More

    ಆಯವ್ಯಯ ಸಭೆಯಲ್ಲಿ ಅನ್ಯ ವಿಷಯ ಚರ್ಚೆ

    ತಿ.ನರಸೀಪುರ: ಪಟ್ಟಣದ ಅಂದ ಕಾಪಾಡಲು ರಸ್ತೆ ಬದಿ ವ್ಯಾಪಾರ ತೆರವುಗೊಳಿಸಿ, ನಿರಪಯುಕ್ತ ತರಕಾರಿ ಮಾರುಕಟ್ಟೆ ತೆರವುಗೊಳಿಸಿ, ಫುಟ್‌ಪಾತ್ ವ್ಯಾಪಾರಿಗಳಿಗೆ ಲೈಸೆನ್ಸ್ ನೀಡಬಾರದು, ಪಿಟೀಲು ಚೌಡಯ್ಯ ಸ್ಮಾರಕ ಭವನಕ್ಕೆ ಮೀಸಲಿಟ್ಟಿರುವ ಜಾಗದಲ್ಲಿ ತರಕಾರಿ ವ್ಯಾಪಾರಿಗಳಿಗೆ ಅವಕಾಶ ಕೊಡಿ…ಹದಗೆಟ್ಟ ರಸ್ತೆ ಅಭಿವೃದ್ಧಿ ಪಡಿಸಲು ಕ್ರಮ ಕೈಗೊಳ್ಳಿ…ಉದ್ಯಾನ, ಸ್ಮಶಾನ ಅಭಿವೃದ್ಧಿಪಡಿಸಲು ಅನುದಾನ ಮೀಸಲಿಡಿ….

    ಇವಿಷ್ಟು ತಿ.ನರಸೀಪುರ ಸ್ತ್ರೀ ಶಕ್ತಿ ಭವನದಲ್ಲಿ ಪುರಸಭೆ ವತಿಯಿಂದ ಆಯೋಜಿಸಿದ್ದ 2024-2025 ನೇ ಸಾಲಿನ ಆಯ-ವ್ಯಯ ಪೂರ್ವ ಭಾವಿ ಸಭೆಯಲ್ಲಿ ಸಾರ್ವಜನಿಕರು, ಮುಖಂಡರಿಂದ ಕೇಳಿಬಂದ ದೂರು ಹಾಗೂ ಸಲಹೆಗಳು.
    ಪುರಸಭೆ ಮುಖ್ಯಾಧಿಕಾರಿ ಬಿ.ಕೆ.ವಸಂತಕುಮಾರಿ ಅಧ್ಯಕ್ಷತೆಯಲ್ಲಿ ಕರೆಯಲಾಗಿದ್ದ ಆಯ-ವ್ಯಯ ಪೂರ್ವ ಭಾವಿಸಭೆಯು ಅಕ್ಷರಶಃ ಕುಂದುಕೊರತೆ ಸಭೆಯಾಗಿ ಮಾರ್ಪಟ್ಟಿತು.

    ಸಭೆಯನ್ನು ಕೆಲವು ಸದಸ್ಯರು ಮುಖ್ಯಾಧಿಕಾರಿಯನ್ನು ದೂರುವುದಕ್ಕೆ ಬಳಸಿಕೊಂಡರು. ಸಾಮಾನ್ಯವಾಗಿ ಬಜೆಟ್ ಪೂರ್ವಭಾವಿ ಸಭೆಯಲ್ಲಿ ಹಿಂದಿನ ಬಜೆಟ್‌ನಲ್ಲಿನ ಮುಖ್ಯಾಂಶಗಳ ಆಧಾರದ ಮೇಲೆ ಮುಂದಿನ ಬಜೆಟ್ ಮಂಡನೆ ವೇಳೆ ಯಾವ ಕಾರ್ಯಕ್ರಮಕ್ಕೆ ಎಷ್ಟು ಅನುದಾನ ಮೀಸಲಿಡಬೇಕು, ಪುರಸಭೆಗೆ ಆದಾಯ ಕ್ರೋಡೀಕರಣಕ್ಕೆ ಅನುಸರಿಸಬೇಕಾದ ಮಾರ್ಗಗಳು ಯಾವುವು ಮತ್ತಿತರ ವಿಷಯಗಳ ಬಗ್ಗೆ ಸಲಹೆ-ಸೂಚನೆ ನೀಡಬೇಕು. ಆದರೆ ಬುಧವಾರ ಪೂರ್ವಭಾವಿ ಸಭೆ ಮಾತ್ರ ವಿಷಯಾಂತರಗೊಂಡು ದೂರು, ದುಮ್ಮಾನಗಳಿಗೆ ವೇದಿಕೆಯಾಯಿತು.

    ಮೊದಲಿಗೆ ಮುಖಂಡ ಟಿ.ಎನ್.ಗುರುಪ್ರಸಾದ್ ಮಾತನಾಡಿ, ಪಟ್ಟಣದೆಲ್ಲೆಡೆ ರಸ್ತೆ ಬದಿ ವ್ಯಾಪಾರಿಗಳು ರಸ್ತೆ ಒತ್ತುವರಿ ಮಾಡಿಕೊಂಡು ವ್ಯಾಪಾರ ಮಾಡುತ್ತಿದ್ದಾರೆ. ಇದರಿಂದ ಸಾರ್ವಜನಿಕ ಸಂಚಾರಕ್ಕೆ ಅಡಚಣೆ ಉಂಟಾಗುತ್ತಿದೆ. ರಸ್ತೆ ತುಂಬೆಲ್ಲಾ ಫಾಸ್ಟ್ ಫುಡ್ ತಳ್ಳುಗಾಡಿಗಳ ಹಾವಳಿ ಮಿತಿ ಮೀರಿವೆ. ಇವರಿಂದ ಪುರಸಭೆಗೆ ಕಂದಾಯ ಕಟ್ಟುವ ಹೋಟೆಲ್ ಮಾಲೀಕರಿಗೆ ತೀವ್ರ ನಷ್ಟ ಉಂಟಾಗುತ್ತಿದೆ. ನೀವು ಊರಿನ ಅಂದ ಕಾಪಾಡುವ ಕೆಲಸ ಮಾಡಬೇಕು. ಫುಟ್‌ಪಾತ್ ಅನ್ನು ಪಂಚರ್ ಅಂಗಡಿಗಳು, ವೆಲ್ಡಿಂಗ್ ಷಾಪ್, ಟೀ ಅಂಗಡಿಗಳು ಆವರಿಸಿಕೊಂಡಿದ್ದು, ಕೂಡಲೇ ಅವುಗಳನ್ನು ತೆರವುಗೊಳಿಸಿ ಸಾರ್ವಜನಿಕರ ಓಡಾಟಕ್ಕೆ ಮುಕ್ತ ವಾತಾವರಣ ನಿರ್ಮಿಸಬೇಕು ಎಂದು ಸಲಹೆ ನೀಡಿದರು.

    ಪುರಸಭೆ ಮಾಜಿ ಅಧ್ಯಕ್ಷ ಸೋಮು ಇನ್ನು ಮುಂದೆ ಬೀದಿ ಬದಿ ವ್ಯಾಪಾರಿಗಳಿಗೆ ಲೈಸೆನ್ಸ್ ಕೊಡಬೇಡಿ ಎಂದು ಮುಖ್ಯಾಧಿಕಾರಿಗಳಿಗೆ ತಿಳಿಸಿ, ಪುರಸಭೆಯಲ್ಲಿ ಖಾತೆ, ಇ-ಸ್ವತ್ತು ಮಾಡಿಸುವ ಸಾರ್ವಜನಿಕರಿಗೆ ನೇರವಾಗಿ ಕಚೇರಿಯಲ್ಲಿಯೇ ಕೆಲಸ ಮಾಡಿಸಲು ಹಾಗೂ ಮಧ್ಯವರ್ತಿಗಳಿಗೆ ಅವಕಾಶ ಕಲ್ಪಿಸುವುದನ್ನು ತಪ್ಪಿಸಲು ಕ್ರಮ ಕೈಗೊಳ್ಳಿ ಎಂದು ಸಲಹೆ ನೀಡಿದರು.
    ಮಾಜಿ ಸದಸ್ಯ ಶ್ರೀರಾಂಪುರ ಪ್ರಕಾಶ್ ಮಾತನಾಡಿ, ನೀವು ಯಾವುದೇ ಅಜೆಂಡಾ ಸಿದ್ಧಪಡಿಸಿಕೊಳ್ಳದೆ ಮೀಟಿಂಗ್ ಯಾಕೆ ಕರೆದಿದ್ದೀರಿ, ಪುರಸಭೆಯಿಂದ ಮಳಿಗೆಯನ್ನು ಹರಾಜು ಮೂಲಕ ನೀಡಲಾಗಿದೆ. ಆದರೆ ಮಳಿಗೆ ಪಡೆದವರು ಅದನ್ನು ಬೇರೆಯವರಿಗೆ ಬಾಡಿಗೆ ಕೊಟ್ಟು ತಾವು ಫುಟ್‌ಪಾತ್‌ನಲ್ಲಿ ವ್ಯಾಪಾರ ಮಾಡುತ್ತಿದ್ದಾರೆ. ಭಗವಾನ್ ವೃತ್ತದಿಂದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ತನಕ ತರಕಾರಿ ಮಾರುವವರು ರಸ್ತೆ ಅತಿಕ್ರಮಣ ಮಾಡಿಕೊಂಡು ಸಾರ್ವಜನಿಕರಿಗೆ ತೊಂದರೆ ಕೊಡುತ್ತಿದ್ದಾರೆ. ಇದು ನಿಮಗೆ ಕಾಣುತ್ತಿಲ್ಲವೇ? ಜನಪ್ರತಿನಿಧಿಗಳು ನೀವೇಕೆ ಚಕಾರ ಎತ್ತುತ್ತಿಲ್ಲ ಎಂದು ಸಿಡಿಮಿಡಿಗೊಂಡರು.

    ವಿಚಾರವಾದಿ ಕೆ.ಎನ್.ಪ್ರಭುಸ್ವಾಮಿ ಮಾತನಾಡಿ, ಪಿಟೀಲು ಚೌಡಯ್ಯ ಸ್ಮಾರಕಕ್ಕೆ ಮೀಸಲಿಟ್ಟಿರುವ ಜಾಗವನ್ನು ಫುಟ್‌ಪಾತ್ ವ್ಯಾಪಾರಸ್ಥರಿಗೆ ನೀಡಿ. ಪುರಸಭೆಯಿಂದ ತರಕಾರಿ ಮಾರುಕಟ್ಟೆ ನಿರ್ಮಾಣ ಮಾಡಿ 6 ವರ್ಷಗಳಾಗಿದೆ. ಇನ್ನೂ ಅದನ್ನು ಉದ್ಘಾಟನೆ ಮಾಡಿಲ್ಲ. ಇದರಿಂದ ಕೋಟ್ಯಂತರ ರೂ.ಗಳ ನಷ್ಟ ಪುರಸಭೆಗಾಗಿದೆ. ಪುರಸಭೆ ವ್ಯಾಪ್ತಿಯಲ್ಲಿ ರಸ್ತೆಗಳು ಕಿರಿದಾಗಿದ್ದು, ಜನಸಂಖ್ಯೆ ಹೆಚ್ಚಿದೆ ಜತೆಗೆ ವ್ಯಾಪಾರಸ್ಥರು ಹೆಚ್ಚಿದ್ದಾರೆ. ಹಾಗಾಗಿ ಸಂಚಾರಕ್ಕೆ ತೊದರೆ ಉಂಟಾಗಿದೆ ಎಂದು ಅಭಿಪ್ರಾಯ ಮಂಡಿಸಿದರು.

    ದಸಂಸ ಮುಖಂಡ ಆಲಗೂಡು ಶಿವಕುಮಾರ್ ಮಾತನಾಡಿ, ಪುರಸಭೆ ಮಾರುಕಟ್ಟೆಯನ್ನು ವೈಜ್ಞಾನಿಕ ರೀತಿಯಲ್ಲಿ ಕಟ್ಟದೇ ಹಂದಿ ಗೂಡಿನಂತೆ ಕಟ್ಟಿರುವುದರಿಂದ ಅಲ್ಲಿ ಗಾಳಿ, ಬೆಳಕಿನ ವ್ಯವಸ್ಥೆ ಇಲ್ಲದಂತಾಗಿದ್ದು, ವ್ಯಾಪಾರಸ್ಥರು ಅಲ್ಲಿಗೆ ಹೋಗುತ್ತಿಲ್ಲ. ಆಲಗೂಡು ಗ್ರಾಮದಲ್ಲಿ ಸ್ಮಶಾನ ಅಭಿವೃದ್ಧಿಪಡಿಸಿಲ್ಲ. ಗಿಡ-ಗಂಟಿಗಳು ಬೆಳೆದು ಸ್ಮಶಾನವು ಅರಣ್ಯದಂತಾಗಿದೆ. ಸಾಮೂಹಿಕ ಶೌಚಗೃಹ ಕಟ್ಟಿದ್ದೀರಿ. ಆದರೆ ಅದನ್ನು ಸಾರ್ವಜನಿಕ ಬಳಕೆಗೆ ನೀಡಿಲ್ಲ. ಪಟ್ಟಣ ಪ್ರವೇಶಿಸುವ ಜಾಗದಲ್ಲಿ ಸ್ವಾಗತ ಕಮಾನು ನಿರ್ಮಿಸಿಲ್ಲ ಎಂದು ದೂರಿದರು.

    ಸರ್ಕಾರಿ ಪದವಿ ಪೂರ್ವ ಕಾಲೇಜು ಬಳಿ ಡಾ.ಬಿ.ಆರ್.ಅಂಬೇಡ್ಕರ್ ವೃತ್ತ ಮಾಡಿದ್ದೀರಿ, ಅದನ್ನು ಅಭಿವೃದ್ಧಿಪಡಿಸಿ ಅಲ್ಲಿ ಅಂಬೇಡ್ಕರ್ ಪ್ರತಿಮೆ ಸ್ಥಾಪಿಸುವಂತೆ ಸಲಹೆ ನೀಡಿದರು.

    ಕರೋಹಟ್ಟಿ ಮಹದೇವಯ್ಯ ಮಾತನಾಡಿ, ಫಿಲ್ಟರ್ ಹೌಸ್‌ನ ಪಾರ್ಕ್ ಸುತ್ತಮುತ್ತ ಗಿಡಗಂಟಿ ಬೆಳೆದುಕೊಂಡಿವೆ. ಅದನ್ನು ತೆಗೆಸುವ ಗೋಜಿಗೆ ನೀವು ಹೋಗಿಲ್ಲ. ಫಿಲ್ಟರ್ ಹೌಸ್‌ನಿಂದ ಕರ್ಕಶವಾದ ಶಬ್ದ ಹೊರಬರುತ್ತಿದ್ದು, ಅಪಾಯದ ಮುನ್ಸೂಚನೆಯಾಗಿದೆ. ಕೂಡಲೇ ಈ ಬಗ್ಗೆ ಗಮನಹರಿಸಿ ಎಂದು ಸಲಹೆ ನೀಡಿದರು.

    ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ದಿವಾಕರ್ ಶವಸಂಸ್ಕಾರ ನಿಧಿಯನ್ನು 3 ರಿಂದ 5 ಸಾವಿರ ರೂ.ಗೆ ಏರಿಕೆ ಮಾಡಿ, ಎಸ್‌ಸಿ/ಎಸ್‌ಟಿ ಸಮುದಾಯದವರಿಗೂ ಶವಸಂಸ್ಕಾರ ನಿಧಿಯ ಪ್ರಯೋಜನ ದೊರಕುವಂತೆ ಮಾಡಬೇಕು. ಜತೆಗೆ ವೈದ್ಯಕೀಯ ಚಿಕಿತ್ಸಾ ವೆಚ್ಚವನ್ನು ಹೆಚ್ಚು ಮಾಡಬೇಕು ಎಂದು ಸಲಹೆ ನೀಡಿದರು.

    ಈ ವೇಳೆ ಮಾತನಾಡಿದ ಮುಖ್ಯಾಧಿಕಾರಿ ಬಿ.ಕೆ.ವಸಂತಕುಮಾರಿ, ನಾನು ಪುರಸಭೆಯಲ್ಲಿ ಅಧಿಕಾರ ವಹಿಸಿಕೊಂಡ ವೇಳೆ 1.20 ಕೋಟಿ ರೂ. ಕಂದಾಯ ಬಾಕಿ ಉಳಿದುಕೊಂಡಿತ್ತು. ಕೇವಲ10 ತಿಂಗಳ ಅವಧಿಯಲ್ಲಿ ಪರಿಶ್ರಮ ಪಟ್ಟು 2 ಕೋಟಿ ರೂ.ಕಂದಾಯ ವಸೂಲಾತಿ ಮಾಡಿದ್ದೇನೆ. ಬಾಕಿ 1 ಕೋಟಿ ರೂ. ವಸೂಲಾಗಬೇಕಿದ್ದು, ನೀವೆಲ್ಲರೂ ಸಹಕಾರ ನೀಡಿದರೆ ಅದನ್ನೂ ವಸೂಲಾತಿ ಮಾಡುತ್ತೇನೆ ಎಂದರು.

    ಆಲಗೂಡು ಗ್ರಾಮದ ಸ್ಮಶಾನ ಅಭಿವೃದ್ಧಿಗೆ ಸಂಬಂಧಿಸಿದಂತೆ ಖುದ್ದಾಗಿ ಭೇಟಿ ನೀಡಿ ಸಮಸ್ಯೆ ಬಗೆಹರಿಸಿಕೊಡುತ್ತೇನೆ. ಪಟ್ಟಣದಲ್ಲಿರುವ ಉದ್ಯಾನವನಗಳ ಅಭಿವೃದ್ಧಿಗೆ ಆದ್ಯತೆ ನೀಡುತ್ತೇನೆ ಎಂದರು. ಸಾರ್ವಜನಿಕರ ಸಲಹೆಯನ್ನು ಪರಿಗಣಿಸಿ ಬಜೆಟ್‌ನಲ್ಲಿ ಪಟ್ಟಣದ ಅಭಿವೃದ್ಧಿಗೆ ಅನುದಾನ ಹಂಚಿಕೆ ಮಾಡಲು ಪ್ರಯತ್ನ ಪಡುವುದಾಗಿ ಭರವಸೆ ನೀಡಿದರು.

    ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವ ಡಾ.ಮಹದೇವಪ್ಪ ಅವರು ಒಂದು ತಿಂಗಳ ಹಿಂದೆ ಪುರಸಭೆ ಇಂಜಿನಿಯರ್ ಹಾಗೂ ಸದಸ್ಯರನ್ನು ಕರೆಸಿ ಪ್ರತಿ ವಾರ್ಡ್ ಅಭಿವೃದ್ಧಿಗೆ ತಲಾ 50 ಲಕ್ಷ ರೂ.ಗಳಂತೆ 13 ರಿಂದ 14 ಕೋಟಿ ರೂ. ಅನುದಾನ ಬಿಡುಗಡೆ ಮಾಡಿಕೊಟ್ಟಿದ್ದಾರೆ. ಮುಂದಿನ 15 ದಿನದಲ್ಲಿ ಅನುಮೋದನೆ ಸಿಗಲಿದೆ ಎಂದು ಮಾಜಿ ಅಧ್ಯಕ್ಷ ಸೋಮು ತಿಳಿಸಿದರು. ದಸಂಸದ ಆಲಗೂಡು ಡಾ.ಚಂದ್ರಶೇಖರ್, ಪುರಸಭೆ ಸದಸ್ಯರಾದ ಎಸ್.ಕೆ.ಕಿರಣ್, ತುಂಬಲ ಪ್ರಕಾಶ್, ಮೆಡಿಕಲ್ ನಾಗರಾಜ್, ಎಲ್.ಮಂಜುನಾಥ್, ಸಿಸ್ಟಮ್ ಸಿದ್ದು, ಈ.ರಾಜು, ಕಸಾಪ ಅಧ್ಯಕ್ಷ ಪುಟ್ಟಸ್ವಾಮಿ, ಫೈನಾನ್ಸ್ ರಾಜು, ಸೇವಾಶ್ರಯ ಫೌಂಡೇಷನ್ ಅಧ್ಯಕ್ಷ ಮಣಿಕಂಠರಾಜ್ ಗೌಡ, ಬೆಳಕು ಫೌಂಡೇಷನ್‌ನ ಅರವಿಂದ್, ರಾಜು, ಸಿ.ಮಹದೇವ, ಸಮನ್ವಯಾಧಿಕಾರಿ ಮಹದೇವು, ರಾಜೇಂದ್ರ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts