More

    ಭದ್ರಾವತಿ ಹಳ್ಳಿಗಳಲ್ಲಿ ಪಂಚರತ್ನ ರಥಯಾತ್ರೆ ಸಂಚಾರ; ಎಚ್.ಡಿ.ಕುಮಾರಸ್ವಾಮಿಗೆ ಭರ್ಜರಿ ಸ್ವಾಗತ

    ಭದ್ರಾವತಿ: ತಾಲೂಕಿನ ಕಾರೇಹಳ್ಳಿ ಗ್ರಾಮದಲ್ಲಿ ಜೆಡಿಎಸ್ ಮುಖಂಡರು, ಕಾರ್ಯಕರ್ತರ ನೇತೃತ್ವದಲ್ಲಿ ಜೆಡಿಎಸ್‌ನ ಪಂಚರತ್ನ ರಥಯಾತ್ರೆಗೆ ಮಂಗಳವಾರ ಅದ್ದೂರಿ ಚಾಲನೆ ದೊರೆಯಿತು. ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಬೃಹದಾಕಾರದ ಹೂವಿನ ಹಾರಗಳನ್ನು ಹಾಕುವ ಮೂಲಕ ಜೆಡಿಎಸ್ ಅಭಿಮಾನಿಗಳು, ಕಾರ್ಯಕರ್ತರು ಹಾಗೂ ಸ್ಥಳೀಯ ಗ್ರಾಮಸ್ಥರು ಬರಮಾಡಿಕೊಂಡರು. ಕಾರೇಹಳ್ಳಿ ಗ್ರಾಮದಿಂದ ಹೊರಟ ಜೆಡಿಎಸ್ ಪಂಚರತ್ನ ಯಾತ್ರೆ ಕೆಂಪೇಗೌಡ ನಗರ, ಬಾರಂದೂರು, ಕೆಂಚೇನಹಳ್ಳಿ, ಮಾವಿನಕೆರೆ ಮಾರ್ಗವಾಗಿ ಸಂಚರಿಸಿತು. ಪಂಚರತ್ನ ರಥದ ವಾಹನವನ್ನೇರಿದ್ದ ಎಚ್.ಡಿ.ಕುಮಾರಸ್ವಾಮಿ, ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಬೋಜೇಗೌಡ, ಜೆಡಿಎಸ್ ನಾಯಕಿ ಶಾರದಾ ಅಪ್ಪಾಜಿ, ಜಿಲ್ಲಾಧ್ಯಕ್ಷ ಎಸ್.ಶ್ರೀಕಾಂತ್, ಕರುಣಾಮೂರ್ತಿ ಮತ್ತಿತರರು ಮನೆಗಳ ಮುಂದೆ ನಿಂತಿದ್ದ ಗ್ರಾಮಸ್ಥರು, ಜಮೀನು, ತೋಟಗಳಲ್ಲಿ ಕೆಲಸದಲ್ಲಿ ನಿರತರಾಗಿದ್ದ ರೈತರ ಕಡೆಗೆ ಕೈಬೀಸುತ್ತ ಸಾಗಿದರು. ಬಾರಂದೂರು ಗ್ರಾಮದಲ್ಲಿ ಮಹಿಳೆಯರು ಆರತಿ ಎತ್ತುವ ಮೂಲಕ ರಥಯಾತ್ರೆಯನ್ನು ಬರಮಾಡಿಕೊಂಡರು. ಹಲವು ಗ್ರಾಮಗಳಲ್ಲಿ ಅಭಿಮಾನಿಗಳು ಪಟಾಕಿ ಸಿಡಿಸಿ ಸಂಭ್ರಮಿಸಿದರು. ಬಿ.ಎಚ್.ರಸ್ತೆ ಮೂಲಕ ಗ್ರಾಮದ ಕಡೆಗೆ ತೆರಳಿದ ರಥಯಾತ್ರೆ ಹಲವು ಗ್ರಾಮಗಳ ಮೂಲಕ ಸಂಜೆ ಕನಕಮಂಟಪಕ್ಕೆ ಆಗಮಿಸಿತು.
    ಶಾರದಾ ಅಪ್ಪಾಜಿಗೂ ಬೆಂಬಲ ನೀಡಿ: ವಿಐಎಸ್‌ಎಲ್ ಹಾಗೂ ಎಂಪಿಎಂ ಕಾರ್ಖಾನೆ ಸೇರಿದಂತೆ ಕ್ಷೇತ್ರದಲ್ಲಿ ಹಲವಾರು ಸಮಸ್ಯೆಗಳಿವೆ. ಅವುಗಳನ್ನು ಸರಿಪಡಿಸುವ ಸಲುವಾಗಿ ಅಪ್ಪಾಜಿ ಗೌಡ ಅವರ ಧರ್ಮಪತ್ನಿ ಜೆಡಿಎಸ್‌ನ ಶಾರದಾ ಅಪ್ಪಾಜಿ ಅವರನ್ನು ಬೆಂಬಲಿಸಬೇಕು ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಮನವಿ ಮಾಡಿದರು.
    ಬಾರಂದೂರು ಹಾಗೂ ಕೆಂಪೇಗೌಡ ನಗರದಲ್ಲಿ ಗ್ರಾಮದಲ್ಲಿ ಮಾತನಾಡಿದ ಅವರು, ಅಪ್ಪಾಜಿ ಗೌಡ ಅವರು ನಮ್ಮೊಂದಿಗಿಲ್ಲ. ಆದರೆ ಅವರ ಹೋರಾಟಗಳು ಇನ್ನೂ ಜೀವಂತವಾಗಿರುವುದಕ್ಕೆ ಇಲ್ಲಿ ನೆರೆದಿರುವ ಜನಸ್ತೋಮವೇ ಸಾಕ್ಷಿ. ಅವರ ಮೇಲೆ ನೀವು ಇಟ್ಟಿರುವ ಪ್ರೀತಿ, ಅಭಿಮಾನ ಈ ಬಾರಿ ಭದ್ರಾವತಿ ಕ್ಷೇತ್ರದ ಪಕ್ಷದ ಅಭ್ಯರ್ಥಿ ಶಾರದಾ ಅಪ್ಪಾಜಿ ಅವರಿಗೂ ತೋರಿಸಿ ಎಂದರು.
    ಎಂಪಿಎಂ ಕಾರ್ಖಾನೆಯನ್ನು ಈಗಾಗಲೆ ಮುಚ್ಚಲಾಗಿದೆ. ವಿಐಎಸ್‌ಎಲ್ ಕಾರ್ಖಾನೆಯನ್ನೂ ಮುಚ್ಚುವ ಆತಂಕ ಎದುರಾಗಿದೆ. ಕಾರ್ಖಾನೆಯನ್ನು ಮುಚ್ಚಲು ಯಾವ ಕಾರಣಕ್ಕೂ ಅವಕಾಶ ನೀಡುವುದಿಲ್ಲ. ಅದಕ್ಕೆ ನಿಮ್ಮೆಲ್ಲರ ಬೆಂಬಲ ಅಗತ್ಯ ಎಂದು ಹೇಳಿದರು.
    ರಾಜ್ಯದಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಅವುಗಳನ್ನು ನಿವಾರಿಸುವ ದೃಷಿಯಿಂದ ಪಕ್ಷದಿಂದ 5 ಯೋಜನೆಗಳನ್ನು ಹಮ್ಮಿಕೊಂಡು ಪಂಚರತ್ನ ಯಾತ್ರೆ ಆರಂಭಿಸಲಾಗಿದೆ. ಉಚಿತ ಶಿಕ್ಷಣ, ಆಸ್ಪತ್ರೆ ಸೌಲಭ್ಯ, ಸಾಲ ಮುಕ್ತ ರೈತರು, ಯುವಕರಿಗೆ ಉದ್ಯೋಗ, ಬಡವರಿಗೆ ನಿವೇಶನ ಹಾಗೂ ವಸತಿ, 65 ವರ್ಷ ಮೇಲ್ಪಟ್ಟ ಕುಟುಂಬದ ಮುಖ್ಯಸ್ಥರಿಗೆ ಜೀವನ ಪರ್ಯಂತ ಮಾಸಿಕ 5 ಸಾವಿರ ರೂ. ಧನಸಹಾಯ, ವಿಧವೆಯರ ಹಾಗೂ ಅವಿವಾಹಿತರ ಮಾಸಾಶನ 800 ರೂ.ನಿಂದ 2 ಸಾವಿರ ರೂ.ಗೆ ಏರಿಕೆ, ಸ್ತ್ರೀಶಕ್ತಿ ಸ್ವಸಹಾಯ ಸಂಘಗಳ ಸಾಲ ಮನ್ನಾ ಯೋಜನೆ ರೂಪಿಸಲಾಗಿದೆ ಎಂದರು.
    ಬಿ.ಎಚ್.ರಸ್ತೆಯಲ್ಲಿ ವಾಹನ ದಟ್ಟಣೆ: ಬಿ.ಎಚ್.ರಸ್ತೆಯಲ್ಲಿ ಪಂಚರತ್ನ ಯಾತ್ರೆ ಸಾಗುವಾಗ ಸಂಚಾರ ದಟ್ಟಣೆ ಉಂಟಾಯಿತು. ಕಿ.ಮೀ.ಗಟ್ಟಲೆ ವಾಹನಗಳು ಸರದಿ ಸಾಲಿನಲ್ಲಿ ನಿಲ್ಲುವಂತಾಯಿತು. ಸಂಚಾರ ನಿಯಂತ್ರಣ ಮಾಡುವಲ್ಲಿ ಪೊಲೀಸರು ಹರಸಾಹಸಪಟ್ಟರು. ಆಂಬುಲೆನ್ಸ್ ಬಾರದಿದ್ದರೂ ಆಂಬುಲೆನ್ಸ್‌ಗೆ ಜಾಗ ಬಿಡಿ ಎಂದು ರಥದ ಮೇಲಿದ್ದ ಬೋಜೇಗೌಡ ಸುಳ್ಳು ಹೇಳಿ ಜನರು ಸರಿಯುವಂತೆ ಮಾಡಿ ಅನ್ಯ ವಾಹನಗಳು ತೆರಳಲು ಅವಕಾಶ ಮಾಡಿಕೊಟ್ಟರು. ಕುಮಾರಸ್ವಾಮಿ ಅವರಿಗೆ ಹಳ್ಳಿಕೆರೆ ಜೈ ಭುವನೇಶ್ವರಿ ಯುವಕ ತಂಡ ಅಡಕೆ ತಟ್ಟೆ ಹಾರ ಹಾಕಿದರು. ಅಪ್ಪಾಜಿ ಹಾಗೂ ಜೆಡಿಎಸ್ ಅಭಿಮಾನಿ ಬಳಗ ಬೃಹದಾಕಾರದ ಹಾರಗಳನ್ನು ಹಿಟಾಚಿ ಮೂಲಕ ಹಾಕಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts