More

    ಬಿ.ಕೆ. ಸತೀಶ್‌ಗೆ ರಾಜ್ಯ ಪ್ರಶಸ್ತಿಯ ಗೌರವ  -ಎನ್‌ಜಿಒ ಹಣದಲ್ಲಿ ಶಾಲಾಭಿವೃದ್ಧಿ ಕಂಕಣ -ಸಾಮಾಜಿಕ ಜಾಲತಾಣ ಸದ್ಭಳಕೆ ಮಾಡಿಕೊಂಡ ಶಿಕ್ಷಕ 

    ದಾವಣಗೆರೆ: ಸರ್ಕಾರಿ ಶಾಲೆ ಉಳಿಸಲು ಮನಸ್ಸಿದ್ದರೆ ಸಾಲದು, ಇಚ್ಛಾಶಕ್ತಿಯೂ ಬೇಕು. ಇದಕ್ಕೆ ನಿದರ್ಶನ ಎಂಬಂತೆ ಜಗಳೂರು ತಾಲೂಕು ಬಸವನಕೋಟೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಬಿ.ಕೆ.ಸತೀಶ್, ಶಾಲಾಭಿವೃದ್ಧಿಗೆ ಶ್ರಮಿಸಿ ರಾಜ್ಯದ ಗಮನ ಸೆಳೆದಿದ್ದಾರೆ.
    ಸಾಮಾಜಿಕ ಜಾಲತಾಣಗಳ ಮೂಲಕ ವಿದೇಶದ ಎನ್‌ಜಿಒಗಳಿಂದ ಸಂಗ್ರಹಿಸಿದ ಆರ್ಥಿಕ ಸಂಪನ್ಮೂಲವನ್ನು, ಕೆಲಸ ಮಾಡುವ ಜ್ಞಾನದೇಗುಲದ ಜತೆಗೆ ಅಕ್ಕಪಕ್ಕದ ಕನ್ನಡ ಶಾಲೆಗಳಿಗೂ ಪಸರಿಸಿ ಅಲ್ಲೆಲ್ಲ ಮಾಡಿದ ಪ್ರಗತಿ ಕಾರ್ಯಗಳಿಂದಾಗಿ ಈ ಬಾರಿಯ ರಾಜ್ಯ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಅರಸಿ ಬಂದಿದೆ.
    ಚಳ್ಳಕೆರೆ ತಾಲೂಕಿನ ಚಿಕ್ಕ ಉಳ್ಳಾರ್ಥಿ, ಹಿರಿಯೂರು ಶಾಲೆಗಳ ಬಳಿಕ ಬಸವನಕೋಟೆ ಶಾಲೆಗೆ ಬಂದ ಒಂದೂವರೆ ವರ್ಷದಲ್ಲಿ ಪರಿಸರವನ್ನೇ ಬದಲಾಯಿಸಿದರು. ಕನ್ನಡದ ಮನಸ್ಸುಗಳು ಎಂಬ ಸಂಸ್ಥೆಯಡಿ ಶಾಲೆಗೆ ಬಣ್ಣ ಬಳಿಸಿ ಅಂದಗಾಣಿಸಿದರು.
    ಫೇಸ್‌ಬುಕ್ ಮೂಲಕವೇ ಶಾಲೆಯ ಚಟುವಟಿಕೆಗಳ ಬಗ್ಗೆ ಪ್ರಚಾರ ಮಾಡಿದ ಸತೀಶ್ ಪ್ರಯತ್ನಕ್ಕೆ, 12ಕ್ಕೂ ಹೆಚ್ಚು ಎನ್‌ಜಿಒಗಳಿಂದ 40 ಲಕ್ಷಕ್ಕೂ ಹೆಚ್ಚಿನ ಹಣ ಹರಿದುಬಂದಿತು. ಇದರಿಂದಾಗಿ ಎರಡು ಸ್ಲಾರ್ಟ್ ಕ್ಲಾಸ್, ಮಕ್ಕಳು ಕೂರಲು ಬೆಂಚು ಇತರ ಪೀಠೋಪಕರಣ, ಫ್ಯಾನ್‌ಗಳು, ಬಿಸಿಯೂಟಕ್ಕೆ ತಟ್ಟೆ-ಲೋಟ ಇತ್ಯಾದಿ ಸೌಲಭ್ಯ ದಕ್ಕಿವೆ.
    ಹಿಂದಿ ಭಾಷೆ ಜತೆಗೆ ವಿಜ್ಞಾನ ಬೋಧಕರಾಗಿದ್ದ ಕಾರಣಕ್ಕೆ ತಾಲೂಕಿನಲ್ಲೇ ಹಿರಿಯ ಪ್ರಾಥಮಿಕ ಶಾಲೆಗಳ ಪೈಕಿ ಏಕೈಕ ವಿಜ್ಞಾನ ಪ್ರಯೋಗಾಲಯ ಆರಂಭಿಸಿ ಮಕ್ಕಳ ವೈಜ್ಞಾನಿಕ ಚಟುವಟಿಕೆಗೆ ಇಂಬು ಒದಗಿಸಿದ್ದಾರೆ. ಕೋವಿಡ್ ಕಾಲದಲ್ಲಿ ತಂತ್ರಜ್ಞಾನ ಆಧಾರಿತ ಶಿಕ್ಷಣ ಪರಿಚಯಿಸಿದರು. ಜನರಿಂದಲೇ ಕರೆನ್ಸಿ ಹಾಕಿಸಿ, ಮಕ್ಕಳ ಆನ್‌ಲೈನ್ ಶಿಕ್ಷಣಕ್ಕೆ ಮಕ್ಕಳ ಕಲಿಕೆಗೆ ಪೂರಕವಾಗಿ ಮೊಬೈಲ್ ಕರೆನ್ಸಿ ಅಭಿಯಾನ ನಡೆಸಿದ್ದರು. ಮಕ್ಕಳ ಸಾಂಸ್ಕೃತಿಕ ಲೋಕವನ್ನು ಯೂಟ್ಯೂಬ್ ವೇದಿಕೆಗಳಲ್ಲೂ ಬಿತ್ತರಿಸಿದ್ದಾರೆ. ವಿದ್ಯಾರ್ಥಿಗಳಿಗಾಗಿ ಶಾಲಾ ಹಂತದಲ್ಲಿ ನ್ಯೂಸ್ ಚಾನಲ್ ಮಾಡಿದ್ದಾರೆ.
    ಇದಲ್ಲದೆ ಪಕ್ಕದ ಅಗಸನಹಳ್ಳಿ, ಉದ್ದಬೋರನಹಳ್ಳಿ, ಜಾಡನಕಟ್ಟೆ, ಉಜ್ಜಪ್ಪ ವಡೇರಹಳ್ಳಿ ಹಾಗೂ ಬಸವನಕೋಟೆಯ ಉರ್ದು ಶಾಲೆಗಳಿಗೂ ಬಂದ ನೆರವಿನ ಮಹಾಪೂರವನ್ನು ಮಕ್ಕಳ ಶೈಕ್ಷಣಿಕ ಚಟುವಟಿಕೆಗಾಗಿ ಬಳಸಿಯೂ ಸತೀಶ್ ಗಮನ ಸೆಳೆದಿದ್ದಾರೆ. ವಿವಿಧೆಡೆ ಕೌಶಲ ತರಬೇತಿ, ವಿಷಯಾಧರಿತ ಕಾರ್ಯಾಗಾರಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿಯೂ ಕೆಲಸ ಮಾಡಿದ್ದಾರೆ.
    ಅಮೆರಿಕದ ಒಸ್ಯಾಟ್ ಸಂಸ್ಥೆಯಿಂದ 53 ಲಕ್ಷ ರೂ. ವೆಚ್ಚದಲ್ಲಿ 3 ಕೊಠಡಿ ನಿರ್ಮಾಣಕ್ಕೆ ಪ್ರಯತ್ನ ನಡೆಸಿರುವ ಸತೀಶ್, ಕ್ಲಸ್ಟರ್ ಮಟ್ಟದಲ್ಲಿನ ಇತರೆ ಕನ್ನಡ ಶಾಲೆಗಳ ಅಭಿವೃದ್ಧಿಗೂ ಎನ್‌ಜಿಒಗಳ ದಾನವನ್ನು ಬಳಕೆ ಮಾಡುವ ಉಮೇದು ಹೊಂದಿದ್ದಾರೆ.

    ಶಾಲೆಯ ಪ್ರಗತಿಗೆ ಮಾಡಿದ ಕೆಲಸ ಪರಿಗಣಿಸಿ ಸರ್ಕಾರ ಮತ್ತು ಅಧಿಕಾರಿಗಳು ರಾಜ್ಯ ಮಟ್ಟದ ಶಿಕ್ಷಕ ಪ್ರಶಸ್ತಿಗೆ ಆಯ್ಕೆ ಮಾಡಿರುವುದು ಖುಷಿ ಜತೆಗೆ ಇಮ್ಮಡಿ ಕೆಲಸ ಮಾಡುವ ಜವಾಬ್ದಾರಿ, ಆಸಕ್ತಿ ಹೆಚ್ಚಿಸಿದೆ. ಇನ್ನಷ್ಟು ಸರ್ಕಾರಿ ಶಾಲೆಗಳ ಉಳಿಸಲು ಪ್ರಯತ್ನಿಸುತ್ತೇನೆ.ಬಿ.ಕೆ. ಸತೀಶ್.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts