More

    ಭರದಿಂದ ಸಾಗಿದೆ ಬೆಂಗಳೂರು-ಚೆನ್ನೈ ಎಕ್ಸ್​ಪ್ರೆಸ್​ ವೇ ಕೆಜಿಎಫ್​ ತಾಲೂಕಿನಲ್ಲಿ ಯುದ್ಧೋಪಾದಿಯಲ್ಲಿ ನಡೆಯುತ್ತಿದೆ ಕಾಮಗಾರಿ,18 ಸಾವಿರ ಕೋಟಿ ರೂ. ವೆಚ್ಚದ ರಸ್ತೆ

    ಜೆ.ಜಿ.ಶ್ರೀನಿವಾಸಮೂರ್ತಿ, ಬೇತಮಂಗಲ

    ಬೆಂಗಳೂರು-ಚೆನ್ನೈ ಎಕ್ಸ್​ಪ್ರೆಸ್​ ಹೈವೇ ಯೋಜನೆ 2011ರಲ್ಲಿ ಘೋಷಣೆಯಾಗಿತ್ತಾದರೂ, 10 ವರ್ಷಗಳ ನಂತರ ಚಾಲನೆ ಸಿಕ್ಕಿದ್ದು, ಕಾಮಗಾರಿ ಭರದಿಂದ ನಡೆಯುತ್ತಿದೆ. ಕೆಜಿಎಫ್​ ತಾಲೂಕಿನ ಹಲವೆಡೆ ಯುದ್ಧಭೂಮಿಯ ವಾತಾವರಣ ಕಂಡು ಬರುತ್ತಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅನುಷ್ಠಾನಗೊಳಿಸುತ್ತಿರುವ ಅಂತಾರಾಷ್ಟ್ರೀಯ ಮಟ್ಟದ ಈ ರಸ್ತೆಯು ಒಟ್ಟು 18 ಸಾವಿರ ಕೊಟಿ ರೂ.ವೆಚ್ಚದಲ್ಲಿ ನಿಮಾರ್ಣವಾಗುತ್ತಿದೆ.

    ಹೊಸಕೋಟೆಯಿಂದ ಚೆನ್ನೈನ ಶ್ರೀ ಪೆರಂಬದೂರುವರೆಗೆ 262 ಕಿ.ಮೀ ಉದ್ದ, 90 ಮೀ (300ಅಡಿ) ಅಗಲದ ರಸ್ತೆಯು ಜಿಲ್ಲೆಯಲ್ಲಿ 77 ಕಿ.ಮೀ ಹಾದುಹೋಗಲಿದೆ. ಕೆಜಿಎಫ್​ ತಾಲೂಕಿನಲ್ಲಿ ಸಾಗುವ 23 ಕಿ.ಮೀ ಉದ್ದದ ರಸ್ತೆ ಕಾಮಗಾರಿ ತ್ವರಿತಗತಿಯಲ್ಲಿ ನಡೆಯುತ್ತಿದೆ.

    7 ವರ್ಷಗಳಿಂದ ಪ್ರಕ್ರಿಯೆ: 2011ರಲ್ಲಿ ಯೋಜನೆ ಘೋಷಣೆಯಾಗಿತ್ತು. 2015 ಮೇನಲ್ಲಿ ಭೂಸ್ವಾಧಿನ ಪಡೆಯುವ ಬಗ್ಗೆ ವಿಶೇಷ ಭೂ ಸ್ವಾಧಿನಾಧಿಕಾರಿ ಅಧಿಸೂಚನೆ ಹೊಡಿಸುವ ಮೂಲಕ ಬೃಹತ್​ ಯೋಜನೆಯ ಪ್ರಾಥಮಿಕ ಹಂತದ ಕಾರ್ಯಕ್ಕೆ ಚಾಲನೆ ನೀಡಲಾಯಿತು. ನಂತರ ರೈತರು ಹಾಗೂ ರೈತಪರ ಸಂಘಟನೆಗಳ ಸಾಕಷ್ಟು ವಿರೋಧಗಳ ಮಧ್ಯೆಯೂ ಜಿಲ್ಲೆಯಲ್ಲಿ ರೈತರ 1646.36 ಎಕರೆ, 2100 ಎಕರೆ ಸರ್ಕಾರಿ ಭೂಮಿ ಸೇರಿ ಒಟ್ಟು 3700 ಎಕರೆ ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿವೆ. ಇದಕ್ಕೆ 5 ವರ್ಷ ಹಿಡಿಯಿತಾದರೂ, ರೈತರು ಮತ್ತು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ನಡುವೆ ಹಗ್ಗಜಗ್ಗಾಟ ಈಗಲೂ ಮುಂದುವರಿದಿದೆ.ಮೂರು ಹಂತದ ಕಾಮಗಾರಿ: 262 ಕಿ.ಮೀ ರಸ್ತೆಯನ್ನು 3 ಹಂತಗಳನ್ನಾಗಿ ವಿಂಗಡಿಸಿದ್ದು 10 ಪ್ಯಾಕೇಜ್​ ಮಾಡಲಾಗಿದೆ.

    ಹೊಸಕೋಟೆಯಿಂದ ರಾಜ್ಯದ ಗಡಿ ಗ್ರಾಮ ಕೆಜಿಎಫ್​ ತಾಲೂಕು ಪೂಗಾನಹಳ್ಳಿವರೆಗೆ ಒಟ್ಟು 77 ಕಿ.ಮೀ.(3 ಪ್ಯಾಕೇಜ್​), ಇದರಲ್ಲಿ ಮಾಲೂರು ತಾಲೂಕುವರೆಗೆ 22 ಗ್ರಾಮಗಳ ಮಾರ್ಗದಲ್ಲಿ 26 ಕಿ.ಮೀ, ಕೋಲಾರ ತಾಲೂಕಿನಲ್ಲಿ 2 ಗ್ರಾಮಗಳು ಅರ್ಧ ಕಿ.ಮೀ., ಮಾಲೂರಿನಿಂದ ಬಂಗಾರಪೇಟೆ ತಾಲೂಕುವರೆಗೂ 14 ಗ್ರಾಮಗಳು 27 ಕಿ.ಮೀ. ಮತ್ತು ಬಂಗಾರಪೇಟೆಯಿಂದ ಕೆಜಿಎಫ್​ನ ಎನ್​ಜಿ ಹುಲ್ಕೂರುವರೆಗೆ 22 ಗ್ರಾಮಗಳು 23 ಕಿ.ಮೀ.ರಸ್ತೆ ಒಳಗೊಂಡಿದೆ. 2ನೇ ಹಂತದ ಯೋಜನೆಯಲ್ಲಿ ಆಂಧ್ರದ ಬೈರೆಡ್ಡಿಪಲ್ಲಿ, ಪಲಮನೇರು, ಚಿತ್ತೂರು ಮಾರ್ಗದಲ್ಲಿ ಆಂಧ್ರ ಗಡಿ ಗುಡಿಪಾಲವರೆಗೆ 95 ಕಿಮೀ (4 ಪ್ಯಾಕೇಜ್​), 3ನೇ ಹಂತದಲ್ಲಿ ಗುಡಿಪಾಲದಿಂದ ತಮಿಳುನಾಡಿನ ವಾಲಜಪೇಟೆ, ಅರುಕೋಣಂ ನಂತರ ಕಾಂಚೀಪುರಂ ಮಾರ್ಗವಾಗಿ ಶ್ರೀ ಪೆರಂಬದೂರುವರೆಗೆ 90 ಕಿ.ಮೀ ಸೇರಿ ಒಟ್ಟು 262 ಕಿ.ಮೀ ರಸ್ತೆ ನಿಮಾರ್ಣವಾಗುತ್ತಿದೆ.

    ನೂರಾರು ವಾಹನ-, ಸಾವಿರಾರು ಕಾರ್ಮಿಕರು:


    ರಾಜ್ಯದಲ್ಲಿ ಕಾಮಗಾರಿಯನ್ನು ಕೇಂದ್ರ ಸಚಿವ ನಿತಿನ್​ಗಡ್ಕರಿ ಅಳಿಯ ಮಾಲೀಕತ್ವದ ದಿಲೀಪ್​ ಬಿಲ್ಡ್​ಕಾನ್​ ಕಂಪನಿ ಗುತ್ತಿಗೆ ಪಡೆದಿದ್ದು, ಅಧಿಕಾರಿಗಳು, ಸಾವಿರಕ್ಕೂ ಹೆಚ್ಚು ಕಾರ್ಮಿಕರನ್ನು ಗುಜರಾತ್​ ಮತ್ತಿತರ ಉತ್ತರದ ರಾಜ್ಯಗಳಿಂದ ಕರೆಸಿಕೊಳ್ಳಲಾಗಿದೆ. ಕೆಜಿಎಫ್​ ತಾಲೂಕಿನ ವೆಂಕಟಾಪುರ, ಬಂಗಾರಪೇಟೆಯ ಡಿ.ಕೆ. ಹಳ್ಳಿ ಬಳಿ ನೂರಾರು ಎಕರೆ ಪ್ರದೇಶದಲ್ಲಿ ಸೈನಿಕರ ಬಿಡಾರಗಳಂತೆ ಶೆಡ್​ಗಳನ್ನು ನಿರ್ಮಿಸಲಾಗಿದೆ. ವಿವಿಧ ರೀತಿಯ ವಾಹನಗಳು ಮತ್ತು ಕಾರ್ಮಿಕರೊಂದಿಗೆ ಹಗಲು ರಾತ್ರಿ ಎನ್ನದೆ ಕಾಮಗಾರಿ ನಡೆಯುತ್ತಿದೆ.

    ಎಕ್ಸ್​ಪ್ರೆಸ್​ ವೇ ವಿಶೇಷ:


    8 ಪಥ ರಸ್ತೆ ನಿಮಾರ್ಣ ಉದ್ದೇಶವಾಗಿದ್ದರೂ, ಪ್ರಸ್ತುತ 4 ಪಥ ನಿಮಾರ್ಣವಾಗುತ್ತಿದೆ. ಗಂಟೆಗೆ 120 ಕಿ.ಮೀ ವೇಗದಲ್ಲಿ ಸಂಚರಿಸಬಹುದಾಗಿದ್ದು, ಈಗಿರುವ ರಾ. ಹೆದ್ದಾರಿಯಲ್ಲಿ ಸಂಚರಿಸುವುದಕ್ಕಿಂತ ಸುಮಾರು 80 ಕಿ.ಮೀ ರಸ್ತೆ ಕಡಿಮೆಯಾಗಲಿದೆ. ಪ್ರಯಾಣದ ಸಮಯ ಮೂರು ಗಂಟೆ ಕಡಿಮೆಯಾಗಲಿದೆ. ಮಾರ್ಗದಲ್ಲಿ 162 ಸೇತುವೆ, 144 ಸಣ್ಣ ಸೇತುವೆ, 9 ಮಧ್ಯಮ ಸೇತುವೆ, 9 ಅತಿ ದೊಡ್ಡ ಸೇತುವೆಗಳು, 52 ಅಂಡರ್​ಪಾಸ್​ಗಳು, 41 ಸಣ್ಣ ಅಂಡರ್​ಪಾಸ್​ ಮತ್ತು 17 ಫ್ಲೈ ಓವರ್​ಗಳು ನಿಮಾರ್ಣವಾಗುತ್ತಿವೆ. ಕೆಜಿಎಫ್​ ತಾಲೂಕಿನಲ್ಲಿ 14 ಸೇತುವೆ, 6 ಮೇಲ್ಸೇತುವೆ, 40 ಮೀನ 6 ಸೇತುವೆ, 40 ಅಂಡರ್​ ಪಾಸ್​, 40 ಸಣ್ಣ ಅಂಡರ್​ಪಾಸ್​ಗಳು ಹಾಗೂ ಬೇತಮಂಗಲ, ಕೂಳೂರು ಹಾಗೂ ರಾಯಸಂದ್ರ ಬಳಿ ಪಾಲಾರ್​ ನದಿಗೆ ಅಡ್ಡಲಾಗಿ 480 ಅಡಿ ಉದ್ದದ ಬೃಹತ್​ 3 ಸೇತುವೆಗಳು ನಿಮಾರ್ಣವಾಗಲಿವೆ.

    2 ಕಡೆ ಮಾತ್ರ ಜಂಕ್ಷನ್​:


    ಹೊಸಕೋಟೆಯಿಂದ ರಾಜ್ಯದ ಗಡಿತನಕ 6 ಕಡೆ ಇಂಟರ್​ ಸಿಟ್​ ತಿರುವುಗಳನ್ನು ನಿರ್ಮಿಸಲಿದ್ದು, ಕೆಜಿಎಫ್​ ತಾಲೂಕಿನ ಕೃಷ್ಣಾವರಂ, ವೆಂಗಸಂದ್ರ ಬಳಿ ಇಳಿಜಾರು ರಸ್ತೆ ನಿಮಾರ್ಣವಾಗಲಿದೆ. ಇದರಿಂದಾಗಿ ಬೇತಮಂಗಲದಿಂದ ಆಂಧ್ರ ಗಡಿವರೆಗೆ ಭೂಮಿ ಬೆಲೆ ಗಗನಕ್ಕೇರಿದೆ. 2025ರ ಮಾರ್ಚ್​ ಒಳಗೆ ಸಂಚಾರಕ್ಕೆ ಮುಕ್ತವಾಗಲಿದ್ದು, ಪ್ರಧಾನಮಂತ್ರಿಯವರೇ ಉದ್ಘಾಟನೆ ಮಾಡಲಿದ್ದಾರೆ.

    ಕಾರಿಡಾರ್​ ರಸ್ತೆ ನಮ್ಮ ತಾಲೂಕಿನಲ್ಲಿ ಹಾದು ಹೋಗುತ್ತಿರುವುದು ಸಂತೋಷದ ವಿಷಯ. ಮನಮೋಹನ್​ಸಿಂಗ್​ ಪ್ರಧಾನಿಗಳಾಗಿದ್ದಾಗ ಯೋಜನೆ ಘೋಷಿಸಲಾಗಿತ್ತು. ಇದೀಗ ಚಾಲನೆ ಸಿಕ್ಕಿದೆ. ಇದರಿಂದಾಗಿ ಸಾಕಷ್ಟು ಕೈಗಾರಿಕೆಗಳು ಸ್ಥಾಪನೆಯಾಗಲಿದ್ದು, ನಿರುದ್ಯೋಗ ಸಮಸ್ಯೆ ಕಡಿಮೆಯಾಗುತ್ತದೆ. ಜತೆಗೆ ಈ ರಸ್ತೆಯಲ್ಲಿ ಸಂಚರಿಸುವವರಿಗೆ ಸಾಕಷ್ಟು ಸಮಯ ಉಳಿತಾಯವಾಗಲಿದೆ.

    ಎಂ.ರೂಪಕಲಾ, ಶಾಸಕಿ,

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts