More

    ಬಸವ ಸಂದೇಶ ನಿರಂತರ ಪ್ರಸಾರವಾಗಲಿ

    ಅಥಣಿ: ಶೇಗುಣಸಿ ಗ್ರಾಮದ ಭಕ್ತರ ಭಕ್ತಿಯ ಶಕ್ತಿಯಿಂದ ಒಂದು ತಿಂಗಳವರೆಗೆ ಬಸವಪುರಾಣ ಪ್ರವಚನ, ಹಿರಿಯ ಶ್ರೀಗಳ ಅಮೃತ ಮಹೋತ್ಸವ, ಡಾ. ಮಹಾಂತ ಸ್ವಾಮೀಜಿ ಅವರ ನಿರಂಜನ ಚರಪಟ್ಟಾಧಿಕಾರ ಸಮಾರಂಭ ಯಶಸ್ವಿಯಾಗಿ ನಾಡಿಗೆ ಮಾದರಿಯಾಗಿದೆ. ಇದೇ ರೀತಿ ಬಸವ ಸಂದೇಶ ನಿರಂತರವಾಗಿ ಪ್ರಸಾರವಾಗಲಿ ಎಂದು ಸಮಾಜ ಸೇವಕ ಗಜಾನನ ಮಂಗಸೂಳಿ ಹೇಳಿದರು.

    ಶೇಗುಣಸಿ ಗ್ರಾಮದ ವಿರಕ್ತಮಠದ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಗ್ರಾಮಸ್ಥರಿಗೆ ಅಭಿನಂದನಾ ಸಮಾರಂಭ, 21 ದಿನಗಳ ಮೌನಾನುಷ್ಠಾನ ಪೂರೈಸಿದ ಡಾ. ಮಹಾಂತ ಸ್ವಾಮೀಜಿ ಅವರಿಗೆ ಸತ್ಕಾರ ಸಮಾರಂಭದಲ್ಲಿ ಅವರು ಮಾತನಾಡಿದರು.

    ಯುವ ಜನಾಂಗಕ್ಕೆ ಶರಣ ತತ್ತ್ವ, ಲಿಂಗಾಯತ ಧರ್ಮದ ಬಗ್ಗೆ ತಿಳಿಯಪಡಿಸುವುದು ಅವಶ್ಯವಾಗಿದೆ. ಕವಲುದಾರಿಯಲ್ಲಿ ಸಾಗುತ್ತಿರುವ ಲಿಂಗಾಯತ ಧರ್ಮಕ್ಕೆ ಸೂಕ್ತ ನಾವಿಕರು ಬೇಕಾಗಿದ್ದಾರೆ. ವಿವಿಧ ಉಪಜಾತಿ, ಒಳ ಪಂಗಡಗಳಿಂದ ಲಿಂಗಾಯತ ಧರ್ಮ ಸಂಕಷ್ಟ ಎದುರಿಸುವಂತಾಗಿದೆ ಎಂದರು.

    ನೇತೃತ್ವ ವಹಿಸಿದ್ದ ಡಾ. ಮಹಾಂತ ಸ್ವಾಮೀಜಿ ಮಾತನಾಡಿ, ಬಸವ ಪುರಾಣಕ್ಕೆ ಅದರದೆಯಾದ ಘನತೆ, ಗೌರವವಿದೆ. ಅಂತಹ ಪ್ರವಚನವನ್ನು ಒಂದು ತಿಂಗಳವರೆಗೆ ಅತ್ಯಂತ ಶ್ರದ್ಧಾ ಭಕ್ತಿಯಿಂದ ಆಲಿಸಿದ ಶೇಗುಣಿಸಿ ಮತ್ತು ಸುತ್ತಮುಲಿನ ಗ್ರಾಮಸ್ಥರ ತಾಳ್ಮೆ ಅಪಾರವಾದದ್ದು. ಶಂಕರ ಸ್ವಾಮೀಜಿ ಅವರ ಅಮೃತ ಮಹೋತ್ಸವ ಯಶಸ್ವಿಯಾಗಲು ಗ್ರಾಮಸ್ಥರ ಸಹಕಾರವೇ ಕಾರಣ. ಬಸವಾದಿ ಶಿವಶರಣರ ಸಂದೇಶಗಳನ್ನು ನಾಡಿಗೆ ಪ್ರಸಾರ ಮಾಡುವ ಜತೆಗೆ ಮಾದರಿ ಗ್ರಾಮವನ್ನಾಗಿಸಲು ಎಲ್ಲರೂ ಸೇರಿ ಶ್ರಮಿಸೋಣ ಎಂದು ಹೇಳಿದರು.

    ವಿರಕ್ತಮಠದ ಹಿರಿಯ ಶ್ರೀ ಶಂಕರ ಸ್ವಾಮೀಜಿ ಮಾತನಾಡಿ, ಹಲವು ವರ್ಷಗಳ ನಂತರ ಬಸವಪುರಾಣ ಪ್ರವಚನ ಈ ಗ್ರಾಮದಲ್ಲಿ ಜರುಗಿರುವುದು ವಿಶೇಷವಾಗಿದೆ. ಇದೊಂದು ಅಮೃತ ಗಳಿಗೆ. ಎಲ್ಲರೂ ಸೇರಿ ಕಾರ್ಯಕ್ರಮ ಯಶಸ್ವಿ ಮಾಡಿದ್ದೀರಿ ಇದೇ ರೀತಿ ಭಕ್ತರ ಸಹಕಾರ ಇರಲಿ ಎಂದರು.

    ಹಂದಿಗುಂದ ಶಿವಾನಂದ ಸ್ವಾಮೀಜಿ, ಗುರುದೇವ ದೇವರು, ಸ್ವರೂಪಾನಂದ ಸ್ವಾಮೀಜಿ, ಚಿಮ್ಮಡ ಪ್ರಭು ಸ್ವಾಮೀಜಿ ಮಾತನಾಡಿದರು. ಶ್ರೀ ಮಠದ ಸೇವಾಕಾರ್ಯದಲ್ಲಿ ಶ್ರಮಿಸಿದ ಮಹನೀಯರನ್ನು ಸ್ವಾಮೀಜಿ ಸತ್ಕರಿಸಿದರು. ಬಿ.ಆರ್. ರಾಠೋಡ, ಶಿವು ಗುಡ್ಡಾಪುರ, ಶ್ರೀಶೈಲ ನಾರಗೊಂಡ, ತಮ್ಮಣ್ಣ ತೇಲಿ, ಶಿವರಾಯ ಯಲ್ಲಡಗಿ, ಬಸಪ್ಪ ಹೊರಟ್ಟಿ, ಮಲ್ಲಪ್ಪ ಶಾನವಾಡ, ಅಶೋಕ ಅಮ್ಮಣಗಿ, ಕುಮಾರ ಸತ್ತಿಗೌಡರ, ಶ್ರೀಶೈಲ ಮಠಪತಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts