More

    ದ.ಕ.ದಲ್ಲಿ ರಸ್ತೆ ಅಪಘಾತ ಇಳಿಕೆ, 5 ವರ್ಷಗಳಲ್ಲಿ ಶೇ.20ರಷ್ಟು ವಾಹನಗಳ ಸಂಖ್ಯೆ ಹೆಚ್ಚಳ- ಸುರಕ್ಷತೆಯತ್ತ ವಾಹನ ಸವಾರರ ಒಲವು

    ಶಾಮ್ ಯಾವೆಜ್ ಮಂಗಳೂರು

    ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ 5 ವರ್ಷಗಳಲ್ಲಿ ಅಪಘಾತ ಪ್ರಕರಣಗಳು ಮತ್ತು ಸಾವಿನ ಸಂಖ್ಯೆಯಲ್ಲಿ ಇಳಿಕೆ ಕಂಡಿದೆ.

    ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕರ ವ್ಯಾಪ್ತಿಯಲ್ಲಿ 2019ರಲ್ಲಿ 931 ಪ್ರಕರಣ ದಾಖಲಾಗಿ, 154 ಮಂದಿ ಮೃತಪಟ್ಟಿದ್ದರು. 2021ರಲ್ಲಿ 817 ಪ್ರಕರಣ ದಾಖಲಾಗಿ, 114 ಮಂದಿ ಮೃತಪಟ್ಟಿದ್ದರು. 2022ರಲ್ಲಿ 792 ಪ್ರಕರಣ ದಾಖಲಾಗಿ, 93 ಮಂದಿ ಮೃತಪಟ್ಟಿದ್ದರು. ಕಮಿಷನರೇಟ್ ವ್ಯಾಪ್ತಿಯಲ್ಲಿ 2019ರಲ್ಲಿ 1,033 ಪ್ರಕರಣ ದಾಖಲಾಗಿ 149 ಮೃತಪಟ್ಟಿದ್ದರು. 2021ರಲ್ಲಿ 917 ಪ್ರಕರಣ ದಾಖಲಾಗಿ, 98 ಮಂದಿ ಮೃತಪಟ್ಟಿದ್ದರು. 2022ರಲ್ಲಿ 981 ಪ್ರಕರಣ ದಾಖಲಾಗಿ, 87 ಮಂದಿ ಮೃತಪಟ್ಟಿದ್ದರು. 2023ರಲ್ಲಿ 1,011 ಅಪಘಾತವಾದರೆ 160 ಮಂದಿ ಮೃತಪಟ್ಟಿದ್ದಾರೆ. ಜಿಲ್ಲಾ ಪೊಲೀಸ್ ಅಧೀಕ್ಷಕರ ವ್ಯಾಪ್ತಿ ಹಾಗೂ ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ ಕಳೆದ 5 ವರ್ಷಗಳಲ್ಲಿ ಶೇ.20ರಷ್ಟು ವಾಹನಗಳ ಸಂಖ್ಯೆ ಹೆಚ್ಚಳವಾಗಿದ್ದರೂ ಅಪಘಾತ ಪ್ರಕರಣ ಕಡಿಮೆಯಾಗಿದೆ.

    ರಸ್ತೆ ಸುರಕ್ಷತಾ ಜಾಗೃತಿ: ಪೊಲೀಸ್ ಇಲಾಖೆ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ವರ್ಷಕ್ಕೊಮ್ಮೆ ರಸ್ತೆ ಸುರಕ್ಷತಾ ಜಾಗೃತಿ ಸಹಿತ ಹಲವು ವಿಶೇಷ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದ್ದು, ಈ ಮೂಲಕ ಕಾಲೇಜು ವಿದ್ಯಾರ್ಥಿಗಳು, ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಗುತ್ತಿದೆ. ನಗರ ಹಾಗೂ ಗ್ರಾಮೀಣ ಭಾಗದಲ್ಲೂ ಸಂಚಾರ ಅವ್ಯವಸ್ಥೆ ಬಗ್ಗೆ ಪೊಲೀಸ್ ಕಣ್ಗಾವಲು ಹೆಚ್ಚಾಗಿದೆ. ರಸ್ತೆಗಳಲ್ಲಿ ಸ್ಪೀಡ್ ಬ್ರೇಕರ್, ಬಸ್‌ಬೇ, ಓವರ್ ರೈಡಿಂಗ್ ಕಣ್ಗಾವಲಿಗೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ಸುರಕ್ಷಿತ ರಸ್ತೆ ಸಂಚಾರಕ್ಕೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ.

    ದ್ವಿಚಕ್ರ ವಾಹನ ಅಪಘಾತವೇ ಹೆಚ್ಚು

    ಎಸ್‌ಪಿ ಹಾಗೂ ಕಮಿಷನರೇಟ್ ವ್ಯಾಪ್ತಿ ಸೇರಿದಂತೆ ದ.ಕ. ಜಿಲ್ಲೆಯಲ್ಲಿ ನಡೆದ ಅಪಘಾತಗಳಲ್ಲಿ ದ್ವಿಚಕ್ರ ವಾಹನ ಅಪಘಾತ ಪ್ರಕರಣಗಳೇ ಹೆಚ್ಚು. 5 ವರ್ಷಗಳಲ್ಲಿ ಎಸ್‌ಪಿ ವ್ಯಾಪ್ತಿಯಲ್ಲಿ 1,822, ಕಮಿಷನರೇಟ್ ವ್ಯಾಪ್ತಿಯಲ್ಲಿ 1,680 ದ್ವಿಚಕ್ರ ವಾಹನ ಅಪಘಾತಗಳಾಗಿವೆ. 2019ರಿಂದ 2023ರವರೆಗೆ ನಡೆದ ಒಟ್ಟು ಅಪಘಾತ ಪ್ರಕರಣಗಳಲ್ಲಿ 11,157 ಜನ ಗಾಯಗೊಂಡಿದ್ದಾರೆ. ರಾಜ್ಯದಲ್ಲಿ 2016ರ ಜ.12ರಿಂದ ಸಹಸವಾರರಿಗೂ ಹೆಲ್ಮೆಟ್ ಕಡ್ಡಾಯಗೊಳಿಸಿದ ಬಳಿಕ ದ್ವಿಚಕ್ರ ಸವಾರರ ಸಾವಿನ ಸಂಖ್ಯೆಯಲ್ಲೂ ಇಳಿಮುಖವಾಗಿದೆ. ಇತ್ತೀಚೆಗೆ ನಡೆದ ಬಹುತೇಕ ಪ್ರಕರಣಗಳಲ್ಲಿ ಸವಾರರ ನಿರ್ಲಕ್ಷ್ಯದ ಚಾಲನೆ, ಅತಿವೇಗ ಚಾಲನೆ ಹೊರತುಪಡಿಸಿದರೆ ಉಳಿದ ಪ್ರಕರಣಗಳಲ್ಲಿ ಸಾವಿನಂತಹ ಘಟನೆ ಇಳಿಕೆಯಾಗಿದೆ.

    ರಸ್ತೆ ಸಂಚಾರ ಸುರಕ್ಷತೆಗೆ ಪೊಲೀಸ್ ಇಲಾಖೆ ಅನೇಕ ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿದ್ದರಿಂದ ಬಹುತೇಕ ಕಡೆಗಳಲ್ಲಿ ಅಪಘಾತ ಪ್ರಕರಣಗಳು ನಿಯಂತ್ರಣಕ್ಕೆ ಬಂದಿವೆ. ಜನರಲ್ಲಿ ರಸ್ತೆ ಸುರಕ್ಷತೆ ಬಗ್ಗೆ ಹೆಚ್ಚುತ್ತಿರುವ ಜಾಗೃತಿಯಿಂದಾಗಿ ವರ್ಷದಿಂದ ವರ್ಷಕ್ಕೆ ಅಪಘಾತ ಪ್ರಕರಣಗಳು ಇಳಿಕೆಯಾಗುತ್ತಿವೆ.

    ಸಿಬಿ ರಿಷ್ಯಂತ್, ದ.ಕ. ಪೊಲೀಸ್ ವರಿಷ್ಠಾಧಿಕಾರಿ

    ——

    ಯುವಜನತೆಯನ್ನು ಕೇಂದ್ರೀಕರಿಸಿ ರಸ್ತೆ ಸುರಕ್ಷತಾ ಜಾಗೃತಿ ಕಾರ್ಯಕ್ರಮಗಳನ್ನು ಪೊಲೀಸ್ ಇಲಾಖೆಯಿಂದ ಆಯೋಜಿಸಲಾಗುತ್ತಿದೆ. ಜನರಲ್ಲಿ ಸುರಕ್ಷತೆಯ ಜಾಗೃತಿ ಮೂಡಿದ್ದರಿಂದ ಕಳೆದ 4-5 ವರ್ಷಗಳಲ್ಲಿ ಅಪಘಾತ ಪ್ರಕರಣಗಳು ಕಡಿಮೆಯಾಗಿವೆ. ನಗರ ವ್ಯಾಪ್ತಿಯಲ್ಲಿ ಓವರ್ ರೈಡಿಂಗ್, ಸಿಗ್ನಲ್ ಜಂಪಿಂಗ್‌ನಂಥ ಪ್ರಕರಣಗಳ ಬಗ್ಗೆ ಹೆಚ್ಚಿನ ನಿಗಾ ವಹಿಸಲಾಗುತ್ತಿದೆ.

    ದಿನೇಶ್ ಕುಮಾರ್, ಡಿಸಿಪಿ, ನಗರ ಸಂಚಾರ ಮತ್ತು ಅಪರಾಧ ವಿಭಾಗ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts