More

    ಬಿಆರ್​ಟಿಎಸ್ ಮಾರ್ಗದಲ್ಲಿ ಬೂಮ್ ಬ್ಯಾರಿಯರ್

    ಹುಬ್ಬಳ್ಳಿ: ಎಚ್​ಡಿಬಿಆರ್​ಟಿಎಸ್ ಮಾರ್ಗವನ್ನು ಮತ್ತಷ್ಟು ಸ್ಮಾರ್ಟ್​ಗೊಳಿಸುವ ಮೂಲಕ ಈ ಬಸ್​ಗಳ ಸಂಚಾರವನ್ನು ಇನ್ನಷ್ಟು ಪರಿಣಾಮಕಾರಿಗೊಳಿಸಲು ಹುಬ್ಬಳ್ಳಿ-ಧಾರವಾಡ ಸ್ಮಾರ್ಟ್​ಸಿಟಿ ಕಂಪನಿ ಮುಂದಾಗಿದೆ.

    ಅವಳಿ ನಗರ ಮಧ್ಯದ ಬಿಆರ್​ಟಿಎಸ್ ಮಾರ್ಗದಲ್ಲಿ ಚಿಗರಿ ಬಸ್​ಗಳನ್ನು ಹೊರತುಪಡಿಸಿ ಬೇರೆ ವಾಹನಗಳು ಪ್ರವೇಶಿಸದಂತೆ ಸದ್ಯ ಬ್ಯಾರಿಕೇಡ್​ಗಳನ್ನು ಇಡಲಾಗಿದೆ. ಚಿಗರಿ ಬಸ್ ಬಂದಾಗ ಬ್ಯಾರಿಕೇಡ್ ತೆಗೆಯಲು ಹಾಗೂ ಬಸ್ ಹೋದ ನಂತರ ಮತ್ತೆ ಬ್ಯಾರಿಕೇಡ್ ಹಾಕುವುದಕ್ಕಾಗಿ ಖಾಸಗಿ ಭದ್ರತಾ ಸಿಬ್ಬಂದಿ ನೇಮಿಸಲಾಗಿದೆ.

    ಖಾಸಗಿ ಭದ್ರತಾ ಸಿಬ್ಬಂದಿಗಾಗಿ ಎಚ್​ಡಿಬಿಆರ್​ಟಿಎಸ್ ಪ್ರತ್ಯೇಕ ವೇತನ ಪಾವತಿಸುತ್ತಿದೆ. ಬಸ್ ಬರುವುದನ್ನು ದೂರದಿಂದಲೇ ನೋಡಿ, ಸಮೀಪಿಸಿದಾಗ ಬ್ಯಾರಿಕೇಡ್ ತೆಗೆದು, ಮತ್ತೆ ಮೊದಲಿನಂತೆ ಹಾಕುವುದು ಖಾಸಗಿ ಭದ್ರತಾ ಸಿಬ್ಬಂದಿಯ ನಿತ್ಯದ ಕೆಲಸ.

    ಈ ಕೆಲಸವನ್ನು ಸ್ಮಾರ್ಟ್ ಆಗಿಸಲು ಹು-ಧಾ ಸ್ಮಾರ್ಟ್​ಸಿಟಿ ಕಂಪನಿ 5 ಕೋಟಿ ರೂ. ವೆಚ್ಚದಲ್ಲಿ ಎಚ್​ಡಿಬಿಆರ್​ಟಿಎಸ್ ಮಾರ್ಗದ ಪ್ರತಿ ಝೀಬ್ರಾ ಕ್ರಾಸ್ ನಂತರದ ಪ್ರವೇಶ ದ್ವಾರದಲ್ಲಿ ಬೂಮ್ ಬ್ಯಾರಿಯರ್ಸ್ (ಸ್ವಯಂ ಚಾಲಿತ ಗೇಟ್) ಅಳವಡಿಸಲಿದೆ.

    ಬಿಆರ್​ಟಿಎಸ್ ಮಾರ್ಗದಲ್ಲಿ 30ರಷ್ಟು ಝೀಬ್ರಾ ಕ್ರಾಸ್​ಗಳಿವೆ. ಚಿಗರಿ ಬಸ್ ಪ್ರವೇಶಿಸುವ ಬಿಆರ್​ಟಿಎಸ್​ನ ಎರಡೂ ಮಾರ್ಗದಲ್ಲಿ ಬೂಮ್ ಬ್ಯಾರಿಯರ್ಸ್ ಅಳವಡಿಸಲಾಗುವುದು.

    ಈಗಾಗಲೇ ಜಾರಿಯಲ್ಲಿರುವ ಫಾಸ್ಟ್​ಟ್ಯಾಗ್ ಮಾದರಿಯಲ್ಲಿ ಚಿಗರಿ ಬಸ್​ಗಳಿಗೆ ಪ್ರತ್ಯೇಕ ಟ್ಯಾಗ್ ಅಳವಡಿಸಲಾಗುವುದು. ಅಂಥ ಚಿಗರಿ ಬಸ್ ಸಮೀಪಿಸಿದ ತಕ್ಷಣ ಬೂಮ್ ಬ್ಯಾರಿಯರ್ಸ್ ಸ್ವಯಂ ಚಾಲಿತವಾಗಿ ತೆರೆಯುತ್ತದೆ.

    ಮುಂಬೈ ಗುರಗಾಂವ್​ನ ಟೆಕ್ನೊಕ್ರ್ಯಾಟ್ಸ್ ಸೆಕ್ಯುರಿಟಿ ಸಿಸ್ಟಮ್ ಪ್ರೖೆ.ಲಿ. ಸಂಸ್ಥೆಗೆ ಬೂಮ್ ಬ್ಯಾರಿಯರ್ಸ್ ಅಳವಡಿಸುವ ಒಪ್ಪಂದದ ಜೊತೆಗೆ 5 ವರ್ಷ ನಿರ್ವಹಣೆಯ ಗುತ್ತಿಗೆ ನೀಡಲಾಗಿದೆ. ಈ ಸಂಸ್ಥೆ 3.87 ಕೋಟಿ ರೂ. ವೆಚ್ಚದಲ್ಲಿ ಎಚ್​ಡಿಬಿಆರ್​ಟಿಎಸ್ ಮಾರ್ಗದಲ್ಲಿ ಬೂಮ್ ಬ್ಯಾರಿಯರ್ಸ್ ಅಳವಡಿಸಲಿದೆ. ಇನ್ನುಳಿದ ಬಾಕಿ ಹಣವನ್ನು ಎಚ್​ಡಿಬಿಆರ್​ಟಿಎಸ್ ಬಳಕೆ ಮಾಡಿಕೊಳ್ಳಲಿದೆ.

    15 ದಿನಗಳಲ್ಲಿ ಟೆಕ್ನೊಕ್ರ್ಯಾಟ್ಸ್ ಸೆಕ್ಯುರಿಟಿ ಸಿಸ್ಟೆಮ್ ಪ್ರೖೆ.ಲಿ. ಸಂಸ್ಥೆ ಬೂಮ್ ಬ್ಯಾರಿಯರ್ಸ್ ಅಳವಡಿಸುವುದಕ್ಕಾಗಿ ಸ್ಮಾರ್ಟ್​ಸಿಟಿ ಕಂಪನಿಯೊಂದಿಗೆ ಒಪ್ಪಂದಕ್ಕೆ ಸಹಿ ಹಾಕಲಿದ್ದು, ನಂತರದ 12 ತಿಂಗಳೊಳಗೆ ಬ್ಯಾರಿಯರ್ಸ್ ಅಳವಡಿಸುವ ಕಾರ್ಯ ಪೂರ್ಣಗೊಳಿಸಲಿದೆ.

    ಯಾರ್ಯಾರಿಗೆ ಫಾಸ್ಟ್​ಟ್ಯಾಗ್?

    ಚಿಗರಿ ಬಸ್​ಗಳ ಜೊತೆಗೆ ಜಿಲ್ಲೆ ಹಾಗೂ ಅಕ್ಕಪಕ್ಕದ ಜಿಲ್ಲೆಗಳ ಎಲ್ಲ ಆಂಬುಲೆನ್ಸ್​ಗಳಿಗೆ, ಅಗ್ನಿಶಾಮಕ ವಾಹನಗಳಿಗೆ, ಜಿಲ್ಲಾಧಿಕಾರಿ, ಪೊಲೀಸ್ ಆಯುಕ್ತರು, ಎಸ್​ಪಿ, ಪ್ರಮುಖ ಅಧಿಕಾರಿಗಳ ಮತ್ತು ಬೆಂಗಾವಲು ಪಡೆಗಳ ವಾಹನಗಳಿಗೆ ಫಾಸ್ಟ್​ಟ್ಯಾಗ್ ಮಾದರಿಯ ಟ್ಯಾಗ್ ಅಳವಡಿಸಲಾಗುವುದು.

    ದೇಶದ ವಿವಿಧೆಡೆ ಇರುವ ಬಿಆರ್​ಟಿಎಸ್ ಬಸ್​ನ ಯಾವುದೇ ಮಾರ್ಗದಲ್ಲಿ ಬೂಮ್ ಬ್ಯಾರಿಯರ್ಸ್ ಅಳವಡಿಸಿಲ್ಲ. ಎಚ್​ಡಿಬಿಆರ್​ಟಿಎಸ್ ಮಾರ್ಗದಲ್ಲಿ ಅಳವಡಿಸುತ್ತಿರುವ ಬೂಮ್ ಬ್ಯಾರಿಯರ್ಸ್ ಒಂದು ಮಾದರಿಯಾಗಿರಲಿದೆ.
    | ಎಸ್.ಎಚ್. ನರೇಗಲ್, ಹು-ಧಾ ಸ್ಮಾರ್ಟ್​ಸಿಟಿ ಕಂಪನಿ ವಿಶೇಷ ಅಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts