದರು.


    ಭ್ರೂಣ ಹತ್ಯೆ ಮಹಾ ಪಾಪ, ಜತೆಗೆ ಗಂಡು-ಹೆಣ್ಣು ಅನುಪಾತದಲ್ಲಿ ಏರುಪೇರು ಉಂಟಾಗಲಿದೆ. ಇದರಿಂದ ಮುಂದಿನ ದಿನಗಳಲ್ಲಿ ಮದುವೆ ವೇಳೆ ಸಾಕಷ್ಟು ಸಮಸ್ಯೆಗಳು ಎದುರಾಗಲಿವೆ. ಭ್ರೂಣ ಪತ್ತೆ ಮಾಡುವವರಿಗೆ ಹಾಗೂ ಹತ್ಯೆಗೆ ಮುಂದಾಗುವವರಿಗೆ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಎಚ್ಚರಿಸಿದರು.


    ದಕ್ಷಿಣ ಕರ್ನಾಟಕ ವಲಯದ ಪೋಸ್ಟ್ ಮಾಸ್ಟರ್ ಜನರಲ್ ಎಲ್.ಕೆ.ದಾಶ್ ಮಾತನಾಡಿ, ಹೆಣ್ಣು ಮಕ್ಕಳ ಭವಿಷ್ಯದ ಪ್ರಗತಿ ಸಲುವಾಗಿ ಸರ್ಕಾರವು ಸುಕನ್ಯಾ ಸಮೃದ್ಧಿ ಯೋಜನೆಯನ್ನು ರೂಪಿಸಿದ್ದು, ಇದರಿಂದ ಸಾಕಷ್ಟು ಸೌಲಭ್ಯಗಳು ಲಾಭದಾಯಕವಾಗಿ ಸಿಗಲಿವೆ ಎಂದರು.


    ಸುಕನ್ಯಾ ಸಮೃದ್ಧಿ ಯೋಜನೆ ಹೊಂದಿದ್ದಲ್ಲಿ 18 ವರ್ಷದವರೆಗೆ ವಿದ್ಯಾಭ್ಯಾಸಕ್ಕೆ ಶೇ.50 ರಷ್ಟು ಹಾಗೂ ನಂತರ ಮದುವೆ ವೇಳೆಗೆ ಉಳಿದ ಹಣ ಸಿಗಲಿದ್ದು, ಪಾಲಕರಿಗೆ ಹೆಣ್ಣು ಮಕ್ಕಳ ಮೇಲಿನ ಭವಿಷ್ಯದ ಹೊರೆ ಹಾಗೂ ಆರ್ಥಿಕ ಜವಾಬ್ದಾರಿ ಕಡಿಮೆಯಾಗಲಿದೆ. ಇದು ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆ ಎಂದು ತಿಳಿಸಿದರು.


    ಈ ಯೋಜನೆಯಡಿ ಜಿಲ್ಲೆಯಲ್ಲಿ ಇದೂವರೆಗೆ 63 ಸಾವಿರ ಖಾತೆ ತೆರೆದಿದ್ದು, 201 ಕೋಟಿ ರೂ. ಹಣವನ್ನು ಯೋಜನೆಯಡಿ ತೊಡಗಿಸಲಾಗಿದೆ. 75ನೇ ಸ್ವಾತಂತ್ರೃ ಮಹೋತ್ಸವದ ಹಿನ್ನೆಲೆ ದೇಶದ 75 ನಗರಗಳಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.


    ಸುಕನ್ಯಾ ಸಮೃದ್ಧಿ ಯೋಜನೆ ಹೊಂದಿರುವ ಮಕ್ಕಳಿಗೆ ಪಾಸ್ ಬುಕ್‌ಗಳನ್ನು ವಿತರಿಸಲಾಯಿತು. ತಹಸೀಲ್ದಾರ್ ಬಿ.ಎಂ.ಗೋವಿಂದರಾಜ್, ತಾಪಂ ಇಒ ಡಿ.ಬಿ.ಸುನೀಲ್‌ಕುಮಾರ್, ಹಾಸನ ವಿಭಾಗದ ಅಂಚೆ ಅಧೀಕ್ಷಕ ಎನ್.ರಮೇಶ್, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಎಚ್.ಎಲ್.ಶಂಕರಮೂರ್ತಿ, ತಾಲೂಕು ವ್ಯಾಪ್ತಿ ಅಂಚೆ ಕಚೇರಿಗಳ ಅಧಿಕಾರಿಗಳು, ಸಿಬ್ಬಂದಿ ವರ್ಗ ಹಾಗೂ ಸಾರ್ವಜನಿಕರಿದ್ದರು.

    Array

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts