More

    ಭಾನುವಾರದ ಲಾಕ್​ಡೌನ್​ಗೆ ಜೈ ಎಂದ ಜನ

    ಕರೊನಾ ಸರಪಳಿ ಕತ್ತರಿಸುವ ನಿಟ್ಟಿನಲ್ಲಿ ಸರ್ಕಾರ ಘೊಷಿಸಿದ್ದ ಭಾನುವಾರದ ಲಾಕ್​ಡೌನ್​ಗೆ ಧಾರವಾಡ ಜಿಲ್ಲೆಯಲ್ಲಿ ಅದ್ಭುತ ಸ್ಪಂದನ ವ್ಯಕ್ತವಾಗಿಯಿತು. ಹುಬ್ಬಳ್ಳಿ-ಧಾರವಾಡ ಅವಳಿ ನಗರ ಹಾಗೂ ಇತರ ಶಹರಗಳ ಮಾರುಕಟ್ಟೆಗಳು ಸಂಪೂರ್ಣ ಬಂದ್ ಇದ್ದವು. ಅಗತ್ಯ ವಸ್ತುಗಳ ಅಂಗಡಿಗಳು ತೆರೆದಿದ್ದವಾದರೂ ಗ್ರಾಹಕರ ಸಂಖ್ಯೆ ಎಂದಿನಿಂತ ಕಡಿಮೆ ಇತ್ತು. ಜಿಲ್ಲೆಯ 18 ಲಕ್ಷದಷ್ಟು ಜನರು ಮನೆಗಳಲ್ಲೇ ಇರುವ ಮೂಲಕ ಸ್ಥಗಿತತೆಯ ಆದೇಶ ಜಾರಿಗೆ ಕೊಡುಗೆ ನೀಡಿದರು.

    ಹುಬ್ಬಳ್ಳಿ: ಕರೊನಾ ಸೋಂಕು ಹರಡುವುದನ್ನು ತಡೆಯಲು ರಾಜ್ಯ ಸರ್ಕಾರ ಪ್ರತಿ ಭಾನುವಾರ ಲಾಕ್​ಡೌನ್ ಘೊಷಣೆ ಮಾಡಿದ್ದು, ಧಾರವಾಡ ಜಿಲ್ಲೆಯಲ್ಲಿ ಅದ್ಭುತ ಸ್ಪಂದನ ವ್ಯಕ್ತವಾಯಿತು.

    ವೈರಾಣು ಭಯವನ್ನೂ ಮೀರಿ ಪ್ರತಿ ಭಾನುವಾರ ಜನ-ವಾಹನಗಳಿಂದ ಗಿಜಿಗುಡುತ್ತಿದ್ದ ವಾಣಿಜ್ಯ ನಗರಿ ಹುಬ್ಬಳ್ಳಿಯ ಪ್ರಮುಖ ಮಾರುಕಟ್ಟೆಗಳು, ಸಂಚಾರ ವೃತ್ತಗಳು ಅಕ್ಷರಶಃ ಬಿಕೋ ಎನ್ನುತ್ತಿದ್ದವು.

    ಶನಿವಾರ ರಾತ್ರಿ 8 ಗಂಟೆಯಿಂದಲೇ ಲಾಕ್​ಡೌನ್ ಜಾರಿಯಾಗಿದ್ದು, ಕೆಲ ವಾಹನಗಳು ಮಾತ್ರ ಓಡಾಡುತ್ತಿದ್ದವು. ಭಾನುವಾರ ಬೆಳಗ್ಗೆಯಿಂದ ವಾಹನಗಳು ಓಡಾಡಲಿಲ್ಲ. ಅಲ್ಲಲ್ಲಿ ಪೊಲೀಸರ ಸರ್ಪಗಾವಲು ಹಾಕಲಾಗಿತ್ತು. ಹೊರಗೆ ಬಂದ ವಾಹನಗಳನ್ನು ತಪಾಸಿಸಿ ಕಳುಹಿಸಿಕೊಡಲಾಗುತ್ತಿತ್ತು. ಔಷಧ, ಹಾಲು ಸೇರಿ ಅಗತ್ಯ ವಸ್ತುಗಳ ಸರಬರಾಜಿಗೆ ಕುಂದುಂಟಾಗಲಿಲ್ಲ. ಬಸ್​ಗಳ ಸಂಚಾರ ಸ್ಥಗಿತಗೊಳಿಸಲಾಗಿದ್ದು, ಚನ್ನಮ್ಮ ವೃತ್ತ, ಸಂಗೊಳ್ಳಿ ರಾಯಣ್ಣ ವೃತ್ತ, ಹಳೆಯ ಹಾಗೂ ಹೊಸ ಬಸ್ ನಿಲ್ದಾಣದಲ್ಲಿ ಪೊಲೀಸರನ್ನು ನಿಯೋಜಿಸಲಾಗಿತ್ತು. ಹಳೇಹುಬ್ಬಳ್ಳಿ, ವಿದ್ಯಾನಗರ, ದುರ್ಗದಬೈಲ್, ಜನತಾ ಬಜಾರ್ ಇತರೆಡೆ ವಿರಳವಾಗಿ ಜನರು ಓಡಾಡುತ್ತಿದ್ದರಾದರೂ ಅನಗತ್ಯ ಓಡಾಟ ನಿರ್ಬಂಧಿಸಿಕೊಂಡಿದ್ದರು. ವ್ಯಾಪಾರ ವಹಿವಾಟು ಸ್ಥಗಿತಗೊಂಡಿದ್ದರಿಂದ ಸುಖಾಸುಮ್ಮನೆ ಓಡಾಡುವುದನ್ನು ಕೈಬಿಟ್ಟಿದ್ದರು. ಇದರಿಂದ ನಗರ ಸಾರಿಗೆ ಬಸ್ ನಿಲ್ದಾಣ ವಾಹನ, ಜನರಿಲ್ಲದೇ ಬಿಕೋ ಎನ್ನುತ್ತಿತ್ತು. ಆಟೋಗಳು ಎಂದಿನಂತೆ ರಸ್ತೆಗಿಳಿಯಲಿಲ್ಲ.

    ಎರಡು ರೈಲು ಸಂಚಾರ: ಜನಶತಾಬ್ದಿ ಹಾಗೂ ನಿಜಾಮುದ್ದೀನ್ ಎಕ್ಸ್​ಪ್ರೆಸ್ ರೈಲುಗಳು ಭಾನುವಾರ ಸಂಚರಿಸುವುದನ್ನು ಅರಿತಿದ್ದ ಕೆಲವರು ರೈಲ್ವೆ ನಿಲ್ದಾಣಕ್ಕೆ ಆಗಮಿಸಿದ್ದರು. ಹುಬ್ಬಳ್ಳಿಗೆ ಕೆಲಸದ ನಿಮಿತ್ತ ಬಂದಿದ್ದ ಅವರೆಲ್ಲ ಪಾಟ್ನಾ, ಬೆಂಗಳೂರು, ಝಾನ್ಸಿ ಸೇರಿ ವಿವಿಧೆೆಡೆ ತೆರಳುವವರಾಗಿದ್ದರು. ರೈಲ್ವೆ ಪೊಲೀಸರು ತಪಾಸಣೆ ನಡೆಸಿಯೇ ಪ್ರಯಾಣಿಕರನ್ನು ನಿಲ್ದಾಣದ ಒಳಗಡೆ ಬಿಡುತ್ತಿದ್ದರು.

    ಬಾಗಿಲು ತೆರೆದಿದ್ದ ಮಾಂಸದಂಗಡಿ: ನಗರದ ಕೆಲವೆಡೆ ಮಾಂಸದ ಅಂಗಡಿಗಳು ಬಾಗಿಲು ತೆರೆದಿದ್ದವು. ಕೆಲ ಮಾಂಸ ಪ್ರಿಯರು ವಾಹನ ಸಮೇತ ಬಂದು ಸರತಿ ಸಾಲಿನಲ್ಲಿ ನಿಂತು ಖರೀದಿ ಮಾಡಿದರು. ಕೆಲವರು ನಿನ್ನೆಯೇ ಮಾಂಸ ಖರೀದಿ ಮಾಡಿದ್ದರಿಂದ ಅಂಗಡಿ ಎದುರು ಕಡಿಮೆ ಸಂಖ್ಯೆಯ ಜನರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts