More

    ಭಕ್ತರ ಕಾಮಧೇನು ಯಲ್ಲಮ್ಮದೇವಿ

    ಅಥಣಿ ಗ್ರಾಮೀಣ: ಅಥಣಿ ತಾಲೂಕಿನ ಕೊಕಟನೂರ ಗ್ರಾಮದ ಶ್ರೀ ರೇಣುಕಾ ಯಲ್ಲಮ್ಮದೇವಿ ಜಾತ್ರೆಯು ಅತ್ಯಂತ ಪ್ರಸಿದ್ಧಿ ಹೊಂದಿದೆ. ಲಕ್ಷಾಂತರ ಭಕ್ತರ ಪಾಲಿನ ಕಾಮಧೇನುವಾಗಿರುವ ದೇವಿಯ ಜಾತ್ರೆಯು ಡಿ.18ರಿಂದ 24ರವರೆಗೆ ಜರುಗಲಿದೆ.

    ದೇವಿಯ ಐತಿಹ್ಯ: ಏಳುನೂರು ವರ್ಷಗಳ ಹಿಂದೆ ಮಹಾರಾಷ್ಟ್ರದ ಜತ್ತ ಸಂಸ್ಥಾನದ ಡಳೆ ಸರ್ಕಾರ ಪ್ರತಿ ಹುಣ್ಣಿಮೆಯಂದು ಜತ್ತದಿಂದ ಕೊಕಟನೂರ ಮಾರ್ಗವಾಗಿ ಸವದತ್ತಿಗೆ ದೇವಿ ದರ್ಶನ ಪಡೆಯಲು ಹೋಗಿ ಮರಳಿ ಬರುತ್ತಿದ್ದರು. ಡಪಳೆ ಸರ್ಕಾರಗೆ ವಯಸ್ಸಾದಂತೆ ಬರಿಗಾಲಿನಲ್ಲಿ ಸವದತ್ತಿಗೆ ಹೋಗಲು ಆಗಲಿಲ್ಲ. ಆದರೆ, ಅವರ ಮನಸ್ಸು ಮಾತ್ರ ಸವದತ್ತಿಗೆ ಹೋಗಬೇಕೆಂದು ಹಂಬಲಿಸುತ್ತಿತ್ತು. ಡಫಳೆ ಸರ್ಕಾರ ಅಚಲ ಭಕ್ತಿಗೆ ಮೆಚ್ಚಿದ ದೇವಿ ಕನಸಿನಲ್ಲಿ ಬಂದು ಸ್ವ ಗ್ರಾಮವಾದ ಜತ್ತಕ್ಕೆ ಬರುವುದಾಗಿ ಒಪ್ಪಿಕೊಂಡಳು. ನೀನು ಸವದತ್ತಿಯಿಂದ ಜತ್ತಗೆ ಹೋಗುವಾಗ ಎಲ್ಲಿಯೂ ಮೈಲಿಗೆಯಾಗಬಾರದು ಮತ್ತು ಹಿಂತಿರುಗಿ ನೋಡಬಾರದು ಎಂದಳು. ಆಜ್ಞೆಯನ್ನು ಒಪ್ಪಿದ ಡಳೆ ಸರ್ಕಾರ ಸವದತ್ತಿಯಿಂದ ಜತ್ತ ಕಡೆಗೆ ಬರುವಾಗ ಕೊಕಟನೂರಿನ ಹಳ್ಳದ ಹತ್ತಿರ ಬಂದಾಗ ಸಂಜೆಯಾಗಿತ್ತು. ಒಮ್ಮೆಲೆ ಗುಡುಗಿನ ಶಬ್ದ ಬಂತು. ಭಯಭೀತರಾದ ಅವರು ಹಿಂತಿರುಗಿ ನೋಡಿದರು. ದೇವಿ ಹೇಳಿದ ಪ್ರತಿಜ್ಞೆ ಭಂಗವಾಗಿ ನಾನು ಇದೇ ಸ್ಥಳದಲ್ಲಿ ನೆಲೆಸುತ್ತೇನೆ ಎಂದು ಹೇಳಿದಳು. ಡಫಳೆ ಸರ್ಕಾರ ಕಣ್ಣೀರು ಹಾಕಿ ಅಂಗಲಾಚಿ ಬೇಡಿದರೂ ದೇವಿ ಅಲ್ಲೇ ಕೊಕಟನೂರಲ್ಲಿ ನೆಲೆಸಿದಳು ಎಂದು ಇತಿಹಾಸ ಹೇಳುತ್ತದೆ. ಅಂದಿನಿಂದ ಇಂದಿನವರೆಗೂ ಕೊಕಟನೂರ ಗ್ರಾಮದ ಹಳ್ಳದ ದಡ ಉದ್ಭವ ಮೂರ್ತಿಯಾಗಿ ರಾರಾಜಿಸುತ್ತಿರುವ ಯಲ್ಲಮ್ಮದೇವಿಯನ್ನು ಪೂಜಿಸುತ್ತ ಬರಲಾಗಿದೆ.

    ಕಾರ್ಯಕ್ರಮ ವಿವರ: ಡಿ.18 ರಂದು ಭಕ್ತರಿಂದ ದೂಳ ದರ್ಶನ, 19 ರಂದು ಬೆಳಗ್ಗೆ 10 ಗಂಟೆಗೆ ದೇವಿಯ ಮೂರ್ತಿಗೆ ಅಭಿಷೇಕ ಹಾಗೂ ವಿಶೇಷ ಪೂಜೆ, ಬಳಿಕ ಏಕಾದಶಿ ಲಹಾರ ನೈವೇದ್ಯ, ಮಧ್ಯಾಹ್ನ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ರಾತ್ರಿ 8ಕ್ಕೆ ಪಲ್ಲಕ್ಕಿ ಉತ್ಸವ ಜರುಗಲಿದೆ. 20 ರಂದು ಬೆಳಗ್ಗೆ 10 ಗಂಟೆಗೆ ದೇವಿ ಮೂರ್ತಿಗೆ ಅಭಿಷೇಕ ಹಾಗೂ ದ್ವಾದಶಿ ವಿಶೇಷ ಮಹಾಪೂಜೆ, ಬಳಿಕ ಮೃಷ್ಠಾನ್ನ ಮಹಾ ನೈವೇದ್ಯ ಜರುಗುವುದು. ರಾತ್ರಿ 8ಕ್ಕೆ ಪಲ್ಲಕ್ಕಿ ಉತ್ಸವ ಜರುಗಲಿದೆ. 21 ರಂದು ಬೆಳಗ್ಗೆ 5 ಗಂಟೆಗೆ ಯಲ್ಲಮ್ಮದೇವಿ ಮೂರ್ತಿಯನ್ನು ಪಲ್ಲಕ್ಕಿಯಲ್ಲಿಟ್ಟು ಜೋಗುಳಬಾವಿ ಸತ್ಯವ್ವನ ದೇವಸ್ಥಾನಕ್ಕೆ ತೆರಳಿ ಪೂಜಾರ್ಚನೆ ಮುಗಿಸಿ ಮರಳಿ ದೇವಸ್ಥಾನಕ್ಕೆ ಆಗಮಿಸಿ ದೇವಿಯ ಮೂರ್ತಿಗೆ ಮಹಾಭಿಷೇಕ ಹಾಗೂ ವಿಶೇಷ ಪೂಜೆ ಜರುಗುವುದು. ಬಳಿಕ ಡಫಳೆ ಸರ್ಕಾರ ಕುಟುಂಬಸ್ಥರಿಂದ ಹಾಗೂ ಗ್ರಾಮಸ್ಥರಿಂದ ಉಡಿ ತುಂಬುವ ಕಾರ್ಯಕ್ರಮ, ಮಧ್ಯಾಹ್ನ 12 ಕ್ಕೆ ಅಗ್ನಿ ಪ್ರವೇಶ ಜರುಗುವುದು. 22ರಂದು ಕಲಾವಿದರಿಂದ ಕಲಾಪ್ರದರ್ಶನ ನಡೆಯುವುದು. 23 ರಂದು ಬೆಳಗ್ಗೆ 8 ಕ್ಕೆ ಹೋಮ ಮತ್ತು ದೇವಾಲಯ ದ್ವಾರಬಾಗಿಲು ತೆರೆಯುವ ಕಾರ್ಯಕ್ರಮವಿದೆ. 24 ರಂದು ಬೆಳಗ್ಗೆ 11 ಗಂಟೆಗೆ ಜಾತ್ರೆಯ ಮಹಾಮಂಗಲ ಕಾರ್ಯಕ್ರಮ ಜರುಗಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts