More

    ಭಾನುವಾರದ ಕರ್ಫ್ಯೂ ಬೊಂಬಾಟ್

    ಶಿವಮೊಗ್ಗ: ಕರೊನಾ ವೈರಸ್ ನಿಯಂತ್ರಣಕ್ಕೆ ‘ಭಾನುವಾರದ ಕರ್ಫ್ಯೂ’ ಹಿನ್ನೆಲೆಯಲ್ಲಿ ಭಾನುವಾರ ಶಿವಮೊಗ್ಗದಲ್ಲಿ ವ್ಯಾಪಕ ಬೆಂಬಲ ವ್ಯಕ್ತವಾಯಿತು. ಜನರು ಸ್ವಯಂಪ್ರೇರಿತವಾಗಿ ಕರ್ಫ್ಯೂ ಬೆಂಬಲಿಸಿ ಅಂಗಡಿಮುಂಗಟ್ಟು ಮುಚ್ಚಿದ್ದರಿಂದ ವ್ಯಾಪಾರ-ವಹಿವಾಟು ಬಹುತೇಕ ಸ್ತಬ್ಧಗೊಂಡಿತ್ತು.

    ಹಾಲು, ತರಕಾರಿ, ಪೇಪರ್, ಆಂಬುಲೆನ್ಸ್, ಮೆಡಿಕಲ್ ಸೇರಿ ಅಗತ್ಯ ವಸ್ತುಗಳಿಗೆ ಯಾವುದೇ ತೊಂದರೆ ಇರಲಿಲ್ಲ. ಆಸ್ಪತ್ರೆಗಳು ಎಂದಿನಂತೆ ಕಾರ್ಯನಿರ್ವಹಿಸಿದರೂ ರೋಗಿಗಳ ಸಂಖ್ಯೆ ಬೆರಳೆಣಿಕೆಯಷ್ಟಿತ್ತು. ಉಳಿದಂತೆ ಕೆಎಸ್ಸಾರ್ಟಿಸಿ, ಖಾಸಗಿ ಹಾಗೂ ನಗರ ಸಾರಿಗೆ ಬಸ್, ಆಟೋ ಮತ್ತು ಟ್ಯಾಕ್ಸಿ ಸಂಚಾರ ಕೂಡ ಸಂಪೂರ್ಣ ಬಂದ್ ಆಗಿತ್ತು.

    ಲಾಕ್​ಡೌನ್ ಸಡಿಲಿಕೆ ಬಳಿಕ ಮತ್ತೆ ಖಾಸಗಿ ಮತ್ತು ಕೆಎಸ್​ಆರ್​ಟಿಸಿ ಬಸ್ ನಿಲ್ದಾಣಗಳು ಖಾಲಿ ಆಗಿದ್ದವು. ಸದಾ ಜನರಿಂದ ತುಂಬಿರುತ್ತಿದ್ದ ಗಾಂಧಿ ಬಜಾರ್, ಕೋಟೆ ರಸ್ತೆ, ಬಸ್ ನಿಲ್ದಾಣ, ಕುವೆಂಪು ರಸ್ತೆ, ಶಿವಮೂರ್ತಿ ಸರ್ಕಲ್, ಬಾಲರಾಜ ಅರಸ್ ರಸ್ತೆ, ವಿದ್ಯಾನಗರ, ವಿನೋಬನಗರ ಭಾಗದಲ್ಲಿ ಬಿಕೋ ಎನ್ನುತ್ತಿದ್ದವು.

    ಭಾನುವಾರ ಆಗಿದ್ದರಿಂದ ಎಂದಿನಂತೆ ಎಪಿಎಂಸಿ ಮಾರುಕಟ್ಟೆ ಬಂದ್ ಆಗಿತ್ತು. ಸವಿತಾ ಸಮಾಜದವರು ಬೆಂಬಲ ಸೂಚಿಸಿದ್ದರಿಂದ ಕ್ಷೌರದಂಗಡಿಗಳು ತೆರೆದಿರಲಿಲ್ಲ. ಬಾರ್, ವೈನ್​ಶಾಪ್​ಗಳು ಕೂಡ ಬಂದ್ ಆಗಿದ್ದವು. ಪೆಟ್ರೋಲ್ ಬಂಕ್​ಗಳು ಬೆಳಗ್ಗೆ 7ರಿಂದ ಸಂಜೆ 7ರವರೆಗೆ ಕಾರ್ಯನಿರ್ವಹಿಸಿದವು. ಎಟಿಎಂಗಳು ಎಂದಿನಂತೆಯೇ ಕಾರ್ಯನಿರ್ವಹಿಸಿದವು.

    ವ್ಯಾಪಾರ-ವಹಿವಾಟು ಸ್ಥಗಿತ: ದಿನಸಿ ಅಂಗಡಿ ವರ್ತಕರು, ಬಟ್ಟೆ ಅಂಗಡಿ ಮಾಲೀಕರು, ಜವಳಿ ವರ್ತಕರ ಸಂಘ, ಜಿಲ್ಲಾ ಔಷಧ ವ್ಯಾಪಾರಿಗಳ ಸಂಘ, ಜಿಲ್ಲಾ ವಿತರಕರ ಸಂಘ, ಸಾಗರ ರಸ್ತೆ ಕೈಗಾರಿಕೋದ್ಯಮಿಗಳ ಸಂಘ, ಆಟೋ ಕಾಂಪ್ಲೆಕ್ಸ್ ಕೈಗಾರಿಕಾ ಸಂಘ, ಆಟೊಮೊಬೈಲ್ಸ್ ಅಸೋಸಿಯೇಷನ್, ಲಾರಿ ಮಾಲೀಕರ ಸಂಘ, ಬಸ್ ಮಾಲೀಕರ ಸಂಘ, ನಗರ ಸಾರಿಗೆ ಬಸ್ ಮಾಲೀಕರ ಸಂಘ, ಚಿನ್ನ-ಬೆಳ್ಳಿ ವರ್ತಕರ ಸಂಘ, ಐಟಿ ಅಸೋಸಿಯೇಷನ್, ಗಾಂಧಿಬಜಾರ್ ವರ್ತಕರ ಸಂಘ ಸೇರಿ 40ಕ್ಕೂ ಅಧಿಕ ಸಂಘಸಂಸ್ಥೆಗಳು ಕರ್ಫ್ಯೂಗೆ ಬೆಂಬಲಿಸಿದ್ದವು.

    ಬೈಕ್ ಸವಾರರಿಗೆ ಬಿತ್ತು ದಂಡ: ಕರ್ಫ್ಯೂ ಇದ್ದರೂ ಅನಾವಶ್ಯಕವಾಗಿ ಓಡಾಡುತ್ತಿದ್ದ ಬೆರಳೆಣಿಕೆಯಷ್ಟು ವಾಹನ ಸವಾರರಿಗೆ ಪೊಲೀಸರು ದಂಡ ವಿಧಿಸುವ ಮೂಲಕ ಚುರುಕು ಮುಟ್ಟಿಸಿದರು. ಒಂದೆಡೆ ಮಾಸ್ಕ್ ಧರಿಸದ್ದಕ್ಕೆ ಹಾಗೂ ಚಾಲನಾ ಪರವಾನಗಿ ಇಲ್ಲದ್ದಕ್ಕೂ ದಂಡ ವಿಧಿಸಿದರು. ಉಳಿದಂತೆ ಅಗತ್ಯವಸ್ತುಗಳ ಖರೀದಿಗೆ ಅವಕಾಶ ಮಾಡಿಕೊಡಲಾಗಿತ್ತು. ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಬೈಕ್, ಕಾರು ಸಂಚಾರ ಸ್ವಲ್ಪ ಹೆಚ್ಚಾಗಿತ್ತು. ಆನಂತರ ವಾಹನಗಳ ಸಂಚಾರ ವಿರಳವಾಗಿತ್ತು. ಈ ನಡುವೆ ಆಗಾಗ ಮಳೆ ಬಂದಿದ್ದರಿಂದ ವಾಹನಗಳ ಸಂಚಾರಕ್ಕೆ ಅಡ್ಡಿಯಾಯಿತು. ಪೊಲೀಸರು ಪ್ರಮುಖ ರಸ್ತೆಗಳಿಗೆ ಬ್ಯಾರಿಕೇಡ್​ಗಳಿಂದ ಬಂದ್ ಮಾಡಿದ್ದರು.

    ಡಿಸಿ ಶಿವಮೊಗ್ಗ ಸಿಟಿ ರೌಂಡ್ಸ್: ಖುದ್ದು ಪರಿಸ್ಥಿತಿ ಪರಿಶೀಲಿಸಲು ಖುದ್ದು ಸಿಟಿ ರೌಂಡ್ಸ್ ಹಾಕಿದ ಡಿಸಿ ಕೆ.ಬಿ.ಶಿವಕುಮಾರ್ ಅನಗತ್ಯವಾಗಿ ಓಡಾಡುತ್ತಿದ್ದವರನ್ನು ತಡೆದು ಪ್ರಶ್ನಿಸಿದರು. ಕೆಲವರು ದೇವಸ್ಥಾನ, ಮತ್ತೆ ಕೆಲವರು ತರಕಾರಿ ತರುವುದಕ್ಕೆಂದು ಸಬೂಬು ಹೇಳಿದರು. ಮತ್ತೊಂದೆಡೆ ಟೀ ಅಂಗಡಿ ಮುಂದೆ ಕೆಲವರು ಟೀ ಕುಡಿಯುತ್ತಿರುವುದನ್ನು ಗಮನಿಸಿದ ಡಿಸಿ, ಅಗತ್ಯ ಇದ್ದವರು ಮನೆಗೆ ಕೊಂಡೊಯ್ಯಬೇಕು. ಸುಮ್ಮನೆ ಓಡಾಡುವವರ ವಿರುದ್ಧ ಪ್ರಕರಣ ದಾಖಲು ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಮುಖ್ಯ ರಸ್ತೆಗಳಲ್ಲಿ ಜನ ಸಂಚಾರ ಕಡಿಮೆ ಇದೆ. ಆದರೆ ಕೆಲವು ಬಡಾವಣೆಗಳಲ್ಲಿ ಜನರು ಓಡಾಡುತ್ತಿದ್ದಾರೆ. ಇದು ನಿಯಂತ್ರಣಕ್ಕೆ ಬರಬೇಕಿದೆ ಎಂದು ಎಸ್ಪಿಗೆ ಸೂಚನೆ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts