More

    ಇದು ದಶಪಥವಲ್ಲ 6 ಪಥದ ಹೈಬ್ರಿಡ್ ಹೆದ್ದಾರಿ; ಯೋಜನಾ ನಿರ್ದೇಶಕ ಶ್ರೀಧರ್ ಸ್ಪಷ್ಟನೆ

    ಬಿಡದಿ: ಇದು ದಶಪಥ ಹೆದ್ದಾರಿ ಅಲ್ಲ. ಆ ರೀತಿ ಕರೆಯಬೇಡಿ. ಇದು 6 ಪಥದ ಹೈಬ್ರಿಡ್ ಹೆದ್ದಾರಿ ಎನ್ನುವ ಮೂಲಕ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಶ್ರೀಧರ್ ಅಚ್ಚರಿ ಮೂಡಿಸಿದರು.

    ಕೇಂದ್ರದ ಕ್ಯಾಬಿನೆಟ್‌ನಲ್ಲಿ 6 ಪಥದ ರಸ್ತೆಗೆ ಅನುಮೋದನೆ ಸಿಕ್ಕಿದೆ. ಈ 6 ಪಥದ ಜತೆಗೆ ಹೆಚ್ಚುವರಿಯಾಗಿ ಎರಡೂ ಬದಿ ಸರ್ವೀಸ್ ರಸ್ತೆ ಮಾಡುವುದನ್ನು ಸೇರಿಸಿಕೊಳ್ಳಲಾಗಿದೆ ಎಂದು ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಶ್ರೀಧರ್ ತಿಳಿಸಿದರು.

    ಬೆಂಗಳೂರು-ಮೈಸೂರು ಹೆದ್ದಾರಿಯ ಅನನುಕೂಲಗಳನ್ನು ಪ್ರಾಧಿಕಾರದ ಅಧಿಕಾರಗಳ ಗಮನಕ್ಕೆ ತಂದು ಪರಿಹಾರ ಕಂಡುಕೊಳ್ಳಲು ಕಣಮಿಣಕಿ ಬಳಿ ಇರುವ ಟೋಲ್ ಪ್ಲಾಜಾ ಬಳಿ ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳು ಬುಧವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿ ಸಂದರ್ಭದಲ್ಲಿ ಮಾತನಾಡಿದರು.

    ಸರ್ವೀಸ್ ರಸ್ತೆ ಪೂರ್ಣ ಮಾಡಲ್ಲ: ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಭರದಿಂದ ಸಾಗಿದೆ. ಮೊದಲ ಹಂತದ ಕಾಮಗಾರಿ ಮುಗಿದಿದೆ. ಎರಡನೇ ಹಂತದ ಕಾಮಗಾರಿ ಪ್ರಗತಿಯಲ್ಲಿದೆ. ಎರಡೂ ಬದಿಯಲ್ಲಿ ಸರ್ವೀಸ್ ರಸ್ತೆ ಕಾರ್ಯವೂ ನಡೆಯುತ್ತಿದೆ. ಆದರೆ ಪೂರ್ಣ ಪ್ರಮಾಣದಲ್ಲಿ ಸರ್ವೀಸ್ ರಸ್ತೆ ನಿರ್ಮಾಣ ಸಾಧ್ಯವಿಲ್ಲ. ಬಿಡದಿಯ ಕಾಡುಮನೆ ಕ್ರಾಸ್ ಬಳಿಯ ರೈಲ್ವೆ ಬ್ರಿಜ್ ಕೆಳಗೆ ಸರ್ವೀಸ್ ರಸ್ತೆ ಕಾಮಗಾರಿ ಮಾಡುವುದಿಲ್ಲ. ಏಕೆಂದರೆ ಪೂರ್ಣ ಪ್ರಮಾಣದಲ್ಲಿ ಸರ್ವೀಸ್ ರಸ್ತೆ ಮಾಡಿದರೆ ಎಲ್ಲ ವಾಹನಗಳು ಅಲ್ಲೇ ಸಂಚರಿಸುವುದರಿಂದ ಟೋಲ್ ಸಂಗ್ರಹ ಆಗುವುದಿಲ್ಲ. ಈ ಹಿನ್ನೆಲೆಯಲ್ಲಿ ಯಾವುದೇ ಕಾರಣಕ್ಕೂ ಬೆಂಗಳೂರು-ಮೈಸೂರು ಹೆದ್ದಾರಿಯ ಸರ್ವೀಸ್ ರಸ್ತೆಯನ್ನು ಪೂರ್ಣ ಪ್ರಮಾಣದಲ್ಲಿ ಮಾಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.

    ರಿಯಾಯಿತಿ ಪಾಸ್: ಟೋಲ್ ಪ್ಲಾಜಾಗಳಿಂದ 20 ಕಿ.ಮೀ. ವ್ಯಾಪ್ತಿಯಲ್ಲಿನ ಜನರಿಗೆ 315 ರೂ.ಗಳ ತಿಂಗಳ ಪಾಸ್‌ಗಳನ್ನು ರಿಯಾಯಿತಿ ದರದಲ್ಲಿ ನೀಡಲಾಗುತ್ತೆ. ಪ್ರತಿನಿತ್ಯ ಸಂಚರಿಸುವ ವಾಹನಗಳು ಅದೇದಿನ ಹಿಂತಿರುಗಿ ಬಂದರೆ 25% ರಿಯಾಯಿತಿ ಸಿಗಲಿದೆ. ಈ ಜಿಲ್ಲೆಯ ವಾಣಿಜ್ಯ ವಾಹನಗಳಿಗೆ 50% ರಿಯಾಯಿತಿ ಇರಲಿದೆ. ಅಂಗವಿಕಲರು, ಯೋಧರಿಗೂ ರಿಯಾಯಿತಿ ಪಾಸ್ ನೀಡಲಾಗುತ್ತದೆ. ರಿಯಾಯಿತಿ ಪಡೆಯಲು ವಾಹನ ಮಾಲೀಕರು ಆಧಾರ್ ಕಾರ್ಡ್, ವಾಹನ ಪರವಾನಗಿ ಪತ್ರವನ್ನು ಟೋಲ್ ಪ್ಲಾಜಾಗಳ ಬಳಿ ನೋಂದಣಿ ಮಾಡಿಸಿಕೊಂಡು ಪಾಸ್ ಪಡೆಯಬಹುದಾಗಿದೆ ಎಂದು ಶ್ರೀಧರ್ ಹೇಳಿದರು.

    ಹೆದ್ದಾರಿಯಲ್ಲಿ ಅಗತ್ಯ ಸೇವೆ ಲಭ್ಯ: ರಾಷ್ಟ್ರೀಯ ಹೆದ್ದಾರಿಯಲ್ಲಿ ಎಲ್ಲ ರೀತಿಯ ಅಗತ್ಯ ಸೇವೆಗಳನ್ನು ಕಲ್ಪಿಸಲಾಗಿದೆ. ಎರಡು ಟೋಲ್ ಪ್ಲಾಜಾಗಳ ಬಳಿ ಎರಡೆರಡು ಆಂಬುಲೆನ್ಸ್, ಕ್ರೇನ್, ಹೈವೆ ಗಸ್ತು ವಾಹನಗಳು ಸಿದ್ಧವಾಗಿವೆ. ಅಲ್ಲದೆ ಮಿನಿ ಕ್ಲಿನಿಕ್ ಕೂಡ ತೆರೆಯಲಾಗಿದೆ. ಇಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಟ್ಟು ತದನಂತರ ಬೇರೆ ಆಸ್ಪತ್ರೆಗಳಿಗೆ ಕಳಿಸುವ ವ್ಯವಸ್ಥೆ ಸಹ ಮಾಡಲಾಗಿದೆ. ಪ್ರತಿಯೊಬ್ಬ ವಾಹನ ಸವಾರರನು ಜವಾಬ್ದಾರಿಯುತವಾಗಿ ವಾಹನ ಚಾಲನೆ ಮಾಡಬೇಕು. ಆಗ ಮಾತ್ರ ಅಪಘಾತಗಳು ಸಂಭವಿಸುವುದಿಲ್ಲ. ಇದನ್ನು ಸವಾರರು ತಿಳಿದುಕೊಳ್ಳಬೇಕು ಎಂದು ವಾಹನ ಸವಾರರಿಗೆ ಶ್ರೀಧರ್ ಸಲಹೆ ನೀಡಿದರು.

    ಕನ್ನಡ ಪರ ಹೋರಾಟಗಾರರು ಕರೆದಿದ್ದಕ್ಕೆ ಬಂದಿದ್ದೇನೆ: ಹೆದ್ದಾರಿಯಲ್ಲಿ ಮಂಗಳವಾರದಿಂದ ಟೋಲ್ ಸಂಗ್ರಹ ಮಾಡಲು ಹಸಿರು ನಿಶಾನೆ ತೋರಲಾಗಿತ್ತು. ಈ ವಿಚಾರವಾಗಿ ಟೋಲ್ ಪ್ಲಾಜಾಗಳ ಬಳಿ ಹೋರಾಟಗಳು ನಡೆದಿದ್ದವು. ಅಲ್ಲದೆ ಸಮಸ್ಯೆಗಳನ್ನು ಬಗೆಹರಿಸದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡುವ ಎಚ್ಚರಿಕೆ ನೀಡಿದ್ದರು. ಹಾಗಾಗಿ ಕನ್ನಡಪರ ಹೋರಾಟಗಾರ ಜತೆ ಚರ್ಚೆ ಮಾಡಲು ಬಂದಿದ್ದೇನೆ ಅಷ್ಟೇ. ನಾನು ಯಾವುದೇ ಸುದ್ದಿಗೋಷ್ಠಿ ಕರೆದಿರಲಿಲ್ಲ. ಕರೆಯುವ ಅಧಿಕಾರವೂ ಇಲ್ಲ. ಕನ್ನಡ ಪರ ಹೋರಾಟಗಾರರು ಕರೆದಿದ್ದಕ್ಕೆ ಬಂದಿದ್ದೇನೆ. ನೀವು ಕೇಳುವ ಎಲ್ಲ ಪ್ರಶ್ನೆಗಳಿಗೆ ಉತ್ತರ ಕೊಡಲು ಆಗಲ್ಲ ಎಂದು ಶ್ರೀಧರ್ ಹೇಳಿದರು.

    ನನ್ನನ್ನು ಬಿಟ್ಟುಬಿಡಿ: ಕನ್ನಡಪರ ಸಂಘಟನೆ ಮುಖಂಡರ ಜತೆಗೆ ಚರ್ಚಿಸಲು ಆಗಮಿಸಿದ್ದ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಶ್ರೀಧರ್ ಅವರು ಪತ್ರಕರ್ತರು ಕೇಳುವ ಪ್ರಶ್ನೆಗಳಿಗೆ ಉತ್ತರಿಸಲು ಮುಂದಾಗಿ ಪೇಚಿಗೆ ಸಿಲುಕಿದರು. ಶ್ರೀಧರ್ ಅವರು ಕೆಲವು ಪ್ರಶ್ನೆಗಳಿಗೆ ಉತ್ತರಿಸಿದರೂ, ಹೆದ್ದಾರಿಗೆ ಸಂಬಂಧಿಸಿದಂತೆ ಪತ್ರಕರ್ತರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸದೆೆ ಕೈ ಮುಗಿದು ನನ್ನನ್ನ ಬಿಟ್ಟುಬಿಡಿ ಎಂದು ಹೇಳುವ ಮೂಲಕ ಅಲ್ಲಿಂದ ತೆರಳಿದರು.

    ಎ.ಪಿ. ರಂಗನಾಥ್ ಮಾತನಾಡಿ, ಹೆದ್ದಾರಿ ಎರಡು ಬದಿ ಸರ್ವೀಸ್ ರಸ್ತೆ, ಅಕ್ಕಪಕ್ಕದ ಗ್ರಾಮಗಳ ವಾಹನಗಳಿಗೆ ಪಾಸ್, ಹೆದ್ದಾರಿಯಲ್ಲಿ ಮೂಲಸೌಕರ್ಯ ಕೊರತೆ ಹೀಗೆ ಹಲವು ಸಮಸ್ಯೆಗಳ ಬಗ್ಗೆ ಶ್ರೀಧರ್ ಅವರ ಗಮನ ಸೆಳೆಯಲಾಗಿದೆ ಎಂದರು.

    ಸುದ್ದಿಗೋಷ್ಠಿಯಲ್ಲಿ ಬೆಂಗಳೂರು ವಕೀಲರ ಸಂಘದ ಮಾಜಿ ಅಧ್ಯಕ್ಷ ಎ.ಪಿ.ರಂಗನಾಥ್, ನವ ನಿರ್ಮಾಣ ಸೇನೆ ಅಧ್ಯಕ್ಷ ನರಸಿಂಹಮೂರ್ತಿ, ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಅಧ್ಯಕ್ಷ ನಿಲೇಶ್ ಗೌಡ , ಕನ್ನಡ ಪ್ರಕಾಶ್, ಸುನೀಲ್, ನರಸಿಂಹಯ್ಯ, ಲೋಕೇಶ್ ಗೌಡ, ರಘುಗೌಡ ಮುಂತಾದವರು ಉಪಸ್ಥಿತರಿದ್ದರು.

    ದಶಪಥ ಹೆದ್ದಾರಿಯಲ್ಲಿ ಸಂಚಾರ ಅಪಾಯಕಾರಿ; ಅಪಘಾತಗಳು ಹೆಚ್ಚು, ಸುಲಿಗೆಕೋರರ ಹಾವಳಿ
    ಚನ್ನಪಟ್ಟಣ: ಬೆಂಗಳೂರು- ಮೈಸೂರು ನಡುವಿನ ದಶಪಥ ರಸ್ತೆ ಸಂಚಾರಕ್ಕೆ ಮಂಗಳವಾರದಿಂದ ಟೋಲ್ ಸಂಗ್ರಹ ಆರಂಭಗೊಂಡಿದೆ. ಸರ್ವೀಸ್ ರಸ್ತೆ ಸೇರಿ ಹಲವು ಕಾಮಗಾರಿ ಮುಗಿಯದೇ ಟೋಲ್ ಸಂಗ್ರಹ ಆರಂಭಿಸಿರುವುದಕ್ಕೆ ಸಾಕಷ್ಟು ವಿರೋಧವೂ ವ್ಯಕ್ತವಾಗುತ್ತಿದೆ. ಈ ಮಧ್ಯೆ ರಸ್ತೆಯು ಅಪಘಾತ ಹಾಗೂ ದರೋಡೆಗೆ ಹಾಟ್‌ಸ್ಪಾಟ್ ಆಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.

    ರಸ್ತೆಯ ಒಂದಿಷ್ಟು ಭಾಗ ಹೊರತುಪಡಿಸಿ ಬಹುಪಾಲು ಮುಕ್ತಾಯಗೊಂಡಿದೆ. ಮದ್ದೂರು ಹೊರತುಪಡಿಸಿ ಉಳಿದ ಕಡೆ ನಗರದಿಂದ ಹೊರವಲಯದಲ್ಲಿ ಹೋಗಿರುವ ಈ ರಸ್ತೆ ನೋಡಲು ಆಕರ್ಷಕವಾಗಿದ್ದು, ಅಷ್ಟೇ ಅಪಾಯಕಾರಿಯಾಗಿದೆ. ವಾಹನ ಸವಾರರು ಕೊಂಚ ಎಚ್ಚರ ತಪ್ಪಿದರೂ ಅಪಾಯ ಕಟ್ಟಿಟ್ಟ ಬುತ್ತಿ. ಈ ನಡುವೆ ರಸ್ತೆ ಹಾದುಹೋಗುವ ಚನ್ನಪಟ್ಟಣದ ಕೆಲ ಭಾಗಗಳು ಅಪಘಾತದ ಹಾಟ್‌ಸ್ಪಾಟ್ ಎನಿಸಿವೆ. ಕಣ್ವ ಬಳಿಯ ಲಂಬಾಣಿ ತಾಂಡಾ, ದೇವರಹೊಸಹಳ್ಳಿ, ತಿಟ್ಟಮಾರನಹಳ್ಳಿ, ಬೈರಾಪಟ್ಟಣ ಸೇರಿ ಹಲವೆಡೆ ಈಗಾಗಲೇ ಅಪಘಾತದಿಂದ ಸಾಕಷ್ಟು ಸಾವು-ನೋವುಗಳಾಗಿವೆ.

    ಟೋಲ್ ಸಂಗ್ರಹ ಆರಂಭವಾದ ಮಂಗಳವಾರವೂ ತಾಲೂಕು ವ್ಯಾಪ್ತಿಯಲ್ಲಿ ನಡೆದ ಅಪಘಾತ ಇದಕ್ಕೆ ಉದಾಹರಣೆ. ಬೆಂಗಳೂರಿನಿಂದ ಮೈಸೂರು ಕಡೆ ತೆರಳುತ್ತಿದ್ದ ಕಾರೊಂದರ ಟೈರ್ ಸ್ಫೋಟಗೊಂಡು ಅಪಘಾತ ಸಂಭವಿಸಿದೆ. ಆನಂದ್ ಆರಾಧ್ಯ (38) ಎಂಬುವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ತಾಲೂಕಿನ ಲಂಬಾಣಿ ತಾಂಡಾ ಬಳಿ ಮೈಸೂರು ಕಡೆ ಅತೀ ವೇಗವಾಗಿ ಹೋಗುತ್ತಿದ್ದ ಕಾರಿನ ಟೈರ್ ಸ್ಫೋಟಗೊಂಡು ಕಾರು ನಿಯಂತ್ರಣಕ್ಕೆ ಸಿಗದೆ ಅಪಘಾತ ಸಂಭವಿಸಿದೆ. ಇದಷ್ಟೇ ಅಲ್ಲದೇ ಪ್ರತಿದಿನ ತಾಲೂಕು ವ್ಯಾಪ್ತಿಯ ಈ ರಸ್ತೆಯಲ್ಲಿ ಸಣ್ಣಪುಟ್ಟ ಅಪಘಾತಗಳು ಸಾಮಾನ್ಯ ಎನಿಸಿವೆ.

    ರಾಬರಿಗಳಿಗೇನೂ ಕಡಿಮೆ ಇಲ್ಲ: ಈ ರಸ್ತೆ ಕೇವಲ ಅಪಘಾತವಷ್ಟೇ ಅಲ್ಲದೆ ದರೋಡೆಗೂ ಕುಖ್ಯಾತಿ ಪಡೆಯುತ್ತಿದೆ. ತಾಲೂಕು ವ್ಯಾಪ್ತಿಯಲ್ಲಿ ಈಗಾಗಲೇ ಹಲವು ಪ್ರಕರಣಗಳು ನಡೆದಿವೆ. ಕೆಲವು ಪ್ರಕರಣಗಳು ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು, ಯಾವ ಉಸಾಬರಿ ಬೇಡ ಎಂದು ಮರೆಯಾದ ಪ್ರಕರಣಗಳೇ ಹೆಚ್ಚಾಗಿವೆ.

    ಕಾರು ಕೆಟ್ಟು ಹೋದ ಪರಿಣಾಮ ಟೋಯಿಂಗ್ ವಾಹನಕ್ಕಾಗಿ ಕಾಯುತ್ತಿದ್ದ ಪ್ರಯಾಣಿಕರನ್ನು ಇಬ್ಬರು ದರೋಡೆಕೋರರು ಮಾರಕಾಸ ತೋರಿಸಿ ಬೆದರಿಸಿ, 58 ಗ್ರಾಂ ಚಿನ್ನಾಭರಣ ಹಾಗೂ 8 ಸಾವಿರ ರೂ. ಕಸಿದು ಪರಾರಿಯಾಗಿರುವುದು ದೇವಹೊಸಹಳ್ಳಿ-ತಿಟ್ಟಮಾರನಹಳ್ಳಿ ನಡುವಿನ ಬೈಪಾಸ್ ರಸ್ತೆಯಲ್ಲಿ ಭಾನುವಾರವಷ್ಟೇ ನಡೆದಿದೆ.
    ಬೆಂಗಳೂರಿನ ಲೋಹಿತ್ ಮತ್ತು ಕಾವ್ಯ ದಂಪತಿ ಸ್ನೇಹಿತ ನವೀನ್ ಮತ್ತು ಸೌಜನ್ಯ ದಂಪತಿಯನ್ನು ಮೈಸೂರಿಗೆ ಬಿಡಲು ಕಾರಿನಲ್ಲಿ ಹೋಗುತ್ತಿರುವಾಗ ಮಾರ್ಗಮಧ್ಯೆ ಕಾರು ಕೆಟ್ಟುಹೋಗಿದೆ. ತಕ್ಷಣ ಟೋಯಿಂಗ್ ವಾಹನಕ್ಕೆ ಕರೆ ಮಾಡಿ ವಾಹನ ಬರುವವರೆಗೆ ಕಾಯುತ್ತಾ ನಿಂತಿದ್ದಾರೆ. ಈ ಸಂದರ್ಭದಲ್ಲಿ ಬೈಕ್‌ನಲ್ಲಿ ಬಂದ ಇಬ್ಬರು ಸೌಜನ್ಯ ಮತ್ತು ನವೀನ್ ಮೈಮೇಲಿದ್ದ 58 ಗ್ರಾಂ ತೂಕದ ಚಿನ್ನಾಭರಣ ಹಾಗೂ ಲೋಹಿತ್ ಬಳಿ ಇದ್ದ 8 ಸಾವಿರ ರೂ. ಕಸಿದು ಪರಾರಿಯಾಗಿದ್ದಾರೆ. ಈ ಸಂಬಂಧ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಈ ರಸ್ತೆ ಅಪಘಾತ ಹಾಗೂ ದರೋಡೆಯ ಹಾಟ್‌ಸ್ಪಾಟ್ ಆಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಇವುಗಳ ಬಗ್ಗೆ ಸಂಬಂಧಪಟ್ಟವರು ಕ್ರಮ ಕೈಗೊಂಡು ಸುಂದರ ರಸ್ತೆಗೆ ಕಪ್ಪುಚುಕ್ಕಿ ಬೀಳದಂತೆ ಕ್ರಮ ಕೈಗೊಳ್ಳಬೇಕಿದೆ.

    ಎರಡು ದಿನ ಪೂರೈಸಿದ ಟೋಲ್ ಸಂಗ್ರಹಣೆ: ಬಿಡದಿ: ಸಣ್ಣ-ಪುಟ್ಟ ತಾಂತ್ರಿಕ ಸಮಸ್ಯೆಗಳನ್ನು ಹೊರತುಪಡಿಸಿ ಬೆಂಗಳೂರು-ಮೈಸೂರು ದಶಪಥ ಹೆದ್ದಾರಿಯ ಎರಡೂ ಟೋಲ್ ಪ್ಲಾಜಾಗಳಲ್ಲಿ ಟೋಲ್ ಸಂಗ್ರಹಣೆ 2ನೇ ದಿನವಾದ ಬುಧವಾರ ಸುಗಮವಾಗಿ ನಡೆಯಿತು. ಸಣ್ಣ-ಪುಟ್ಟ ತಾಂತ್ರಿಕ ಸಮಸ್ಯೆಗಳು ವಾಹನ ಸವಾರರಿಗೆ ಕಿರಿಕಿರಿ ಉಂಟು ಮಾಡಿತು. ಾಸ್ಟ್‌ಟ್ಯಾಗ್ ಇದ್ದರೂ ಸ್ಕಾೃನ್ ಆಗದೆ ಸಮಸ್ಯೆ ಉಂಟಾಯಿತು. ಸರ್ವೀಸ್ ರಸ್ತೆ, ಮೂಲಸೌಕರ್ಯಕ್ಕೆ ಆಗ್ರಹಿಸಿ ಟೋಲ್ ಪ್ಲಾಜಾಗಳ ಬಳಿ ಬುಧವಾರವೂ ಪ್ರತಿಭಟನೆ ನಡೆಸಿದ ಕನ್ನಡಪರ ಹೋರಾಟಗಾರರು, ಯುವ ಕಾಂಗ್ರೆಸ್ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು.

    ಬಿಡದಿ ಸಮೀಪದ ಶೇಷಗಿರಿಹಳ್ಳಿ ಬಳಿಯ ಟೋಲ್ ಪ್ಲಾಜಾದಲ್ಲಿ ಅಡಚಣೆ ಇಲ್ಲದೆ ಟೋಲ್ ಸಂಗ್ರಹಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts