More

    ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ ಮಾಜಿ ಸಚಿವರ ಬಂಧನಕ್ಕೆ ಆಗ್ರಹ

    ದಾವಣಗೆರೆ: ಕಲ್ಲೇಶ್ವರ ರೈಸ್‌ಮಿಲ್ ಹಿಂಬದಿಯ ತೋಟದ ಮನೆಯಲ್ಲಿ ಅಕ್ರಮವಾಗಿ ವನ್ಯಜೀವಿಗಳನ್ನು ಇರಿಸಿದ ಆರೋಪದಡಿ ಮಾಜಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಅವರನ್ನು ಬಂಧಿಸಬೇಕು. ಮಿಲ್‌ಗೆ ಬೀಗಮುದ್ರೆ ಹಾಕುವಂತೆ ಆಗ್ರಹಿಸಿ ನಗರದಲ್ಲಿ ಬಿಜೆಪಿ ಮುಖಂಡರು, ಕಾರ್ಯಕರ್ತರು ಶುಕ್ರವಾರ ಪ್ರತಿಭಟನೆ ನಡೆಸಿದರು.
    ಮಹಾನಗರ ಪಾಲಿಕೆ ಎದುರು ಪ್ರತಿಭಟನೆ ನಡೆಸಿ, ಮಾಜಿ ಸಚಿವರ ವಿರುದ್ಧ ಧಿಕ್ಕಾರ ಕೂಗಿದ ಕಾರ್ಯಕರ್ತರು, ಉಪವಿಭಾಗಾಧಿಕಾರಿ ಕಚೇರಿಗೆ ತೆರಳಿ ಮನವಿಪತ್ರ ಸಲ್ಲಿಸಿದರು.
    ಸಿಸಿಬಿ ಹಾಗೂ ಅರಣ್ಯ ವಲಯಾಧಿಕಾರಿಗಳ ದಾಳಿ ವೇಳೆ ಕಾಡು ಪ್ರಾಣಿಗಳು, ಹಾಗೂ ಅದರ ಮೂಳೆಗಳು ಸಿಕ್ಕಿವೆ. ಹೀಗಾಗಿ ಮಾಜಿ ಸಚಿವ ಎಸ್.ಅವರು ಎಸ್. ಮಲ್ಲಿಕಾರ್ಜುನ್ ವಿರುದ್ಧ ಪ್ರಕರಣ ದಾಖಲಿಸಬೇಕು. ಜಿಂಕೆ, ಕೃಷ್ಣಮೃಗ, ಎರಡು ನರಿ, ಕಾಡು ಹಂದಿ ಸೇರಿ ಅನೇಕ ಪ್ರಾಣಿಗಳು ಸಿಕ್ಕಿರುವುದಾಗಿ ಅರಣ್ಯ ವಲಯಾಧಿಕಾರಿಗಳು ಹೇಳಿರುವ ಹಿನ್ನೆಲೆಯಲ್ಲಿ ಕಾನೂನುಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.
    ಮಾಜಿ ಮೇಯರ್ ಬಿ.ಜೆ. ಅಜಯಕುಮಾರ್ ಮಾತನಾಡಿ ವನ್ಯಜೀವಿಗಳನ್ನು ಅಕ್ರಮವಾಗಿ ಇರಿಸಿಕೊಳ್ಳುವುದು ಮತ್ತು ಅದರ ಚರ್ಮ ಮಾರಾಟ ಮಾಡುವುದು ತಪ್ಪು. ಬೆಂಗಳೂರಿನಲ್ಲಿ ಸಿಕ್ಕು ಬಿದ್ದ ಆರೋಪಿ ಹೇಳಿಕೆ ಪ್ರಕಾರ ಆರೋಪಿ ಸ್ಥಾನದಲ್ಲಿರುವ ಮಾಜಿ ಸಚಿವ ಮಲ್ಲಿಕಾರ್ಜುನ್ ಅವರನ್ನು ಬಂಧಿಸಬೇಕು. ತನಿಖೆ ದಿಕ್ಕು ಬದಲಿಸುವ ಯತ್ನ ನಡೆದಲ್ಲಿ ಹೋರಾಟ ನಡೆಸಲಾಗುವುದು ಎಂದರು.
    ದೂಡಾ ಅಧ್ಯಕ್ಷ ಎ.ವೈ.ಪ್ರಕಾಶ್ ಮಾತನಾಡಿ, ಪರವಾನಿಗೆ ಇಲ್ಲದಲೇ ಮಾಜಿ ಸಚಿವರು ವನ್ಯಜೀವಿಗಳನ್ನು ಸಾಕಿದ್ದಾರೆ. ವನ್ಯಜೀವಿಗಳ ಸಂರಕ್ಷಣೆ ಕಾಯ್ದೆ ಉಲ್ಲಂಘಿಸಿದ್ದಾರೆ. ಅಧಿಕಾರಿಗಳು ಈ ಪ್ರಕರಣದಲ್ಲಿ ಸೂಕ್ತ ಕ್ರಮ ಕೈಗೊಳ್ಳಲು ಹಿಂದೇಟು ಹಾಕಬಾರದು ಎಂದು ಹೇಳಿದರು.
    ಮೇಯರ್ ಜಯಮ್ಮ ಗೋಪಿನಾಯ್ಕ, ಉಪಮೇಯರ್ ಗಾಯತ್ರಿ ಖಂಡೋಜಿರಾವ್, ಪಾಲಿಕೆ ಸದಸ್ಯರಾದ ಸೋಗಿ ಶಾಂತಕುಮಾರ್, ಎಲ್.ಡಿ.ಗೋಣೆಪ್ಪ, ಕೆ.ಪ್ರಸನ್ನಕುಮಾರ್, ಕೆ.ಎಂ.ವೀರೇಶ್, ರಾಕೇಶ್ ಜಾಧವ್, ಗೋಪಿನಾಯ್ಕ್, ಲಕ್ಷ್ಮಣ್, ಸುರೇಶ್ ಗಂಡಗಾಳೆ, ಟಿಂಕರ್ ಮಂಜಣ್ಣ, ಜಯಪ್ರಕಾಶ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts