More

    ಸಂಕಷ್ಟದಲ್ಲಿ ರೂತಾಪಿ ವರ್ಗ

    ಸೋಮವಾರಪೇಟೆ: ಸುಡುಬಿಸಿಲಿನಿಂದ ರೈತಾಪಿ ವರ್ಗ ಸಂಕಷ್ಟಕ್ಕೆ ಸಿಲುಕಿದ್ದು, ಕಾಫಿ, ಕಾಳುಮೆಣಸು, ಭತ್ತ, ಏಲಕ್ಕಿ ಸೇರಿದಂತೆ ಇತರ ಫಸಲಿನ ಮೇಲೆ ದೊಡ್ಡಮಟ್ಟದ ದುಷ್ಪರಿಣಾಮ ಬೀರಿದೆ ಎಂದು ಶಾಂತಳ್ಳಿ ಹೋಬಳಿ ವ್ಯಾಪ್ತಿಯ ರೈತರು ಸಂಕಷ್ಟ ತೋಡಿಕೊಂಡರು.

    ರಾಜ್ಯದ ನಂ.1 ಕನ್ನಡ ದಿನಪತ್ರಿಕೆ ವಿಜಯವಾಣಿ ವತಿಯಿಂದ ಶಾಂತಳ್ಳಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಂತಳ್ಳಿ ಹೋಬಳಿ ರೈತರೊಂದಿಗೆ ಶುಕ್ರವಾರ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಕೃಷಿಕರು ತಮ್ಮ ಸಮಸ್ಯೆಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟರು.

    ಶಾಂತಳ್ಳಿ ಹೋಬಳಿಯ ಪುಷ್ಪಗಿರಿ, ಬೆಟ್ಟದಳ್ಳಿ, ಶಾಂತಳ್ಳಿ, ಮಲ್ಲಳ್ಳಿ, ಬೀದಳ್ಳಿ, ನಾಡ್ನಳ್ಳಿ, ಕುಮಾರಳ್ಳಿ, ಕುಂದಳ್ಳಿ, ಬೆಂಕಳ್ಳಿ, ಬಾಚಳ್ಳಿ, ಕೊತ್ನಳ್ಳಿ, ಕುಡಿಗಾಣ ಸೇರಿದಂತೆ ಅಕ್ಕಪಕ್ಕದ ಗ್ರಾಮಗಳಲ್ಲಿ ಪ್ರತಿ ವರ್ಷ ಅಕಾಲಿಕ ಮಳೆಯಿಂದ ಕೃಷಿ ಫಸಲು ಹಾನಿಯಾಗುತ್ತಿದೆ. ತಾಲೂಕಿನ ಮಟ್ಟಿಗೆ ಹೆಚ್ಚು ಮಳೆಬೀಳುವ ಹೋಬಳಿ ಇದಾಗಿದ್ದು, ವಾರ್ಷಿಕ ಸರಾಸರಿ 300 ರಿಂದ 400 ಇಂಚು ಮಳೆ ಬೀಳುತ್ತದೆ. ಆದರೂ ಫಸಲು ಉಳಿಸಿಕೊಳ್ಳಲು ಹರಸಾಹಸ ಮಾಡಬೇಕಿದೆ ಎಂದು ಹೇಳಿದರು.

    ಪ್ರತಿ ವರ್ಷ ಅತಿವೃಷ್ಟಿಯಿಂದ ಕೃಷಿ ಫಸಲು ಹಾನಿಯಾಗುತ್ತದೆ. ಬಹತೇಕ ಕೃಷಿಕರಿಗೆ ಸಿ ಮತ್ತು ಡಿ(ಕೃಷಿಗೆ ಯೋಗ್ಯವಲ್ಲದ ಸರ್ಕಾರದ ಭೂಮಿ) ಜಾಗವಿರುವುದರಿಂದ ಆಸ್ತಿ ಮಾಲೀಕತ್ವದಿಂದ ವಂಚಿತರಾಗಬೇಕಿದೆ. ಆಸ್ತಿ ದಾಖಲಾತಿ ಇಲ್ಲದಿರುವುದರಿಂದ ಶೇ.50ರಷ್ಟು ಜನರಿಗೆ ಬೆಳೆಹಾನಿ ಪರಿಹಾರ ಮತ್ತು ಇತರ ಸರ್ಕಾರದ ಸೌಲಭ್ಯಗಳು ದೊರೆಯುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

    ಅಲ್ಪ-ಸ್ವಲ್ಪ ಆಸ್ತಿ ದಾಖಲಾತಿ ಇದ್ದರೂ ಒಂದು ಎಕರೆ ಆರ್‌ಟಿಸಿಯಲ್ಲಿ ಕುಟುಂಬದ ಹತ್ತಿಪ್ಪತ್ತು ಜನರ ಹೆಸರಿದೆ. ಬ್ಯಾಂಕ್‌ನಲ್ಲೂ ಸಾಲ ಸಿಗುತ್ತಿಲ್ಲ. ರಾಷ್ಟ್ರೀಕೃತ ಬ್ಯಾಂಕ್‌ನವರು ರೈತರನ್ನು ಸಾಲದ ವಿಷಯದಲ್ಲಿ ಹತ್ತಿರಕ್ಕೂ ಸೇರಿಸುತ್ತಿಲ್ಲ. ಆಸ್ತಿ ದಾಖಲಾತಿಯಿರುವ ಬೆರಳಣಿಕೆ ಜನರು ಸರ್ಕಾರದ ಸೌಲಭ್ಯ ಪಡೆದುಕೊಳ್ಳುತ್ತಿದ್ದಾರೆ ಎಂದು ಸಮಸ್ಯೆ ಹೇಳಿಕೊಂಡರು.

    ಎರಡು ಮೂರು ದಶಕಗಳ ಹಿಂದೆ ಶಾಂತಳ್ಳಿ ಹೋಬಳಿಯಲ್ಲಿ ಹೆಚ್ಚು ಏಲಕ್ಕಿ ಬೆಳೆಯಲಾಗುತ್ತಿತ್ತು. ಸಣ್ಣ ರೈತರು ಕೂಡ ಒಂದು ಸಾವಿರದಿಂದ ಎರಡು ಸಾವಿರ ಕೆ.ಜಿ. ಏಲಕ್ಕಿ ಬೆಳೆಯುತ್ತಿದ್ದರು. ನಂತರ ಏಕಾಏಕಿ ಏಲಕ್ಕಿಗೆ ರೋಗಬಾಧೆ ಕಾಣಿಸಿಕೊಂಡು ಹತೋಟಿಗೆ ಬರಲಿಲ್ಲ. ಕಟ್ಟೆರೋಗ, ಕಂದುರೋಗ, ಕೊಳೆರೋಗ ವ್ಯಾಪಿಸಿ ಏಲಕ್ಕಿ ಸರ್ವನಾಶವಾಯಿತು. ಇವತ್ತಿಗೂ ಏಲಕ್ಕಿ ಕೃಷಿ ಕಷ್ಟಸಾಧ್ಯ ಎಂದು ಅಳಲು ತೋಡಿಕೊಂಡರು.

    ಅಂದಿನ ಕಾಲಘಟ್ಟದಲ್ಲಿ ಶಾಂತಳ್ಳಿ ಹೋಬಳಿಯಲ್ಲಿ ಕಿತ್ತಳೆಯನ್ನು ಹೆಚ್ಚಾಗಿ ಬೆಳೆಯುತ್ತಿದ್ದರು. ಈ ಕೃಷಿಗೂ ರೋಗ ಬಾಧಿಸಿತು. ಕಿತ್ತಳೆ ಪುನಶ್ಚೇತನಕ್ಕೆ ಯೋಜನೆ ರೂಪಿಸದ ಹಿನ್ನೆಲೆಯಲ್ಲಿ ಕಿತ್ತಳೆ ಸರ್ವನಾಶವಾಯಿತು. ಈಗ ಕಾಫಿ, ಕಾಳುಮೆಣಸಿನ ಬೆಳೆಯೂ ಅಳಿವಿನ ಅಂಚಿನಲ್ಲಿದೆ. ಆಸ್ತಿ ಹಕ್ಕುಪತ್ರಗಳಿಲ್ಲ ಎಂಬ ನೆಪವೊಡ್ಡಿ ಬೆಳೆಹಾನಿ ಪರಿಹಾರ ಕೊಡುತ್ತಿಲ್ಲ. ಸರ್ಕಾರದ ಸೌಲಭ್ಯಗಳು ಸಿಗುತ್ತಿಲ್ಲ ಎಂದು ರೈತರು ದೂರಿದರು.

    ಪ್ರಸ್ತುತ ಉರಿ ಬಿಸಿಲು ಹೆಚ್ಚಾಗಿರುವ ಪರಿಣಾಮ ಕಾಫಿತೋಟದಲ್ಲಿ ಗಿಡ, ಎಲೆಗಳು ಒಣಗುತ್ತಿವೆ. ಬಿಳಿಕಾಂಡಕೊರಕ ಹಾವಳಿ ಜಾಸ್ತಿಯಾಗಿದೆ. ಫಸಲು ಕಟ್ಟಿರುವ ಕಾಳುಮೆಣಸು ಬಳ್ಳಿಗಳು ಒಣಗುತ್ತಿವೆ. ಬಹುತೇಕ ರೈತರ ಕೈಯಲ್ಲಿ ಹಣವಿಲ್ಲದೆ ಕಾಫಿ ತೋಟ ನಿರ್ವಹಣೆ ಮಾಡಲು ಸಾಧ್ಯವಾಗುತ್ತಿಲ್ಲ. ಈಗಲೂ ಆಸ್ತಿಗೆ ದಾಖಲೆಯಿಲ್ಲದೆ ಇರುವುದರಿಂದ ಸರ್ಕಾರದ ಬೆಳೆಹಾನಿ ಪರಿಹಾರ, ಸಹಾಯಧನ ಪಡೆಯುವುದು ಅಸಾಧ್ಯ ಎಂಬಂತಾಗಿದೆ. ಮುಂದೊಂದು ದಿನ ಸರ್ಕಾರದ ಸೌಲಭ್ಯ ಕೊರತೆಯಿಂದ ಕಾಫಿ ತೋಟದ ನಿರ್ವಹಣೆ ಸಾಧ್ಯವಿಲ್ಲದೆ. ಕಾಫಿ ಕಾಳುಮೆಣಸು ಕೃಷಿ ನಾಶವಾಗುವುದರಲ್ಲಿ ಸಂಶಯವಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.

    ಕಂದಾಯ ಇಲಾಖೆ ಕಾರ್ಯವೈಖರಿ ಸರಿಯಿಲ್ಲ
    ರೈತರ ಆಸ್ತಿಗೆ ಹಕ್ಕುಪತ್ರ ನೀಡಲು ಕಂದಾಯ ಇಲಾಖೆ ಇದೆ. ಆದರೆ ಇಲಾಖೆಯ ಕಾರ್ಯವೈಖರಿ ಅಸಹ್ಯ ಹುಟ್ಟಿಸುವಂತಿದೆ. ಇಲಾಖೆಯ ನಿರ್ಲಕ್ಷೃದಿಂದ ರೈತರು ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಜಾಗದ ಪೋಡಿ ದುರಸ್ತಿ ಆಗಿಲ್ಲ. ಕಂದಾಯ ಇಲಾಖೆ ರೈತಸ್ನೇಹಿಯಾಗಿ ಕೆಲಸ ಮಾಡಿದರೆ ಒಂದೇ ವರ್ಷದಲ್ಲಿ ಶಾಂತಳ್ಳಿ ಹೋಬಳಿಯ ರೈತರ ಜಾಗದ ಸಮಸ್ಯೆಯನ್ನು ಬಗೆಹರಿಸಿ ಹಕ್ಕಪತ್ರ ವಿತರಿಸಬಹುದು.
    > ಪ್ರೇಮ್‌ಸಾಗರ್, ಕಾಫಿ ಬೆಳೆಗಾರ, ಶಾಂತಳ್ಳಿ ಗ್ರಾಮ.

    ಜನಪ್ರತಿನಿಧಿಗಳ ಹೋರಾಟ ಅಗತ್ಯ
    ಸಿ ಮತ್ತು ಡಿ ಭೂಮಿಯಲ್ಲೇ ಉತ್ತಮವಾಗಿ ಕಾಫಿ, ಕಾಳುಮೆಣಸು ಬೆಳೆಯಾಗುತ್ತಿದೆ. ಆದರೂ ಕೃಷಿಗೆ ಯೋಗ್ಯವಲ್ಲದ ಭೂಮಿ ಎಂದು ಗುರುತಿಸಲಾಗಿದೆ. ಇದನ್ನು ಸರಿಪಡಿಸುವ ಜವಾಬ್ದಾರಿ ಜನಪ್ರತಿನಿಧಿಗಳಿಗೆ ಸೇರಿದೆ. ಸಿ ಮತ್ತು ಡಿ ತೆಗೆಯಲು ವಿಧಾನಸಭೆಯಲ್ಲೇ ಜನಪ್ರತಿನಿಧಿಗಳು ಹೋರಾಟ ಮಾಡಬೇಕಿದೆ. ಬೆಳೆಹಾನಿ ಪರಿಹಾರ ಪಡೆಯಲು ಇರುವ ನಿಯಮಗಳನ್ನು ಸರಳೀಕರಿಸಿ, ಕಾಫಿ, ಕಾಳುಮೆಣಸು ಕೃಷಿಯನ್ನು ಉಳಿಸುವ ಪ್ರಯತ್ನ ನಡೆಯಲಿ.
    >ಕೆ.ಸಿ.ಗುರುಪ್ರಸಾದ್, ಕೃಷಿಕ, ಶಾಂತಳ್ಳಿ ಗ್ರಾಮ

    ಸೂಕ್ತ ಪರಿಹಾರ ಸಿಗುತ್ತಿಲ್ಲ
    ಮಳೆಗಾಲದಲ್ಲಿ ಪ್ರತಿ ವರ್ಷ ಫಸಲು ಹಾನಿಯಾಗುತ್ತದೆ. ಶೀತ ಹೆಚ್ಚಾಗಿ ಕೊಳೆರೋಗದಿಂದ ಕಾಫಿ ಫಸಲಿಗೆ ಹಾನಿಯಾಗುತ್ತದೆ. ಪರಿಹಾರಕ್ಕೆ ಅರ್ಜಿ ಕೊಟ್ಟರೂ ಸೂಕ್ತ ಪರಿಹಾರ ಸಿಗುತ್ತಿಲ್ಲ. ಉತ್ಪಾದನಾ ವೆಚ್ಚ ಹೆಚ್ಚಾಗಿ ಕಾಫಿ ತೋಟಗಳನ್ನು ಉಳಿಸಿಕೊಳ್ಳುವುದೇ ಕಷ್ಟಕರವಾಗಿದೆ. ಕೃಷಿಕರಿಗೆ ಸೂಕ್ತ ಸೌಲಭ್ಯಗಳು ಸಿಗುತ್ತಿಲ್ಲ
    > ಜಿ.ಯು.ಪೂವಯ್ಯ, ಅಭಿಮಠ-ಬಾಚಳ್ಳಿ ಗ್ರಾಮ

    ನಿರ್ಲಕ್ಷ್ಯ ತೋರಿದರೆ ನಾಶ
    ಇತ್ತೀಚಿನ ವರ್ಷಗಳಲ್ಲಿ ಮಾರ್ಚ್‌ನಿಂದಲೇ ಸುಡು ಬಿಸಿಲು ಹೆಚ್ಚುತ್ತಿದೆ. ಕಾಫಿ, ಕಾಳುಮೆಣಸಿನ ಮೇಲೆ ದುಷ್ಪರಿಣಾಮ ಬೀರುತ್ತಿದೆ. ನೀರು ಕೊಡದಿದ್ದರೆ ಕಾಫಿ ಗಿಡ, ಕಾಳುಮೆಣಸು ಬಳ್ಳಿಗಳನ್ನು ಉಳಿಸಿಕೊಳ್ಳಲು ಅಸಾಧ್ಯ. ಸರ್ಕಾರ ಉಚಿತವಾಗಿ ರೈತರಿಗೆ ಕೊಳವೆಬಾವಿ ನಿರ್ಮಿಸಿಕೊಟ್ಟು, ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್ ನೀಡಿದರೆ, ಕಾಫಿ ತೋಟಗಳನ್ನು ಉಳಿಸಿಕೊಳ್ಳಬಹುದು. ಸರ್ಕಾರ ಸಹಾಯ ಮಾಡದೆ ನಿರ್ಲಕ್ಷ್ಯ ತೋರಿದರೆ, ಏಲಕ್ಕಿ, ಕಿತ್ತಳೆಯಂತೆ ಕಾಫಿ, ಕಾಳುಮೆಣಸು ನಾಶವಾಗಲಿದೆ.
    > ಎಸ್.ಜೆ.ರಾಜು, ಕೃಷಿಕ, ಶಾಂತಳ್ಳಿ ಗ್ರಾಮ

    ಆಸ್ತಿ ದಾಖಲಾತಿ ಸಿಗುತ್ತಿಲ್ಲ
    ಶಾಂತಳ್ಳಿ ಹೋಬಳಿಯ ಗ್ರಾಮಗಳಲ್ಲಿ ಜಮ್ಮಾ ಭೂಮಿಯಿದೆ. ಆರ್.ಟಿ.ಸಿ.ಯಲ್ಲಿ ಹೆಚ್ಚಿನ ಜನರಿದ್ದಾರೆ. ಸಿ ಮತ್ತು ಡಿ ಜಾಗವೂ ಇರುವುದರಿಂದ ಆಸ್ತಿ ದಾಖಲಾತಿಗಳು ಸಿಗುತ್ತಿಲ್ಲ. ಸರ್ಕಾರ ಸೌಲಭ್ಯ ನೀಡದಿದ್ದರೆ ಕೃಷಿಯನ್ನು ಮುಂದುವರಿಸುವುದು ಅಸಾಧ್ಯದ ಮಾತು.
    >ಪಿ.ಎಂ.ಕುಶಾಲಪ್ಪ, ಕೃಷಿಕ, ಶಾಂತಳ್ಳಿ ಗ್ರಾಮ

    ಸಮರ್ಪಕವಾದ ರಸ್ತೆಗಳಿಲ್ಲ
    ಗುಡ್ಡಗಾಡು ಪ್ರದೇಶದಲ್ಲಿ ಕಾಫಿ ತೋಟಗಳಿವೆ. ಆದರೆ ರಸ್ತೆಗಳು ಸಮರ್ಪಕವಾಗಿಲ್ಲ. ಮಳೆಯೂ ಜಾಸ್ತಿಯಿದೆ. ಇಂತಹ ಸಂದರ್ಭದಲ್ಲಿ ಕಾಳುಮೆಣಸು ಕೃಷಿ ಕಷ್ಟವಾಗುತ್ತಿದೆ. ತೋಟಗಾರಿಕಾ ಇಲಾಖೆಯಿಂದ ಕೀಟನಾಶಕ, ಶಿಲೀಂಧ್ರನಾಶಕಗಳನ್ನು ಉಚಿತವಾಗಿ ಕೊಡಬೇಕು. ರಾಸಾಯನಿಕ ಗೊಬ್ಬರಕ್ಕೆ ಸಬ್ಸಿಡಿ ಹೆಚ್ಚಿಸಬೇಕು.
    > ಕೆ.ಕೆ.ಪರಮೇಶ್, ಕೃಷಿಕ, ಶಾಂತಳ್ಳಿ ಗ್ರಾಮ

    ಸಾಲ ಮನ್ನಾ ಆಗಲಿ
    ಕಳೆದ 10 ವರ್ಷಗಳಿಂದ ಅಕಾಲಿಕ ಮಳೆಯಿಂದ ಫಸಲು ಹಾನಿ ಅನುಭವಿಸುತ್ತಿದ್ದೇವೆ. ಆದರೆ ಸೂಕ್ತ ಪರಿಹಾರ ಸಿಗುತ್ತಿಲ್ಲ. ಕಾಫಿ, ಕಾಳುಮೆಣಸು, ಭತ್ತಕ್ಕೆ ಬೆಂಬಲಬೆಲೆ ನೀಡಬೇಕು. ಪ್ರತಿವರ್ಷ ಫಸಲು ಹಾನಿಯಿಂದ ರೈತರು ಆರ್ಥಿಕ ನಷ್ಟ ಅನುಭವಿಸಿ ಸಾಲಗಾರರಾಗಿದ್ದಾರೆ. ರೈತರ ಸಾಲ ಮನ್ನಾ ಮಾಡಬೇಕು.
    > ಜಿ.ಆರ್.ಗಿರೀಶ್, ಕಾಫಿ ಬೆಳೆಗಾರ, ಶಾಂತಳ್ಳಿ ಗ್ರಾಮ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts