More

    ಭಕ್ತರಿಲ್ಲದೆ ಮಂದಿರ ಭಣಭಣ

    ಗೋಕರ್ಣ: ಆತ್ಮಲಿಂಗ ಸನ್ನಿಧಿ ಮಹಾಬಲೇಶ್ವರ ಮಂದಿರದಲ್ಲಿ ಶ್ರಾವಣ ಮಾಸದಲ್ಲಿ ನಡೆಯುವ ವಿಶೇಷ ಪೂಜಾ ಪಾಠಗಳು ದೇಶದ ವಿವಿಧ ಮೂಲೆಗಳಿಂದ ಭಕ್ತರನ್ನು ಆಕರ್ಷಿಸುತ್ತವೆ. ಶ್ರಾವಣ ಮಾಸಕ್ಕೂ ಈಶ್ವರನಿಗೂ ವಿಶೇಷವಾದ ಸಂಬಂಧವಿದೆ. ಈ ಮಾಸದಲ್ಲಿ ಶಿವನಿಗೆ ಒಂದು ಬಿಲ್ವಪತ್ರೆಯನ್ನು ಸಮರ್ಪಿಸಿದರೂ ಅಮಿತ ಪುಣ್ಯ ಎಂಬ ಪ್ರತೀತಿಯಿದೆ. ಇದರಿಂದಾಗಿ ವಿಶ್ವದ ಏಕಮೇವ ಪರಶಿವ ಆತ್ಮಲಿಂಗ ತಾಣ ಗೋಕರ್ಣದಲ್ಲಿ ಶ್ರಾವಣ ಮಾಸಕ್ಕೆ ಬಹು ಮಹತ್ವವಿದೆ.

    ಮಹಾಬಲೇಶ್ವರ ಮಂದಿರದಲ್ಲಿ ಮಾಸ ಪೂರ್ತಿ ಪೂಜೆ ಪುನಸ್ಕಾರಗಳು ಬಗೆ ಬಗೆಯ ಅರ್ಚನೆಗಳ ಜತೆಗೆ ಅವ್ಯಾಹತ ರುದ್ರ ಪಠಣ ನಿರಂತರ ನಡೆಯುತ್ತಿರುತ್ತವೆ. ಇದರಿಂದ ಶ್ರಾವಣದಲ್ಲಿ ಸುರಿಯುವ ಮಳೆಯ ನಡುವೆಯೂ ಭಕ್ತರ ಸಂಭ್ರಮಕ್ಕೆ ತೆರೆದುಕೊಳ್ಳುವುದು ಬಹು ಕಾಲದಿಂದ ಸಾಗಿ ಬಂದ ಪರಂಪರೆ. ಆದರೆ, ದೇಶವನ್ನು ಮುತ್ತಿಕೊಂಡಿರುವ ಕರೊನಾ ವ್ಯಾಧಿ ಗೋಕರ್ಣದ ಶ್ರಾವಣ ವೈಭವಕ್ಕೆ ಸಂಪೂರ್ಣವಾದ ತೆರೆ ಹಾಕಿದೆ.

    ಭಕ್ತರಿಲ್ಲದ ಪೂಜೆ: ಪರಶಿವ ಭಕ್ತ ಪ್ರಿಯ. ಆದರೆ ಇದೇ ಮೊದಲ ಬಾರಿಗೆ ಶ್ರಾವಣದಲ್ಲಿ ಅವನಿಗೆ ಅರ್ಪಿತವಾಗುವ ಪೂಜೆಗಳು ಭಕ್ತರಿಲ್ಲದೆ ನಡೆಯುತ್ತಿದೆ. ಈ ಮಾಸದಲ್ಲಿ ಕನಿಷ್ಠ ಮೂರು ಲಕ್ಷ ಭಕ್ತರು ಆತ್ಮಲಿಂಗವನ್ನು ಮುಟ್ಟಿ ಅರ್ಚಿಸುವ ಪದ್ಧತಿಯಿತ್ತು. ಪ್ರತಿ ಸೋಮವಾರ ಭಕ್ತರ ದಟ್ಟಣೆ ಮಿತಿ ಮೀರುತ್ತಿತ್ತು. ರಾಮಚಂದ್ರಾಪುರ ಮಠ ಮಂದಿರದ ಆಡಳಿತ ಹೊಣೆ ಹೊತ್ತ ತರುವಾಯ ಶ್ರಾವಣದ ಪೂಜೆಗೆ ಅಲಂಕಾರದ ಪ್ರಭಾವಳಿ ದೊರೆತಿತ್ತು. ಶ್ರಾವಣದಲ್ಲಿ ಲಕ್ಷಾಂತರ ಬಿಲ್ವಪತ್ರೆಯನ್ನು ಮಂದಿರದ ವತಿಯಿಂದ ಅರ್ಪಿಸಲಾಗುತ್ತಿತ್ತು. ನಿತ್ಯ 30 ಲೀಟರಿಗೂ ಹೆಚ್ಚಿನ ಗೋವಿನ ಹಾಲು ಮತ್ತು ಗಂಗಾಜಲದ ಅಭಿಷೇಕ ನಡೆಸುವುದನ್ನು ಶ್ರೀಮಠ ಪ್ರಾರಂಭಿಸಿತ್ತು. ಇದರ ಸಂಗಡ ಬಗೆ ಬಗೆಯ ಫಲಪುಷ್ಪ ಮತ್ತು ತರತರದ ಶಾಸ್ತ್ರೋಕ್ತ ನೈವೇದ್ಯಗಳ ವ್ಯವಸ್ಥೆ ಮಾಡಲಾಗಿತ್ತು. ಮಾಸ ಪೂರ್ತಿ ಮೂರು ಹೊತ್ತು ನಿತ್ಯ ನೈಮಿತ್ತಿಕೆಗಳನ್ನು ಮಂಗಳವಾದ್ಯದೊಂದಿಗೆ ನಡೆಸಲಾಗುತ್ತಿತ್ತು. ಇವುಗಳು ಭಕ್ತರಲ್ಲಿ ವಿಶೇಷ ಪುಳಕವನ್ನು ಉಂಟು ಮಾಡುತ್ತಿತ್ತು. ಹೀಗಾಗಿ ಇವುಗಳನ್ನು ವೀಕ್ಷಿಸಲೆಂದೇ ಗೋಕರ್ಣಕ್ಕೆ ಬರುವ ಸಾವಿರಾರು ಭಕ್ತರಿದ್ದರು. ಇದರ ಜತೆಗೆ ನಿತ್ಯ ಭಕ್ತರಿಗೆ ಎರಡು ಹೊತ್ತು ಅಮೃತಾನ್ನ ಮತ್ತು ಸೋಮವಾರ ಉಪವಾಸದ ನಿಮಿತ್ತ ವಿಶೇಷವಾದ ಉಪಾಹಾರದ ಏರ್ಪಾಟು ಮಂದಿರದ ವತಿಯಿಂದ ನಡೆಯುತ್ತಿತ್ತು.

    ಈ ವರ್ಷದ ಆದಾಯಕ್ಕೂ ಕತ್ತರಿ: ಶ್ರಾವಣ ಮಳೆಗಾಲದ ಸಮಯದಲ್ಲಿ ಗೋಕರ್ಣಕ್ಕೆ ಕೂಡ ಹೆಚ್ಚಿನ ಆದಾಯ ಕೊಡುವ ಸಾಧನವೂ ಆಗಿತ್ತು. ವಸತಿ ಗೃಹ ಮತ್ತು ಹೋಟೆಲ್​ಗಳಿಗೆ ಸಂಪಾದನೆ ಒದಗಿಸುತ್ತಿತ್ತು. ಭಕ್ತರ ದಟ್ಟಣೆಯಿಂದ ವಾರಾಂತ್ಯದಲ್ಲಿ ರೂಮ್ ಸಿಗುವುದು ಕಷ್ಟಕರವಾಗಿತ್ತು. ಆದರೆ, ಕರೊನಾ ಇವೆಲ್ಲವುಗಳನ್ನು ನುಂಗಿ ಹಾಕಿದೆ. ಮಂದಿರದಲ್ಲಿ ಎಂದಿನ ವಿಶೇಷ ಕಟ್ಟಳೆ ಪೂಜೆ ನಡೆಯುತ್ತಿದ್ದರೂ ಭಕ್ತರ ಜಯಘೊಷವಿಲ್ಲ. ಯಾತ್ರಿಕರ ಸಂಚಾರದಿಂದ ತುಂಬಿರುತ್ತಿದ್ದ ರಸ್ತೆಗಳು, ಕೋಟಿ ತೀರ್ಥ ಮತ್ತು ಸಮುದ್ರದ ಸ್ನಾನ ಘಟ್ಟಗಳೆಲ್ಲ ಜನರಿಲ್ಲದೆ ಭಣಗುಡುತ್ತಿವೆ. ಒಟ್ಟಿನಲ್ಲಿ ಹಿಂದೆಂದಿಗೂ ಕಂಡರಿಯದ ನಿರ್ಜನ ಶ್ರಾವಣಕ್ಕೆ ಗೋಕರ್ಣ ಈ ಬಾರಿ ಸಾಕ್ಷಿಯಾಗಿದೆ.

    ಆದಷ್ಟು ಬೇಗ ರೋಗದ ಈ ಕಷ್ಟಕೋಟಲೆ ನೀಗಿ ಮತ್ತೆ ಭಕ್ತರಿಂದ ಗೋಕರ್ಣ ವಿಜೃಂಭಿಸುವ ಕೃಪೆ ಶ್ರಾವಣದ ವೇದೋಕ್ತ ಪೂಜೆಗಳಿಂದ ಮಹಾಬಲೇಶ್ವರ ಕರುಣಿಸುವಂತಾಗಲಿ. | ವಿದ್ವಾನ್ ರಾಮಕೃಷ್ಣ ಶಂಕರಲಿಂಗ ಕ್ಷೇತ್ರ ಪುರೋಹಿತರು ಗೋಕರ್ಣ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts