More

    ಬಿವಿಬಿ ಸಲಹೆ ಕೇಳಲಿದೆ ಸ್ಮಾರ್ಟ್​ಸಿಟಿ

    ಹುಬ್ಬಳ್ಳಿ: ಸ್ಮಾರ್ಟ್​ಸಿಟಿ ಯೋಜನೆಯ 3 ಕಾಮಗಾರಿಗಳ ವಿನ್ಯಾಸದ ಕುರಿತು ಹು-ಧಾ ಸ್ಮಾರ್ಟ್​ಸಿಟಿ ಲಿಮಿಟೆಡ್ ಕಂಪನಿ ಅಧಿಕಾರಿಗಳು ನಗರದ ಕೆಎಲ್​ಇ ತಾಂತ್ರಿಕ ವಿವಿಯ ಬಿವಿಬಿ ಇಂಜಿನಿಯರಿಂಗ್ ಕಾಲೇಜಿನ ಸಲಹೆ ಕೇಳಲು ಮುಂದಾಗಿದ್ದಾರೆ. ಶನಿವಾರ (ಜೂ. 4) ದಂದು ಕಾಲೇಜಿನಲ್ಲಿ ಈ ಕುರಿತು ಚರ್ಚೆ ನಡೆಯಲಿದೆ.

    ಹು-ಧಾ ಸ್ಮಾರ್ಟ್ ಸಿಟಿ ಯೋಜನೆಗೆ ಮುಂಬೈ ಮೂಲದ ‘ಪ್ರೖೆಸ್​ವಾಟರ್ ಹೌಸ್ ಕೂಪರ್ಸ್ (ಪಿಡಬ್ಲ್ಯುಸಿ)’ ಅಧಿಕೃತ ತಾಂತ್ರಿಕ ಸಲಹಾ ಸಂಸ್ಥೆಯಾಗಿದೆ. ಆದರೆ, ಮಹಾರಾಷ್ಟ್ರದಲ್ಲಿ ಕರೊನಾ ಪರಿಸ್ಥಿತಿ ಗಂಭೀರವಾಗಿರುವುದರಿಂದ ಮುಂಬೈ, ಪುಣೆಯಲ್ಲಿ ನೆಲೆಸಿರುವ ಪಿಡಬ್ಲ್ಯುಸಿ ಅಧಿಕಾರಿಗಳು ಕಳೆದ 3 ತಿಂಗಳಿಂದ ನಗರಕ್ಕೆ ಬಂದಿಲ್ಲ. ಹಾಗಾಗಿ ಹು-ಧಾ ಸ್ಮಾರ್ಟ್ ಸಿಟಿ ಯೋಜನೆಗೆ ತಾಂತ್ರಿಕ ಅಡ್ಡಿಯುಂಟಾಗಿದೆ.

    ಜೂನ್ 20ರಂದು ಬೆಂಗಳೂರಿನಲ್ಲಿ ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ ಸಮ್ಮುಖದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯ ಬಗ್ಗೆ ಪ್ರಗತಿ ಪರಿಶೀಲನೆ ನಡೆದಾಗ ಈ ವಿಷಯ ಚರ್ಚೆಗೆ ಬಂದಿತ್ತು. ಆಗ, ಹು-ಧಾ ಸ್ಮಾರ್ಟ್ ಸಿಟಿ ಯೋಜನೆಗೆ ಸಂಬಂಧಿಸಿದಂತೆ ಸ್ಥಳೀಯವಾಗಿ ತಾಂತ್ರಿಕ ಮಾರ್ಗದರ್ಶನ ಪಡೆಯುವಂತೆ ಸಲಹೆ ನೀಡಲಾಗಿತ್ತು.

    ಗೋಕುಲ ರಸ್ತೆ ಆರ್.ಎಂ. ಲೋಹಿಯಾನಗರ ರಾಯನಾಳ ಕೆರೆ ಬಳಿ 117 ಕೋ. ವೆಚ್ಚದಲ್ಲಿ ಕ್ರೀಡಾ ಸಂಕೀರ್ಣ ನಿರ್ವಣ, 36 ಕೋಟಿಯಲ್ಲಿ ಉಣಕಲ್ ಕೆರೆ ದಂಡೆ ಸೌಂದಯೀಕರಣ ಹಾಗೂ 30 ಕೋಟಿ ರೂ. ವೆಚ್ಚದ ಹಳೇ ಬಸ್ ನಿಲ್ದಾಣ ಸುಧಾರಣೆ ಕಾಮಗಾರಿಯ ವಿನ್ಯಾಸದ ಕುರಿತು ಬಿವಿಬಿ ಇಂಜಿನಿಯರಿಂಗ್ ಕಾಲೇಜಿನ ಸಿವಿಲ್, ಅರ್ಬನ್ ಪ್ಲ್ಯಾನಿಂಗ್ ಹಾಗೂ ಅರ್ಕಿಟೆಕ್ಚರ್ ಇಂಜಿನಿಯರಿಂಗ್ ವಿಭಾಗದ ಸಲಹೆ ಪಡೆಯಲಾಗುತ್ತಿದೆ.

    ಹು-ಧಾ ಅವಳಿ ನಗರ ಅಕ್ಟೋಬರ್ 2016ರಲ್ಲಿ ಕೇಂದ್ರ ಸರ್ಕಾರದ ಸ್ಮಾರ್ಟ್ ಸಿಟಿ ಯೋಜನೆಯಡಿ ಆಯ್ಕೆಯಾಗಿತ್ತು. ಇಲ್ಲಿಯವರೆಗೆ ಕೇಂದ್ರ ಸರ್ಕಾರ 196 ಕೋ. ಹಾಗೂ ರಾಜ್ಯ ಸರ್ಕಾರ 190 ಕೋ. ಬಿಡುಗಡೆ ಮಾಡಿವೆ. ಇದರಲ್ಲಿ ಒಟ್ಟಾರೆ 105 ಕೋ. ಖರ್ಚು ಮಾಡಲಾಗಿದೆ. ಯೋಜನಾ ವೆಚ್ಚ 79.06 ಕೋಟಿ; ಯೋಜನಾ ನಿರ್ವಹಣಾ ಸಲಹೆಗಾರರಾದ ಪ್ರೖೆಸ್ ವಾಟರ್​ಹೌಸ್ ಕೂಪರ್ಸ್​ಗೆ 8.29 ಕೋಟಿ ರೂ. ನೀಡಲಾಗಿದೆ. ಆಡಳಿತ ಮತ್ತು ಕಚೇರಿ ವೆಚ್ಚವೆಂದು 8.78 ಕೋಟಿ ಖರ್ಚಾಗಿದೆ.

    ಕೇಂದ್ರ-ರಾಜ್ಯ ಸರ್ಕಾರಗಳ ಅನುದಾನ, ಖಾಸಗಿ ಸಹಭಾಗಿತ್ವ (ಪಿಪಿಪಿ) ಹಾಗೂ ಕನ್ವರ್ಜೆನ್ಸ್ ಪ್ರಾಜೆಕ್ಟ್​ಗಳು ಸೇರಿ ಹು-ಧಾ ಸ್ಮಾರ್ಟ್ ಸಿಟಿ ಯೋಜನೆಯ ಗಾತ್ರ 1662 ಕೋಟಿ ರೂ.ಗಳದ್ದು. ಪ್ರಸ್ತಾವಿತ 67 ಕಾಮಗಾರಿಗಳಲ್ಲಿ 15 ಪೂರ್ಣಗೊಂಡಿದ್ದು, 43 ಪ್ರಗತಿಯ ಹಂತದಲ್ಲಿವೆ. ಬಿವಿಬಿಯಿಂದ ಸಲಹೆ ಪಡೆಯಲಿರುವ 3 ಸೇರಿ ಒಟ್ಟು 6 ಕಾಮಗಾರಿಗಳಿಗೆ ಟೆಂಡರ್ ಕರೆಯುವುದಷ್ಟೇ ಬಾಕಿ ಉಳಿದಿವೆ.

    ಹು-ಧಾ ಸ್ಮಾರ್ಟ್ ಸಿಟಿ ಯೋಜನೆಯಡಿ ನಿರ್ವಣವಾಗಲಿರುವ ಕ್ರೀಡಾ ಸಂಕೀರ್ಣ, ಉಣಕಲ್ ಕೆರೆ ದಂಡೆ ಸೌಂದಯೀಕರಣ ಹಾಗೂ ಹಳೇ ಬಸ್ ನಿಲ್ದಾಣ ಸುಧಾರಣೆ ಕಾಮಗಾರಿಯ ವಿನ್ಯಾಸದ ಕುರಿತು ಶನಿವಾರ ಬಿವಿಬಿ ಇಂಜಿನಿಯರಿಂಗ್ ಕಾಲೇಜಿನ ಪ್ರಾಧ್ಯಾಪಕರಿಂದ ಸಲಹೆ ಪಡೆಯಲಾಗುತ್ತಿದೆ.

    | ಎಸ್.ಎಚ್. ನರೇಗಲ್, ವಿಶೇಷಾಧಿಕಾರಿ, ಹು-ಧಾ ಸ್ಮಾರ್ಟ್ ಸಿಟಿ ಲಿಮಿಟೆಡ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts