More

    ಭೂ ತಾಂತ್ರಿಕ ಸಾಧ್ಯತೆ ಸರ್ವೆ ಶುರು

    ಸುಭಾಸ ಧೂಪದಹೊಂಡ ಕಾರವಾರ

    ಬೇಲೆಕೇರಿ ಬಂದರು ಅಭಿವೃದ್ಧಿಗೆ ಮುಂದಾಗಿರುವ ಸರ್ಕಾರ ಇಲ್ಲಿನ ಭೂ ತಾಂತ್ರಿಕ ಸಾಧ್ಯತಾ (ಜಿಯೋಟೆಕ್ನಿಕಲ್ ಫಿಸಿಬಿಲಿಟಿ )ಸರ್ವೆ ಕಾರ್ಯಕ್ಕೆ ಚಾಲನೆ ನೀಡಿದೆ.

    ಕರ್ನಾಟಕ ಸರ್ಕಾರದ ಮೂಲ ಸೌಕರ್ಯ ಅಭಿವೃದ್ಧಿ ನಿಗಮ (ಐ-ಡೆಕ್) ಈ ಜವಾಬ್ದಾರಿ ಪಡೆದಿದ್ದು, ಈಗಾಗಲೇ ಮಂಗಳೂರಿನ ಇಂಜಿನಿಯರ್​ಗಳು ಸ್ಥಳ ಭೇಟಿ ಮಾಡಿ ಸರ್ವೆ ಕಾರ್ಯ ಆರಂಭಿಸಿದ್ದಾರೆ. ನಿಗಮವು ಇನ್ನು ಮೂರು ತಿಂಗಳಲ್ಲಿ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಗೆ ವರದಿ ಸಲ್ಲಿಸಬೇಕಿದೆ.

    ಬೇಲೆಕೇರಿಯಲ್ಲಿ ಖಾಸಗಿ, ಸಾರ್ವಜನಿಕ ಸಹಭಾಗಿತ್ವದಲ್ಲಿ (ಪಿಪಿಪಿ ಮಾದರಿ) ವಿವಿಧೋದ್ದೇಶ ಬಂದರು ನಿರ್ವಣಕ್ಕೆ ಯೋಜಿಸಲಾಗಿದೆ. ಸಾಗರಮಾಲಾ ಯೋಜನೆಯಡಿ ಬಂದರಿಗೆ ಹೆದ್ದಾರಿಯನ್ನು ಸಂರ್ಪಸಲು ಈಗಾಗಲೇ ಕ್ರಮ ವಹಿಸಲಾಗಿದೆ. ಶಿರಸಿ- ಕುಮಟಾ- ಬೇಲೆಕೇರಿ ರಾಷ್ಟ್ರೀಯ ಹೆದ್ದಾರಿ 766ಇ ಕಾಮಗಾರಿ ಪ್ರಾರಂಭವಾಗಿದೆ. ಕೊಂಕಣ ರೈಲ್ವೆ ಮಾರ್ಗವನ್ನು ಬೇಲೆಕೇರಿವರೆಗೆ ಜೋಡಿಸುವ ಬಗ್ಗೆ ಈಗಾಗಲೇ ಸರ್ವೆ ಕಾರ್ಯ ನಡೆದಿದೆ. ವಿಮಾನ ನಿಲ್ದಾಣ ಕಾಮಗಾರಿಯೂ ಶೀಘ್ರವೇ ಪ್ರಾರಂಭವಾಗುವ ನಿರೀಕ್ಷೆ ಇದೆ.

    ಅಂದಾಜು: 2016 ರಲ್ಲಿ ಏಕಾಂ ಎಂಬ ಅಂತಾರಾಷ್ಟ್ರೀಯ ಸಂಸ್ಥೆ ಬೇಲೆಕೇರಿ ಬಂದರು ನಿರ್ವಣದ ಬಗ್ಗೆ ತಾಂತ್ರಿಕ ಹಾಗೂ ವಾಣಿಜ್ಯ ಸಾಧ್ಯತಾ ಅಧ್ಯಯನ ವರದಿ ಸಿದ್ಧಪಡಿಸಿತ್ತು. ಒಟ್ಟಾರೆ 2595 ಕೋಟಿ ರೂಪಾಯಿ ಬಂದರು ಹಾಗೂ ಇತರ ಮೂಲಸೌಕರ್ಯ ನಿರ್ವಣಕ್ಕೆ ಬೇಕಾಗಬಹುದು ಎಂದು ಅಂದಾಜಿಸಲಾಗಿತ್ತು. ಮೊದಲ ಹಂತದಲ್ಲಿ ಎರಡು ಧಕ್ಕೆಗಳನ್ನು ಕಲ್ಲಿದ್ದಲಿಗಾಗಿ ಹಾಗೂ ಇನ್ನೊಂದು ಧಕ್ಕೆಯನ್ನು ಇತರ ವಿವಿಧ ಸಾಮಗ್ರಿ ಸಾಗಣೆಗಾಗಿ ಇಡಲು ವರದಿಯಲ್ಲಿ ಪ್ರಸ್ತಾಪಿಸಲಾಗಿದೆ. ಬಂದರು ನಿರ್ವಣವಾದ ತಕ್ಷಣ ವಾರ್ಷಿಕ 5.7 ಮಿಲಿಯನ್ ಟನ್ ಸಾಮಗ್ರಿ ಲೋಡ್-ಅನ್​ಲೋಡ್ ಕೆಲಸ ನಿರ್ವಹಿಸಬಹುದು. ಹಂತ ಹಂತವಾಗಿ ಬಂದರು ವಿಸ್ತರಣೆ ಮಾಡಿ 2036 ರ ಹೊತ್ತಿಗೆ ವಾರ್ಷಿಕ 37 ಮಿಲಿಯನ್ ಟನ್ ಸಾಮಗ್ರಿಗಳನ್ನು ಆಮದು, ರಫ್ತು ಮಾಡುವ ಸಾಮರ್ಥ್ಯವನ್ನು ಇದೇ ಸ್ಥಳದಲ್ಲಿ ಬೆಳೆಸುವ ಅವಕಾಶವಿದೆ ಎಂದು ವರದಿಯಲ್ಲಿ ತಿಳಿಸಲಾಗಿತ್ತು.

    ಮಂಗಳೂರಿನ ಎನ್​ಎಂಪಿಟಿ ಅಡಿ ಬಂದರಿನ ಅಭಿವೃದ್ಧಿ ಮಾಡಿ ಕಂಪನಿಗಳಿಗೆ ಬಾಡಿಗೆ ಕೊಡುವುದು(ಲ್ಯಾಂಡ್​ಲಾರ್ಡ್ ಮಾದರಿ), ಇಲ್ಲವೆ ಸಂಪೂರ್ಣ ಖಾಸಗಿಯಿಂದಲೇ ಅಭಿವೃದ್ಧಿ ಮಾಡುವುದು ಅಥವಾ ಸಾರ್ವಜನಿಕ ಹಾಗೂ ಖಾಸಗಿ ಸಹಭಾಗಿತ್ವದಲ್ಲಿ (ಪಿಪಿಪಿ) ಮಾದರಿಯಲ್ಲಿ ಬಂದರು ಅಭಿವೃದ್ಧಿ ಮಾಡಬಹುದು ಎಂದು ಮೂರು ಪ್ರಸ್ತಾವಗಳನ್ನು ಏಕಾಂ ತನ್ನ ವರದಿಯಲ್ಲಿ ಇಟ್ಟಿತ್ತು. ಸರ್ಕಾರ ಅಂತಿಮವಾಗಿ ಪಿಪಿಪಿ ಮಾದರಿಯನ್ನು ಆಯ್ಕೆ ಮಾಡಿಕೊಂಡು ಬಂದರು ಅಭಿವೃದ್ಧಿಗೆ ನಿರ್ಧರಿಸಿದ್ದು, ಈಗ ಎರಡನೇ ಹಂತದ ಅಧ್ಯಯನ ಪ್ರಾರಂಭವಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts