More

    ಬೈತಖೋಲ್ ಬಂದರಿನಲ್ಲಿ ಬೇಕಾಬಿಟ್ಟಿ ಲಂಗರು

    ಕಾರವಾರ: ಅರಬ್ಬಿ ಸಮುದ್ರದಲ್ಲಿ ಉಂಟಾದ ಹವಾಮಾನ ವೈಪರೀತ್ಯದಿಂದ ಇಲ್ಲಿನ ಬೈತಖೋಲ್ ಬಂದರು ಪ್ರದೇಶಕ್ಕೆ ಹೊರ ಜಿಲ್ಲೆ ರಾಜ್ಯಗಳ 500ಕ್ಕೂ ಅಧಿಕ ದೋಣಿಗಳು ಬಂದು ನಿಂತುಕೊಂಡಿದ್ದು, ಕೋಸ್ಟ್​ಗಾರ್ಡ್, ವಾಣಿಜ್ಯ ಹಡಗುಗಳ ಕಾರ್ಯನಿರ್ವಹಣೆಗೆ ತೊಂದರೆಯಾಗಿದೆ.

    ಉಡುಪಿ ಜಿಲ್ಲೆಯ ಮಲ್ಪೆ, ದಕ್ಷಿಣ ಕನ್ನಡದ ಮಂಗಳೂರು, ಗೋವಾ, ಕೇರಳ, ತಮಿಳುನಾಡು ಬಂದರುಗಳ ಬೋಟ್​ಗಳು ಆಶ್ರಯ ಪಡೆದಿವೆ. ವಾಣಿಜ್ಯ ಹಡಗು ತೆರಳುವ ಮಾರ್ಗದಲ್ಲಿ ಬೇಕಾಬಿಟ್ಟಿಯಾಗಿ ಮೀನುಗಾರಿಕೆ ಬೋಟ್​ಗಳನ್ನು ಲಂಗರು ಹಾಕಲಾಗಿದೆ. ಇದರಿಂದ ಸೋಮವಾರ ಕೋಸ್ಟ್​ಗಾರ್ಡ್​ನ ಮಿನಿ ಶಿಪ್​ಗಳು ರಕ್ಷಣಾ ಕಾರ್ಯಾಚರಣೆಗೆ ತೆರಳಲು ವಿಳಂಬವಾಯಿತು. ವಾಣಿಜ್ಯ ಹಡಗು ಕಾರವಾರ ಬಂದರಿಗೆ ಬರಲು ತೊಡಕಾಯಿತು. ಮಂಗಳವಾರ ಬೋಟ್​ಗಳನ್ನು ಹಡಗು ಓಡಾಟ ಮಾರ್ಗದಿಂದ ಸರಿಸಲು ಬಂದರು, ಕರಾವಳಿ ಕಾವಲುಪಡೆ, ಪೊಲೀಸ್ ಅಧಿಕಾರಿಗಳು ಹರಸಾಹಸಪಡಬೇಕಾಯಿತು.

    ಎಸ್​ಪಿ ಭೇಟಿ: ಎಸ್​ಪಿ ಶಿವಪ್ರಕಾಶ ದೇವರಾಜು ಅವರು ಸೋಮವಾರ ಬಂದರು ಪ್ರದೇಶಕ್ಕೆ ಭೇಟಿ ನೀಡಿ ಈ ಪರಿಸ್ಥಿತಿಯನ್ನು ಅವಲೋಕಿಸಿದರು. ಕೋಸ್ಟ್ ಗಾರ್ಡ್ ಅಸಿಸ್ಟೆಂಟ್ ಕಮಾಂಡೆಂಟ್ ಸುಬ್ರತೊ ಘೊಷ್, ಬಂದರು ಇಲಾಖೆ ಅಧಿಕಾರಿ ಸುರೇಶ ಶೆಟ್ಟಿ, ಮೀನುಗಾರಿಕೆ ಇಲಾಖೆ ಉಪನಿರ್ದೇಶಕ ಪಿ.ನಾಗರಾಜು, ಡಿವೈಎಸ್​ಪಿ ಅರವಿಂದ ಕಲಗುಜ್ಜಿ, ಸಿಪಿಐ ಸಂತೋಷ ಶೆಟ್ಟಿ ಇದ್ದರು.

    ವಹಿವಾಟು ಜೋರು: ಹೊರ ಊರಿನ ದೋಣಿಗಳು ಹಾಗೂ ನಾಲ್ಕೈದು ಸಾವಿರ ಮೀನುಗಾರರು ಎರಡು ದಿನಗಳಿಂದ ಕಾರವಾರ ತೀರದಲ್ಲಿ ವಾಸ್ತವ್ಯ ಹೂಡಿದ್ದಾರೆ. ಇದರಿಂದ ಬಂದರಿನಲ್ಲಿ ವ್ಯಾಪಾರ ವಹಿವಾಟು ಉತ್ತಮವಾಗಿದೆ. ಬಂದರಿನಲ್ಲಿರುವ ಮೀನುಗಾರರು ರೇಶನ್, ಐಸ್ ಖರೀದಿ, ಸಣ್ಣಪುಟ್ಟ ರಿಪೇರಿ ಕಾರ್ಯಗಳಿಗೆ ಬರುತ್ತಿದ್ದಾರೆ. ಮೀನು ಇಳಿಸುತ್ತಿದ್ದಾರೆ.

    ಉಡುಪಿ, ದಕ ಉಪನಿರ್ದೇಶಕರಿಗೆ ಪತ್ರ: ಉಡುಪಿ ಹಾಗೂ ಮಂಗಳೂರಿನ ಮೀನುಗಾರಿಕೆ ಇಲಾಖೆ ಉಪನಿರ್ದೇಶಕರಿಗೆ ಪತ್ರ ಬರೆದು ಆಪತ್ತಿನ ಸಂದರ್ಭದಲ್ಲಿ ರಕ್ಷಣೆ ಪಡೆಯುವ ಮೀನುಗಾರಿಕೆ ಬೋಟ್​ಗಳ ಮಾಲೀಕರಿಗೆ ಈ ಸಂಬಂಧ ಸೂಚನೆ ನೀಡಲು ಸೋಮವಾರ ಎಸ್​ಪಿ ಭೇಟಿ ಸಂದರ್ಭದಲ್ಲಿ ನಿರ್ಣಯಿಸಲಾಗಿದೆ.

    ಮೊದಲ ಹಂತದ ಸೂಚನೆಯ ನಂತರವೂ ಬೋಟ್​ಗಳನ್ನು ಸರಿಯಾದ ಜಾಗದಲ್ಲಿ ನಿಲ್ಲಿಸದೇ ಇದ್ದರೆ ಅವುಗಳಿಗೆ ದಂಡ ವಿಧಿಸುವುದು ಹಾಗೂ ಡೀಸೆಲ್ ಸಬ್ಸಿಡಿ ಮಾಡುವ ಆದೇಶ ಮಾಡಲಾಗುವುದು ಎಂದು ಮೀನುಗಾರಿಕೆ ಡಿಡಿ ಪಿ.ನಾಗರಾಜು ತಿಳಿಸಿದ್ದಾರೆ.

    ಹಡಗುಗಳ ಚಲನವಲನದ ಮಾರ್ಗ ಗುರುತಿಸಲು ಸಮುದ್ರದಲ್ಲಿ 10 ಬೋಯ್ಗಳನ್ನು ಅಲ್ಲಲ್ಲಿ ಇಡುವ ವ್ಯವಸ್ಥೆಯಾಗಬೇಕು. ಅದಕ್ಕೆ ಮೀನುಗಾರಿಕೆ ಇಲಾಖೆಯಿಂದ ಬಂದರು ಇಲಾಖೆಗೆ ಪ್ರಸ್ತಾವನೆ ಕಳಿಸಬೇಕು ಎಂದು ಸುರೇಶ ಶೆಟ್ಟಿ ತಿಳಿಸಿದ್ದಾರೆ.

    ಈ ವ್ಯವಸ್ಥೆ ಆಗುವವರೆಗೆ ದೋಣಿಗಳನ್ನು ಕರಾವಳಿ ಕಾವಲುಪಡೆ, ಪೊಲೀಸ್ ಸಹಕಾರದಲ್ಲಿ ಸರಿಯಾಗಿ ನಿಲ್ಲಿಸಲು ಸೂಚಿಸಬೇಕು ಎಂದು ಎಸ್​ಪಿ ಅಧೀನ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

    ಸ್ಥಳೀಯ ಮೀನುಗಾರರ ಬೋಟ್​ನಿಂದ ಯಾವುದೇ ಸಮಸ್ಯೆಯಿಲ್ಲ. ಸಮುದ್ರ ಪ್ರಕ್ಷುಬ್ಧವಾದಾಗ ರಕ್ಷಣೆಗೆ ಬರುವ ಹೊರ ಜಿಲ್ಲೆ ಹಾಗೂ ರಾಜ್ಯಗಳ ಬೋಟ್​ಗಳನ್ನು ಬೇಕಾಬಿಟ್ಟಿ ನಿಲ್ಲಿಸಲಾಗುತ್ತದೆ. ಕೆಲವು ಬೋಟ್​ಗಳು ನೇರವಾಗಿ ಕಾರವಾರ ಬಂದರಿಗೆ ಬಂದು ಮೀನು ಇಳಿಸುತ್ತವೆ. ಹಾಗೆ ಮಾಡಲು ಇಲಾಖೆ ಅನುಮತಿ ಬೇಕು. ಮೊದಲು ಎಚ್ಚರಿಕೆ ನೀಡುತ್ತೇವೆ. ನಂತರ ದಂಡ ವಿಧಿಸುತ್ತೇವೆ.

    | ಪಿ. ನಾಗರಾಜು, ಮೀನುಗಾರಿಕೆ ಇಲಾಖೆ ಉಪನಿರ್ದೇಶಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts