More

    ಬೆಂಗಳೂರಿನಿಂದ ಕಾಲ್ನಡಿಗೆಯಲ್ಲಿ ಬಂದ ತನ್ನದೆ ರಾಜ್ಯದವರಿಗೆ ಆಶ್ರಯ ನೀಡದ ಮಹಾರಾಷ್ಟ್ರ

    ಕಮಲನಗರ (ಬೀದರ್​): ಬೆಂಗಳೂರಿನಿಂದ ಕಾಲ್ನಡಿಗೆಯಲ್ಲಿ ಬಂದಿದ್ದ ಮಹಾರಾಷ್ಟ್ರದ ನಾಂದೇಡ ಜಿಲ್ಲೆಯ ಐವರು ಯುವಕರು, ಐವರು ಯುವತಿಯರು ಮತ್ತು ಐವರು ಮಕ್ಕಳನ್ನು ಮಹಾರಾಷ್ಟ್ರದ ತೊಗರಿ ಚೆಕ್​ಪೋಸ್ಟ್​ ಅಧಿಕಾರಿಗಳು ಗಡಿಪಾರು ಮಾಡಿ ಕರ್ನಾಟಕದ ಗಡಿಗೆ ತಂದು ಬಿಟ್ಟಿರುವ ಘಟನೆ ಸೋಮವಾರ ನಡೆದಿದೆ. ಬೆಂಗಳೂರಿನ ಎಲ್ಎನ್ಟಿ ಕಂಪೆನಿಯಲ್ಲಿ ಕೆಲಸ ಮಾಡಲು ತಮ್ಮ ಮಕ್ಕಳೊಂದಿಗೆ ತೆರಳಿದ್ದ ಇವರು, ಲಾಕ್​ಡೌನ್​ನಿಂದಾಗಿ ಕೆಲಸ ಕಳೆದುಕೊಂಡ ಕಾರಣ ಅವರೆಲ್ಲರೂ ಊರು ಸೇರಿಕೊಳ್ಳಲು ಕಾಲ್ನಡಿಗೆ ಮೂಲಕ 7 ದಿನಗಳ ಹಿಂದೆಯೇ ಹೊರಟಿದ್ದರು.
    ಬೆಂಗಳೂರಿನಿಂದ 800 ಕಿ.ಮೀ ದೂರದಿಂದ ಬಂದಿದ್ದೇವೆ. ನಮ್ಮ ಗ್ರಾಮ ಇಲ್ಲಿಂದ ಕೇವಲ 130 ಕಿ.ಮೀ ಇದೆ. ದಯವಿಟ್ಟು ನಮ್ಮನ್ನು ಊರಿಗೆ ತೆರಳಲು ಅನುಕೂಲ ಮಾಡಿಕೊಡಬೇಕೆಂದು ಪರಿಪರಿಯಾಗಿ ಮಹಾರಾಷ್ಟ್ರದ ಚೆಕ್​ಪೋಸ್ಟ್​ ಅಧಿಕಾರಿಗಳಿಗೆ ಮನವಿ ಮಾಡಿದರೂ ಪ್ರಯೋಜನವಾಗಲಿಲ್ಲ. ಮತ್ತೆ ನಮ್ಮನ್ನು ಕಮಲನಗರ ಗಡಿಗೆ ತಂದು ಬಿಟ್ಟಿದ್ದಾರೆ ಎಂದು ನಾಂದೇಡ ಮೂಲದ ಅಂಕುಶ ಬೇಸರ ವ್ಯಕ್ತಪಡಿಸಿದರು.
    ಕಮಲನಗರದಿಂದ ಕೇವಲ 18 ಕಿ.ಮೀ ಅಂತರದಲ್ಲಿರುವ ಮಹಾರಾಷ್ಟ್ರದ ಉದಗೀರ್ ಪಟ್ಟಣದಲ್ಲಿ 68 ವರ್ಷದ ವೃದ್ಧೆಯೊಬ್ಬರು ಕರೊನಾ ಸೋಂಕಿನಿಂದ ಮೃತಪಟ್ಟ ಹಿನ್ನೆಲೆಯಲ್ಲಿ ಕರ್ನಾಟಕ-ಮಹಾರಾಷ್ಟ್ರ ಗಡಿಯಲ್ಲಿ ಹೈ ಅಲರ್ಟ್​ ಇದೆ. ಯಾರೇ ಬಂದರೂ ಗಡಿ ಪ್ರವೇಶಿಸಲು ಅವಕಾಶ ನೀಡಬಾರದು ಎಂಬ ಆಯಾ ಜಿಲ್ಲಾಡಳಿತ ಆದೇಶಿಸಿರುವ ಕಾರಣ ತೊಗರಿ ಚೆಕ್ಪೋಸ್ಟ್ ಅಧಿಕಾರಿಗಳು ಇವರನ್ನು ಕರ್ನಾಟಕ ಗಡಿಗೆ ತಂದು ಬಿಟ್ಟಿದ್ದಾರೆ ಎಂದು ತಹಸೀಲ್ದಾರ್ ರಮೇಶ ಪೆದ್ದೆ ತಿಳಿಸಿದ್ದಾರೆ.
    ಇವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ ಸದ್ಯ ಕಮಲನಗರದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವಸತಿ ನಿಲಯದಲ್ಲಿ ಕ್ವಾರಂಟೈನ್​ನಲ್ಲಿ ಇಡಲಾಗಿದೆ ಎಂದು ಪಿಡಿಒ ವಿನೋದಕುಮಾರ ಕುಲಕರ್ಣಿ ತಿಳಿಸಿದ್ದಾರೆ. ಹೊರಗಿನವರು ಗ್ರಾಮ ಪ್ರವೇಶಿಸಿದರೆ ಕೂಡಲೇ ವೈದ್ಯಕೀಯ ಸಿಬ್ಬಂದಿ, ತಹಸೀಲ್ ಸಿಬ್ಬಂದಿ ಅಥವಾ ಪೊಲೀಸ್ ಇಲಾಖೆಗೆ ತಿಳಿಸಬೇಕು ಎಂದು ಪಿಎಸ್ಐ ತಾನಾಜಿ ಬೆಳಕಟ್ಟೆ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts