More

    ಬೋರ್​ವೆಲ್ ಮುಚ್ಚಿ ವರದಿ ನೀಡಿ

    ಶಿವಮೊಗ್ಗ: ವಿವಿಧ ಇಲಾಖೆಗಳು ಫಲಾನುಭವಿಗಳಿಗೆ ಕೊರೆಯುವ ಬೋರ್​ವೆಲ್​ಗಳು ವಿಫಲವಾಗುವ ಸಂದರ್ಭದಲ್ಲಿ ತಕ್ಷಣ ಅದನ್ನು ಸರಿಯಾಗಿ ಮುಚ್ಚಿ ಸ್ಥಳೀಯಾಡಳಿತಕ್ಕೆ ವರದಿ ಸಲ್ಲಿಸಬೇಕು. ಇಲ್ಲದಿದ್ದರೆ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಡಿಸಿ ಕೆ.ಬಿ.ಶಿವಕುಮಾರ್ ಎಚ್ಚರಿಕೆ ನೀಡಿದರು.

    ಜಿಪಂ ಸಭಾಂಗಣದಲ್ಲಿ ಶುಕ್ರವಾರ ಅಂತರ್ಜಲ ನಿರ್ವಹಣೆ ಕುರಿತು ಜಿಲ್ಲಾಮಟ್ಟದ ಸಮಿತಿ ಸಭೆಯಲ್ಲಿ ಮಾತನಾಡಿ, ಬೋರ್​ವೆಲ್ ಕೊರೆಯುವ ಪೂರ್ವದಲ್ಲಿ ಸ್ಥಳೀಯ ಆಡಳಿತದಿಂದ ಅನುಮತಿ ಪಡೆಯಲಾಗಿದೆಯೇ ಎಂದು ಪರಿಶೀಲಿಸಬೇಕು. ಸರ್ಕಾರಿ ಇಲಾಖೆಗಳು ಸಹ ಬೋರ್​ವೆಲ್ ಕೊರೆಯುವ ಸಂದರ್ಭದಲ್ಲಿ ಸ್ಥಳೀಯಾಡಳಿತದ ಗಮನಕ್ಕೆ ತರುವುದು ಕಡ್ಡಾಯ ಎಂದರು.

    ತಮ್ಮ ವ್ಯಾಪ್ತಿಯಲ್ಲಿರುವ ವಿಫಲ ಕೊಳವೆ ಬಾವಿಗಳ ಸಂಖ್ಯೆ, ಅವುಗಳನ್ನು ಮುಚ್ಚಿರುವ ಬಗ್ಗೆ ವರದಿಯನ್ನು ಪ್ರತಿ ತಿಂಗಳು ಪಿಡಿಒಗಳು ಮತ್ತು ನಗರ ಸ್ಥಳೀಯ ಸಂಸ್ಥೆ ಅಧಿಕಾರಿಗಳು ಸಲ್ಲಿಸಬೇಕು. ವಿಫಲ ಕೊಳವೆ ಬಾವಿಗಳನ್ನು ಮುಚ್ಚುವ ವಿಷಯದಲ್ಲಿ ನಿರ್ಲಕ್ಷಿಸುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದರು.

    ಕಳೆದ ತ್ರೖೆಮಾಸಿಕದಲ್ಲಿ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ 1 ಸಾವಿರ ವಿಫಲ ಕೊಳವೆ ಬಾವಿಗಳನ್ನು ಮುಚ್ಚಲಾಗಿದೆ ಎಂದು ಸರ್ಕಾರಕ್ಕೆ ವರದಿ ನೀಡಲಾಗಿದೆ ಎಂದು ಅಂತರ್ಜಲ ಇಲಾಖೆ ಹಿರಿಯ ಭೂ ವಿಜ್ಞಾನಿ ಶೇಖ್ ದಾವೂದ್ ಮಾಹಿತಿ ನೀಡಿದರು.

    ಅನುಮತಿ ಕಡ್ಡಾಯ: ಇನ್ಮುಂದೆ ವಾಣಿಜ್ಯ, ಕೈಗಾರಿಕೆ ಉದ್ದೇಶಗಳಿಗೆ ಅಂತರ್ಜಲ ಉಪಯೋಗಿಸುವವರು ಜಿಲ್ಲಾಮಟ್ಟದ ಸಮಿತಿ ಅನುಮತಿ ಪಡೆಯಬೇಕು. ದಿನನಿತ್ಯ 25 ಕ್ಯುಬಿಕ್ ಮೀಟರ್​ಗಿಂತ ಕಡಿಮೆ ಅಂತರ್ಜಲ ಬಳಕೆ ಮಾಡುವ ವಾಣಿಜ್ಯ ಸಂಸ್ಥೆಗಳು ಜಿಲ್ಲಾಮಟ್ಟದ ಸಮಿತಿಯಿಂದ ಅದಕ್ಕಿಂತ ಹೆಚ್ಚಿನ ಪ್ರಮಾಣದ ಅಂತರ್ಜಲ ಬಳಸುವವರು ರಾಜ್ಯಮಟ್ಟದ ಸಮಿತಿಯಿಂದ ಪರವಾನಗಿ ಪಡೆಯುವುದು ಕಡ್ಡಾಯ ಎಂದು ಡಿಸಿ ತಿಳಿಸಿದರು.

    ಸಕಾಲ 2ನೇ ಸ್ಥಾನ ಕಾಯ್ದುಕೊಳ್ಳಲು ಸಲಹೆ: ಸಕಾಲ ಯೋಜನೆಯ ಪ್ರಗತಿ ಪರಿಶೀಲನೆ ಸಭೆ ನಡೆಸಿದ ಡಿಸಿ, ಸಕಾಲ ಯೋಜನೆಯಡಿ ಲಭ್ಯವಿರುವ ಸೇವೆಗಳ ವಿವರಗಳನ್ನು ಒಳಗೊಂಡ ಮಾಹಿತಿ ಫಲಕವನ್ನು ಎಲ್ಲ ಇಲಾಖೆಗಳು ಸಾರ್ವಜನಿಕರ ಮಾಹಿತಿಗೆ ಪ್ರಕಟಿಸಬೇಕು ಎಂದು ಕೆ.ಬಿ.ಶಿವಕುಮಾರ್ ತಿಳಿಸಿದರು. ಈಗಾಗಲೆ ಬಹುತೇಕ ಇಲಾಖೆಗಳು ಮಾಹಿತಿ ಫಲಕಗಳನ್ನು ಅಳವಡಿಸಿವೆ. ಫಲಕ ಅಳವಡಿಸದಿರುವ ಇಲಾಖೆಗಳು ಶೀಘ್ರ ಅಳವಡಿಸಬೇಕು. ಕಳೆದ ತಿಂಗಳು ಜಿಲ್ಲೆ ಸಕಾಲ ಯೋಜನೆಯಡಿ ರಾಜ್ಯಕ್ಕೆ 2ನೇ ಸ್ಥಾನದಲ್ಲಿದ್ದು, ಮುಂದಿನ ದಿನಗಳಲ್ಲಿ ಸಹ ಈ ಮಟ್ಟ ಕಾಯ್ದುಕೊಳ್ಳಬೇಕು ಎಂದರು.

    ಕೆಲವೆಡೆ ಅರ್ಜಿ ಸ್ವೀಕಾರ ಶೂನ್ಯ: ಜಿಲ್ಲಾಮಟ್ಟದ ಅಧಿಕಾರಿಗಳು ಸಕಾಲದಡಿ ಸ್ವೀಕರಿಸಿರುವ ಅರ್ಜಿಗಳ ಸಂಖ್ಯೆ, ವಿಲೇವಾರಿ, ಬಾಕಿ ಉಳಿದಿರುವ ಅರ್ಜಿಗಳು ಇತ್ಯಾದಿಗಳ ವಿವರಗಳನ್ನು ಪ್ರತಿ ವಾರ ಪರಿಶೀಲಿಸಿ, ಕೆಳ ಹಂತದ ಅಧಿಕಾರಿಗಳಿಗೆ ಸೂಕ್ತ ಮಾರ್ಗದರ್ಶನ ನೀಡಬೇಕು ಎಂದು ಡಿಸಿ ಕೆ.ಬಿ.ಶಿವಕುಮಾರ್ ಹೇಳಿದರು. ಕೆಲವು ಇಲಾಖೆಗಳು ಸಾರ್ವಜನಿಕರಿಂದ ಸ್ವೀಕರಿಸುವ ಅರ್ಜಿಗಳನ್ನು ಸಕಾಲ ಅಡಿ ಪರಿಗಣಿಸುತ್ತಿಲ್ಲ. ಕೆಲವು ಗ್ರಾಪಂಗಳು ಹಾಗೂ ಸ್ಥಳೀಯಾಡಳಿತ ಸಂಸ್ಥೆಗಳಲ್ಲಿ ಸಕಾಲ ಅಡಿ ಅರ್ಜಿ ಸ್ವೀಕಾರ ಶೂನ್ಯವಾಗಿದ್ದು ಇದರಿಂದಲೂ ರ‍್ಯಾಂಕಿಂಗ್ ಕಡಿಮೆಯಾಗುತ್ತಿದೆ. ಈ ಕುರಿತು ಸೂಕ್ತ ನಿರ್ದೇಶನಗಳನ್ನು ಇಲಾಖೆ ಮುಖ್ಯಸ್ಥರು ನೀಡಬೇಕು. ಸಕಾಲ ಅಡಿ ಅರ್ಜಿ ಸ್ವೀಕರಿಸಲು ಹಿಂದೇಟು ಹಾಕುವವರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಹೇಳಿದರು.

    ಎಡಿಸಿ ಜಿ.ಅನುರಾಧಾ, ಎಎಸ್ಪಿ ಡಾ. ಎಚ್.ಟಿ.ಶೇಖರ್, ಜಿಪಂ ಉಪ ಕಾರ್ಯದರ್ಶಿ ಶ್ರೀಧರ್, ವಿವಿಧ ಇಲಾಖೆ ಅಧಿಕಾರಿಗಳಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts