More

    ಬೃಹತ್ ಉಚಿತ ಆರೋಗ್ಯ ಶಿಬಿರಕ್ಕೆ ಉತ್ತಮ ಸ್ಪಂದನೆ

    ನಂಜನಗೂಡು: ತಾಲೂಕಿನ ಕೋಣನೂರು ಗ್ರಾಮದಲ್ಲಿ ಕೆ.ಎನ್.ಪುಟ್ಟಬುದ್ಧಿ ಫೌಂಡೇಷನ್ ವತಿಯಿಂದ ಭಾನುವಾರ ಆಯೋಜಿಸಿದ್ದ ಬೃಹತ್ ಉಚಿತ ಆರೋಗ್ಯ ಶಿಬಿರಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಯಿತು.

    ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಫೌಂಡೇಷನ್‌ನೊಂದಿಗೆ ಮೈಸೂರಿನ ಆರೋಗ್ಯ ಭಾರತಿ ಹಾಗೂ ಸುಯೋಗ್ ಆಸ್ಪತ್ರೆ ಸಹಯೋಗದಲ್ಲಿ ಆಯೋಜಿಸಿದ್ದ ಶಿಬಿರ ಬೆಳಗ್ಗೆಯಿಂದ ಮಧ್ಯಾಹ್ನದವರೆಗೂ ನಡೆಯಿತು.

    ಶಿಬಿರವನ್ನು ಫೌಂಡೇಷನ್ ಸಂಸ್ಥಾಪಕ ಕೆ.ಎನ್.ಪುಟ್ಟಬುದ್ಧಿ ಉದ್ಘಾಟಿಸಿದರೆ, ವರುಣ ವಿಧಾನಸಭಾ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಶರತ್ ಪುಟ್ಟಬುದ್ಧಿ ಆರೋಗ್ಯ ತಪಾಸಣೆಗೆ ಚಾಲನೆ ಕೊಟ್ಟರು. ಆರೋಗ್ಯ ಭಾರತಿಯ ಡಾ.ಚಂದ್ರಶೇಖರ್ ಮತ್ತು ತಂಡದಿಂದ ಸಾಮಾನ್ಯ ಕಾಯಿಲೆಗಳಿಗೆ ಉಚಿತ ತಪಾಸಣೆ ಹಾಗೂ ಉಚಿತವಾಗಿ ಔಷಧ ವಿತರಿಸುವ ಮೂಲಕ ಜನರಿಗೆ ನೆರವಾಯಿತು.

    ಸುಯೋಗ್ ಆಸ್ಪತ್ರೆಯ ಸ್ತ್ರೀರೋಗ ತಜ್ಞರು, ಮೂಳೆ ರೋಗ ತಜ್ಞರು, ಕಿವಿ, ಮೂಗು ಮತ್ತು ಗಂಟಲು ವೈದ್ಯರು, ಸಾಮಾನ್ಯ ರೋಗ ತಜ್ಞರು ಜನರನ್ನು ತಪಾಸಣೆ ನಡೆಸಿ ಇಸಿಜಿ, ಇಕೋ ಪರೀಕ್ಷೆಯನ್ನು ಸ್ಥಳದಲ್ಲೇ ನಡೆಸುವ ಮೂಲಕ ವೈದ್ಯಕೀಯ ನೆರವು ಹಾಗೂ ಸಲಹೆ ನೀಡಿದರು. ಶಸ್ತ್ರಚಿಕಿತ್ಸೆ ಅಗತ್ಯವಿರುವವರಿಗೆ ಉಚಿತವಾಗಿ ಆರೋಗ್ಯ ನೆರವು ಕೊಡಿಸುವುದಾಗಿ ಶರತ್ ಪುಟ್ಟಬುದ್ಧಿ ಭರವಸೆ ನೀಡಿದರು.

    ಬಾಲಾಜಿ ಐಕೇರ್ ಮತ್ತು ಆಪ್ಟಿಕಲ್ಸ್‌ನ ಎಚ್.ಆರ್.ಕವಿತಾ ತಂಡ ಹಿರಿಯ ನಾಗರಿಕರ ನೇತ್ರ ತಪಾಸಣೆ ನಡೆಸಿ ಕನ್ನಡಕ ಅಗತ್ಯವಿರುವವರಿಗೆ ಸ್ಥಳದಲ್ಲೇ ಉಚಿತವಾಗಿ ವಿತರಿಸಿತು. ಇನ್ನು ಡಾ.ಹೇಮಂತ್‌ಕುಮಾರ್ ತಂಡ ಬಿಪಿ ಹಾಗೂ ಡಯಾಬಿಟಿಸ್ ತಪಾಸಣೆ ನಡೆಸಿ ಅಗತ್ಯ ಸಲಹೆ ಮಾರ್ಗದರ್ಶನ ನೀಡಿತು. ಗ್ರಾಮ ಒನ್ ವತಿಯಿಂದ ಆಯುಷ್ಮಾನ್ ಭಾರತ್ ಉಚಿತ ನೋಂದಣಿ ಮಾಡಿಸುವ ಮೂಲಕ ಸರ್ಕಾರದ ಆರೋಗ್ಯ ಸೇವೆ ಕೊಡಿಸುವಲ್ಲಿ ಶರತ್ ನೆರವಾದರು.

    ಶಿಬಿರಕ್ಕೆ ಕೋಣನೂರು ಗ್ರಾಮಸ್ಥರು ಸೇರಿದಂತೆ ಸುತ್ತಲಿನ ಪಿ.ಮರಳ್ಳಿ, ಚುಂಚನಹಳ್ಳಿ, ಹನುಮನಪುರ, ದಾಸನೂರು ಸೇರಿದಂತೆ ಹಲವಾರು ಗ್ರಾಮಗಳಿಂದ ಆಗಮಿಸಿದ 350ಕ್ಕೂ ಹೆಚ್ಚು ಜನರು ಶಿಬಿರದ ಸದುಪಯೋಗ ಪಡೆದುಕೊಂಡರು.

    ಅಗತ್ಯ ನೆರವು ನೀಡಲು ಸದಾ ಬದ್ಧ: ವರುಣ ವಿಧಾನಸಭಾ ಕ್ಷೇತ್ರ ಪ್ರವಾಸ ಮಾಡಿದ ಸಂದರ್ಭದಲ್ಲಿ ಪಟ್ಟಣ, ನಗರ ಪ್ರದೇಶದಿಂದ ದೂರವಿರುವ ಗ್ರಾಮಗಳ ಜನರ ಶೋಚನೀಯ ಸ್ಥಿತಿ ಕಂಡು ನೆರವಾಗಬೇಕೆಂಬ ಸದುದ್ದೇಶದಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗಿದೆ ಎಂದು ಶರತ್ ಪುಟ್ಟಬುದ್ಧಿ ತಿಳಿಸಿದರು.

    ವರುಣ ಕ್ಷೇತ್ರದ ಕಟ್ಟ ಕಡೆಯ ಗ್ರಾಮಗಳ ಜನರು ಪಟ್ಟಣಕ್ಕೆ ಬರಬೇಕೆಂದರೆ ಸಾಕಷ್ಟು ದೂರ ಆಗುತ್ತದೆ. ಇನ್ನು ಈ ಭಾಗದಲ್ಲಿ ಆರೋಗ್ಯ ಸೇವಾ ಕೇಂದ್ರಗಳು ಹೆಚ್ಚು ಕಂಡುಬರದಿರುವುದರಿಂದ ಜನರು ಕೂಡ ಆರೋಗ್ಯದ ಬಗ್ಗೆ ಲಕ್ಷ್ಯವಹಿಸಲು ಸಾಧ್ಯವಾಗದೆ ಪರಿತಪಿಸುತ್ತಿರುವುದನ್ನು ಕಂಡು ಜನರ ಸಂಕಷ್ಟಕ್ಕೆ ನೆರವಾಗುವ ಸಲುವಾಗಿ ಜನರ ಬಳಿಗೆ ಆರೋಗ್ಯ ಸೇವೆಯನ್ನು ಕೊಡಿಸುವ ಉದ್ದೇಶ ನಮ್ಮದಾಗಿದೆ ಎಂದರು.

    ತಂದೆಯ ರಾಜಕೀಯ ಜೀವನವನ್ನು ಹತ್ತಿರದಿಂದ ಬಲ್ಲ ನಾನು ಸುಮಾರು 17 ವರ್ಷಗಳ ಕಾಲ ವಿದೇಶದಲ್ಲಿ ಕೆಲಸ ಮಾಡಿ ಇದೀಗ ನಮ್ಮ ನಾಡಿನ ಜನರ ಸೇವೆ ಮಾಡುವ ಸಲುವಾಗಿ ಸ್ವದೇಶಕ್ಕೆ ಮರಳಿದ್ದೇನೆ. ವರುಣ ಕ್ಷೇತ್ರದಲ್ಲಿ ಹೆಚ್ಚು ಒಡನಾಟ ಹೊಂದಿರುವ ನಾನು ಮುಂದಿನ ದಿನಗಳಲ್ಲಿ ಪುಟ್ಟಬುದ್ಧಿ ಫೌಂಡೇಷನ್ ವತಿಯಿಂದ ಮತ್ತಷ್ಟು ಜನೋಪಯೋಗಿ ಸೇವಾ ಕಾರ್ಯ ಮಾಡುವ ಇಂಗಿತವಿದೆ ಎಂದು ತಿಳಿಸಿದರು.

    ಕೆ.ಎನ್.ಪುಟ್ಟಬುದ್ಧಿ ಮಾತನಾಡಿ, ವಿದೇಶದಲ್ಲಿ ಕೆಲಸ ಮಾಡಿಕೊಂಡಿದ್ದ ನನ್ನ ಪುತ್ರ ಅಲ್ಲಿಂದ ವಾಪಾಸ್ ಬಂದು ಜನಸೇವೆ ಮಾಡುವ ಕಾಯಕದಲ್ಲಿ ತೊಡಗಿಸಿಕೊಳ್ಳುವ ಬಗ್ಗೆ ಆಸಕ್ತಿ ತಳೆದಿರುವುದು ನನ್ನ ಎಲ್ಲಾ ಆಶಯಗಳನ್ನು ಸಾಕಾರಗೊಳಿಸುವ ಎಲ್ಲ ಲಕ್ಷಣಗಳೂ ಅವರಲ್ಲಿ ಗೋಚರಿಸುತ್ತಿವೆ. ಜನರ ಮಧ್ಯೆ ಸೇವೆ ಮಾಡುವ ಅವಕಾಶ ಅವರಿಗೆ ಒಲಿದು ಬರಲಿ ಎಂದು ಆಶಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts