More

    ಬೇಸಿಗೆ ಆರಂಭಕ್ಕೂ ಮುನ್ನವೇ ನೀರಿಗಾಗಿ ಹಾಹಾಕಾರ!, ತಾಲೂಕಿನ 95 ಹಳ್ಳಿಗಳಲ್ಲಿ ಪರದಾಟ ಟ್ಯಾಂಕರ್ ಮೊರೆ ಹೋದ ಜನತೆ

    ವೆಂಕಟರಾಜು ಎಸ್. ದೊಡ್ಡಬಳ್ಳಾಪುರ
    ಬೇಸಿಗೆ ಬಿಸಿಲು ಹೆಚ್ಚಾಗುತ್ತಿರುವಂತೆ ನೀರಿನ ಬವಣೆಯೂ ಹೆಚ್ಚುತ್ತಿದೆ. ಜನರಿಗೆ ಕುಡಿಯುವ ನೀರು ಸರಬರಾಜು ಮಾಡಬೇಕಾದ ಅಧಿಕಾರಿಗಳು ಅನುದಾನ ಕೊರತೆ ನೆಪವೊಡ್ಡಿ ನುಣುಚಿಕೊಳ್ಳುತ್ತಿದ್ದಾರೆ. ನೀರು ಪೂರೈಸುವವರೂ ಇಲ್ಲವಾಗಿ ಜನರ ಬವಣೆ ಹೇಳತೀರದಾಗಿದೆ.

    150ಕ್ಕೂ ಹೆಚ್ಚು ಗ್ರಾಮಗಳಿಗೆ ಸಮಸ್ಯೆ ವಿಸ್ತರಣೆ?: ತಾಲೂಕಿನ ಪೈಕಿ 95 ಗ್ರಾಮಗಳಲ್ಲಿ ಈಗಾಗಲೇ ನೀರಿನ ಅಭಾವ ಉಂಟಾಗಿದೆ. ಈ ಪೈಕಿ 20ರಿಂದ 25 ಗ್ರಾಮಗಳಲ್ಲಿ ಟ್ಯಾಂಕರ್ ಮೂಲಕ ಮತ್ತು ಕೆಲವು ಗ್ರಾಮಗಳಲ್ಲಿ ಖಾಸಗಿ ಕೊಳವೆಬಾವಿಗಳ ಮೂಲಕ ನೀರು ಪೂರೈಸಲಾಗುತ್ತಿದೆ. ಮೇ ಅಂತ್ಯಕ್ಕೆ ಜಿಲ್ಲೆಯ 150ಕ್ಕೂ ಹೆಚ್ಚು ಗ್ರಾಮಗಳಲ್ಲಿ ಈ ಸಮಸ್ಯೆ ವಿಸ್ತರಣೆಗೊಳ್ಳುವ ಸಾಧ್ಯತೆ ಇದೆ. ನೀರು ಪೂರೈಸುತ್ತಿದ್ದ ಬಹುತೇಕ ಕೊಳವೆಬಾವಿಗಳೂ ಬತ್ತಿವೆ. ಇದರಿಂದ ನೀರಿನ ಪೂರೈಕೆ ಕಷ್ಟವಾಗಿದೆ. ಮಹಿಳೆಯರು ರೈತರ ಜಮೀನುಗಳಲ್ಲಿನ ಕೊಳವೆಬಾವಿಗಳ ಬಳಿ ತೆರಳಿ ಬಿಂದಿಗೆಗಳಲ್ಲಿ ನೀರು ತುಂಬಿಸಿಕೊಳ್ಳುವ ದೃಶ್ಯ ಸಾಮಾನ್ಯವಾಗುತ್ತಿದೆ.

    ಬೇಸಿಗೆ ಹಿನ್ನೆಲೆಯಲ್ಲಿ ರೈತರ ಬೆಳೆಗಳು ಒಣಗುತ್ತಿವೆ. ಇದರಿಂದ ರೈತರು ಬಾಡಿಗೆಗೆ ನೀರು ಪೂರೈಸಲು ಒಪ್ಪುತ್ತಿಲ್ಲ ಎನ್ನಲಾಗಿದೆ.

    ನಗರದಲ್ಲೂ ಇದೇ ಸಮಸ್ಯೆ!: ನಗರಕ್ಕೆ ಜಕ್ಕಲಮಡಗುನಿಂದ ನೀರು ಪೂರೈಕೆ ಮಾಡಲಾಗುತ್ತಿದೆ. ಬೇಸಿಗೆ ಆರಂಭಕ್ಕೂ ಮುನ್ನವೇ ನಗರದ ವಿವಿಧ ವಾರ್ಡ್‌ಗಳಲ್ಲಿ ವಾರಕ್ಕೊಮ್ಮೆ ನೀರು ಹರಿಸಲಾಗುತ್ತಿದೆ. ಕೆಲವೆಡೆ ಬೋರ್‌ವೆಲ್‌ಗಳನ್ನೇ ಅವಲಂಬಿಸಿರುವ ಜನರು ನೀರಿಗಾಗಿ ಪರದಾಡುತ್ತಿದ್ದಾರೆ. ಈ ಸಮಸ್ಯೆ ಪರಿಹರಿಸಬೇಕಾದ ಅಧಿಕಾರಿಗಳು ಉಡಾಫೆ ಉತ್ತರ ನೀಡುತ್ತಾ ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದಾರೆ.

    ಎತ್ತಿನಹೊಳೆ ಯೋಜನೆ ಮುಗಿಯುವುದು ಯಾವಾಗ?: ಎತ್ತಿನಹೊಳೆ ಯೋಜನೆ ಪೂರ್ಣಗೊಂಡರೆ ಚಿಕ್ಕಬಳ್ಳಾಪುರ, ಬೆಂ.ಗ್ರಾಮಾಂತರ, ಕೋಲಾರ ಜಿಲ್ಲೆಗಳಿಗೆ ನೀರು ಹರಿಯುತ್ತದೆ. ಆದರೆ ಈ ಮಹತ್ವಪೂರ್ಣ ಯೋಜನೆ ಕುಂಟುತ್ತಾ ಸಾಗುತ್ತಿದ್ದು, ಕಾಮಗಾರಿ ಪೂರ್ಣಗೊಳ್ಳಲು ಇನ್ನೂ ಹಲವು ವರ್ಷಗಳೇ ಬೇಕಾಗುವ ಸಾಧ್ಯತೆ ಇದೆ.
    ತಿಪ್ಪಗೊಂಡನಹಳ್ಳಿ ಜಲಾನಯನ ಪ್ರದೇಶದ ವೃಷಭಾವತಿಯ ನೀರನ್ನು ದೊಡ್ಡಬಳ್ಳಾಪುರಕ್ಕೆ ಹರಿಸುವ ಯೋಜನೆ ಆರಂಭಗೊಂಡಿದೆ. ಈಗಾಗಲೇ ಸಂಬಂಧಪಟ್ಟ ಇಲಾಖೆ ಸರ್ಕಾರಕ್ಕೆ ವಿಸ್ತೃತ ಯೋಜನಾ ವರದಿ ರವಾನಿಸಿದೆ. ಈ ಯೋಜನೆಯಾದರೂ ಶೀಘ್ರವೇ ಮುಕ್ತಾಯವಾಗಿ ತಾಲೂಕಿಗೆ ನೀರು ಹರಿಯುವಂತಾಗಲಿ ಎಂಬುದು ಸಾರ್ವಜನಿಕರ ನಿರೀಕ್ಷೆಯಾಗಿದೆ.

    ತಾಲೂಕಿನ 95 ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ನೀರು ಸರಬರಾಜಿಗೆ ಆರ್ಥಿಕವಾಗಿ ಸಂಕಷ್ಟ ಎದುರಾಗಿದೆ. ಜಾನುವಾರುಗಳಿಗೂ ನೀರು ಸಿಗದಂತಾಗಿದೆ. ಈ ವಿಷಯವನ್ನು ಅಧಿಕಾರಿಗಳು ಸರ್ಕಾರದ ಗಮನಕ್ಕೆ ತಂದು ಕೊಳವೆಬಾವಿ ಕೊರೆಸಲು ಅನುಮತಿ ನೀಡುವ ಕೆಲಸ ತುರ್ತಾಗಿ ಆಗಬೇಕಿದೆ.
    ಟಿ. ವೆಂಕಟರಮಣಯ್ಯ, ಶಾಸಕ

    ತಾಲೂಕಿನಲ್ಲಿ ಯಾವ್ಯಾವ ಗ್ರಾಮದಲ್ಲಿ ನೀರಿನ ಬವಣೆ ಉಂಟಾಗಿದೆಯೋ ಅಲ್ಲೆಲ್ಲ ಖಾಸಗಿ ಟ್ಯಾಂಕರ್ ಮೂಲಕ ನೀರು ಪೂರೈಕೆ ಮತ್ತು ರೈತರ ಬೋರ್‌ವೆಲ್‌ಗಳಿಂದ ನೀರನ್ನು ಬಾಡಿಗೆಗೆ ಪಡೆದು ಪೂರೈಕೆ ಮಾಡಲಾಗುತ್ತಿದೆ. ನೀರಿನ ಸಮಸ್ಯೆ ಉಂಟಾಗದಂತೆ ಕ್ರಮ ತೆಗೆದುಕೊಳ್ಳಲಾಗಿದೆ. ಜಿಪಂ ಸಿಇಒ, ಗ್ರಾಮೀಣಾಭಿವೃದ್ಧಿ ಇಲಾಖೆ ಅಧಿಕಾರಿಗಳ ಈ ವಿಷಯ ತರಲಾಗಿದೆ.
    ಮುರುಡಯ್ಯ, ತಾಪಂ ಇಒ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts