More

    ಬಾಳಿಗೆ ಆಸರೆಯಾಗದ ಬಾಳೆ

    ಡಂಬಳ: ಕರೊನಾ ಹಾವಳಿಯಿಂದಾಗಿ ಖರೀದಿದಾರರು ಸಿಗದೆ ಡಂಬಳ ಹೋಬಳಿ ವ್ಯಾಪ್ತಿಯ ಬಾಳೆ ಬೆಳೆಗಾರರು ಸಂಕಷ್ಟಕ್ಕೀಡಾಗಿದ್ದಾರೆ.

    ಡೋಣಿ ಗ್ರಾಮದ ಹಾಲಯ್ಯ ಕಲ್ಲೂರಮಠ ಅವರು 4 ಎಕರೆ ತೊಟದಲ್ಲಿ ಬೆಳೆದ ಬಾಳೆ ಕಟಾವಿಗೆ ಬಂದಿದೆ. ಆದರೆ, ಮಾರುಕಟ್ಟೆ ಬಂದ್ ಆಗಿದ್ದರಿಂದ ಕಟಾವು ಮಾಡಲಾಗದೆ ಬಾಳೆ ಗೊನೆ ನೆಲಕಚ್ಚುತ್ತಿವೆ. ಅಂದಾಜು 3 ಲಕ್ಷ ರೂ. ಖರ್ಚು ಮಾಡಲಾಗಿದ್ದು ಮಾಡಿದ ಖರ್ಚು ಕೂಡ ವಾಪಸ್ ಬಾರದಂತಾಗಿದೆ. ಇದೇ ಗ್ರಾಮದ ಮತ್ತೊಬ್ಬ ರೈತ ಶಂಕರಗೌಡ ಪಾಟೀಲ ಎರಡೂವರೆ ಎಕರೆ ತೋಟದಲ್ಲಿ 2 ಲಕ್ಷ ರೂ. ಖರ್ಚು ಮಾಡಿ ಬೆಳೆಯಲಾದ ಬಾಳೆ ಖರೀದಿದಾರರಿಲ್ಲದೇ ಕೊಳೆಯುವಂತಾಗಿದೆ.

    ಬಾಳೆ ಕಟಾವಿಗೆ ಬಂದಿದ್ದು ಉತ್ತಮ ಫಸಲು ಕೂಡ ಬಂದಿದೆ. ಆದರೆ, ಮಾಹಮಾರಿ ಕರೊನಾ ವೈರಸ್​ನಿಂದಾಗಿ ಮಾರುಕಟ್ಟೆಯಲ್ಲಿ ಖರೀದಿ ಮಾಡುವವರಿಲ್ಲದೆ ಬಾಳೆಯು ತೋಟದಲ್ಲೇ ಕೊಳೆಯುತ್ತಿದೆ. ಇದರಿಂದ ತೋಟಗಾರಿಕೆ ಬೆಳೆಗಾರರು ಸಾಲದ ಸುಳಿಯಲ್ಲಿ ಸಿಲುಕುವಂತಾಗಿದೆ.
    | ಬಸವರಾಜ ವೀರಯ್ಯ ಕಲ್ಲೂರಮಠ, ಶಂಕರಗೌಡ ಪಾಟೀಲ ಬಾಳೆ ಬೆಳೆಗಾರರು

    ಹೂ ಕಟ್ಟುವವರ ಹೊಟ್ಟೆಗಿಲ್ಲ ಹಿಟ್ಟು

    ರೋಣ: ಕರೊನಾ ವೈರಸ್ ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಹೇರಲಾಗಿರುವ ಲಾಕ್​ಡೌನ್​ನಿಂದಾಗಿ ಹೂವಿನ ವ್ಯಾಪಾರವನ್ನೇ ನಂಬಿಕೊಂಡಿದ್ದ ಪಟ್ಟಣದ 100ಕ್ಕೂ ಹೆಚ್ಚು ಬಡ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ.

    ಪಟ್ಟಣದ ಕಲ್ಯಾಣನಗರ, ಕಟಗರ ಓಣಿ ಸೇರಿ ಬಸ್ ನಿಲ್ದಾಣದ ಸುತ್ತಮುತ್ತಲಿನ ಪ್ರದೇಶದಲ್ಲಿ 100ಕ್ಕೂ ಹೆಚ್ಚು ಕುಟುಂಬಗಳು ವಾಸಿಸುತ್ತಿವೆ. ಇವರಲ್ಲಿ ಕೆಲವರು ಬಸ್ ನಿಲ್ದಾಣದ ಮುಂದಿರುವ ಫುಟ್​ಪಾತ್​ನಲ್ಲಿ ಹೂವು ಮಾರುತ್ತಿದ್ದರೆ ಮತ್ತೆ ಕೆಲವರು ಹೂ ಕಟ್ಟಿ ಮನೆ ಮನೆಗೆ ಮಾರಾಟ ಮಾಡುವ ಮೂಲಕ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದರು. ಲಾಕ್​ಡೌನ್​ನಿಂದಾಗಿ ಕೆಲಸ ಇಲ್ಲದಂತಾಗಿದೆ. ಹೂ ಮಾರಾಟ ಎನ್ನುವುದು ಸರಪಣಿ ಇದ್ದಂತೆ. ಇಲ್ಲಿ ಬೆಳೆಗಾರರು, ಹೂ ಕಟ್ಟುವವರು, ಮಾರಾಟ ಮಾಡುವವರು, ಗ್ರಾಹಕರು ಪರಸ್ಪರ ಕೊಂಡಿಗಳಾಗಿರುತ್ತಾರೆ. ಕರೊನಾ ಸೋಂಕು ಹರಡುವಿಕೆಯಿಂದ ಈ ಕೊಂಡಿಯೇ ತುಂಡಾದಂತಾಗಿದೆ.

    ಹೂವು ಕಟ್ಟಿ ಮಾರಾಟ ಮಾಡುವುದನ್ನು ಬಿಟ್ಟರೆ ನಮ್ಗೆ ಬೇರೆ ಕೆಲ್ಸ ಗೊತ್ತಿಲ್ಲ. ದಿನಾಲು 400 ರಿಂದ 500 ರೂ.ಗಳನ್ನು ದುಡಿಯುತ್ತಿದ್ದೇವು. ಕಳೆದ ಹಲವು ದಿನಗಳಿಂದ ಹೂವುಗಳು ಬರುತ್ತಿಲ್ಲ. ಕೈಗೆ ಕೆಲಸವಿಲ್ಲ. ಇನ್ನೂ ಎಷ್ಟು ದಿನಾ ಹೀಗೆ ಖಾಲಿ ಕುಳಿತುಕೊಳ್ಳಬೇಕು ಎನ್ನುವುದು ತಿಳಿಯುತ್ತಿಲ್ಲ. ಮನೆಯಲ್ಲಿ ಮಕ್ಕಳು, ವಯೋಸಹಜ ಕಾಯಿಲೆಯಿಂದ ಬಳಲುತ್ತಿರುವ ವೃದ್ಧರಿದ್ದು, ಅವರನ್ನು ಜೋಪಾನ ಮಾಡುವುದು ಕಷ್ಟವಾಗುತ್ತಿದೆ.
    | ರಮ್ಜಾನಬಿ ಮುಲ್ಲಾ ಹೂವು ವ್ಯಾಪಾರಿ, ರೋಣ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts