More

    ಬೇಲಿ ನಿರ್ಮಿಸದಿದ್ರೆ ನೋಟಿಸ್ ನೀಡಿ

    ಕೋಲಾರ: ಕೃಷಿ ಹೊಂಡದಲ್ಲಿ ಮಕ್ಕಳು ಬಿದ್ದು ಮರಣ ಹೊಂದುತ್ತಿದ್ದು, ಇದನ್ನು ತಪ್ಪಿಸಲು ಕೃಷಿ ಹೊಂಡದ ಸುತ್ತ ಬೇಲಿ ನಿರ್ಮಾಣ ಮಾಡಲು ರೈತರಲ್ಲಿ ಅರಿವು ಮೂಡಿಸಬೇಕು ಎಂದು ತಾಪಂ ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷ ಮುದುವಾಡಿ ಮಂಜುನಾಥ ಕೃಷಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

    ತಾಪಂ ಸಭಾಂಗಣದಲ್ಲಿ ಉಪಾಧ್ಯಕ್ಷೆ ಸಿ. ಲಕ್ಷ್ಮೀ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿ, ಕೃಷಿ ಹೊಂಡಗಳ ಸುತ್ತ ಬೇಲಿ ನಿರ್ಮಿಸಲು ರೈತರಿಂದ ಕ್ರಮ ವಹಿಸುವಂತೆ ಹಿಂದಿನ ಸಭೆಯಲ್ಲೂ ಸೂಚಿಸಲಾಗಿತ್ತು. ರೈತರಿಗೆ ನೋಟಿಸ್ ನೀಡಿ, ಈಗಾಗಲೆ ಅನೇಕ ಮಕ್ಕಳು ಕೃಷಿ ಹೊಂಡಕ್ಕೆ ಬಿದ್ದು ಪ್ರಾಣ ಕಳೆದುಕೊಂಡಿದ್ದಾರೆ, ಶಾಲೆ ಇನ್ನೂ ಆರಂಭವಾಗದಿರುವುದರಿಂದ ಆಟವಾಡಲು ಹೋಗುವ ಸಾಧ್ಯತೆ ಇದೆ. ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಕೃಷಿ ಅಧಿಕಾರಿಗೆ ತಾಕೀತು ಮಾಡಿದರು.

    ಶಿಕ್ಷಣ ಇಲಾಖೆಯ ಸಿಆರ್‌ಪಿ ರಾಮಕೃಷ್ಣ ಮಾತನಾಡಿ, ತಾಲೂಕಿನ ಲಕ್ಷ್ಮೀಸಾಗರದ ಬಳಿ 1ನೇ ತರಗತಿ ವಿದ್ಯಾರ್ಥಿ ಮಂಗಳವಾರ ಸಂಜೆ ಕೃಷಿಹೊಂಡಕ್ಕೆ ಬಿದ್ದು ಮೃತಪಟ್ಟಿದ್ದಾನೆ. ಗುಲಗಂಜಿಗುರ್ಕಿ ಸರ್ಕಾರಿ ಶಾಲೆ ಪಕ್ಕದಲ್ಲೇ ತೆರೆದ ಕೃಷಿಹೊಂಡವಿದೆ, ಸುತ್ತಲೂ ಫೆನ್ಸಿಂಗ್ ಹಾಕಿಸಲು ಕ್ರಮ ಕೈಗೊಳ್ಳಬೇಕು ಎಂದು ಕೋರಿದರು.

    ಗ್ರಾಮೀಣ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆ ಎಇಇ ಶ್ರೀನಿವಾಸ್ ಮಾತನಾಡಿ, ಮೇಡಿಹಾಳ, ಜನ್ನಘಟ್ಟ, ಕಲ್ಲೂರು, ಹರಟಿ ಸೇರಿದಂತೆ 5 ಗ್ರಾಮಗಳಿಗೆ ಟ್ಯಾಂಕರ್, ಬೆತ್ತನಿ, ಉರಿಗಿಲಿ ಸೇರಿ 5 ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. 15ನೇ ಹಣಕಾಸು ಯೋಜನೆ ಯೋಜನೆಯಡಿ 1.50 ಕೋಟಿ ರೂ. ಅನುದಾನವಿದ್ದು, ಆದಷ್ಟು ಬೇಗ ಕ್ರಿಯಾಯೋಜನೆ ರೂಪಿಸಿದರೆ ಕುಡಿಯುವ ನೀರಿನ ಕಾಮಗಾರಿ ಕೈಗೊಳ್ಳಲು ಸಾಧ್ಯವಾಗುತ್ತದೆ ಎಂದರು.

    ನರೇಗಾ ಯೋಜನೆಯ ಕಾಮಗಾರಿಗಳನ್ನು ಒಂದೆರಡು ಗುತ್ತಿಗೆದಾರರಿಗೆ ನೀಡುವ ಮೂಲಕ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ಶಾಮೀಲಾಗಿ ಕಾಮಗಾರಿಯಲ್ಲಿ ಕೋಟ್ಯಂತರ ರೂ. ಲೂಟಿ ನಡೆಯುತ್ತಿದೆ ಎಂದು ತಾಪಂ ಸದಸ್ಯ ಗೋಪಾಲ್‌ಗೌಡ ಆರೋಪಿದರು.

    ತಾಲೂಕಿನ 36 ಗ್ರಾಪಂಗಳಲ್ಲಿ ಒಂದು ಗ್ರಾಪಂನಿಂದ 25 ಲಕ್ಷ ಎಂದರೆ ತಾಲೂಕಿನ ಎಲ್ಲ ಗ್ರಾಪಂಗಳಿಂದ 9 ಕೋಟಿ ರೂ.ಗಳನ್ನು ತಮಗೆ ಬೇಕಿರುವ ಗುತ್ತಿಗೆದಾರರಿಗೆ ನರೇಗಾದಡಿ ಸರಬರಾಜು ಮಾಡಿ ಬಿಲ್‌ಪಾಸ್ ಮಾಡಿದ್ದಾರೆ. ಇದರಲ್ಲಿ ಗೋಲ್‌ಮಾಲ್ ನಡೆಯುತ್ತಿದ್ದು, ಅಧಿಕಾರಿಗಳು ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

    ತಾಲೂಕಿನ ಹೋಳೂರು ಹೋಬಳಿಯಿಂದ ಘಟ್ಟಹಳ್ಳಿ ರಸ್ತೆ ಸಂಪೂರ್ಣ ಹದಗೆಟ್ಟಿದ್ದರೂ ಸಂಬಂಧ ಪಟ್ಟ ಇಲಾಖೆ ಅಧಿಕಾರಿಗಳು ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದಾರೆ. ಮುಂದಿನ ವಾರದೊಳಗೆ ಪೂರ್ಣಗೊಳ್ಳಬೇಕು ಒಂದು ವೇಳೆ ತಪ್ಪಿದಲ್ಲಿ ತಾಪಂ ಇಒಗೆ ದಿಗ್ಬಂಧನ ವಿಧಿಸಬೇಕಾಗುತ್ತದೆ ಎಂದು ಎಚ್ಚರಿಸಿದರು. ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೆಶಕಿ ಮಂಜುಳಾ, ಕೃಷಿ ಇಲಾಖೆ ಸಹಕಾಯ ನಿರ್ದೇಶಕ ನಾಗರಾಜ್ ಇತರರು ಹಾಜರಿದ್ದರು.

    ನರೇಗಾ ಯೋಜನೆಯಡಿ ಶಾಲಾ ಮೈದಾನದ ಸುತ್ತ ಕಾಂಪೌಂಡ್ ನಿರ್ಮಿಸಲು ಅವಕಾಶವಿದೆ. ಎಲ್ಲೆಲ್ಲಿ ಅವಶ್ಯವಿದೆ ಎಂಬ ಪಟ್ಟಿ ನೀಡಿದರೆ ಗ್ರಾಪಂ ಮೂಲಕ ಕಾಂಪೌಂಡ್ ಹಾಕಿಸಿಕೊಡಲಾಗುವುದು. ಕೃಷಿ ಹೊಂಡದ ಸುತ್ತ ಫೆನ್ಸಿಂಗ್ ಹಾಕಿಸುವಂತೆ ರೈತರಿಗೆ ಅರಿವು ಮೂಡಿಸಬೇಕು.
    ಎನ್.ವಿ. ಬಾಬು, ತಾಪಂ ಇಒ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts