More

    ಬ್ಯಾಡಗಿಯಲ್ಲಿ ನಾಳೆಯಿಂದ ಮಧ್ಯಾಹ್ನ ಲಾಕ್​ಡೌನ್

    ಬ್ಯಾಡಗಿ: ಪಟ್ಟಣದ ಸೇರಿ ತಾಲೂಕಿನ ಎಲ್ಲ ಗ್ರಾಮಗಳಲ್ಲಿ ಜು. 22ರಿಂದ ಮಧ್ಯಾಹ್ನ 3 ಗಂಟೆಯ ಬಳಿಕ ಪ್ರತಿದಿನ ಲಾಕ್​ಡೌನ್ ಘೊಷಿಸಲಾಗಿದೆ ಎಂದು ತಹಸೀಲ್ದಾರ್ ಶರಣವ್ವ ಕಾರಿ ತಿಳಿಸಿದರು.

    ತಾಲೂಕು ಆಡಳಿತ ನೇತೃತ್ವದಲ್ಲಿ ಸೋಮವಾರ ಹಮ್ಮಿಕೊಂಡ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿ ಅವರು ಮಾತನಾಡಿದರು.

    ರಾಜ್ಯಾದ್ಯಂತ ಸರ್ಕಾರ ಶನಿವಾರ, ಭಾನುವಾರ ಲಾಕಡೌನ್ ಘೊಷಿಸಿದೆ. ತಾಲೂಕಿನಲ್ಲಿ 20 ಪಾಸಿಟಿವ್ ಪ್ರಕರಣಗಳು ದೃಢವಾಗಿದ್ದು, 10 ಗ್ರಾಮಗಳಲ್ಲಿ ಕಂಟೇನ್ಮೆಂಟ್ ಪ್ರದೇಶಗಳಿವೆ.

    ಚಿಕ್ಕಬಾಸೂರು, ಘಾಳಪೂಜಿ, ಹಿರೇಹಳ್ಳಿ ಸೇರಿ ವಿವಿಧ ಗ್ರಾಮಗಳಲ್ಲಿ ಪ್ರಕರಣ ಹೊಸದಾಗಿ ಕಂಡುಬಂದಿವೆ. ತಾಲೂಕು ಈವರೆಗೂ ಹಸಿರುವಲಯದ ಪಟ್ಟಿಯಲ್ಲಿದ್ದು, ಡೆಂಜರ್​ಜೋನ್​ಗೆ ಸೇರದಂತೆ ಮುಂಜಾಗ್ರತೆ ವಹಿಸಬೇಕಿದೆ. ಕೃಷಿ ಚಟುವಟಕೆ ಹೊರತುಪಡಿಸಿ, ಎಲ್ಲ ಕೆಲಸ ಕಾರ್ಯಗಳಿಗೂ ಮಧ್ಯಾಹ್ನ 3 ಗಂಟೆವರೆಗೆ ಮಾತ್ರ ಅವಕಾಶವಿದೆ. ಅಂಗಡಿ ಮುಂಗಟ್ಟುಗಳನ್ನು ಸಂಪೂರ್ಣವಾಗಿ ಬಂದ್ ಮಾಡಲಾಗುವುದು, ನಂತರ ಯಾರೂ ಅನಗತ್ಯವಾಗಿ ಹೊರಗಡೆ ತಿರುಗಾಡುವಂತಿಲ್ಲ. ಜು. 21ರಂದು ಎಲ್ಲೆಡೆ ಧ್ವನಿವರ್ಧಕಗಳಲ್ಲಿ ತಿಳಿಸಲಾಗುವುದು ಎಂದರು.

    ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಎ.ಟಿ. ಜಯಕುಮಾರ ಮಾತನಾಡಿ, ಗ್ರಾಮ ಪಂಚಾಯಿತಿ ಅಧ್ಯಕ್ಷರ ಅವಧಿ ಮುಗಿದ ಬಳಿಕ ಎಲ್ಲ ಗ್ರಾಪಂಗಳಿಗೆ ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದೆ. ಆದರೆ, ಕೆಲ ಅಧಿಕಾರಿಗಳು ಗ್ರಾಮ ಪಂಚಾಯಿತಿಗಳಿಗೆ ತೆರಳದಿರುವ ಕುರಿತು ದೂರು ಬಂದಿವೆ. ಕಡ್ಡಾಯವಾಗಿ ತಮ್ಮ ಕಾರ್ಯವ್ಯಾಪ್ತಿಯಲ್ಲಿ ಕೆಲಸ ನಿರ್ವಹಿಸಬೇಕು. ನಿರ್ಲಕ್ಷಿಸಿದಲ್ಲಿ ಕರ್ತವ್ಯಲೋಪ ಕುರಿತು ಮೇಲಧಿಕಾರಿಗಳಿಗೆ ಪತ್ರ ಬರೆಯಲಾಗುವುದು ಎಂದು ಎಚ್ಚರಿಸಿದರು.

    ಸಿಪಿಐ ಭಾಗ್ಯವತಿ ಬಂಟೆ, ಪಿಎಸ್​ಐ ಎಂ.ಮಹಾಂತೇಶ, ಪುರಸಭೆ ಮುಖ್ಯಾಧಿಕಾರಿ ವಿ.ಎಂ. ಪೂಜಾರ, ಬಿಇಒ ಬಿ.ಕೆ.ರುದ್ರಮುನಿ ಇತರರಿದ್ದರು.

    ಕೇಂದ್ರ ಸ್ಥಾನದಲ್ಲಿರುಲು ತಾಕೀತು: ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಮಾತನಾಡಿ, ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿದ್ದು, ಸರ್ಕಾರದ ಎಲ್ಲ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಜು. 22ರಿಂದ ಅಧಿಕಾರಿಗಳು ಆಯಾ ಗ್ರಾಮ ಪಂಚಾಯಿತಿ ಕೇಂದ್ರದಲ್ಲಿ ವಾಸವಾಗಿರಬೇಕು. ಪಿಡಿಒಗಳು ಕಾಯ್ದೆ ಉಲ್ಲಂಘನೆ ಮಾಡಿದ್ದಲ್ಲಿ ನೋಟಿಸ್ ಜಾರಿ ಮಾಡುವಂತೆ ತಹಸೀಲ್ದಾರ್​ಗೆ ಸೂಚಿಸಿದರು.

    ಮಾಸ್ಕ್ ಹಾಕದಿದ್ದಲ್ಲಿ ದಂಡ: ಮಾಸ್ಕ್ ಹಾಕದೆ ಓಡಾಡುತ್ತಿದ್ದಲ್ಲಿ ಮುಲಾಜಿಲ್ಲದೆ ಪೊಲೀಸ್ ಇಲಾಖೆ ಹಾಗೂ ಕಂದಾಯ ಇಲಾಖೆ, ಪುರಸಭೆ, ಪಿಡಿಒ ಸೇರಿ ಸ್ಥಳೀಯ ಮಟ್ಟದ ಅಧಿಕಾರಿಗಳು ದಂಡ ವಸೂಲು ಮಾಡಲಿದ್ದಾರೆ. ಪಟ್ಟಣದ ದೇವಸ್ಥಾನ, ಹರಟೆಕಟ್ಟೆ, ಬಸ್ ನಿಲ್ದಾಣ ಯಾವುದೇ ಸಾರ್ವಜನಿಕ ಜಾಗದಲ್ಲಿ ಅನಗತ್ಯವಾಗಿ ತಿರುಗಾಡುವುದು ಕಂಡುಬಂದಲ್ಲಿ ದಂಡ ವಿಧಿಸಲಾಗುವುದು ಎಂದು ತಹಸೀಲ್ದಾರ್ ಶರಣವ್ವ ಕಾರಿ ಎಚ್ಚರಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts