More

    ಭತ್ತಕ್ಕೆ ಬಿಳಿ ಬೆನ್ನಿನ ಜಿಗಿ ಹುಳು ಬಾಧೆ

    ಹಾನಗಲ್ಲ: ತಾಲೂಕಿನ ವರದಾ ಮತ್ತು ಧರ್ವ ನದಿ ಅಚ್ಚುಕಟ್ಟು ಪ್ರದೇಶದಲ್ಲಿ ಬೆಳೆಯಲಾಗಿರುವ ಭತ್ತದ ಬೆಳೆಗೆ ಬಿಳಿ ಬೆನ್ನಿನ ಜಿಗಿ ಹುಳುವಿನ ಬಾಧೆ ಹಾಗೂ ಎಲೆ ಕವಚ ಮಚ್ಚೆ ರೋಗ ಬಾಧೆ ಕಂಡು ಬಂದಿದ್ದು, ನಿಯಂತ್ರಣಕ್ಕೆ ಕೃಷಿ ಅಧಿಕಾರಿ ಸಂಗಮೇಶ ಹಕ್ಲಪ್ಪನವರ ಸಲಹೆ ನೀಡಿದ್ದಾರೆ.

    ಬಿಳಿ ಬೆನ್ನಿನ ಜಿಗಿ ಹುಳುವಿನ ಬಾಧೆ: ಬಾಧೆಗೊಳಗಾದ ಪೈರಿನ ಎಲೆಗಳು ಕಂದು ಬಣ್ಣಕ್ಕೆ ತಿರುಗಿ ಅಲ್ಲಲ್ಲಿ ಸುಟ್ಟಂತೆ ಕಾಣುತ್ತದೆ. ಇದಕ್ಕೆ ‘ಜಿಗಿ ಹುಳುವಿನ ಸುಡು’ ಎಂತಲೂ ಕರೆಯುತ್ತಾರೆ. ಭತ್ತದ ಗಿಡಗಳ ಬುಡದಲ್ಲಿ ಕೀಟ ಇರುವುದನ್ನು ಗಮನಿಸಿ ಗದ್ದೆಯಲ್ಲಿನ ನೀರನ್ನು ತೆರವುಗೊಳಿಸಿ 5-6 ದಿನಗಳವರೆಗೆ ಒಣಗಲು ಬಿಡಬೇಕು. ಯೂರಿಯಾಯುಕ್ತ ರಸಗೊಬ್ಬರಗಳನ್ನು ಹೆಚ್ಚು ಬಳಸಬಾರದು. ಹೂ ಬಿಡುವ ಸಮಯದಿಂದ ಕಾಳು ಕಟ್ಟುವ ಹಂತದವರೆಗೆ ಇಮಿಡಾಕ್ಲೋಪ್ರಿಡ್ 7 ಎಂಎಲ್ ಅಥವಾ ಥಯಾಮೆಥಾಕ್ಸಾಮ್ 7 ಗ್ರಾಂ ಅಥವಾ ಬುಫ್ರೋಫೆಜಿನ್ 25 ಎಂಎಲ್ ಇವುಗಳಲ್ಲಿ ಯಾವುದಾದರೊಂದನ್ನು ಪ್ರತಿ ಕ್ಯಾನ್​ಗೆ ಬೆರೆಸಿ ಬೆಳೆಯ ಬುಡಕ್ಕೆ ಸಿಂಪರಣೆ ಮಾಡಬೇಕು.

    ಎಲೆ ಕವಚ ಮಚ್ಚೆ ರೋಗ: ರೋಗವು ತೆನೆಯ ಕಾಳುಗಳಿಗೂ ಪಸರಿಸುವುದರಿಂದ ಕಾಳು ಕಂದು ಬಣ್ಣಕ್ಕೆ ತಿರುಗುತ್ತದೆ. ಕಾಳು ಜೊಳ್ಳಾಗುತ್ತವೆ. ಈ ರೋಗವು ಹೊಡೆ ಹಾಯುವ ಹಂತದಲ್ಲಿ ಆರಂಭವಾಗಿ, ಕಾಳು ಕಟ್ಟುವ ಹೊತ್ತಿಗೆ ಉಲ್ಭಣಗೊಂಡು ಭತ್ತವು ಸಂಪೂರ್ಣವಾಗಿ ಒಣಗುತ್ತದೆ. ಗದ್ದೆಗಳಲ್ಲಿ ನೀರು ಆದಷ್ಟು ಕಡಿಮೆ ಇರುವಂತೆ ನೋಡಿಕೊಳ್ಳಬೇಕು, ಸಾರಜನಕ ರಸಗೊಬ್ಬರಗಳನ್ನು ಬಳಸಬಾರದು. ರೋಗ ಲಕ್ಷಣಗಳು ಕಂಡುಬಂದ ಕೂಡಲೇ ಕಿಟಾಜಿನ್ 20 ಎಂಎಲ್ ಅಥವಾ ಟ್ರೈಸೈಕ್ಲೋಜೋಲ್ 25 ಗ್ರಾಂ ಅಥವಾ ವ್ಯಾಲಿಡ್​ವೆುೖಸಿನ್ 30 ಎಂಎಲ್ ಯಾವುದಾದರೊಂದನ್ನು ಬೆರೆಸಿ ವಾರಕ್ಕೊಮ್ಮೆ ಎರಡು ಬಾರಿ ಸಿಂಪಡಿಸಬೇಕು ಎಂದು ತಿಳಿಸಿದ್ದಾರೆ.

    ‘ಹೀರೂರ ಗ್ರಾಮದ ರೈತ ಮಲ್ಲಿಕಾರ್ಜುನ ಮೆಳ್ಳಿಹಳ್ಳಿ ಅವರ ಹೊಲದಲ್ಲಿ ಬಿಳಿ ಬೆನ್ನಿನ ಜಿಗಿ ಹುಳುವಿನ ಬಾಧೆ ಕಂಡುಬಂದಿತ್ತು. ಅದನ್ನು ತಕ್ಷಣ ಗುರುತಿಸಿ ಕ್ರಮ ಕೈಗೊಂಡಿದ್ದರಿಂದಾಗಿ ವಾರದಲ್ಲಿ ಹತೋಟಿಗೆ ಬಂದಿದೆ. ಭತ್ತ ಬೆಳೆದ ರೈತರು ಸಾಮೂಹಿಕವಾಗಿ ಔಷಧ ಸಿಂಪಡಣೆ ಕೈಗೊಳ್ಳುವುದರಿಂದ ಕೀಟವನ್ನು ಪರಿಣಾಮಕಾರಿಯಾಗಿ ಹತೋಟಿಗೆ ತರಬಹುದು ಎಂದು ಸಂಗಮೇಶ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts