More

    ಬೆಲೆ ಕುಸಿತ, ಬೆಳೆ ನಷ್ಟ, ರೋಗ ಬಾಧೆಯಿಂದ ಅನ್ನದಾತ ಕಂಗಾಲು

    ಹೊಸನಗರ: ದೇಶದಲ್ಲಿ ಇಂದು ರೈತ ವರ್ಗ ಸಂಕಷ್ಟ ಸ್ಥಿತಿಯಲ್ಲಿದೆ. ರೈತರಿಗೆ ತಮ್ಮ ಇತಿಮಿತಿಯ ಅರಿವು ಇಲ್ಲ. ಕೆಲ ಅಪಾಯದ ಕರೆಗಂಟೆಯಲ್ಲಿ ನಲುಗಿ ಹೋಗಿದ್ದಾರೆ. ಇಂತಹ ಸಂಕಷ್ಟ ಸ್ಥಿತಿಯಲ್ಲಿರುವ ರೈತ ವರ್ಗಕ್ಕೆ ಅರಿವು ಮೂಡಿಸುವ ಕೆಲಸವನ್ನು ಕೃಷಿಮೇಳ ಮಾಡಬೇಕಿದೆ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.

    ಪಟ್ಟಣದ ನೆಹರು ಮೈದಾನದಲ್ಲಿ ಶುಕ್ರವಾರ ಏರ್ಪಡಿಸಿದ್ದ ರಾಜ್ಯ ಮಟ್ಟದ ನಾಲ್ಕನೇ ಕೃಷಿಮೇಳ ಸುಗ್ಗಿಹಬ್ಬವನ್ನು ಉದ್ಘಾಟಿಸಿ ಮಾತನಾಡಿ, ರೈತ ವರ್ಗ ಬೆಲೆ ಕುಸಿತ, ಬೆಳೆ ನಷ್ಟ, ರೋಗ ಬಾಧೆ, ಮಾರುಕಟ್ಟೆ ಸ್ಥಿತ್ಯಂತರ ಮತ್ತಿತರ ಸಮಸ್ಯೆಗಳಿಂದ ನೊಂದಿದ್ದಾರೆ. ರೈತ ವರ್ಗಕ್ಕೆ ಸರಿಯಾದ ಮಾಹಿತಿ ನೀಡುವ ಕೆಲಸವಾಗುತ್ತಿಲ್ಲ. ರೈತರು ಜಾಗೃತರಾಗಬೇಕಿದೆ. ಅಲ್ಲದೆ ಅತಿಯಾಸೆಗೆ ಬಲಿಬಿದ್ದು ನಷ್ಟ ಹೊಂದುವ ಪರಿಪಾಠವನ್ನು ಕೈಬಿಡಬೇಕಿದೆ ಎಂದು ಸಲಹೆ ನೀಡಿದರು.
    ಶಾಸಕ ಗೋಪಾಲಕೃಷ್ಣ ಬೇಳೂರು ಮಾತನಾಡಿ, ಅಡಕೆಗೆ ಎಲೆಚುಕ್ಕೆ ರೋಗ ಭಾದಿಸುತ್ತಿದೆ. ಮಲೆನಾಡಿನಲ್ಲಿ ರೋಗ ಉಲ್ಬಣಗೊಂಡು ರೈತರು ನೆಮ್ಮದಿ ಕಳೆದುಕೊಂಡಿದ್ದಾರೆ. ಎಲೆಚುಕ್ಕೆ ರೋಗ ಭಾದೆಗೆ ಈ ಕೂಡಲೆ ಔಷಧ ಕಂಡು ಹಿಡಿಯಬೇಕಾಗಿದೆ. ಇದರಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಒಟ್ಟುಗೂಡಿ ಸಮರ್ಮಕ ಕ್ರಮಕೈಗೊಳ್ಳಬೇಕಿದೆ. ಕೇಂದ್ರೀಯ ವಿಜ್ಞಾನ ಸಂಸ್ಥೆಯ ಜತೆಗೂಡಿ ಔಷಧ ಕಂಡು ಹಿಡಿಯಬೇಕು. ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಬೇಡ ಎಂದ ಅವರು, ಅಜ್ಜ ನೆಟ್ಟ ಆಲದ ಮರ ಎಂಬಂತೆ ರೈತರು ಅಡಕೆ ಬೆಳೆಯನ್ನು ಮಾತ್ರ ನಂಬಿ ಕುಳಿತುಕೊಳ್ಳದೆ ಅನ್ಯ ಬೆಳೆಗಳನ್ನು ಬೆಳೆಯಲು ಮನ ಮಾಡಬೇಕು ಎಂದು ಹೇಳಿದರು.
    ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ ಮಾತನಾಡಿ, ರೈತಪರ ಸಂಘಟನೆಗಳು, ಸಹಕಾರ ವ್ಯವಸ್ಥೆಗಳು ರೈತರ ಸಮಸ್ಯೆಗಳತ್ತ ಹೆಚ್ಚು ಚಿಂತನೆ ನಡೆಸಬೇಕು. ಸಹಕಾರ ಬ್ಯಾಂಕ್‌ಗಳು ಕೇವಲ ಸಾಲ ಕೂಡುವುದನ್ನಷ್ಟೇ ಕಾಯಕ ಮಾಡದೆ ರೈತ ಸಮುದಾಯಗಳ ದನಿಯಾಗಿ ಕೆಲಸ ಮಾಡಬೇಕು ಎಂದರು.
    ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಷಡಕ್ಷರಿ, ನಿರ್ದೇಶಕರಾದ ಜಿ.ಎನ್.ಸುಧೀರ್ ಗೌಡ, ಎಂ.ಎಂ.ಪರಮೇಶ್, ತುಂಗಾ ಅಡಕೆ ಮಂಡಿ ಅಧ್ಯಕ್ಷ ದುಮ್ಮಾ ವಿನಯ್‌ಕುಮಾರ್, ಮ್ಯಾಮ್ಕೋಸ್ ನಿರ್ದೇಶಕ ಕೆ.ವಿ.ಕೃಷ್ಣಮೂರ್ತಿ, ಶಿಮುಲ್ ನಿರ್ದೇಶಕ ವಿದ್ಯಾಧರ್ ರಾವ್, ಕೀಳಂಬಿ ಮೀಡಿಯಾ ಲ್ಯಾಬ್ ವ್ಯವಸ್ಥಾಪಕ ಕೀಳಂಬಿ ರಾಜೇಶ್ ಇದ್ದರು. ಅರೆಮನೆ ವಿನಾಯಕ ನಿರೂಪಿಸಿದರು. ಜೆಸಿಐ ಅಧ್ಯಕ್ಷ ಮಧುಸೂಧನ್ ನಾವುಡ ಸ್ವಾಗತಿಸಿದರು. ಸಂದೀಪ್ ವಂದಿಸಿದರು.

    ಉಪಯುಕ್ತ ಸ್ಟಾಲ್‌ಗಳು
    ಬಳಿಕ ಗಂಗಾವತಿ ಪ್ರಾಣೇಶ್ ಮತ್ತು ತಂಡದವರಿಂದ ನಗೆಹಬ್ಬ ಕಾರ್ಯಕ್ರಮ ನಡೆಯಿತು. ಕೃಷಿಮೇಳದಲ್ಲಿ ವಿವಿಧ ಯಂತ್ರೋಪಕರಣಗಳ ಪ್ರದರ್ಶನ ಮತ್ತು ಮಾರಾಟ ನಡೆಯಿತು. ಮಣ್ಣು ಪರೀಕ್ಷೆ ಕೇಂದ್ರ, ಆಹಾರ ಸ್ಟಾಲ್‌ಗಳು, ನೂತನ ತಂತ್ರಜ್ಞಾನದ ಉಪಕರಣ ಕೇಂದ್ರಗಳು ಹೆಚ್ಚು ಜನರನ್ನು ಆಕರ್ಷಿಸಿದವು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts