More

    ಬೈಕ್​ ಶೋಕಿವಾಲಾಗಳಿಗೆ ಖಾಕಿ ಎಚ್ಚರಿಕೆ

    ಕೋಲಾರ: ಸಂಚಾರಿ ನಿಯಮ ಪಾಲನೆಗೆ ಇನ್ನಿಲ್ಲದ ಶ್ರಮ ಪಡುತ್ತಿರುವ ಪೊಲೀಸರು ಬೈಕ್​ಗಳಲ್ಲಿ ಶೋಕಿ ಮಾಡುವ ಪುಂಡರಿಗೆ ಚುರುಕು ಮುಟ್ಟಿಸಲು ಮುಂದಾಗಿದ್ದಾರೆ. ಕರ್ಕಶ ಶಬ್ಧ ಹೊರಸೂಸುವ ಸೈಲೆನ್ಸರ್​ ಅಳವಡಿಸಿಕೊಂಡಿದ್ದವರು, ವೀಲಿಂಗ್​ ಮಾಡುತ್ತಿದ್ದವರ ವಿರುದ್ಧ ಕಾರ್ಯಾಚರಣೆ ನಡೆಸಿ, ವಶಪಡಿಸಿಕೊಂಡಿದ್ದ 85ಕ್ಕೂ ಹೆಚ್ಚು ಬೈಕ್​ಗಳ ಸೈಲೆನ್ಸರ್​ಗಳನ್ನು ಬುಧವಾರ ನಗರದ ಕಾಲೇಜು ವೃತ್ತದಲ್ಲಿ ಎಸ್ಪಿ ಡಿ.ದೇವರಾಜ್​ ನೇತೃತ್ವದಲ್ಲಿ ರೋಡ್​ ರೋಲರ್​ನಿಂದ ನಾಶಪಡಿಸುವ ಮೂಲಕ ಜಾಗೃತಿ ಮೂಡಿಸಲಾಯಿತು. ಇದು ಸಾರ್ವಜನಿಕರ ಮೆಚ್ಚುಗೆಗೂ ಪಾತ್ರವಾಯಿತು.

    ನಂತರ ಮಾತನಾಡಿದ ಎಸ್ಪಿ ಡಿ.ದೇವರಾಜ್​, ಬೈಕ್​ಗಳಿಗೆ ದುಬಾರಿ ಬೆಲೆಯ ಸೈಲೆನ್ಸರ್​ ಅಳವಡಿಸಿಕೊಂಡು ವೇಗವಾಗಿ ಸಂಚರಿಸುವುದು, ವಾರಾಂತ್ಯದ ದಿನಗಳಲ್ಲಿ ಬೆಂಗಳೂರು ಕಡೆಯವರು ಮತ್ತು ಜಿಲ್ಲೆಯ ಕೆಲವು ಯುವಕರು ವೀಲಿಂಗ್​ ಮಾಡುತ್ತಿದ್ದ ಬಗ್ಗೆ ದೂರು ಕೇಳಿಬಂದಿತ್ತು. ಇತ್ತೀಚೆಗೆ ಪಾದಚಾರಿಗಳು, ದಂಪತಿಗೆ ಬೈಕ್​ ಸವಾರನೊಬ್ಬ ಡಿಕ್ಕಿ ಹೊಡೆದು ಗಾಯಗಳಾಗಿ ಆಸ್ಪತ್ರೆಗೂ ದಾಖಲಾಗಿದ್ದರು. ಈ ಬಗ್ಗೆ ದೂರು ದಾಖಲಾಗಿತ್ತು. ಇದರಿಂದಾಗಿ ಕ್ರಮ ಕೈಗೊಳ್ಳಲು ಮುಂದಾಗಿದ್ದು, ನಗರ ಸಂಚಾರಿ ಠಾಣೆ, ಗ್ರಾಮಾಂತರ ಠಾಣೆ ಪೊಲೀಸರು ನರಸಾಪುರ ಬಳಿಯ ನಾಗಲಾಪುರ ಗೇಟ್​ ಮತ್ತಿತರ ಕಡೆ ಕಾರ್ಯಾಚರಣೆ ನಡೆಸಿ 85ಕ್ಕೂ ಹೆಚ್ಚು ಬೈಕ್​ಗಳನ್ನು ಜಪ್ತಿ ಮಾಡಲಾಗಿತ್ತು. ನಿಯಮ ಪಾಲಿಸದವರಿಗೆ 1.85 ಲಕ್ಷ ರೂ. ದಂಡ ಸಹ ಹಾಕಲಾಗಿತ್ತು ಎಂದರು.

    ದಂಡ ಕಟ್ಟಿ ಬೈಕ್​ ಬಿಡಿಸಿಕೊಂಡು ಹೋಗುವ ಯುವಕರು ಮತ್ತೆ ಚಾಳಿ ಮುಂದುವರಿಸುತ್ತಾರೆ. ಇದಕ್ಕೆ ತಡೆ ಹಾಕಬೇಕೆಂದು ನಿರ್ಧರಿಸಿ ಜಾಗೃತಿ ಜತೆಗೆ ಎಚ್ಚರಿಕೆ ನೀಡಲು ಸೈಲೆನ್ಸರ್​ಗಳ ಮೇಲೆ ರೋಡ್​ ರೋಲರ್​ ಹರಿಸುವ ಮೂಲಕ ನಾಶಪಡಿಸಲಾಗಿದೆ. ಬೈಕ್​ಗಳಿಗೆ ಕಂಪನಿಗಳ ಕಡಿಮೆ ಶಬ್ದದ ಸೈಲೆನ್ಸರ್​ಗಳಿದ್ದರೆ ಮಾತ್ರವೇ ಓಡಾಡಬೇಕಿದ್ದು, ಅದು ಬಿಟ್ಟು ಗ್ಯಾರೇಜ್​ಗಳಲ್ಲಿ ಸೈಲೆನ್ಸರ್​ ಮಾರ್ಪಡಿಸಿದರೆ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುವುದು. ಬೈಕ್​ ಓಡಿಸುವ ಯುವಕರು, ಕೊಡಿಸುವ ಪಾಲಕರು, ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಸಲುವಾಗಿ ಈ ರೀತಿ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಮುಂದುವರಿದರೆ ಐಪಿಸಿ ಕ್ರಿಮಿನಲ್​ ಪ್ರಕರಣ ದಾಖಲಿಸಿ ಬೈಕ್​ ಜಪ್ತಿ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.

    ಮಹಾನಗರಗಳು ಸೇರಿ ಇನ್ನಿತರ ಕಡೆಗಳಲ್ಲಿ ಆಟೋಗಳಿಗೆ ಕೆಟಿಪಿ ನಂಬರ್​ ಸ್ಟಿಕ್ಕರಿಂಗ್​ ನೀಡಲಾಗಿದ್ದು, ಅಂತೆಯೇ ನಗರದಲ್ಲೂ ಆಟೋಗಳಿಗೆ ಸಂಬಂಧಿಸಿದಂತೆ ವಿಶೇಷ ಕಾರ್ಯಾಚರಣೆಯನ್ನು ಸಂಚಾರಿ ಪೊಲೀಸರು ಆರಂಭಿಸಿದ್ದಾರೆ. ಆಟೋಗಳು ಎಲ್ಲ ದಾಖಲೆ, ಆರ್​ಟಿಒ ಅನುಮತಿ ಹೊಂದಿದ್ದರೆ ಮಾತ್ರವೇ ಕೆಟಿಪಿ ನಂಬರ್​ ಸ್ಟಿಕ್ಕರಿಂಗ್​ ಮಾಡಲಾಗುವುದು. ಸ್ಟಿಕ್ಕರ್​ ಇಲ್ಲದೆ ಯಾವುದೇ ಕಾರಣಕ್ಕೂ ರಸ್ತೆಗೆ ಇಳಿಯುವಂತಿಲ್ಲ. ಈ ಬಗ್ಗೆ ಆಟೋ ಯೂನಿಯನ್​ ಪದಾಧಿಕಾರಿಗಳಿಗೂ ಮಹಿತಿ ನೀಡಲಾಗಿದೆ ಎಂದರು.

    ನಗರದಲ್ಲಿ ನಡೆಯುತ್ತಿರುವ ಈ ಎಲ್ಲ ಕಾರ್ಯಾಚರಣೆಗೆ ಸಂಚಾರಿ ಪೊಲೀಸರ ಶ್ರಮ ಸಾಕಷ್ಟಿದ್ದು, ಸಾರ್ವಜನಿಕರು ಸಹಕರಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಅವಾರ್ಡ್​ ನೀಡಲಾಗುವುದು ಎಂದರು. ಹೆಚ್ಚುವರಿ ಪೊಲೀಸ್​ ವರಿಷ್ಠಾಧಿಕಾರಿ ಸಚಿನ್​ ಘೋರ್ಪಡೆ, ಡಿವೈಎಸ್ಪಿ ರಮೇಶ್​, ವೃತ್ತ ನಿರೀಕ್ಷಕ ರಾಘವೇಂದ್ರ ಪ್ರಕಾಶ್​, ಸಂಚಾರಿ ಠಾಣೆಪಿಎಸ್​ಐ ಅಣ್ಣಯ್ಯ ಇತರರು ಇದ್ದರು.

    ಇಡೀ ನಗರವನ್ನು ಸಿಸಿಟಿವಿ ಕವರೇಜ್​ ಮಾಡಲು ಮಾಸ್ಟರ್​ ಪ್ಲಾನ್​ ಸಿದ್ಧವಾಗುತ್ತಿದೆ. ಯೋಜನೆ ಜಾರಿಯಾದ ಬಳಿಕ, ವಾಹನಗಳು ಯಾವ ಕಡೆ ಹೋಗುತ್ತಿವೆ ಎನ್ನುವುದು ಸ್ಪಷ್ಟ ಚಿತ್ರಣ ನಮಗೆ ಸಿಗುತ್ತದೆ. ಟ್ರಾಫಿಕ್​ ಮಾನಿಟರಿಂಗ್​ ಸೆಂಟರ್​ನಲ್ಲಿ ಅದನ್ನು ಪೊಲೀಸ್​ ಸಿಬ್ಬಂದಿ ವೀಕ್ಷಿಸುತ್ತಿರುತ್ತಾರೆ. ಹಂತ&ಹಂತವಾಗಿ ಎಲ್ಲ ಸಮಸ್ಯೆ ಬಗೆಹರಿಸಲು ಅಗತ್ಯ ಕ್ರಮಕೈಗೊಳ್ಳಲಾಗುವುದು.
    ಡಿ.ದೇವರಾಜ್​, ಎಸ್ಪಿ

    Array

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts