More

    ಭೂಮಿ ಹಂಚಿಕೆಯಲ್ಲಿ ಮಲತಾಯಿ ಧೋರಣೆ

    ಚನ್ನಮ್ಮನ ಕಿತ್ತೂರು, ಬೆಳಗಾವಿ: ಭೂಮಿ ಹಂಚುವಲ್ಲಿ ತಹಸೀಲ್ದಾರ್ ಸೋಮಲಿಂಗಪ್ಪ ಹಾಲಗಿ ಅವರು ಮಲತಾಯಿ ಧೋರಣೆ ಅನುಸರಿಸಿದ್ದಾರೆ ಎಂದು ಆರೋಪಿಸಿ ಖೋದಾನಪುರ ಗ್ರಾಮದ ಭೀಮಸೇನಾ ಸಮಿತಿ ಕೃಷಿ ಕಾರ್ಮಿಕರು ಕಂದಾಯ ಇಲಾಖೆ ಸಚಿವ ಆರ್.ಅಶೋಕ ಅವರಿಗೆ ಶುಕ್ರವಾರ ಮನವಿ ಸಲ್ಲಿಸಿದರು.

    ಕಿತ್ತೂರು ಕೋಟೆಗೆ ಶುಕ್ರವಾರ ಭೇಟಿ ನೀಡಿದ ಸಂದರ್ಭದಲ್ಲಿ ಮನವಿ ನೀಡಿದ ಮುಖಂಡರು, ರಾಜ್ಯ ಭೀಮ ಸೇನಾ ಸಮಿತಿ ಅಧ್ಯಕ್ಷ ಬಿ.ಡಿ. ಮಾದಾರ ಮಾತನಾಡಿ, ಖೋದಾನಪುರ ಗ್ರಾಮದಲ್ಲಿನ ಕೆಲ ಜಮೀನುಗಳಲ್ಲಿ ದಲಿತ ಸಮಾಜದ ಸುಮಾರು 100 ಕ್ಕಿಂತ ಹೆಚ್ಚು ಭೂರಹಿತ ಕೃಷಿ ಕಾರ್ಮಿಕರು ಸಾಗುವಳಿ ಮಾಡುತ್ತಿದ್ದಾರೆ. ಈ ಭೂಮಿಯನ್ನು ಬಗರಹುಕುಂ ಸಾಗುವಳಿ ಜಮೀನು ಎಂದು ಮಂಜೂರು ಮಾಡುವಂತೆ ಕೋರಿ ಅನೇಕ ವರ್ಷಗಳ ಹಿಂದೆ ನಮೂನೆ ನಂ.57 ರಲ್ಲಿ ಅರ್ಜಿ ಸಲ್ಲಿಸಿದ್ದರೂ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರಿದರು.

    ಕುಲವಳ್ಳಿ ಗ್ರಾಮದ ರೈತರಿಗೆ ಮಾತ್ರ ತಹಸೀಲ್ದಾರ್ ಕಚೇರಿಯಿಂದ ಪಿಟಿ ಶೀಟ್ ತಯಾರಿಸಿ ಕೊಡಲಾಗಿದೆ. ಈ ಪಿಟಿ ಶೀಟ್ ಆಧಾರದ ಮೇಲೆ ಕುಲವಳ್ಳಿ ಗ್ರಾಮದ ರೈತರು ಧಾರವಾಡದ ಉಚ್ಚ ನ್ಯಾಯಾಲಯದಲ್ಲಿ ಡಬ್ಲುೃಪಿ ನಂ. 1004752022 ರ ಅಡಿಯಲ್ಲಿ ದಾವೆ ಹೂಡಿದ್ದು, ದಾವೆಯಲ್ಲಿ ನ್ಯಾಯಾಲಯವು ರೈತರು ಸಾಗುವಳಿ ಮಾಡಿದ ಜಮೀನನ್ನು ಪಿಟ ಶೀಟ್ ಆಧಾರದ ಮೇಲೆ ಮಂಜೂರು ಮಾಡುವಂತೆ ಆದೇಶ ನೀಡಿದೆ. ಈ ಪ್ರಕರಣದಲ್ಲಿ ಸ್ವತಃ ತಹಸೀಲ್ದಾರ್ ಅವರೇ ಪಕ್ಷಗಾರರಾಗಿ ಕುಲವಳ್ಳಿ ರೈತರಿಗೆ ಮಾತ್ರ ಪಿಟಿ ಶೀಟ್ ನೀಡಿ, ಖೋದಾನಪುರ ಗ್ರಾಮದ ರೈತರಿಗೆ ಪಿಟಿ ಶೀಟ್ ನೀಡದೆ ಸತಾಯಿಸಿದ್ದಾರೆ. ಅಧಿಕಾರಿಗಳು ಕೂಡಲೇ ಭೂಮಿ ಒದಗಿಸುವ ವ್ಯವಸ್ಥೆ ಮಾಡದಿದ್ದರೆ ತಹಸೀಲ್ದಾರ್ ಕಚೇರಿ ಮುಂದೆ ಉಪವಾಸ ಸತ್ಯಾಗ್ರಹ ಆರಂಭಿಸಲಾಗುವುದು ಎಂದು ಎಚ್ಚರಿಸಿದರು.

    ಅದಕ್ಕೂ ಮುನ್ನ ಸಚಿವರು ಮನವಿ ನಿರಾಕರಿಸಿ ಹೊರಟಾಗ ಸಿಟ್ಟಿಗೆದ್ದ ಮಹಿಳೆಯರು ರಸ್ತೆಯಲ್ಲಿ ಕುಳಿತುಕೊಂಡು ಪ್ರತಿಭಟಿಸಿ ಸಚಿವರ ಕಾರಿಗೆ ಅಡ್ಡಿಪಡಿಸಿದರು. ನಂತರ ಅನಿವಾರ್ಯವಾಗಿ ವಾಹನದಿಂದ ಕೆಳಗಿಳಿದ ಆರ್.ಅಶೋಕ ರೈತರ ಅಹವಾಲು ಸ್ವೀಕರಿಸಿದರು. ಸಮಸ್ಯೆಗೆ ಪರಿಹಾರ ದೊರಕಿಸಿ ತಪ್ಪಿತಸ್ಥ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳುವ ಭರವಸೆ ವ್ಯಕ್ತಪಡಿಸಿದರು. ಎಚ್.ಎನ್.ಪೂಜಾರ, ಕರೆಪ್ಪ ಉಡಿಕೇರಿ, ವಿಠ್ಠಲ ಹರಿಜನ, ದುರ್ಗಪ್ಪ ಉಡಿಕೇರಿ, ವೈ.ಎಂ.ತಳವಾರ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts