More

    ಭಕ್ತರಕ್ಷಕ ರಂಗಪ್ಪನ ಬ್ರಹ್ಮರಥೋತ್ಸವ ಇಂದು

    ಚಿತ್ರದುರ್ಗ: ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಹೊರಕೇರೆ ದೇವರಪುರದ ಇತಿಹಾಸ ಪ್ರಸಿದ್ಧ ರಂಗಪ್ಪನ ಬ್ರಹ್ಮರಥೋತ್ಸವ ಮಾ. 23ರಂದು ಜರುಗಲಿದ್ದು, ನಾಡಿನ ಸಾವಿರಾರು ಭಕ್ತರು ಇದಕ್ಕೆ ಸಾಕ್ಷಿಯಾಗಲಿದ್ದಾರೆ.

    ಸ್ವಾಮಿಯ ರಥೋತ್ಸವ ಎರಡು ಬಾರಿ ನಡೆಯುವುದು ಇಲ್ಲಿನ ವಿಶೇಷ. ಮೊದಲ ರಥೋತ್ಸವ ಬೆಳಗ್ಗೆ 4.30ಕ್ಕೆ, ಮತ್ತೊಮ್ಮೆ ಮಧ್ಯಾಹ್ನ 3.30ಕ್ಕೆ ನೆರವೇರಲಿದೆ.

    ತಾಲೂಕು ಸೇರಿ ಜಿಲ್ಲೆಯ ಚಿತ್ರದುರ್ಗ, ಹೊಸದುರ್ಗ, ಹಿರಿಯೂರು ಭಾಗದಿಂದಲೂ ಸ್ವಾಮಿಯ ಜಾತ್ರೆಗೆ ಭಕ್ತರ ದಂಡು ಹರಿದು ಬರಲಿದೆ.

    ರಾಜ್ಯದ ಅನೇಕ ಭಕ್ತರ ಮನೆದೈವ, ಆರಾಧ್ಯ ದೈವವಾಗಿರುವ ರಂಗಪ್ಪನ ದೇಗುಲ ನೋಡಲು ಅತ್ಯಾಕರ್ಷಣೀಯವಾಗಿದೆ. ಪ್ರವೇಶ ದ್ವಾರದ ಮೇಲ್ಭಾಗ ನಿರ್ಮಿಸಿರುವ ಗಗನಚುಂಬಿ ಗೋಪುರ ಭಕ್ತರ ಮನ ಸೆಳೆಯುತ್ತದೆ.

    ಒಳಗೆ ಪ್ರವೇಶಿಸಿದರೆ, ವಿಶಾಲ ಪ್ರಾಂಗಣ ಗೋಚರಿಸುತ್ತದೆ. ಸುತ್ತಲೂ ಇರುವ ವಿಶ್ರಾಂತಿ ಮಂಟಪಗಳು ಗಮನ ಸೆಳೆಯಲಿವೆ. ಒಮ್ಮೆ ಭೇಟಿ ನೀಡಿದರೆ ಮತ್ತೊಮ್ಮೆ ದರ್ಶನ ಮಾಡಬೇಕೆಂದು ಭಕ್ತರಿಗೆ ಅನಿಸದೆ ಇರಲಾರದು. ಅಷ್ಟರಮಟ್ಟಿಗೆ ಸ್ವಾಮಿಯ ಸನ್ನಿಧಿ, ಗ್ರಾಮದ ಪಕ್ಕದಲ್ಲಿರುವ ಆಕರ್ಷಕ ಕಲ್ಯಾಣಿಯನ್ನು ಕಲಾಕೌಶಲದೊಂದಿಗೆ ನಿರ್ಮಿಸಲಾಗಿದೆ.

    ಜಾತ್ರೆ ಅಂಗವಾಗಿ ಸ್ವಾಮಿಯ ಹೂವಿನಪಲ್ಲಕ್ಕಿ, ಬೆಳ್ಳಿಪಲ್ಲಕ್ಕಿ ಉತ್ಸವ, ಶಯನೋತ್ಸವ, ಧೂಳೋತ್ಸವ, ಪೀಠೋತ್ಸವ, ಉಯ್ಯಲೋತ್ಸವ, ರಜತ ಪೀಠೋತ್ಸವ, ಅಶ್ವೋತ್ಸವ ಇನ್ನಿತರೆ ಪೂಜಾ ಕೈಂಕರ್ಯ ನಡೆಯಲಿವೆ. ಭಕ್ತರಿಗೆ ಅನ್ನಸಂತರ್ಪಣೆ ಹಮ್ಮಿಕೊಳ್ಳಲಾಗಿದೆ ಎಂದು ಎಸ್‌ಎಲ್‌ಎನ್ ಅಭಿವೃದ್ಧಿ ಟ್ರಸ್ಟ್ ತಿಳಿಸಿದೆ.

    ಮೇಲುಕೋಟೆ ಹೋಲುವ ಶೈಲಿ: ಐತಿಹಾಸಿಕ ಹಿನ್ನೆಲೆಯುಳ್ಳ ಸ್ವಾಮಿಯ ಭವ್ಯ ದೇಗುಲ ಆಕರ್ಷಕ ವಿನ್ಯಾಸ, ವಿಶಿಷ್ಟ ವಾಸ್ತುಶೈಲಿ ಹೊಂದಿದೆ. 8.5 ಶತಮಾನಗಳ ಹಿಂದೆ ನಿರ್ಮಾಣವಾಗಿದೆ ಎನ್ನಲಾಗಿದ್ದು, ಮೇಲುಕೋಟೆಯ ಚೆಲುವ ನಾರಾಯಣಸ್ವಾಮಿ ದೇಗುಲ ಮಾದರಿಯ ಶೈಲಿಯನ್ನೇ ಹೋಲುತ್ತದೆ.

    ಇ-ಹುಂಡಿ ಮೂಲಕ ನೇರ ವರ್ಗಾವಣೆ: ಇ-ಹುಂಡಿ ಬಾರ್‌ಕೋಡ್ ಮೂಲಕ ದೇವಸ್ಥಾನದ ಅಕೌಂಟ್‌ಗೆ ನೇರವಾಗಿ ಹಣ ವರ್ಗಾಯಿಸುವ ವ್ಯವಸ್ಥೆ ಜಾರಿಯಲ್ಲಿದೆ. ಬ್ಯಾಂಕ್ ಆಫ್ ಬರೋಡಾ ನೀಡಿರುವ ಬಾರ್ ಕೋಡ್‌ನಲ್ಲಿ ತಹಸೀಲ್ದಾರ್ ಮತ್ತು ಬ್ಯಾಂಕ್ ವ್ಯವಸ್ಥಾಪಕ ಸಹಿ ಇರುತ್ತದೆ. ಸಾರ್ವಜನಿಕರು ಈ ವ್ಯವಸ್ಥೆ ಬಳಸಿಕೊಳ್ಳಬಹುದು ಎಂದು ಟ್ರಸ್ಟ್ ತಿಳಿಸಿದೆ.

    ಶಾಂತಿ ಸಭೆ: ಜಾತ್ರೆ ಸುಗಮವಾಗಿ ನಡೆಯಲು ಶುಕ್ರವಾರ ದೇಗುಲದ ಆವರಣದಲ್ಲಿ ಶಾಂತಿ ಸಭೆ ನಡೆಯಿತು. ತಹಸೀಲ್ದಾರ್ ಫಾತೀಮಾ, ಉಪತಹಸೀಲ್ದಾರ್ ಅಶೋಕ್, ಚಿತ್ರಹಳ್ಳಿ ಪೊಲೀಸ್ ಠಾಣೆಯ ಎಸ್‌ಪಿ ಬಾಳಪ್ಪನಾಯಕ, ಎಸ್‌ಎಲ್‌ಎನ್ ಟ್ರಸ್ಟ್‌ನ ಅಧ್ಯಕ್ಷ ಎಚ್.ಡಿ.ರಂಗಯ್ಯ, ಕಾರ್ಯದರ್ಶಿ ಜಿ.ಎನ್.ಶೇಷಾದ್ರಿ, ಖಜಾಂಚಿ ಸಣ್ಣ ಸಿದ್ದಪ್ಪ, ಗ್ರಾಪಂ ಅಧ್ಯಕ್ಷ ದಿವಾಕರ್, ಪಿಡಿಒ ಅಂಜಿನಪ್ಪ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts