More

    ಬೀಗ ಹಾಕಿಕೊಂಡೇ ಇರುವ ಶೌಚಗೃಹ

    ರಾಣೆಬೆನ್ನೂರ: ಸಾರ್ವಜನಿಕರ ಅನುಕೂಲಕ್ಕಾಗಿ ನಗರದ ಮೇಡ್ಲೇರಿ ರಸ್ತೆಯ ಕೆಎಚ್​ಬಿ ಕಾಲನಿ ಬಳಿ ನಗರಸಭೆ ವತಿಯಿಂದ ಸಾರ್ವಜನಿಕ ಶೌಚಗೃಹ ನಿರ್ವಿುಸಲಾಗಿದೆ. ಆದರೆ ಈವರೆಗೂ ಶೌಚಗೃಹ ಬಳಕೆಗೆ ಮುಕ್ತವಾಗದಿರುವುದು ವಿಪರ್ಯಾಸದ ಸಂಗತಿ.

    ಸ್ವಚ್ಛ ಭಾರತ ಅಭಿಯಾನದಡಿ 2016-17ನೇ ಸಾಲಿನಲ್ಲಿ ಶೌಚಗೃಹ ನಿರ್ವಿುಸಲಾಗಿದೆ. ಆರಂಭದಲ್ಲಿ ಖಾಸಗಿಯವರಿಗೆ ಗುತ್ತಿಗೆ ನೀಡಿ, ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸಲಾಗಿತ್ತು. ಆದರೆ ಕೆಲವರು ಹಣ ನೀಡಿ ಶೌಚಗೃಹ ಬಳಕೆ ಮಾಡಲು ವಿರೋಧ ವ್ಯಕ್ತಪಡಿಸಿದ್ದರು. ಇದರಿಂದಾಗಿ ಗುತ್ತಿಗೆದಾರರು ಬಿಟ್ಟು ಹೋಗಿದ್ದಾರೆ. ಇದಾಗಿ ಎರಡು ಮೂರು ವರ್ಷ ಕಳೆದರೂ ಮರಳಿ ಶೌಚಗೃಹ ಆರಂಭಿಸುವ ಗೋಜಿಗೆ ನಗರಸಭೆ ಮುಂದಾಗಿಲ್ಲ.

    ಮೇಡ್ಲೇರಿ ರಸ್ತೆ ಮಾರ್ಗವಾಗಿ ಹಲವಾರು ಗ್ರಾಮಗಳಿಗೆ ಸಂಪರ್ಕವಿದೆ. ನಿತ್ಯವೂ ಸಾವಿರಾರು ಜನ ಈ ರಸ್ತೆ ಮಾರ್ಗವಾಗಿ ಓಡಾಡುತ್ತಾರೆ. ಶೌಚಗೃಹದ ಪಕ್ಕದಲ್ಲೇ ಕೆಎಚ್​ಬಿ ಕಾಲನಿ ಇರುವುದರಿಂದ ಅಲ್ಲಿನ ನಿವಾಸಿಗಳಿಗೂ ಶೌಚಗೃಹದ ಅವಶ್ಯಕತೆಯಿದೆ. ಶೌಚಗೃಹಕ್ಕೆ ಬೇಕಾದ ನೀರಿನ ವ್ಯವಸ್ಥೆ ಸಮರ್ಪಕವಾಗಿದೆ. ಆದರೆ ಶೌಚಗೃಹಕ್ಕೆ ಬೀಗ ಹಾಕಿರುವ ಕಾರಣ ಜನತೆ ಅಕ್ಕಪಕ್ಕದ ಸ್ಥಳಗಳನ್ನು ಶೌಚಕ್ಕೆ ಬಳಸಬೇಕಾದ ಅನಿವಾರ್ಯತೆ ಎದುರಾಗಿದೆ.

    ಶೌಚಗೃಹವನ್ನು ಸಾರ್ವಜನಿಕರಿಗೆ ಮುಕ್ತಗೊಳಿಸುವಂತೆ ನಗರಸಭೆ ಅಧಿಕಾರಿಗಳಿಗೆ ಹಲವಾರು ಬಾರಿ ಮನವಿ ಮಾಡಿದರೂ ಯಾರೋಬ್ಬರು ಇತ್ತ ಕಡೆ ತಿರುಗಿ ನೋಡಿಲ್ಲ. ಹೀಗಾಗಿ ಲಕ್ಷಾಂತರ ರೂ. ಖರ್ಚು ಮಾಡಿ ನಿರ್ವಿುಸಿದ ಶೌಚಗೃಹ ಪ್ರಯೋಜನಕ್ಕೆ ಬಾರದ ಸ್ಥಿತಿಯಲ್ಲಿದೆ ಎಂಬುದು ಸ್ಥಳೀಯರ ಆರೋಪವಾಗಿದೆ.

    ಕಳೆದ ತಿಂಗಳು ಮೇಡ್ಲೇರಿ ರಸ್ತೆಯ ರಾಣೆಬೆನ್ನೂರ ನಗರ ದೇವತೆ ಚೌಡೇಶ್ವರಿ ದೇವಿಯ ಜಾತ್ರಾಮಹೋತ್ಸವದ ನಿಮಿತ್ತ 5 ದಿನಗಳ ಕಾಲ ತಾತ್ಕಾಲಿಕವಾಗಿ ಶೌಚಗೃಹ ತೆಗೆಯಲಾಗಿತ್ತು. ಜಾತ್ರೆ ಮುಗಿದ ಬಳಿಕ ಮತ್ತೇ ಬೀಗ ಜಡಿಯಲಾಗಿದೆ. ಇದರಿಂದಾಗಿ ಸಾರ್ವಜನಿಕರು ಮಲಮೂತ್ರ ವಿಸರ್ಜನೆಗೆ ಬಯಲು ಪ್ರದೇಶವನ್ನೇ ಆಶ್ರಯಿಸುವಂತಾಗಿದೆ. ಆದ್ದರಿಂದ ನಗರಸಭೆ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಂಡು ಶೌಚಗೃಹಕ್ಕೆ ಹಾಕಿದ ಬೀಗ ತೆರೆಯಬೇಕು. ಸಾರ್ವಜನಿಕರ ಬಳಕೆಗೆ ಶೌಚಗೃಹ ಮುಕ್ತಗೊಳಿಸಬೇಕು ಎಂಬುದು ಜನರ ಆಗ್ರಹವಾಗಿದೆ.

    ಮೇಡ್ಲೇರಿ ರಸ್ತೆಯ ಶೌಚಗೃಹವನ್ನು ಪೇ ಆಂಡ್ ಯುಸ್ ಆಧಾರದ ಮೇಲೆ ಬಿಹಾರದವರಿಗೆ ಗುತ್ತಿಗೆ ನೀಡಲಾಗಿತ್ತು. ಆದರೆ ಜನತೆ ಹಣ ಕೊಟ್ಟು ಬಳಕೆ ಮಾಡಲು ವಿರೋಧ ವ್ಯಕ್ತಪಡಿಸಿದರು. ಇದರಿಂದ ಗುತ್ತಿಗೆದಾರನಿಗೆ ಆರ್ಥಿಕವಾಗಿ ತೊಂದರೆ ಎದುರಾಗಿ ಆತ ಬಿಟ್ಟು ಹೋದ. ಚೌಡೇಶ್ವರಿ ದೇವಿಯ ಜಾತ್ರೆ ನಿಮಿತ್ತ ತಾತ್ಕಾಲಿಕವಾಗಿ ಶೌಚಗೃಹಕ್ಕೆ ಹಾಕಿದ ಬೀಗ ತೆರೆಯಲಾಗಿತ್ತು. ನಿರ್ವಹಣೆ ಕೊರತೆಯಿಂದ ಮತ್ತೇ ಬೀಗ ಹಾಕಲಾಗಿದೆ. ಈಗ ಬೇರೆಯವರಿಗೆ ಟೆಂಡರ್ ನೀಡಿ, ಪುನಃ ಆರಂಭಿಸಲು ಕ್ರಮ ಕೈಗೊಳ್ಳಲಾಗುವುದು.
    | ಡಾ. ಎನ್. ಮಹಾಂತೇಶ, ನಗರಸಭೆ ಆಯುಕ್ತ

    ಶೌಚಗೃಹಕ್ಕೆ ಬೀಗ ಹಾಕಿದ್ದರಿಂದ ಸುತ್ತಲಿನ ಜನರಿಗೆ ತೀವ್ರ ತೊಂದರೆ ಉಂಟಾಗಿದೆ. ಬೀಗ ಹಾಕಿಯೇ ಇಡುವುದಾದರೆ ಅದನ್ನು ನಿರ್ವಿುಸಿಯಾದರೂ ಏನು ಪ್ರಯೋಜನ. ನಗರಸಭೆ ಅಧಿಕಾರಿಗಳು ಕೂಡಲೇ ಸೂಕ್ತ ಕ್ರಮ ಕೈಗೊಂಡು ಶೌಚಗೃಹಕ್ಕೆ ಹಾಕಿದ ಬೀಗ ತೆಗೆಯಿಸಬೇಕು. ಸೂಕ್ತ ರೀತಿಯಲ್ಲಿ ನಿರ್ವಹಣೆ ಮಾಡುವವರಿಗೆ ನೀಡಿ, ಆರಂಭಿಸಿದರೆ ಸಾರ್ವಜನಿಕರಿಗೆ ಅನುಕೂಲವಾಗುತ್ತದೆ.
    | ರಮೇಶ ಬಿ., ಸ್ಥಳೀಯ ನಿವಾಸಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts