More

    ಬಿಇಒ ಬಸವರಾಜು, ಚಾಲಕನ ವಿರುದ್ಧ ಎಫ್‌ಐಆರ್

    ಪಿರಿಯಾಪಟ್ಟಣ: ಪಿರಿಯಾಪಟ್ಟಣದ ಕ್ಷೇತ್ರ ಶಿಕ್ಷಣಾಧಿಕಾರಿ ಬಸವರಾಜು ಮತ್ತು ಅವರ ಕಾರು ಚಾಲಕ ಷರೀಫ್ ವಿರುದ್ಧ ಪಿರಿಯಾಪಟ್ಟಣದ ಪೊಲೀಸ್ ಠಾಣೆಯಲ್ಲಿ ಜಾತಿ ನಿಂದನೆ ಪ್ರಕರಣ ದಾಖಲಾಗಿದೆ.


    ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಸಿ.ಎಂ.ಶಿವಯ್ಯ ನೀಡಿದ ದೂರು ಆಧರಿಸಿ ಪಿರಿಯಾಪಟ್ಟಣ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ತಾಲೂಕು ಮಟ್ಟದ ಕ್ರೀಡಾಕೂಟದ ಅನುದಾನಕ್ಕೆ ಸಂಬಂಧಿಸಿದಂತೆ ಸೆ.17 ರಂದು ಬಿಇಒ ಬಸವರಾಜು ಅವರಿಗೆ ನಾನು ಕರೆ ಮಾಡಿದ್ದೆ. ನನ್ನ ಜತೆ ಮಾತನಾಡಿ ಕಾಲ್ ಕಟ್ ಮಾಡದೆ ಮೊಬೈಲ್ ಹಾಗೆ ಇಟ್ಟಿದ್ದರು. ಈ ವೇಳೆ ಬಸವರಾಜು ಅವಾಚ್ಯ ಶಬ್ಧಗಳಿಂದ ನನ್ನನ್ನು ನಿಂದಿಸಿದ್ದು, ಜಾತಿ ನಿಂದನೆ ಮಾಡಿದ್ದಾರೆ. ಅಲ್ಲದೆ ವಾಹನ ಚಾಲಕ ಷರೀಫ್ ಸಹ ಇದರಲ್ಲಿ ಭಾಗಿಯಾಗಿದ್ದು, ಈತನೂ ಜಾತಿ ನಿಂದನೆಯ ಮಾತುಗಳನ್ನಾಡಿರುವ ಸಂಭಾಷಣೆಯನ್ನು ರೆಕಾರ್ಡ್ ಮಾಡಿಕೊಂಡಿದ್ದೇನೆ ಎಂದು ಶಿವಯ್ಯ ದೂರು ನೀಡಿದ್ದರು. ಈ ಬಗ್ಗೆ ಕ್ರಮವಹಿಸಿರುವ ಪೊಲೀಸರು ಎಸ್ಸಿ-ಎಸ್ಟಿ ದೌರ್ಜನ್ಯ ಕಾಯ್ದೆಯಡಿ ಜಾತಿ ನಿಂದನೆ ಪ್ರಕರಣ ದಾಖಲಿಸಿದ್ದಾರೆ.


    ಚಾಲಕ ಷರೀಫ್ ಮತ್ತು ಬಿಇಒ ಬಸವರಾಜು ಜೀಪ್‌ನಲ್ಲಿ ತೆರಳುವಾಗ ಪರಸ್ಪರ ಸಂಭಾಷಣೆ ಮಾಡಿರುವ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು ಈ ಇಬ್ಬರೂ ದಲಿತರನ್ನು ಅವಹೇಳನ ಮಾಡಿ ಮಾತನಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿರುವ ಬಗ್ಗೆ ಕ್ರಮವಹಿಸುವಂತೆ ದಲಿತ ನವನಿರ್ಮಾಣ ವೇದಿಕೆಯ ಸದಸ್ಯರು ಕೂಡ ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ಸಿ.ಎಂ.ಶಿವಯ್ಯ ನೀಡಿರುವ ದೂರು ಆಧರಿಸಿ ಪ್ರಕರಣ ದಾಖಲಿಸಿದ್ದಾರೆ.

    ಡಿಡಿಪಿಐ ಭೇಟಿ: ಪಿರಿಯಾಪಟ್ಟಣಕ್ಕೆ ಬುಧವಾರ ಭೇಟಿ ನೀಡಿದ ಡಿಡಿಪಿಐ ರಾಮಚಂದ್ರರಾಜೇಅರಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಸವರಾಜು ಮತ್ತು ಷರೀಫ್‌ಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts