More

    ಬ್ಯಾಂಕ್​ಗಳ ಮುಂದೆ ಜನಸಂದಣಿ

    ಹಾವೇರಿ/ರಾಣೆಬೆನ್ನೂರ: ಭಾನುವಾರ ಹಾಗೂ ಸೋಮವಾರ ಬ್ಯಾಂಕ್​ಗಳಿಗೆ ರಜೆಯಿದ್ದ ಕಾರಣ ಮಂಗಳವಾರ ಏಕಾಏಕಿ ಜನ ಹಣಕ್ಕಾಗಿ ಬ್ಯಾಂಕ್​ಗಳಿಗೆ ಧಾವಿಸಿದ್ದರಿಂದ ನಗರದ ವಿವಿಧ ಬ್ಯಾಂಕ್​ಗಳ ಎದುರು ಜನಸಂದಣಿ ಹೆಚ್ಚಾಗಿತ್ತು.

    ಕರೊನಾ ವೈರಸ್ ಹರಡುವುದನ್ನು ತಡೆಗಟ್ಟಲು ಲಾಕ್​ಡೌನ್ ಘೋಷಿಸಲಾಗಿದೆ. ಅಗತ್ಯ ವಸ್ತುಗಳನ್ನು ಪಡೆಯಲು ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆಯೂ ಸೂಚನೆ ನೀಡಿದೆ. ಆದರೂ ಜನ ಇದ್ಯಾವುದನ್ನು ಲೆಕ್ಕಿಸದೇ ಹಣಕ್ಕಾಗಿ ಸುಡುಬಿಸಿಲಿನಲ್ಲಿ ಸರದಿಯಲ್ಲಿ ನಿಂತಿದ್ದು ಕಂಡುಬಂತು.

    ಬ್ಯಾಂಕ್ ಒಳಗಡೆ ಒಬ್ಬೊಬ್ಬರನ್ನೇ ಬಿಡುತ್ತಿದ್ದ ಕಾರಣ ಗ್ರಾಹಕರು ಬ್ಯಾಂಕ್ ಎದುರು ಗುಂಪು ಗುಂಪಾಗಿ ಸುಡುಬಿಸಿಲಿನಲ್ಲಿ ನಿಂತುಕೊಳ್ಳುವಂತಾಗಿತ್ತು. ಪೊಲೀಸರು ಆಗಾಗ ಬಂದು ಚದುರಿಸಿದಾಗ ಸಾಮಾಜಿಕ ಅಂತರ ಕಾಯ್ದುಕೊಳ್ಳುತ್ತಿದ್ದ ಜನ ಪೊಲೀಸರು ಹೋಗುತ್ತಿದ್ದಂತೆಯೇ ಮತ್ತೆ ಗುಂಪುಗೂಡಿ ನೆರಳಿನ ಆಸರೆಗೆ ನಿಲ್ಲುತ್ತಿದ್ದ ದೃಶ್ಯಗಳು ಸಾಮಾನ್ಯವಾಗಿದ್ದವು.

    ವದಂತಿ: ಬ್ಯಾಂಕ್​ಗಳಿಗೆ ಇಂದು ಹೆಚ್ಚಾಗಿ ಜನಧನ್ ಖಾತೆ ಹೊಂದಿದ್ದ ಮಹಿಳೆಯರೇ ಆಗಮಿಸಿದ್ದು ಕಂಡುಬಂತು. ಲಾಕ್​ಡೌನ್ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಜನಧನ್ ಖಾತೆ ಹೊಂದಿರುವ ಮಹಿಳೆಯರ ಖಾತೆಗೆ 500ರೂ.ಗಳನ್ನು ಜಮೆ ಮಾಡಿದೆ. ಈ ಹಣವನ್ನು ಪಡೆಯಲೆಂದೇ ಅನೇಕರು ಬ್ಯಾಂಕ್​ಗೆ ಬಂದಿದ್ದರು. ಈ ಹಣವನ್ನು ಆದಷ್ಟು ಬೇಗನೇ ಖಾತೆಯಿಂದ ಪಡೆಯದಿದ್ದರೆ ಹಣದ ಅವಶ್ಯಕತೆ ನಿಮಗಿಲ್ಲವೆಂದು ಸರ್ಕಾರ ಮರಳಿ ಪಡೆಯುತ್ತದೆ ಎಂಬ ವದಂತಿಗಳನ್ನು ಕಿಡಿಗೇಡಿಗಳು ಹಬ್ಬಿಸಿದ್ದಾರಂತೆ. ಅದನ್ನೇ ನಿಜವೆಂದು ನಂಬಿದ ಮುಗ್ದರು ಬ್ಯಾಂಕ್​ಗಳಲ್ಲಿ ಸರದಿ ನಿಂತು ಹಣ ಪಡೆದುಕೊಂಡರು.

    ಕಾರ್ಪೆರೇಷನ್ ಎಟಿಎಂ ಬಂದ್: ಈ ಸಮಯದಲ್ಲಿ ಜನರಿಗೆ ತೊಂದರೆಯಾಗದಂತೆ ಬ್ಯಾಂಕ್​ಗಳು ಎಟಿಎಂಗಳನ್ನು ದಿನದ 24ತಾಸು ತೆರೆದಿಡಬೇಕು. ಆದರೆ ಮಂಗಳವಾರ ಮಧ್ಯಾಹ್ನವಾದರೂ ಕಾರ್ಪೆರೇಷನ್ ಬ್ಯಾಂಕ್ ಎಟಿಎಂ ಸ್ಥಗಿತಗೊಂಡಿತ್ತು. ಈ ಕುರಿತು ಬ್ಯಾಂಕ್ ಸಿಬ್ಬಂದಿಯನ್ನು ಕೇಳಿದರೆ ನಮ್ಮ ಬ್ಯಾಂಕ್ ಯೂನಿಯನ್ ಬ್ಯಾಂಕ್​ನೊಂದಿಗೆ ವಿಲೀನಗೊಂಡಿರುವುದರಿಂದ ಎಟಿಎಂ ತಾಂತ್ರಿಕ ದೋಷದಿಂದ ಆರಂಭವಾಗಿಲ್ಲ ಎಂದರು.

    ಶೇ. 50ರಷ್ಟು ಸಿಬ್ಬಂದಿ ಗೈರು: ಜಿಲ್ಲಾ ಕೇಂದ್ರ ಹಾವೇರಿಯಲ್ಲಿರುವ ಬ್ಯಾಂಕ್​ಗಳಲ್ಲಿ ಶೇ. 50ರಷ್ಟು ಸಿಬ್ಬಂದಿ ಕೊರತೆ ಕಂಡುಬಂದಿದೆ. ಲಾಕ್​ಡೌನ್​ನಿಂದ ಸಿಬ್ಬಂದಿ ಬ್ಯಾಂಕ್​ಗಳಿಗೆ ಬರಲು ಸಾಧ್ಯವಾಗಿಲ್ಲ. ಇರುವ ಸಿಬ್ಬಂದಿಯಿಂದಲೇ ಎಲ್ಲ ಕೆಲಸ ಮಾಡಿಸಲಾಗುತ್ತಿದೆ. ಇದರಿಂದ ಜನಸಂದಣಿ ನಿಯಂತ್ರಿಸಲು ಇನ್ನೊಂದು ಕೌಂಟರ್ ತೆರೆಯಿರಿ ಎಂದು ಪೊಲೀಸ್ ಸಿಬ್ಬಂದಿ ಹೇಳಿದರೂ ಕ್ಯಾರೇ ಎನ್ನುತ್ತಿಲ್ಲ.

    ಅಂಚೆ ಕಚೇರಿಯಲ್ಲಿಯೂ ಸರದಿ: ಸರ್ಕಾರದ ವಿವಿಧ ಪಿಂಚಣಿ ಯೋಜನೆಯ ಹಣವನ್ನು ಅಂಚೆಕಚೇರಿಯಲ್ಲಿಯೇ ನೀಡಲಾಗುತ್ತಿದೆ. ಇಲ್ಲಿಯೂ ಪಿಂಚಣಿಗಾಗಿ ವೃದ್ಧರು, ಮಹಿಳೆಯರು ಬೆಳಗ್ಗೆಯಿಂದ ಸರದಿಯಲ್ಲಿ ನಿಂತಿದ್ದರು.

    ಮಾದರಿಯಾದ ವೃದ್ಧರು

    ಬ್ಯಾಂಕ್ ಎದುರು ಗ್ರಾಹಕರು ಮುಗಿಬಿದ್ದ ದೃಶ್ಯ ಕಂಡು ಬಂದರೆ ಮತ್ತೊಂದೆಡೆ ರಾಣೆಬೆನ್ನೂರ ಅಂಚೆ ಕಚೇರಿಯಲ್ಲಿ ವಯೋವೃದ್ಧರು, ವಿಧವೆಯರು ಮಾಸಾಶನ ಪಡೆದುಕೊಳ್ಳಲು ಸರದಿಯಲ್ಲಿ ನಿಂತು ಸಾಮಾಜಿಕ ಅಂತರ ಕಾಯ್ದುಕೊಂಡು ಹಣ ಪಡೆದುಕೊಳ್ಳುವ ಮೂಲಕ ಇತರರಿಗೆ ಮಾದರಿಯಾದರು. ಅಂಚೆ ಕಚೇರಿಯ ಬಲ ಬದಿಯಲ್ಲಿ ಮಾಸಾಶನ ನೀಡಲು ವ್ಯವಸ್ಥೆ ಮಾಡಲಾಗಿದೆ. ಇಲ್ಲಿ ಯಾವುದೇ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಬಾಕ್ಸ್ ಗುರುತಿಸಿಲ್ಲ. ಆದರೂ ವೃದ್ಧರು ಸ್ವಯಂ ಪ್ರೇರಣೆಯಿಂದ ಒಬ್ಬರಿಗೊಬ್ಬರು ಅಂತರ ಕಾಯ್ದುಕೊಂಡು ಹಣ ಪಡೆದು ತೆರಳಿದ್ದು, ವಿಶೇಷವಾಗಿತ್ತು.

    ಜಿಲ್ಲೆಯ ಬ್ಯಾಂಕ್​ಗಳಲ್ಲಿ ಜನಸಂದಣಿಯಾಗದಂತೆ ಕ್ರಮ ಕೈಗೊಳ್ಳಲು ಈಗಾಗಲೇ ಎಲ್ಲ ಬ್ಯಾಂಕ್​ನವರಿಗೆ ಸೂಚಿಸಲಾಗಿದೆ. ಹುಬ್ಬಳ್ಳಿಯಿಂದ ಬರುವವರಿಗೆ ಒಂದು ವಾಹನಕ್ಕೆ ಅನುಮತಿ ನೀಡಲಾಗಿದೆ. ಜನರು ಹೆಚ್ಚಿನ ಸಂಖ್ಯೆಯಲ್ಲಿ ಬಂದರೆ ಹೆಚ್ಚಿನ ಕೌಂಟರ್ ತೆರೆಯಲು ಈ ಕೂಡಲೇ ಸೂಚನೆ ನೀಡುತ್ತೇನೆ. ಬ್ಯಾಂಕ್ ವಿಲೀನ ಅವೆಲ್ಲ ಅವರ ವೈಯಕ್ತಿಕ ವಿಚಾರ. ಆದರೆ, ಎಟಿಎಂ ತೆರೆಯುವಂತೆಯೂ ಸೂಚನೆ ನೀಡುತ್ತೇನೆ.
    | ಪ್ರಭುದೇವ, ಲೀಡ್ ಬ್ಯಾಂಕ್ ಮ್ಯಾನೇಜರ್ ಹಾವೇರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts