More

    ಬೀರೂರು ಪುರಸಭೆ ಸಭಾಂಗಣಕ್ಕೆ ಯೋಧ ಜಿ.ಶ್ರೀನಿವಾಸ್ ಹೆಸರು

    ಬೀರೂರು: ಸ್ವಾತಂತ್ರ್ಯ ಅಮೃತಮಹೋತ್ಸವ ಅಂಗವಾಗಿ ಪುರಸಭೆ ಸಭಾಂಗಣಕ್ಕೆ ಹುತಾತ್ಮ ವೀರಯೋಧ ಜಿ.ಶ್ರೀನಿವಾಸ್ ಎಂದು ನಾಮಕರಣ ಮಾಡಲು ಸದಸ್ಯರು ಸಮ್ಮತಿ ಸೂಚಿಸಿದರು.

    ಪುರಸಭೆಯಲ್ಲಿ ಶುಕ್ರವಾರ ಆಯೋಜಿಸಿದ್ದ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷ ಎಂ.ಪಿ.ಸುದರ್ಶನ್ ಮಾತನಾಡಿ, ಪ್ರತಿ ಬಾರಿಯ ಸಭೆಯಲ್ಲೂ ಇದೇ ವಿಷಯದ ಬಗ್ಗೆ ಚರ್ಚೆಯಾದರೂ ನಿರ್ಧಾರ ತೆಗೆದುಕೊಂಡಿಲ್ಲ. ಬೀರೂರಿನಲ್ಲಿ ಹುಟ್ಟಿ ಬೆಳೆದ ವೀರಯೋಧ ಜಿ.ಶ್ರಿನಿವಾಸ್ ಅವರ ಹೆಸರನ್ನು ಸಭಾಂಗಣಕ್ಕೆ ನಾಮಕರಣ ಮಾಡಲು ಈಗ ಸರಿಯಾದ ಸಮಯ. ದೇಶಕ್ಕಾಗಿ ಪ್ರಾಣ ಅರ್ಪಿಸಿದ ಮಹಾನ್ ವೀರಯೋಧನ ಹೆಸರು ಸೂಕ್ತವಾಗಿದೆ ಎಂದರು.

    ರೋಹಿಣಿ ವಿನಾಯಕ್ ಮಾತನಾಡಿ, ಐದಾರು ತಿಂಗಳಿಗೊಮ್ಮೆ ಸಭೆ ಕರೆದರೆ ವಾರ್ಡ್​ಗಳ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವುದು ಹೇಗೆ ಎಂದು ಪ್ರಶ್ನಿಸಿದರು. ನೀರುಗಂಟಿಗಳು ಸರಿಯಾದ ಸಮಯಕ್ಕೆ ನೀರು ಬಿಡದೆ ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದ್ದಾರೆ. ಜನರು ಅವರ ಮೇಲಿನ ಕೋಪವನ್ನು ಸದಸ್ಯರ ಮೇಲೆ ತೀರಿಸುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಹೊಸ ಮನೆಗಳ ನಿರ್ವಣಕ್ಕೂ ಮುನ್ನ ಸರ್ಕಾರದ ನಿಯಮದಂತೆ ಮೂರು ಅಡಿ ಜಾಗ ಕಡ್ಡಾಯವಾಗಿ ಬಿಡುವಂತೆ ಕಾನೂನು ರೂಪಿಸಬೇಕು ಎಂದು ಸಲಹೆ ನೀಡಿದರು.

    ಎಂ.ಪಿ.ಸುದರ್ಶನ್ ಮಾತನಾಡಿ, ಲೆಕ್ಕಪತ್ರದ ವರದಿ ತಯಾರಾಗಿಲ್ಲದ ಕಾರಣ ಎರಡು ತಿಂಗಳಿಗೊಮ್ಮೆ ಸಭೆ ಕರೆಯಲು ಆಗಿರಲಿಲ್ಲ. ಮುಂದೆ ಎರಡು ತಿಂಗಳಿಗೊಮ್ಮೆ ಸಭೆ ನಡೆಸಲಾಗುವುದು. ಭಾಗವತ್​ನಗರ ಬಡಾವಣೆಗೆ ಅನುದಾನ ಹಂಚಿಕೆ ಮಾಡಲಾಗಿದೆ. ಮಳೆಗಾಲ ಆರಂಭವಾಗಿ ರಸ್ತೆಗಳು ಹದಗೆಟ್ಟಿವೆ. ಮಳೆ ಕಡಿಮೆಯಾದ ಬಳಿಕ ತಾತ್ಕಾಲಿಕವಾಗಿ ಗುಂಡಿ ಮುಚ್ಚಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

    ಬಿ.ಕೆ.ಶಶಿಧರ್ ಮಾತನಾಡಿ, ಬೀರೂರು-ದಾವಣಗೆರೆ ರಸ್ತೆ ಅಗಲೀಕರಣದ ವೇಳೆ ಕೆ-ಶಿಪ್​ನವರು ನೀಡಿದ ಪರಿಹಾರ ಪಡೆದ ಕೆಲವರು ಅದೇ ಜಾಗದಲ್ಲಿ ಅನಧಿಕೃತ ಕಟ್ಟಡ, ಅಂಗಡಿ ಶೆಡ್, ತುಡಕೆಮನೆಗಳನ್ನು ನಿರ್ವಿುಸಿಕೊಂಡು ಪಾದಚಾರಿಗಳಿಗೂ ಸಮಸ್ಯೆ ಉಂಟುಮಾಡುತ್ತಿದ್ದಾರೆ. ರಸ್ತೆಯಲ್ಲಿರುವ 8 ಯುಜಿಡಿ ಮ್ಯಾನ್​ಹೋಲ್​ಗಳು ಕುಸಿದಿದ್ದು ಅಲ್ಲಲ್ಲಿ ಬ್ಯಾರಿಕೇಡ್ ಹಾಕಲಾಗುತ್ತಿದೆ. ಇದರ ಬಗ್ಗೆ ಪುರಸಭೆ ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts