More

    ಬಿಜೆಪಿಯಲ್ಲಿ ಹಿರಿಯರಿಗೆ ಪರೀಕ್ಷೆಯ ಕಾಲ

    ಹುಬ್ಬಳ್ಳಿ : ಬಿಜೆಪಿಯಲ್ಲಿ ಮೊದಲಿನ ದಿನಗಳು ಉಳಿದಿಲ್ಲ. ಹಿರಿಯರಿಗೂ ಪರೀಕ್ಷೆಯ ಕಾಲ ಬಂದಿದೆ. ಇಂತಹ ಸಂದರ್ಭದಲ್ಲಿ ಹಿರಿಯ ಮುಖಂಡರು ಕಂಗೆಡದೆ ತಮ್ಮ ಅನುಭವವನ್ನು ಪಕ್ಷ ಸಂಘಟನೆಗೆ ನೀಡಬೇಕು. ದೇಶದ ಹಿತದೃಷ್ಟಿಯಿಂದ ಎಲ್ಲವನ್ನೂ ಸರಿಪಡಿಸಿಕೊಂಡು ಹೋಗಬೇಕು ಎಂದು ಮಾಜಿ ಸಚಿವ ಎ. ರಾಮದಾಸ್ ಹೇಳಿದರು.

    ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಚಿವನಾಗಿ ನಾನೂ ಉತ್ತಮ ಕೆಲಸ ಮಾಡಿದ್ದೆ. ಆದರೆ, ಪಕ್ಷದ ಸೂಚನೆ ಮೇರೆಗೆ ಬೇರೆಯವರಿಗೆ ಅವಕಾಶ ಬಿಟ್ಟುಕೊಟ್ಟೆ ಎಂದರು.

    ನಮಗೆ ವೈಯಕ್ತಿಕ ಅಧಿಕಾರಕ್ಕಿಂತ ದೇಶದ ಅಭಿವೃದ್ಧಿ ಮುಖ್ಯ. ಹೀಗಾಗಿ, ಪಕ್ಷದ ಸೂಚನೆಯನ್ನು ಪ್ರತಿಯೊಬ್ಬರೂ ಪಾಲಿಸಬೇಕು ಎಂದರು.

    ದೇಶದ ಸುರಕ್ಷತೆ ಮತ್ತು ಹಿತದೃಷ್ಠಿಯಿಂದ ಈ ಬಾರಿಯೂ ನರೇಂದ್ರ ಮೋದಿ ಪ್ರಧಾನಿ ಆಗಬೇಕು. ನೆರೆಯ ಪಾಕಿಸ್ತಾನ, ಚೀನಾದಂತಹ ದೇಶಗಳು ಭಾರತವನ್ನು ಛಿದ್ರಗೊಳಿಸಲು ಕಾಯುತ್ತಿವೆ. ಇಂತಹ ಸಂದರ್ಭದಲ್ಲಿ ಏಕತೆ ಮುಖ್ಯ ಎಂದು ತಿಳಿಸಿದರು.

    ಜೆಡಿಎಸ್​ನೊಂದಿಗಿನ ಮೈತ್ರಿಯಿಂದಾಗಿ ಬಿಜೆಪಿಗೆ ಮತ್ತಷ್ಟು ಬಲ ಬಂದಿದೆ. ಹಳೇ ಮೈಸೂರು ಭಾಗದಲ್ಲಿ ಈ ಮೈತ್ರಿ ಸಾಕಷ್ಟು ಲಾಭ ತಂದುಕೊಡಲಿದೆ ಎಂದ ರಾಮದಾಸ್, ಮೈಸೂರಿನಲ್ಲಿ ಯಾರೇ ಸ್ಪರ್ಧಿಸಿದರೂ ಬಿಜೆಪಿ ಗೆಲುವು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಪಿಎಂ ಸ್ವನಿಧಿಯಿಂದ ಪಿಎಂ ಸಮೃದ್ಧಿವರೆಗಿನ 8 ಯೋಜನೆಗಳ ಪ್ರಯೋಜನಗಳು ಕೆಳಹಂತದವರೆಗಿನ ಎಲ್ಲ 25 ವಿಭಾಗದ ಫಲಾನುಭವಿಗಳಿಗೆ ಲಭಿಸುತ್ತಿವೆ. ಈ ಯೋಜನೆಯಡಿ ಇದುವರೆಗೆ 780 ಕೋಟಿ ರೂ. ಸಹಾಯಧನ ನೀಡಲಾಗಿದೆ. ಕರ್ನಾಟಕದಲ್ಲಿ ಈ ಯೋಜನೆ ಶೇ. 100ರಷ್ಟು ಗುರಿ ಸಾಧಿಸಿದ್ದು, ಹುಬ್ಬಳ್ಳಿ-ಧಾರವಾಡ ಶೇ. 110ರಷ್ಟು ಗುರಿ ಸಾಧಿಸಿದೆ. ಅವಳಿ ನಗರದಲ್ಲಿ 24 ಸಾವಿರ ಕುಟುಂಬಗಳು ಈ ಯೋಜನೆಯ ಲಾಭ ಪಡೆದುಕೊಂಡಿವೆ ಎಂದು ತಿಳಿಸಿದರು.

    ಅತ್ಯುತ್ತಮ ಸಾಧನೆ ಮಾಡಿದ ಹುಬ್ಬಳ್ಳಿ-ಧಾರವಾಡಕ್ಕೆ ಸ್ಪಾರ್ಕ್ ಅವಾರ್ಡ್ ನೀಡಲು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಲಾಗುವುದು ಎಂದು ಹೇಳಿದರು.

    ಈ ಯೋಜನೆಗಳಿಗಾಗಿ ಕೇಂದ್ರ ಸರ್ಕಾರ ಕರ್ನಾಟಕಕ್ಕೆ 13.50 ಕೋಟಿ ರೂ. ಬಿಡುಗಡೆ ಮಾಡಿತ್ತು. ಇದುವರೆಗೆ 6 ಕೋಟಿ ರೂ. ಖರ್ಚಾಗಿದೆ. ಫೆಬ್ರುವರಿಯಲ್ಲಿ ಮತ್ತೆ 13.50 ಕೋಟಿ ರೂ. ಬಿಡುಗಡೆಗೊಳಿಸುವ ನಿರೀಕ್ಷೆ ಇದೆ ಎಂದರು.

    ವಿಶ್ವಕರ್ಮ ಯೋಜನೆ ಅಡಿ ದೇಶದಲ್ಲಿ 30 ಲಕ್ಷ ಜನರಿಗೆ ಕುಲಕಸಬು ಕೌಶಲ್ಯ ಹೆಚ್ಚಿಸಲು ತರಬೇತಿ ನೀಡುವುದಕ್ಕಾಗಿ 13 ಸಾವಿರ ಕೋಟಿ ರೂ. ಮೀಸಲಿಡಲಾಗಿದೆ. ಇದಕ್ಕಾಗಿ ದೇಶದಾದ್ಯಂತ 60 ಲಕ್ಷ ಜನರು ಅರ್ಜಿ ಸಲ್ಲಿಸಿದ್ದು, ಕರ್ನಾಟಕದಲ್ಲಿ 19 ಲಕ್ಷ ಅರ್ಜಿಗಳು ಸಲ್ಲಿಕೆಯಾಗಿವೆ. ಜಿಲ್ಲಾಧಿಕಾರಿ ಅಧ್ಯಕ್ಷತೆಯ ಸಮಿತಿಯು ಅರ್ಜಿದಾರರನ್ನು ಆಯ್ಕೆ ಮಾಡಲಿದೆ ಎಂದು ಹೇಳಿದರು.

    ಹು-ಧಾ ಮಹಾನಗರ ಜಿಲ್ಲಾ ಅಧ್ಯಕ್ಷ ಸಂಜಯ ಕಪಟಕರ, ಪಾಲಿಕೆ ಸದಸ್ಯರಾದ ತಿಪ್ಪಣ್ಣ ಮಜ್ಜಗಿ, ರಾಮಣ್ಣ ಬಡಿಗೇರ, ವಿಜಯಾನಂದ ಶೆಟ್ಟಿ, ವಕ್ತಾರ ರವಿ ನಾಯಕ ಸುದ್ದಿಗೋಷ್ಠಿಯಲ್ಲಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts