More

    ಬೆಂಕಿಯ ಕೆನ್ನಾಲಗೆಗೆ ಕಾನನ ಭಸ್ಮ, ದುಷ್ಕೃತ್ಯಕ್ಕೆ ಜೀವ ಸಂಕುಲ ನಾಶ ಅರಣ್ಯದಲ್ಲಿ ನೀರಿನ ವ್ಯವಸ್ಥೆಗೆ ಮನವಿ

    ರವಿ ಎಂ. ಸೂಲಿಬೆಲೆ
    ಕುಡಿಯುವ ನೀರಿಗೆ ಪರದಾಡುವ ಸ್ಥಿತಿ ಎದುರಾದ ಬೆನ್ನಲ್ಲೇ ಬಿಸಿಲ ತಾಪವೂ ಹೆಚ್ಚಾಗಿ ಪ್ರಾಣಿ- ಪಕ್ಷಿಗಳೂ ಬಸವಳಿಯುವಂತಾಗಿದೆ. ಇದರ ನಡುವೆ ಕೆಲವರು ಸ್ವಾರ್ಥಕ್ಕಾಗಿ ಅರಣ್ಯ ಪ್ರದೇಶಗಳಿಗೆ ಬೆಂಕಿ ಇಡುವ ಪ್ರಕರಣ ಹೆಚ್ಚುತ್ತಿದ್ದು, ಕಾನನದ ಜೀವ ಸಂಕುಲಕ್ಕೆ ಮಾರಕವಾಗಿದೆ.
    ಸೂಲಿಬೆಲೆ ಹೋಬಳಿ ವ್ಯಾಪ್ತಿಯಲ್ಲಿ ಎರಡು ಸಾವಿರ ಎಕರೆ ಅರಣ್ಯ ಪ್ರದೇಶವಿದೆ. ಇಲ್ಲಿ ನವಿಲು, ಜಿಂಕೆ, ಮೊಲ, ನರಿ ಸೇರಿ ವಿವಿಧ ರೀತಿಯ ಪ್ರಾಣಿ-ಪಕ್ಷಿಗಳಿವೆ. ಆದರೆ ಅರಣ್ಯ ಪ್ರದೇಶಗಳು ಬೆಂಕಿಗೆ ಆಹುತಿಯಾಗುವ ಪ್ರಮಾಣ ಹೆಚ್ಚುತ್ತಿದ್ದು, ಸಾಕಷ್ಟು ಪ್ರಾಣಿಗಳು ಬೆಂಕಿ ಕೆನ್ನಾಲಿಗೆಗೆ ಬಲಿಯಾಗುವಂತಾಗಿದೆ.

    ಇದಕ್ಕೆ ನಿದರ್ಶನ ಎಂಬಂತೆ ಹೋಬಳಿ ವ್ಯಾಪ್ತಿಯಲ್ಲಿ ಮೂರು ತಿಂಗಳಿನಿಂದ ಅಗ್ನಿಶಾಮಕ ದಳಕ್ಕೆ ಬೆಂಕಿ ನಂದಿಸಲು ಸಾಕಷ್ಟು ಕರೆಗಳು ಹೋಗಿವೆ. ಗಿಡ್ಡಪ್ಪನಹಳ್ಳಿ, ಕಂಬಳಿಪುರ, ಕೆ.ಸತ್ಯವಾರ ಗ್ರಾಮದ ಅರಣ್ಯ ಪ್ರದೇಶದಲ್ಲಿ ಬೆಂಕಿ ಕಾಣಿಸಿಕೊಂಡು ಅಪಾರ ಪ್ರಮಾಣದ ಕಾನನ ಕರಕಲಾಗಿದೆ.

    ಅರಣ್ಯ ಪ್ರದೇಶಗಳಲ್ಲಿ ಮದ್ಯ ಸೇವಿಸಲು ಹೋಗುವವರು ಬೀಡಿ, ಸಿಗರೇಟು ಸೇದಿ ಎಸೆಯುವ ತುಂಡಿನಿಂದಲೂ ಬೆಂಕಿ ತಗುಲುವ ಸಾಧ್ಯತೆ ಇದೆ. ಅರಣ್ಯ ಪ್ರದೇಶದಲ್ಲಿರುವ ಪ್ರಾಣಿಗಳನ್ನು ಬೇಟೆಯಾಡುವ ಉದ್ದೇಶದಿಂದಲೂ ಬೆಂಕಿ ಹಚ್ಚುವ ಆರೋಪ ಕೇಳಿ ಬಂದಿದೆ. ಇಂತಹ ದುಷ್ಕೃತ್ಯದಿಂದ ಬೆಂಕಿ ಹತೋಟಿಗೆ ಸಿಗದೆ ನೂರಾರು ಎಕರೆ ಅರಣ್ಯ ಪ್ರದೇಶ ಆಹುತಿಯಾಗುತ್ತಿದೆ.

    ಸೂಕ್ತ ಅರಿವಿನ ಕೊರತೆ: ಅರಣ್ಯ ರಕ್ಷಣೆಗೆ ಸ್ಥಳೀಯರನ್ನು ಬಳಕೆ ಮಾಡಿಕೊಳ್ಳುವುದು ಅರಣ್ಯ ಇಲಾಖೆ ಜವಾಬ್ದಾರಿ. ಆದರೆ ಅರಣ್ಯದ ಅಂಚಿನಲ್ಲಿ ವಾಸಿಸುವ ಬಹುತೇಕರಿಗೆ ಕಾಡಿಗೆ ಬೆಂಕಿ ಬಿದ್ದಾಗ ಹೇಗೆ ನಂದಿಸಬೇಕು ಎಂಬ ಪ್ರಾಥಮಿಕ ತರಬೇತಿಯೂ ಇಲ್ಲದ ಪರಿಣಾಮ ಸ್ಥಳೀಯರು, ಬೆಂಕಿ ಬಿದ್ದಾಗ ಮೊಬೈಲ್‌ನಲ್ಲಿ ವಿಡಿಯೋ ಮಾಡುತ್ತಾರೆ ಹೊರತು ನಂದಿಸುವ ಕೆಲಸಕ್ಕೆ ಮುಂದಾಗುತ್ತಿಲ್ಲ. ಈ ಬಗ್ಗೆ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಂಡರೆ ಬೆಂಕಿಯ ಕೆನ್ನಾಲಗೆಯಿಂದ ಅಲ್ಪ ಪ್ರಮಾಣದಲ್ಲಾದರೂ ಕಾನನ ರಕ್ಷಣೆ ಸಾಧ್ಯ ಎನ್ನುತ್ತಾರೆ ಪರಿಸರ ಪ್ರೇಮಿಗಳು.

    ಬೇಸಿಗೆ ಪ್ರಾರಂಭದಲ್ಲಿ ಎಚ್ಚೆತ್ತು ಪ್ರಾಣಿಗಳಿಗೆ ನೀರಿನ ದಣಿವು ನೀಗಿಸಿಕೊಳ್ಳಲು ನೀರು ಸಂಗ್ರಹಿಸುವ ರಿಂಗ್‌ಗಳನ್ನು ಅಳವಡಿಸಲಾಗಿದ್ದು, ನೀರನ್ನು ಶೇಖರಿ, ಪ್ರಾಣಿ ಪಕ್ಷಿಗಳಿಗೆ ಅನುಕೂಲ ಮಾಡಿಕೊಡಲಾಗಿದೆ. ಹಾಗೆಯೇ ಬೆಂಕಿ ಪ್ರಕರಣ ತಡೆಗೂ ಮುಂದಾಗಿದ್ದು, ಅರಣ್ಯ ಪ್ರದೇಶದಲ್ಲಿ ಫೈಯರ್‌ಲೈನ್ ಮಾಡಲಾಗಿದ್ದು, ಬೆಂಕಿ ಬಿದ್ದರೂ ಹೆಚ್ಚು ಹಾನಿಯಾಗುವುದಿಲ್ಲ.
    ಕಿರಣ್, ಅರಣ್ಯ ವಲಯಧಿಕಾರಿ

    ಈ ಭಾಗದ ಅರಣ್ಯ ಪ್ರದೇಶಗಳಲ್ಲಿ ಬೆಂಕಿ ಬಿದ್ದಿರುವುದು ಕಣ್ಣಮುಂದಿದೆ. ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕು. ಬೆಂಕಿ ಬಿದ್ದ ಕಾಡುಗಳಲ್ಲಿ ಪ್ರಾಣಿ-ಪಕ್ಷಗಳಿಗೆ ಅನುಕೂಲವಾಗುವಂತೆ ನೀರು, ಆಹಾರದ ವ್ಯವಸ್ಥೆ ಮಾಡಬೇಕು. ಬೆಂಕಿಗೆ ಆಹುತಿಯಾದ ಮರಗಳ ಪುನಶ್ಚೇತನ, ಅಗತ್ಯವಿರುವೆಡೆ ಗಿಡ ನೆಟ್ಟು ಬೆಳೆಸಬೇಕು.
    ರವೀಂದ್ರ, ಕಮ್ಮಸಂದ್ರ ನಿವಾಸಿ

    ಬೇಸಿಗೆ ವೇಳೆ ಪ್ರಾಣಿಗಳಿಗೆ ಆಹಾರ ಕೊರತೆ ಎದುರಾಗುವುದು ಸಹಜ. ಅದನ್ನು ನೀಗಿಸಲು ಹೊಸಕೋಟೆ ತಾಲೂಕಿನಲ್ಲಿ ಬಹುತೇಕ ಗ್ರಾಮಗಳಲ್ಲಿ ಪ್ರತಿವಾರ ಸಂತೆ ನಡೆಯುತ್ತದೆ. ಕೆಲ ತರಕಾರಿ-ಹಣ್ಣುಗಳನ್ನು ಸಂತೆಯಲ್ಲಿ ಬಿಟ್ಟು ಹೋಗುವುದು ಸಾಮಾನ್ಯ. ಅದನ್ನು ಶೇಖರಿಸಿ ಅರಣ್ಯ ಪ್ರದೇಶಗಳಲ್ಲಿ ಇಡುವುದರಿಂದ ಪ್ರಾಣಿಗಳಿಗೆ ಆಹಾರ ಸುಲಭವಾಗಿ ಸಿಗುತ್ತದೆ.
    ಜಿ. ಶ್ರೀನಿವಾಸ್, ಪರಿಸರ ಪ್ರೇಮಿ

    ಬೆಂಕಿ ಬಿದ್ದರೆ ಸಂಪರ್ಕಿಸಿ: ಹೊಸಕೋಟೆ ಆಗ್ನಿಶಾಮಕ ದಳದ ಇಲಾಖೆ ದೂ.ಸಂ. 080-29700255

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts