More

    ಭೂತಾಯಿಗೆ ಚರಗ ಚಲ್ಲಿದ ಅನ್ನದಾತರು

    ಅಕ್ಕಿಆಲೂರ: ಪಟ್ಟಣ ಸೇರಿ ಹೋಬಳಿ ವ್ಯಾಪ್ತಿಯಲ್ಲಿ ಗುರುವಾರ ಸಂಭ್ರಮ ಸಡಗರದಿಂದ ಶೀಗೆ ಹುಣ್ಣಿಮೆ ಆಚರಿಸಲಾಯಿತು.

    ಕಳೆದ ವರ್ಷ ಅತಿವೃಷ್ಟಿಯಿಂದ ಬೆಳೆಗಳು ನಾಶವಾಗಿದ್ದರಿಂದ ಕಂಗಾಲಾಗಿದ್ದ ರೈತರು, ಈ ಬಾರಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗಿದ್ದರಿಂದ ಸಂತಸದಿಂದ ಶೀಗೆ ಹುಣ್ಣಿಮೆ ಆಚರಿಸಿದರು.

    ರೈತರ ಜೀವನಾಡಿ ಎತ್ತುಗಳ ಮೈತೊಳೆದು, ಶೃಂಗರಿಸಿ, ಚಕ್ಕಡಿ, ಟ್ರ್ಯಾಕ್ಟರ್ ಮೂಲಕ ಕುಟುಂಬ ಪರಿವಾರ ಸಮೇತ ಹೊಲಗಳಿಗೆ ತೆರಳಿದ ರೈತರು ಚರಗ ಚಲ್ಲಿ, ಬೆಳೆಗಳಿಗೆ ವಿಶೇಷ ಪೂಜೆ ಸಲ್ಲಿಸಿ, ಉಡಿ ತುಂಬಿ ಭೂತಾಯಿಗೆ ನಮಿಸಿದರು. ನಂತರ ಎಲ್ಲರೂ ಜೊತೆಗೂಡಿ ರೊಟ್ಟಿ, ಚಪಾತಿ, ಬದನೆಕಾಯಿ, ಕಾಳು, ಪುಂಡಿಪಲ್ಯಾ, ಅಗಸಿ, ಗುರಳ್ಳು, ಕಡ್ಲಿಚಟ್ನಿ, ಸಿಹಿ ಪದಾರ್ಥಗಳನ್ನು ಸವಿದರು.

    ಅಕ್ಕಿಆಲೂರ ಸೇರಿ ಕಲ್ಲಾಪುರ, ಆಡೂರ, ಬಾಳಂಬೀಡ, ತಿಳವಳ್ಳಿ, ಹಾವಣಗಿ ಗ್ರಾಮಗಳಲ್ಲಿ ಶೀಗಿಹುಣ್ಣಿಮೆ ಆಚರಿಸಲಾಯಿತು.

    ಕೆಲ ವರ್ಷಗಳಿಂದ ಅತಿವೃಷ್ಟಿ ಹಾಗೂ ಅನಾವೃಷ್ಟಿಯಿಂದ ಬೆಳೆಗಳು ನಾಶವಾಗುತ್ತ ಬಂದಿದ್ದರಿಂದ ಒಲ್ಲದ ಮನಸ್ಸಿನಿಂದಲೇ ಶೀಗೆಹುಣ್ಣಿಮೆ ಆಚರಿಸುತ್ತಿದ್ದೆವು. ಆದರೆ, ಈ ಬಾರಿ ಅಗತ್ಯಕ್ಕೆ ತಕ್ಕಂತೆ ಮಳೆ-ಬೆಳೆ ಬಂದಿದ್ದರಿಂದ ಸಂತಸವಾಗಿದೆ. ಕೆರೆಕಟ್ಟೆಗಳು ತುಂಬಿರುವುದರಿಂದ ಮುಂದಿನ ಮುಂಗಾರಿನವರೆಗೂ ಎರಡು ಬೆಳೆಗಳನ್ನು ಬೆಳೆಯಬಹುದು. ಭೂಮಿ ತಾಯಿಯ ಆಶೀರ್ವಾದ ಬೇಕು ಎನ್ನುತ್ತಾರೆ ಹಬ್ಬದ ಸಂಭ್ರಮದಲ್ಲಿದ್ದ ರೈತ ಶ್ರೀಕಾಂತ ಕೋರಿಶೆಟ್ಟರ್.

    ಅಧಿಕಾರಿಗಳು, ರೈತರ ಸಹಭೋಜನ

    ಉತ್ತಿ-ಬಿತ್ತಿ ಬೆಳೆದ ಫಸಲು ಕೈಗೆ ಬರುವ ಸಂದರ್ಭದಲ್ಲಿ ರೈತ ಸಮುದಾಯ ಭೂಮಿ ತಾಯಿಗೆ ಚರಗ ಚೆಲ್ಲಿ, ಪೂಜೆ ಸಲ್ಲಿಸಿ ಕುಟುಂಬದ ಸದಸ್ಯರೊಂದಿಗೆ ಸಂತಸ ಹಂಚಿಕೊಳ್ಳುವ ಶೀಗಿ ಹುಣ್ಣಿಮೆ ಸಂಭ್ರಮ ಹಾನಗಲ್ಲ ತಾಲೂಕಿನೆಲ್ಲೆಡೆಗೂ ಗುರುವಾರ ಕಂಡುಬಂತು.

    ಬೊಮ್ಮನಹಳ್ಳಿ ಭಾಗದಲ್ಲಿ ಗುರುವಾರ ಭೂಮಿತಾಯಿಗೆ ಪೂಜೆ ಸಲ್ಲಿಸಲಾಯಿತು. ಸಿಹಿ ಹೋಳಿಗೆ, ಕುಂಬಳಕಾಯಿ ಕಡಬು, ಶೇಂಗಾ ಹೋಳಿಗೆ, ಪಾಯಸ, ಸಜ್ಜಿ ರೊಟ್ಟಿ, ಎಣ್ಣಗಾಯಿ ಪಲ್ಯ, ವಿವಿಧ ಪುಡಿ ಚಟ್ನಿಗಳ ಮಿಶ್ರಣ, ಮೊಸರು ಸೇರಿದಂತೆ ವಿವಿಧ ಭಕ್ಷ್ಯಭೋಜನ ತಯಾರಿಸಿ ಭೂಮಿ ತಾಯಿಗೆ ನೈವೇದ್ಯ ಅರ್ಪಿಸಿದರು.

    ತಾಲೂಕಿನ ಚೀರನಹಳ್ಳಿಯಲ್ಲಿ ರೈತ ಸಂಘದ ಅಧ್ಯಕ್ಷ ಮರಿಗೌಡ ಪಾಟೀಲ ಅವರ ಹೊಲದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು, ರೈತರು, ಸಹಭೋಜನ ಸವಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts