ನವದೆಹಲಿ: 2025ರ ಫೆಬ್ರವರಿ-ಮಾರ್ಚ್ ತಿಂಗಳಲ್ಲಿ ನಡೆಯಲಿರುವ ಚಾಂಪಿಯನ್ಸ್ಟ್ರೋಫಿಗೆ ಪಾಕಿಸ್ತಾನ ಆತಿಥ್ಯ ವಹಿಸಲಿದ್ದು, ಇದಕ್ಕೆ ಸಂಬಂಧಿಸಿದಂತೆ ಐಸಿಸಿ ಹಾಗೂ ಪಿಸಿಬಿ ಈಗಾಗಲೇ ಸಿದ್ಧತೆಗಳನ್ನು ಆರಂಭ ಮಾಡಿಕೊಂಡಿದೆ. ಆದರೆ, ಭದ್ರತೆಯ ಕಾರಣದಿಂದಾಗಿ ಭಾರತ ತಂಡವು ಪಾಕಿಸ್ತಾನಕ್ಕೆ ಪ್ರಯಾಣಿಸುವುದಿಲ್ಲ ಎಂಬ ವರದಿ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಪ್ರಕಟವಾಗುತ್ತಿದ್ದು, ಇದರ ಬಗ್ಗೆ ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ಪ್ರತಿಕ್ರಿಯಿಸಿದ್ದು, ಈ ಬಗ್ಗೆ ಮಾತನಾಡಿದ್ದಾರೆ.
ಈ ಕುರಿತು ಮಾತನಾಡಿರುವ ರಾಜೀವ್ ಶುಕ್ಲಾ, ಭಾರತ ಸರ್ಕಾರ ನಮಗೆ ಹೇಗೆ ಹೇಳುತ್ತದೋ ಅದೇ ರೀತಿ ನಾವು ನಡೆದುಕೊಳ್ಳುತ್ತೇವೆ. ಭಾರತ ಸರ್ಕಾರ ತೆಗೆದುಕೊಳ್ಳುವ ನಿರ್ಧಾರಕ್ಕೆ ನಾವು ಬದ್ದರಾಗಿದ್ದು, ಅನುಮತಿ ನೀಡಿದರೆ ಮುಂದಿನ ಕ್ರಮ ಕೈಗೊಳ್ಳುತ್ತೇವೆ. ಭಾರತ ತಂಡವನ್ನು ಪಾಕಿಸ್ತಾನಕ್ಕೆ ಕಳಿಸುವ ವಿಚಾರವಾಗಿ ಬಿಸಿಸಿಐ ಕೆಲವು ಷರತ್ತುಗಳನ್ನು ವಿಧಿಸಿದ್ದು, ಅದರ ಪ್ರಕಾರ ನಡೆದುಕೊಂಡರೆ ಮಾತ್ರ ನಾವು ಮುಂದಿನ ನಿರ್ಧಾರ ಪ್ರಕಟಿಸುತ್ತೇವೆ ಎಂದು ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ತಿಳಿಸಿದ್ದಾರೆ.
ಇದನ್ನೂ ಓದಿ: ಮುಸ್ಲಿಮರಿಗೆ ಸಂಪೂರ್ಣ ಮೀಸಲಾತಿ ಸಿಗಬೇಕು ಎಂದ ಲಾಲು ಪ್ರಸಾದ್; ಪ್ರಧಾನಿ ಮೋದಿ ಸೇರಿದಂತೆ ಹಲವರಿಂದ ಖಂಡನೆ
ಸದ್ಯ ಕೇಳಿ ಬಂದಿರುವ ಮಾಹಿತಿ ಪ್ರಕಾರ ಚಾಂಪಿಯನ್ಸ್ ಟ್ರೋಫಿಗೆ ಸಂಬಂಧಿಸಿದಂತೆ ಪಿಸಿಬಿ ಈಗಾಗಲೇ ಕರಾಚಿ, ಲಾಹೋರ್ ಹಾಗೂ ರಾವಲ್ಪಿಂಡಿಯಲ್ಲಿ ಪಂದ್ಯಗಳನ್ನು ಆಯೋಜಿಸಲು ಸಿದ್ಧತೆ ನಡೆಸಿದ್ದು, ಇದಕ್ಕೆ ಸಂಬಂಧಿಸಿದಂತೆ ಬಿಸಿಸಿಐ ಒಂದು ಷರತ್ತು ವಿಧಿಸಿರುವುದಾಗಿ ವರದಿಯಾಗಿದೆ. ಅದೇನೆಂದರೆ ಭಾರತದ ಪಂದ್ಯಗಳನ್ನು ಲಾಹೋರ್ನಲ್ಲಿ ಆಯೋಜನೆ ಮಾಡಬೇಕು ಎಂಬುದಾಗಿ ವರದಿಯಾಗಿದೆ. ಆಟಗಾರರ ಪ್ರಯಾಣ ಹಾಗೂ ಭದ್ರತೆಗೆ ಸಂಬಂಧಿಸಿದಂತೆ ಬಿಸಿಸಿಐ ಈ ನಿರ್ಧಾರವನ್ನು ತೆಗೆದುಕೊಂಡಿದೆ ಎಂದು ಹೇಳಲಾಗಿದೆ. ಈ ಬಗ್ಗೆ ಭಾರತ ಸರ್ಕಾರ ತೆಗೆದುಕೊಳ್ಳುವ ತೀರ್ಮಾನ ಅಂತಿಮವಾಗಿದೆ.
ಉಭಯ ದೇಶಗಳ ನಡುವಿನ ರಾಜತಾಂತ್ರಿಕ ಬಿಕ್ಕಟ್ಟಿನ ಪರಿಣಾಮ ಭಾರತ ಹಾಗೂ ಪಾಕಿಸ್ತಾನ 2012ರ ವರ್ಷಾಂತ್ಯದಲ್ಲಿ ದ್ವಿಪಕ್ಷೀಯ ಸರಣಿಯನ್ನು ಆಡಿತ್ತು. ಇದಾದ ಬಳಿಕ ಉಭಯ ತಮಡಗಳು ಐಸಿಸಿ ಟೂರ್ನಮೆಂಟ್ ಹಾಗೂ ಏಷ್ಯಾಕಪ್ನಲ್ಲಿ ಮುಖಾಮುಖಿಯಾಗುತ್ತಿವೆ.