More

    ಬುಧವಾರ ಸಿಎಂಗೆ 30 ಪುಟಗಳ ವರದಿ ಪುಸ್ತಕ ಸಲ್ಲಿಕೆ

    ಮೈಸೂರು: ಮೋದಿ ಯುಗ ಉತ್ಸವ, ಉದ್ಯೋಗ ಮೇಳ, ವಸ್ತು ಪ್ರದರ್ಶನ, ಸುವರ್ಣ ಆಜಾದ್ ಸೇರಿದಂತೆ ಕೃಷ್ಣರಾಜ ವಿಧಾನಸಭಾ ಕ್ಷೇತ್ರದಲ್ಲಿ ಒಂದು ವರ್ಷದಲ್ಲಿ ಕೈಗೊಳ್ಳಲಾದ ಕಾರ್ಯಕ್ರಮಗಳು ಯಶಸ್ವಿಯಾಗಿವೆ. ಈ ಕುರಿತು 30 ಪುಟಗಳ ವರದಿ ಪುಸ್ತಕ ಹೊರತರಲಾಗಿದ್ದು, ಸಮರ್ಥ ಕರ್ನಾಟಕ ನಿರ್ಮಾಣಕ್ಕಾಗಿ ಇದನ್ನು ಜ.12ರಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಸಲ್ಲಿಸಲಾಗುವುದು ಎಂದು ಶಾಸಕ ಎಸ್.ಎ.ರಾಮದಾಸ್ ತಿಳಿಸಿದರು.


    ಕೇಂದ್ರ ಸರ್ಕಾರ ನವೋದ್ಯಮಿಗಳನ್ನು ಸೃಷ್ಟಿಸಲು ಸ್ಟೆಪ್, ಸ್ಕಿಲ್ ಇಂಡಿಯಾ, ಸ್ಟಾರ್ಟ್‌ಅಪ್ ಇಂಡಿಯಾ ಸೇರಿದಂತೆ ಹಲವು ಯೋಜನೆಗಳನ್ನು ಅನುಷ್ಠಾನಗೊಳಿಸಿವೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸುಮಾರು 182 ಯೋಜನೆಗಳ ಮಾಹಿತಿ ಕುರಿತ ಜಾಲತಾಣವನ್ನು ರೂಪಿಸಲಾಗಿದ್ದು, ಮುಖ್ಯಮಂತ್ರಿ ಇದರ ಲೋಕಾರ್ಪಣೆ ಮಾಡಲಿದ್ದಾರೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.


    ವಿವಿಧ ಇಲಾಖೆಗಳ ಸಹಯೋಗದಲ್ಲಿ ನಗರದಲ್ಲಿ ನಾಲ್ಕು ದಿನಗಳ ಕಾಲ ಆಯೋಜಿಸಿದ್ದ ಬೃಹತ್ ಉದ್ಯೋಗ, ಕೌಶಲಾಭಿವೃದ್ಧಿ, ಸ್ವಯಂಉದ್ಯೋಗ ನೋಂದಣಿ ಕಾರ್ಯಕ್ರಮ ಯಶಸ್ವಿಯಾಗಿದೆ. ನಾಲ್ಕು ದಿನ ನಡೆದ ನೋಂದಣಿ ಕಾರ್ಯಕ್ರಮದಲ್ಲಿ ಒಟ್ಟು 65,000ಕ್ಕೂ ಹೆಚ್ಚು ಜನರು ಭಾಗವಹಿಸಿದ್ದು, ಈ ಪೈಕಿ 27,556 ಜನರು ನೋಂದಣಿ ಮಾಡಿಕೊಂಡಿದ್ದಾರೆ. ಇದರಲ್ಲಿ ಹೆಚ್ಚು ಜನ ಆಡಳಿತ ಸೇವೆಗೆ ಹೆಚ್ಚು ಪ್ರಾಮುಖ್ಯತೆ ಕೊಟ್ಟಿದ್ದು, ಪ್ರಮುಖವಾಗಿ ಐಎಎಸ್, ಐಎಫ್‌ಎಸ್, ಐಆರ್‌ಎಸ್ ಹಾಗೂ ಪೊಲೀಸ್ ಇಲಾಖೆಗಳಲ್ಲಿ ಸೇವೆ ಸಲ್ಲಿಸಲು ಬಗ್ಗೆ ಮಾಹಿತಿ ನೀಡಿದ್ದಾರೆ. ಚಾರ್ಟರ್ಡ್ ಅಕೌಂಟೆಂಟ್, ವೈದ್ಯಕೀಯ ಹಾಗೂ ಅರೆ ವೈದ್ಯಕೀಯ, ತಾಂತ್ರಿಕ ಮತ್ತು ಅರೆ ತಾಂತ್ರಿಕ ಸೇವೆ, ವಿಜ್ಞಾನ ಸಂಶೋಧನೆ, ಉಪನ್ಯಾಸ, ಸಾರ್ವಜನಿಕ ಸೇವೆ ಮತ್ತು ರಾಜಕೀಯ ಹೀಗೆ ವಿವಿಧ ವೃತ್ತಿ ಮತ್ತು ಕೌಶಲಗಳ ಅವಶ್ಯಕತೆ ಇದೆ ಎಂದು ಮೇಳದಲ್ಲಿ ಭಾಗವಹಿಸಿದ್ದವರು ಮಾಹಿತಿ ನೀಡಿದ್ದಾರೆ. ಹಾಗಾಗಿ, ಮಕ್ಕಳ ಭವಿಷ್ಯದ ದೃಷ್ಟಿಯಿಂದ ಹಂತ ಹಂತವಾಗಿ ಕೌಶಲ ಅಭಿವೃದ್ಧಿಪಡಿಸುವ ಯೋಜನೆಯನ್ನು ತಯಾರಿಸಲಾಗುವುದು ಎಂದರು.


    ಸ್ವಉದ್ಯೋಗ, ಕೌಶಲಾಭಿವೃದ್ಧಿಗಾಗಿ ನೋಂದಾಯಿಸಿಕೊಂಡ ಎಲ್ಲರಿಗೂ ಮಾಹಿತಿ ನೀಡಲಾಗಿದೆ. ವಿದ್ಯಾರ್ಥಿಗಳ, ಆಕಾಂಕ್ಷಿಗಳ, ಅಪೇಕ್ಷೆಗಳ ದತ್ತಾಂಶ ಸಂಗ್ರಹಿಸಲಾಗಿತ್ತು. ಇದನ್ನು ಆಧರಿಸಿ ಸರ್ಕಾರಗಳು ನೀತಿ ರೂಪಿಸಬಹುದು. 10 ವರ್ಷದ ಮುನ್ನೋಟವನ್ನು ಮೇಳವು ನೀಡಿದ್ದು, ಜಿಲ್ಲೆಯ ಎಲ್ಲ ತಾಲ್ಲೂಕು ಕೇಂದ್ರಗಳಿಗೂ ಮೇಳವನ್ನು ವಿಸ್ತರಿಸಲಾಗುವುದು ಎಂದರು.


    ಮುಡಾ ಅಧ್ಯಕ್ಷ ಎಚ್.ವಿ.ರಾಜೀವ್, ಬಿಜೆಪಿ ಗ್ರಾಮಾಂತರ ಘಟಕದ ಅಧ್ಯಕ್ಷೆ ಮಂಗಳಾ ಸೋಮಶೇಖರ್, ನಗರ ಘಟಕದ ಅಧ್ಯಕ್ಷ ಟಿ.ಎಸ್.ಶ್ರೀವತ್ಸ, ಪ್ರಧಾನ ಕಾರ್ಯದರ್ಶಿ ವಾಗೀಶ್, ಕೆ.ಆರ್.ಕ್ಷೇತ್ರದ ಬಿಜೆಪಿ ಅಧ್ಯಕ್ಷ ಎಂ.ವಡಿವೇಲು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts