More

    ಬೆಳಗಾವಿಯಲ್ಲಿ 19ರಿಂದ ಚಳಿಗಾಲ ಅಧಿವೇಶನ

    ಬೆಳಗಾವಿ: ಡಿಸೆಂಬರ್ 19ರಿಂದ 30ರ ವರೆಗೆ 15ನೇ ವಿಧಾನಸಭೆಯ 14ನೇ ವಿಧಾನಮಂಡಳ ಚಳಿಗಾಲ ಅಧಿವೇಶನ ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ಜರುಗಲಿದೆ ಎಂದು ವಿಧಾನಸಭೆ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದರು.

    ಇಲ್ಲಿನ ಸುವರ್ಣ ವಿಧಾನಸೌಧದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಅಧಿವೇಶನದಲ್ಲಿ ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕ, ಬೆಂಗಳೂರು ಮಹಾನಗರ ಭೂಸಾರಿಗೆ ಪ್ರಾಧಿಕಾರ ವಿಧೇಯಕ, ಕನ್ನಡ ಭೂಕಂದಾಯ ವಿಧೇಯಕ, ಅನುಸೂಚಿತ ಜಾತಿ ಮತ್ತು ಪಂಗಡಗಳ ಶಿಕ್ಷಣ ಸಂಸ್ಥೆಗಳಲ್ಲಿ ಮತ್ತು ರಾಜ್ಯಾಧೀನ ಸಂಸ್ಥೆಗಳಲ್ಲಿ ನೇಮಕಾತಿ ಮತ್ತು ಹುದ್ದೆಗಳಿಗೆ ಮೀಸಲಾತಿ ವಿಧೇಯಕ, ಕರ್ನಾಟಕ ಪ್ರದೇಶ ವಿಶೇಷ ಹೂಡಿಕೆ ಪ್ರದೇಶ ವಿಧೇಯಕ, ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಸೇರಿ ಒಟ್ಟು 6 ವಿಧೇಯಕಗಳನ್ನು ಮಂಡಿಸಲಾಗುವುದು. ಬೇರೆ ಯಾವುದೇ ವಿಧೇಯಕ ಇದ್ದರೆ ಸರ್ಕಾರ ಅವುಗಳನ್ನು ಮಂಡಿಸಲಿದೆ. ಅಧಿವೇಶನದ ಮೊದಲ ದಿನ ವಿಧಾನಸಭೆ ಉಪಾಧ್ಯಕ್ಷ ಆನಂದ ಮಾಮನಿ ಸೇರಿ ಅಗಲಿದ ಗಣ್ಯರಿಗೆ ಶ್ರದ್ಧಾಂಜಲಿ ಸಲ್ಲಿಸಲಾಗುವುದು ಎಂದರು.

    ಉತ್ತರ ಕರ್ನಾಟಕ ಸಮಸ್ಯೆ ಚರ್ಚೆಗೆ ಅವಕಾಶ: ಸಮಗ್ರ ಕರ್ನಾಟಕದ ಜತೆಗೆ ವಿಶೇಷವಾಗಿ ಉತ್ತರ ಕರ್ನಾಟಕ ಭಾಗದ ವಿಷಯಗಳ ಚರ್ಚೆಗೆ ಹೆಚ್ಚಿನ ಅವಕಾಶ ಕಲ್ಪಿಸಲಾಗುವುದು. ಅದಕ್ಕಾಗಿ ಸೂಕ್ತ ದಿನಗಳನ್ನು ನಿಗದಿಪಡಿಸಲಾಗುವುದು. ಕಲಾಪಗಳಲ್ಲಿ ಸಚಿವರು ಮತ್ತು ಶಾಸಕರು ಕಡ್ಡಾಯವಾಗಿ ಹಾಜರಾಗಬೇಕು. ಅನಿವಾರ್ಯ ಸಂದರ್ಭಗಳಲ್ಲಿ ತಮ್ಮ ಅನುಮತಿ ಮೇರೆಗೆ ಕಲಾಪಗಳ ಹಾಜರಾತಿಯಿಂದ ವಿನಾಯಿತಿ ಪಡೆಯಬಹುದು. ಸದನದಲ್ಲಿ ನಾನು ಭಾಗವಹಿಸುವುದಿಲ್ಲ ಎಂಬ ಮಾತುಗಳನ್ನು ನಾನು ಒಪ್ಪುವುದಿಲ್ಲ. ಪ್ರಜಾಸಂಸದೀಯ ಪಾವಿತ್ರ್ಯ ಕಾಪಾಡಲು ಎಲ್ಲ ಜನಪ್ರತಿನಿಧಿಗಳು ಸಹಕರಿಸಬೇಕು. ಜನರ ಆಶಯಗಳನ್ನು ಈಡೇರಿಸುವ ಸಂಸದೀಯ ಮಾರ್ಗ ಅಧಿವೇಶನದ ಉದ್ದೇಶವಾಗಿದೆ. ಆದ್ದರಿಂದ ಜನರ ಭಾವನೆಗಳಿಗೆ ಸ್ಪಂದಿಸಿ ಎಲ್ಲರೂ ಸದನದಲ್ಲಿ ಕಡ್ಡಾಯವಾಗಿ ಭಾಗವಹಿಸಬೇಕು ಎಂದರು.

    ಅತ್ಯುತ್ತಮ ಶಾಸಕ ಪ್ರಶಸ್ತಿ: ನಾನು ವಿಧಾನಸಭೆ ಅಧ್ಯಕ್ಷನಾದ ಬಳಿಕ ಅತ್ಯುತ್ತಮ ಶಾಸಕರನ್ನು ಆಯ್ಕೆಗೆ ತೀರ್ಮಾನಿಸಲಾಗಿದೆ. ಈ ಬಾರಿಯ ಬೆಳಗಾವಿ ಅಧಿವೇಶನದಲ್ಲಿ ಅತ್ಯುತ್ತಮ ಶಾಸಕ ಪ್ರಶಸ್ತಿ ನೀಡಲಾಗುವುದು. ಆಯ್ಕೆ ಸಮಿತಿಯು ನೀಡುವ ವರದಿ ಆಧರಿಸಿ ಅತ್ಯುತ್ತಮ ಶಾಸಕರ ಪ್ರಶಸ್ತಿಗೆ ಆಯ್ಕೆ ಮಾಡಲಾಗುತ್ತದೆ. ಸದನದ ಕಾರ್ಯಕಲಾಪಗಳನ್ನು ಸುಗಮವಾಗಿ ನಡೆಸುವ ನಿಟ್ಟಿನಲ್ಲಿ ಸಂಬಂಧಿಸಿದ ಎಲ್ಲ ವಿಭಾಗದ ಅಧಿಕಾರಿಗಳ ಜತೆ ಚರ್ಚಿಸಿ, ನಿರ್ದೇಶನಗಳನ್ನು ನೀಡಲಾಗಿದೆ. ಬೆಳಗಾವಿಯಲ್ಲಿ ಹತ್ತನೇ ಅಧಿವೇಶನ ನಡೆಯುತ್ತಿದೆ. ಏಳು ಅಧಿವೇಶನ ಸುವರ್ಣಸೌಧದಲ್ಲಿ ನಡೆದಿದ್ದು, ಎರಡು ಹೊರಗಡೆ ನಡೆಸಲಾಗಿದೆ. ಈ ಅವಧಿಯ ಕೊನೇ ಅಧಿವೇಶನ ಆಗಿದ್ದರಿಂದ ಹೆಚ್ಚು ಮಹತ್ವ ಪಡೆದಿದೆ ಎಂದರು.

    ಸಾರ್ವಜನಿಕರಿಗೆ ಮುಕ್ತ ಅವಕಾಶ: ಅಧಿವೇಶನ ಹೊರತುಪಡಿಸಿ ಉಳಿದ ಅವಧಿಯಲ್ಲಿ ಸುವರ್ಣ ವಿಧಾನಸೌಧ ಸದ್ಬಳಕೆ ಅಗಬೇಕು. ಇಡೀ ವರ್ಷ ಕಟ್ಟಡದಲ್ಲಿ ಲವಲವಿಕೆಯಿಂದ ಚಟುವಟಿಕೆಗಳು ನಡೆಯಬೇಕು ಎಂಬ ಅಭಿಪ್ರಾಯಗಳಿವೆ.

    ಶಾಸಕರ ಭವನ ನಿರ್ಮಾಣ ಸೇರಿ ವಿವಿಧ ವಿಷಯಗಳ ಬಗ್ಗೆ ಸರ್ಕಾರದ ಹಂತದಲ್ಲಿ ಚರ್ಚಿಸಿ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.ಕರೊನಾ ಇಲ್ಲದಿರುವುದರಿಂದ ಈ ಬಾರಿ ಯಾವುದೇ ರೀತಿಯ ನಿರ್ಬಂಧ ಇರುವುದಿಲ್ಲ. ಆದ್ದರಿಂದ ಪ್ರಶ್ನೋತ್ತರ ವೇಳೆ, ಶೂನ್ಯ ವೇಳೆ, ಮಸೂದೆ ಅಂಗೀಕಾರ ಸೇರಿ ಕಲಾಪದ ಎಲ್ಲ ಚಟುವಟಿಕೆಗಳು ಯಥಾ ಪ್ರಕಾರ ನಡೆಯಲಿವೆ. ಸಾರ್ವಜನಿಕರಿಗೆ ಕಲಾಪ ವೀಕ್ಷಿಸಲು ಮುಕ್ತ ಅವಕಾಶ ನೀಡಲಾಗುವುದು. ಪ್ರವೇಶದ್ವಾರದ ಬಳಿ ಅಗತ್ಯ ಗುರುತಿನ ಚೀಟಿ ನೀಡಿ ಪ್ರವೇಶ ಕಲ್ಪಿಸಲಾಗುತ್ತದೆ. ಅಧಿವೇಶನವನ್ನು ಅಚ್ಚುಕಟ್ಟಾಗಿ ನಡೆಸಲು ಪೂರ್ವಸಿದ್ಧತೆಗಳು ಈಗಾಗಲೇ ಮಾಡಿಕೊಳ್ಳಲಾಗುತ್ತಿದೆ. ಯಾವುದೇ ರೀತಿಯ ಲೋಪದೋಷಗಳಿಲ್ಲದೆ ಅಚ್ಚುಕಟ್ಟಾಗಿ ನಡೆಸಲು ಅಧಿಕಾರಿಗಳಿಗೆ ಅಗತ್ಯ ಸೂಚನೆ ನೀಡಲಾಗಿದೆ ಎಂದರು.

    ಜಿಲ್ಲಾಧಿಕಾರಿ ನಿತೇಶ ಪಾಟೀಲ ಮಾತನಾಡಿ, ಪ್ರತಿಭಟನೆಗಳಿಗಾಗಿ ಬಸ್ತವಾಡದಲ್ಲಿ 71 ಸಾವಿರ ಚದರ ಅಡಿ ಜಾಗ ಮೀಸಲಿಡಲಾಗಿದ್ದು, ಅಗತ್ಯ ಸಿದ್ಧತೆ ಮಾಡಲಾಗಿದೆ ಎಂದು ತಿಳಿಸಿದರು. ವಿಧಾನಸಭೆ ಕಾರ್ಯದರ್ಶಿ ವಿಶಾಲಾಕ್ಷಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಂಜೀವ ಪಾಟೀಲ, ಪೊಲೀಸ್ ಆಯುಕ್ತ ಡಾ.ಎಂ.ಬಿ.ಬೋರಲಿಂಗಯ್ಯ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts