More

    ಬಿತ್ತನೆ ಬೀಜಕ್ಕಾಗಿ ನೂಕುನುಗ್ಗಲು

    ಹುಬ್ಬಳ್ಳಿ: ಉತ್ತಮ ಮುಂಗಾರು ಪೂರ್ವ ಮಳೆಯಿಂದ ಉಲ್ಲಸಿತರಾಗಿರುವ ರೈತರು ಇದೀಗ ಮುಂಗಾರು ಹಂಗಾಮಿನ ಬಿತ್ತನೆ ಕಾರ್ಯಕ್ಕೆ ಸಜ್ಜಾಗಿದ್ದಾರೆ. ಬಿತ್ತನೆ ಬೀಜಕ್ಕಾಗಿ ರೈತ ಸಂಪರ್ಕ ಕೇಂದ್ರಗಳ ಎದುರು ಜಮಾಯಿಸುತ್ತಿದ್ದಾರೆ.

    ಹುಬ್ಬಳ್ಳಿ ತಾಲೂಕಿನಲ್ಲಿ ಸೋಯಾಬೀನ್, ಹೆಸರು, ಶೇಂಗಾ, ಉದ್ದು ಸೇರಿ ಈ ಭಾಗದಲ್ಲಿ ಹೆಚ್ಚು ಅಗತ್ಯ ಇರುವ ಬಿತ್ತನೆ ಬೀಜ ಸಂಗ್ರಹ ಮಾಡಿಕೊಂಡಿರುವ ಕೃಷಿ ಇಲಾಖೆ ಅಧಿಕಾರಿಗಳು ಬುಧವಾರದಿಂದ ಪೂರೈಕೆಗೆ ಚಾಲನೆ ನೀಡಿದ್ದಾರೆ. ಹುಬ್ಬಳ್ಳಿಯ ಎಪಿಎಂಸಿ ಆವರಣದಲ್ಲಿರುವ ರೈತ ಸಂಪರ್ಕ ಕೇಂದ್ರದ ಎದುರು ಬುಧವಾರ ಬೆಳಗ್ಗೆ 200ಕ್ಕೂ ಹೆಚ್ಚು ರೈತರು ಸೇರಿದ್ದರು. ನೂಕುನುಗ್ಗಲು ಆರಂಭವಾಗುವುದನ್ನು ಮನಗಂಡ ರೈತ ಸಂಪರ್ಕ ಕೇಂದ್ರ (ಆರ್​ಎಸ್​ಕೆ)ದ ಅಧಿಕಾರಿಗಳು, ಪೊಲೀಸರು 50 ರೈತರಿಗೆ ಟೋಕನ್ ನೀಡಿ ಉಳಿದ ರೈತರು ನಂತರ ಬರುವಂತೆ ತಿಳಿಸಿ ಪರಸ್ಪರ ಅಂತರ ಕಾಯ್ದುಕೊಳ್ಳಲು ತಿಳಿಸಿದರು. ಆದರೂ, ಅನೇಕ ರೈತರು ಅಲ್ಲಿಯೇ ನಿಂತರು. ಇದರಿಂದ ಆರ್​ಎಸ್​ಕೆ ಎದುರು ಕೆಲಕಾಲ ಜನದಟ್ಟಣೆ ಉಂಟಾಗಿತ್ತು. ಪೊಲೀಸರು ಹಾಗೂ ಅಧಿಕಾರಿಗಳು ಕರೊನಾ ಮುಂಜಾಗ್ರತೆ ಕೈಗೊಳ್ಳಲು ಆಗಾಗ ತಿಳಿ ಹೇಳುತ್ತ ಸರತಿಯನ್ನು ಸರಿಪಡಿಸುವ ಕೆಲಸ ಮಾಡುತ್ತಿದ್ದರು.

    ಸರ್ಕಾರದ ಸಬ್ಸಿಡಿ ದರದ ಬಿತ್ತನೆ ಬೀಜಕ್ಕಾಗಿ ರೈತ ಸಂಪರ್ಕ ಕೇಂದ್ರಗಳಲ್ಲಿ ಈಗಾಗಲೇ ನೋಂದಣಿ ಮಾಡಿಕೊಂಡಿರುವ ರೈತರು ಆದಷ್ಟು ಶೀಘ್ರ ಬೀಜ ಕೊಂಡೊಯ್ದು ಬಿತ್ತನೆ ಮಾಡುವ ಹುಮ್ಮಸ್ಸಿನಲ್ಲಿದ್ದಾರೆ. ಆದರೆ, ಆರ್​ಎಸ್​ಕೆ ಅಧಿಕಾರಿಗಳು ವಿಳಂಬ ಮಾಡದೆ ಬೀಜ ಪೂರೈಸಬೇಕಿದೆ. ರೋಹಿಣಿ ಮಳೆ ಆರಂಭವಾಗಿದೆ. ಇದೇ ಮಳೆಯಲ್ಲಿ ಬಿತ್ತನೆ ಮಾಡಿದರೆ ಫಸಲು ಚೆನ್ನಾಗಿ ಬರುತ್ತದೆ ಎಂಬ ಪ್ರತೀತಿ ಇದೆ. ಹಾಗಾಗಿ ಸಕಾಲದಲ್ಲಿ ಬಿತ್ತಲು ಅವಸರ ಮಾಡುತ್ತಿದ್ದೇವೆ. ಅವಶ್ಯಕತೆಗೆ ತಕ್ಕಷ್ಟು ಬೀಜ ಸಿಕ್ಕರೆ ಯಾವುದೇ ಸಮಸ್ಯೆಯಾಗುವುದಿಲ್ಲ ಎಂದು ರೈತರಾದ ಮೆಲಗಿರಿಗೌಡ ಪಾಟೀಲ, ಸಂತೋಷ, ಇತರರು ಅಭಿಪ್ರಾಯಪಟ್ಟರು.

    ಸಬ್ಸಿಡಿ ಎಷ್ಟು?: ಪ್ರತಿ ರೈತರಿಗೆ (ಒಂದು ಖಾತೆಗೆ) 5 ಪ್ಯಾಕೆಟ್ ಸಬ್ಸಿಡಿ ಬೀಜ ನೀಡಲಾಗುತ್ತಿದೆ. 30 ಕೆಜಿ ಸೋಯಾಬೀನ್ ಪ್ಯಾಕೆಟ್​ಗೆ 2010 ರೂ. ಇದರಲ್ಲಿ ಸರ್ಕಾರದ ಸಬ್ಸಿಡಿ 750 ರೂ. ರೈತರ ವಂತಿಕೆ 1260 ರೂ. ಪಾವತಿಸಿ ಬೀಜ ಒಯ್ಯಬಹುದು. ಪ.ಜಾತಿ-ಪಂಗಡದವರಿಗೆ ಸಬ್ಸಿಡಿ 1125 ರೂ. (ರೈತರ ವಂತಿಕೆ 885 ರೂ.)

    ಹೆಸರು 5 ಕೆಜಿ ಪ್ಯಾಕೆಟ್​ಗೆ 487 ರೂ., 125 ರೂ. ಸಬ್ಸಿಡಿ. ತೊಗರಿ 5 ಕೆಜಿ ಪ್ಯಾಕೆಟ್​ಗೆ 375 ರೂ. 125 ಸಬ್ಸಿಡಿ ನೀಡಲಾಗಿದೆ. ಶೇಂಗಾ 30 ಕೆಜಿ ಪ್ಯಾಕೆಟ್​ಗೆ 2250 ರೂ., 450 ರೂ. ಸಬ್ಸಿಡಿ. ಉದ್ದು 5 ಕೆಜಿ ಪ್ಯಾಕೆಟ್​ಗೆ 505 ರೂ. 125 ರೂ. ಸಬ್ಸಿಡಿ ನೀಡಲಾಗುತ್ತಿದೆ. ಈ ಎಲ್ಲ ಬೀಜಗಳಿಗೆ ಎಸ್ಸಿ, ಎಸ್ಟಿ ವರ್ಗದ ರೈತರಿಗೆ ಶೇ. 50ರವರೆಗೆ ಸಬ್ಸಿಡಿ ನೀಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಹುಬ್ಬಳ್ಳಿ ತಾಲೂಕಿನ ಛಬ್ಬಿ, ಶಿರಗುಪ್ಪಿ ಆರ್​ಎಸ್​ಕೆ, ಕುಸುಗಲ್, ಬಿಡ್ನಾಳ, ಅಂಚಟಗೇರಿಗಳಲ್ಲಿ ಹೆಚ್ಚುವರಿ ಬೀಜ ವಿತರಣೆ ಕೇಂದ್ರಗಳ ಮೂಲಕವೂ ಪೂರೈಕೆ ಮಾಡಲಾಗುತ್ತಿದೆ. ಹುಬ್ಬಳ್ಳಿ ತಾಲೂಕಿನ ರೈತರಿಗಾಗಿ ಹೆಸರು 61.15 ಕ್ವಿಂಟಾಲ್, ಸೋಯಾಬೀನ್ 1193 ಕ್ವಿಂ, ತೊಗರಿ 2 ಕ್ವಿಂ, ಉದ್ದು 9.75 ಕ್ವಿಂ, ಶೇಂಗಾ 87 ಕ್ವಿಂ, ಗೋವಿನಜೋಳ 393 ಕ್ವಿಂಟಾಲ್ ಬಿತ್ತನೆ ಬೀಜ ಸಂಗ್ರಹವಿದ್ದು, ಅಗತ್ಯ ಬಿದ್ದರೆ ಮತ್ತೆ ತರಿಸಿ ರೈತರಿಗೆ ಪೂರೈಕೆ ಮಾಡಲಾಗುವುದು ಎಂದು ಕೃಷಿ ಸಹಾಯಕ ನಿರ್ದೇಶಕ ರಾಜಶೇಖರ ಅಣಗೌಡರ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts