More

    ಭತ್ತ, ಕಬ್ಬಿನ ಗದ್ದೆಗಳು ಜಲಾವೃತ

    ರಾಣೆಬೆನ್ನೂರ: ಭದ್ರಾ ಜಲಾಶಯದಿಂದ ತುಂಗಭದ್ರಾ ನದಿಗೆ ನೀರು ಹರಿಬಿಟ್ಟ ಪರಿಣಾಮ ತಾಲೂಕಿನಲ್ಲಿ ಅಪಾಯದ ಮಟ್ಟ ಮೀರಿ ತುಂಗಭದ್ರಾ ನದಿಯಲ್ಲಿ ನೀರು ಹರಿಯುತ್ತಿದ್ದು ನದಿಪಾತ್ರದ ಭತ್ತ, ಬಾಳೆ, ಕಬ್ಬಿನ ಗದ್ದೆಗಳು ಸಂಪೂರ್ಣ ಜಲಾವೃತಗೊಂಡಿವೆ. ಆಗಸ್ಟ್ ತಿಂಗಳು ಸೇರಿ ಈವರೆಗೂ ಒಟ್ಟು 145 ಮನೆಗಳು ಕುಸಿದಿವೆ.

    ತಾಲೂಕಿನಲ್ಲಿ ಕಳೆದ ಒಂದು ವಾರದಿಂದ ನಿರಂತರವಾಗಿ ಮಳೆ ಸುರಿಯುತ್ತಿದೆ. ಅಲ್ಲದೆ ಮಲೆನಾಡು ಪ್ರದೇಶದಲ್ಲಿ ಹೆಚ್ಚಿನ ಮಳೆಯಾಗುತ್ತಿದೆ. ಜತೆಗೆ ಭದ್ರಾ ಜಲಾಶಯದಿಂದಲೂ ನೀರು ಹರಿಬಿಟ್ಟಿದ್ದರಿಂದ ತುಂಗಭದ್ರಾ ನದಿಯಲ್ಲಿ ನೀರು ಹರಿವು ಪ್ರಮಾಣ ಭಾರಿ ಏರಿಕೆಯಾಗಿದೆ. ಹೀಗಾಗಿ ನದಿಪಾತ್ರದ ಗ್ರಾಮಗಳ ಜನರಲ್ಲಿ ನೆರೆ ಹಾವಳಿ ಭೀತಿ ಆವರಿಸಿದೆ.

    ತಾಲೂಕಿನ ಚೌಡಯ್ಯದಾನಪುರ ಗ್ರಾಮ ಬಳಿಯ ನಿಜಶರಣ ಅಂಬಿಗರ ಚೌಡಯ್ಯನವರ ಐಕ್ಯ ಮಂಟಪ ಮುಳುಗಿದ್ದು, ದರ್ಶನ ಬಂದ್ ಆಗಿದೆ. ಹಳೇ ಚಂದಾಪುರ, ಹರನಗಿರಿ, ಉದಗಟ್ಟಿ, ಮಾಕನೂರ, ಹೊಳೆಆನ್ವೇರಿ ಸೇರಿ ವಿವಿಧ ಗ್ರಾಮಗಳ ಬಳಿ ನದಿ ನೀರು ಹೆಚ್ಚಿನ ಪ್ರಮಾಣದಲ್ಲಿ ಹರಿಯುತ್ತಿದ್ದು, ಇದೇ ರೀತಿ ಮಳೆ ಸುರಿದರೆ ಮುಂದಿನ ದಿನದಲ್ಲಿ ಮನೆಗಳಿಗೆ ನೀರು ನುಗ್ಗುವ ಸಾಧ್ಯತೆಯಿದೆ.

    ನೂರಾರು ಎಕರೆ ಬೆಳೆನಾಶ: ಹಿರೇಬಿದರಿ, ಕುದರಿಹಾಳ, ಐರಣಿ, ಮೇಡ್ಲೇರಿ, ಸೋಮಲಾಪುರ, ಕೋಣತಂಬಗಿ, ಉದಗಟ್ಟಿ, ಬೇಲೂರು, ಹೊಳೆಆನ್ವೇರಿ, ಹರನಗಿರಿ ಸೇರಿ ನದಿಪಾತ್ರದ ಗ್ರಾಮಗಳ ರೈತರು ಬೆಳೆದಿದ್ದ ನೂರಾರು ಹೆಕ್ಟೇರ್ ಪ್ರದೇಶದಷ್ಟು ಭತ್ತ, ಬಾಳೆ, ಕಬ್ಬಿನ ಬೆಳೆ ಸಂಪೂರ್ಣ ನೀರಿನಲ್ಲಿ ಕೊಚ್ಚಿ ಹೋಗಿದೆ. ಹಲವು ಗದ್ದೆಗಳು ಜಲಾವೃತವಾಗಿದ್ದು, ಬೆಳೆ ಹಾಳಾಗುವ ಸಾಧ್ಯತೆಯಿದೆ. ಕೃಷಿ ಹಾಗೂ ಕಂದಾಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಬೇಕು. ನದಿಯಲ್ಲಿ ಕೊಚ್ಚಿ ಹೋದ ಭತ್ತದ ಬೆಳೆಗೆ ಸೂಕ್ತ ಪರಿಹಾರ ನೀಡಬೇಕು ಎಂದು ನದಿಪಾತ್ರದ ಗ್ರಾಮಗಳ ರೈತರು ಆಗ್ರಹಿಸಿದ್ದಾರೆ.

    ಶಾಂತವಾಗಿದ್ದ ತುಂಗೆ: ಕಳೆದ ಜುಲೈ ತಿಂಗಳಲ್ಲಿ ಭಾರಿ ಪ್ರಮಾಣದಲ್ಲಿ ಮಳೆ ಸುರಿದ ಪರಿಣಾಮ ತುಂಗಭದ್ರಾ ನದಿ ನೀರು ಅಲ್ಪಸ್ವಲ್ಪ ಭತ್ತದ ಗದ್ದೆಗಳಿಗೆ ನುಗ್ಗಿ ಬೆಳೆ ಹಾನಿ ಮಾಡಿತ್ತು. ನಂತರದ ಎರಡ್ಮೂರು ವಾರದಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿತ್ತು. ಆದರೀಗ ಮತ್ತೆ ನೀರಿನ ಪ್ರಮಾಣ ಹೆಚ್ಚಳವಾಗಿರುವುದರಿಂದ ಜನರಲ್ಲಿ ಆಂತಕ ಮೂಡಿದೆ.

    ಕೃಷಿ, ತೋಟಗಾರಿಕೆ ಹಾಗೂ ಕಂದಾಯ ಇಲಾಖೆ ಜಂಟಿಯಾಗಿ ಬೆಳೆಹಾನಿ ಸಮೀಕ್ಷೆ ಆರಂಭಿಸಿದ್ದೇವೆ. ರೈತರಿಗೆ ಪರಿಹಾರ ಒದಗಿಸಲು ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು. ಭದ್ರಾ ಹಾಗೂ ತುಂಗಾ ಜಲಾಶಯದಿಂದ ನಿತ್ಯವೂ ನೀರು ಹರಿಬಿಡುತ್ತಿರುವ ಕಾರಣ ನದಿಪಾತ್ರದ ಜನ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಗೊಳ್ಳಬೇಕು. ಯಾವುದೇ ಕಾರಣಕ್ಕೂ ಜಾನುವಾರುಗಳನ್ನು ನದಿಪಾತ್ರಕ್ಕೆ ತೆಗೆದುಕೊಂಡು ಹೋಗಬಾರದು.
    | ಬಸನಗೌಡ ಕೋಟೂರ, ತಹಸೀಲ್ದಾರ್ ರಾಣೆಬೆನ್ನೂರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts