More

    ಬಿಡದಿ ಸಮಗ್ರ ಉಪನಗರ ಯೋಜನೆ ಭೂಸ್ವಾಧೀನದ ಅಂತಿಮ ನೋಟಿಫಿಕೇಶನ್‌ಗೆ ತಡೆ

    ಮಾಗಡಿ: ಬಿಡದಿ ಬಳಿ ಕೈಗಾರಿಕಾ ಉದ್ದೇಶಕ್ಕಾಗಿ ಕೆಐಎಡಿಬಿ ವತಿಯಿಂದ ಭೂಸ್ವಾಧೀನ ಪ್ರಕ್ರಿಯೆಗೆ ಸಂಬಂಧಿಸಿದಂತೆ ಅಂತಿಮ ಅಧಿಸೂಚನೆ ಹೊರಡಿಸದಂತೆ ಕ್ರಮ ಕೈಗೊಳ್ಳುವುದಾಗಿ ವಿಧಾನಪರಿಷತ್ ಸದಸ್ಯ ಸಿ.ಎಂ.ಲಿಂಗಪ್ಪ, ಮಾಜಿ ಶಾಸಕ ಎಚ್.ಸಿ.ಬಾಲಕೃಷ್ಣ ನೇತೃತ್ವದ ನಿಯೋಗಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭರವಸೆ ನೀಡಿದ್ದಾರೆ.

    ಸಿಎಂ ನಿವಾಸ ಕೃಷ್ಣದಲ್ಲಿ ಮಂಗಳವಾರ ಮನವಿ ಸ್ವೀಕರಿಸಿ ಮಾತನಾಡಿದ ಅವರು, ಈ ಜಮೀನನ್ನು ಭೂಸ್ವಾಧೀನ ಪಡಿಸದಂತೆ ತಡೆಹಿಡಿದು, ಈ ಜಾಗವನ್ನು ಟೌನ್‌ಶಿಪ್ ಮಾಡಬೇಕೇ ಅಥವಾ ರೈತರಿಗೆ ಭೂಮಿ ವಾಪಸ್ ನೀಡಬೇಕೇ ಎಂಬ ಬಗ್ಗೆ ತೀರ್ಮಾನಿಸಿ ಇನ್ನೆರಡು ತಿಂಗಳಲ್ಲಿ ಕಾಯಕಲ್ಪ ನೀಡಲಾಗುವುದು ಎಂದು ತಿಳಿಸಿದರು.

    ಮನವಿ ಸಲ್ಲಿಸಿದ ನಂತರ ಮಾಜಿ ಶಾಸಕ ಎಚ್.ಸಿ. ಬಾಲಕೃಷ್ಣ ಮಾತನಾಡಿ, ಎಚ್.ಡಿ.ಕುಮಾರಸ್ವಾಮಿ ಪ್ರಥಮ ಭಾರಿ ಮುಖ್ಯಮಂತ್ರಿಯಾದ ಅವಧಿಯಲ್ಲಿ ಬೈರಮಂಗಲ, ಕಂಚುಗಾರನಹಳ್ಳಿ ಪಂಚಾಯಿತಿ ವ್ಯಾಪ್ತಿಯಲ್ಲಿ 10 ಸಾವಿರ ಎಕರೆಯಲ್ಲಿ ಟೌನ್‌ಶಿಪ್ ಮಾಡಲು ನೋಟಿಫಿಕೇಶನ್ ಮಾಡಲಾಗಿತ್ತು. ಇದರ ಜತೆಗೆ ನಂದಗುಡಿ, ಸೋಲೂರು, ಸಾತನೂರು, ಹೊಸಕೋಟೆ ಸೇರಿ ಐದು ಸಮಗ್ರ ಉಪನಗರಗಳನ್ನು ಅಭಿವೃದ್ಧಿಪಡಿಸಲು ಮುಂದಾಗಿ, ಬಿಡದಿ ವ್ಯಾಪ್ತಿಯಲ್ಲಿ ಉಪನಗರ ನಿರ್ಮಾಣಕ್ಕೆ ಡಿಎಲ್‌ಎಫ್ ಸಂಸ್ಥೆ ನೀಡಲಾಗಿತ್ತು. ಅವರು ಹಣ ಕಟ್ಟಿದ್ದು, ಅಭಿವೃದ್ಧಿ ಮಾಡದ ಹಿನ್ನೆಲೆಯಲ್ಲಿ ಹಣ ವಾಪಸ್ ಪಡೆದಿದ್ದು, ಇದು ಹೈಕೋರ್ಟ್ ಆದೇಶ ಮತ್ತು ಸರ್ಕಾರದ ಉದ್ದೇಶವನ್ನು ಉಲ್ಲಂಸಿದಂತಾಗಿದೆ ಎಂದು ಆರೋಪಿಸಿದರು.

    10 ಸಾವಿರ ಎಕರೆ ಜಮೀನನ್ನು ಕೆಂಪುವಲಯ ಎಂದು ಸರ್ಕಾರ ಗುರುತಿಸಿದೆೆ. ಎಚ್.ಡಿ.ಕುಮಾರಸ್ವಾಮಿ 2ನೇ ಭಾರಿ ಮುಖ್ಯಮಂತ್ರಿಯಾದ ಅವಧಿಯಲ್ಲಿ ಈ ಭಾಗದ ರೈತರು ಟೌನ್‌ಶಿಪ್ ಮಾಡಿ, ಭೂಸ್ವಾಧೀನಪಡಿಸಿಕೊಂಡು ಹಣ ನೀಡಿ, ಅಗ್ರಿಕರ್ಲ್ಚರ್ ರೆನ್ ಮಾಡಿ ಮುಕ್ತಿಗೊಳಿಸುವಂತೆ ಮನವಿ ಮಾಡಿದರು. ಆಗ ಎಚ್.ಡಿ. ಕುಮಾರಸ್ವಾಮಿಯವರು, ಇದನ್ನು ಮಾಡಿಯೇ ಮಾಡುತ್ತೇನೆ ಎಂದವರು ಇದುವರೆಗೂ ಕ್ರಮ ಕೈಗೊಂಡಿಲ್ಲ. ಈ 10ಸಾವಿರ ಎಕರೆಯಲ್ಲಿ 800 ಎಕರೆಯನ್ನು ಕೆಐಎಡಿಬಿಯವರು ಭೂಸ್ವಾಧೀನಪಡಿಸಿಕೊಳ್ಳಲು ಮುಂದಾಗಿದ್ದು, ಈ ಜಮೀನಿನ ಪಕ್ಕ ಒಬ್ಬ ಉದ್ಯಮಿಯ 300 ಎಕರೆ ಜಮೀನಿದೆ. ಆವರಿಗೆ ಅನುಕೂಲ ಮಾಡಲು ಕೆಂಪು ವಲಯವನ್ನು ರದ್ದುಮಾಡದೆ ಭೂಸ್ವಾಧೀನಕ್ಕೆ ಮುಂದಾಗಿದ್ದಾರೆ. ಈ ಬಗ್ಗೆ ಎರಡು ನೋಟಿಫಿಕೇಶನ್ ಆಗಿದ್ದು ಅಂತಿಮ ನೋಟಿಫಿಕೇಶನ್‌ನನ್ನು ಮುಖ್ಯಮಂತ್ರಿಗಳು ತಡೆಹಿಡಿಯಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ ಎಂದರು.

    ಈ ಭಾಗದ ರೈತರು ಕಳೆದ 14 ವರ್ಷಗಳಿಂದ ತೊಂದರೆ ಅನುಭವಿಸುತ್ತಿದ್ದು, ಇದಕ್ಕೆ ಮುಕ್ತಿ ನೀಡುವಂತೆ ಸಿಎಂ ಬಳಿ ಮನವಿ ಮಾಡಲಾಗಿದೆ. ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಇನ್ನೆರಡು ತಿಂಗಳು ಸುಮ್ಮನಿದ್ದು ಬಗೆಹರಿಸದಿದ್ದರೆ ಬಿಡದಿಯಿಂದ ಮುಖ್ಯಮಂತ್ರಿ ಮನೆಯವರೆಗೆ ಪಾದಯಾತ್ರೆ ಹಮ್ಮಿಕೊಳ್ಳಲಾಗುವುದು ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

    ನೈಸ್ ರಸ್ತೆ ನಿರ್ಮಿಸಲು ರೈತರ ಜಮೀನನ್ನು ಭೂಸ್ವಾಧೀನಪಡಿಸಿಕೊಂಡಿದ್ದು ಸಮರ್ಪಕವಾಗಿ ಹಣ ನೀಡದೆ ರೈತರಿಗೆ ಅನ್ಯಾಯವಾಗಿದೆ. ಆ ರೈತರಿಗೂ ಇಂದಿನ ಬೆಲೆಯಂತೆ ಹಣ ನೀಡಬೇಕು ಎಂದೂ ಮನವಿ ಮಾಡಲಾಗಿದೆ ಎಂದು ಬಾಲಕೃಷ್ಣ ತಿಳಿಸಿದರು.

    ವಿಧಾನ ಪರಿಷತ್ ಸದಸ್ಯ ಸಿ.ಎಂ.ಲಿಂಗಪ್ಪ ಮಾತನಾಡಿ, ಸರ್ಕಾರ 10 ಸಾವಿರ ಎಕರೆಯಲ್ಲಿ ಟೌನ್‌ಶಿಪ್ ನಿರ್ಮಿಸಲು ಉದ್ದೇಶಿಸಿತ್ತು. 14 ವರ್ಷಗಳಿಂದ ರೈತರಿಗೆ ಯಾವುದೇ ಅನುಕೂಲವಾಗಿಲ್ಲ, ಇದರಿಂದ ಭೂಮಿ ಮಾರಾಟ ಮಾಡಲಾಗದೆ, ಅಭಿವೃದ್ಧಿಪಡಿಸಲು ಸಾಧ್ಯವಾಗದೆ ರೈತರಿಗೆ ತೊಂದರೆಯಾಗಿದೆ, ಟೌನ್‌ಶಿಪ್ ಮಾಡಿದರೆ ಬನಶಂಕರಿ 2ನೇ ಹಂತದವರೆಗೆ ಹಾಗೂ ಟೊಯೋಟಾ ಮೋಟಾರ್ಸ್‌ವರೆಗೂ ಅನುಕೂಲವಾಗುತ್ತದೆ ಎಂದು ಮುಖ್ಯಮಂತ್ರಿಗಳಿಗೆ ಮನವರಿಕೆ ಮಾಡಲಾಗಿದೆ ಎಂದರು.

    ಮುಖ್ಯಮಂತ್ರಿ ಕಾರ್ಯದರ್ಶಿ ರವಿಕುಮಾರ್, ತಾಲೂಕು ರೈತಸಂಘದ ಅಧ್ಯಕ್ಷ ಗೋವಿಂದರಾಜು, ಮುಖಂಡರಾದ ಬಿಡದಿ ರಮೇಶ್, ವಿಷಕಂಠಯ್ಯ,ಬೈರಾರೆಡ್ಡಿ, ರಾಜಣ್ಣ, ಕೃಷ್ಣಮೂರ್ತಿ, ನಾರಾಯಣ್, ಸ್ವಾಮಿ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts