More

    ಬಸವ-ಅಂಬೇಡ್ಕರ್ ತತ್ವಗಳಲ್ಲಿದೆ ಸಾಮ್ಯತೆ

    ಬಸವಕಲ್ಯಾಣ: ವಿಶ್ವಗುರು ಬಸವಣ್ಣ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಅವರ ವಿಚಾರ, ತತ್ವಗಳಲ್ಲಿ ಸಾಮ್ಯತೆ ಇದೆ. ಸಾಮಾಜಿಕ ಸಮಾನತೆ ತರುವುದೇ ಈ ಮಹನೀಯರ ಆಶಯವಾಗಿತ್ತು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

    ಜಿಲ್ಲಾಡಳಿತ, ನಗರಸಭೆಯಿಂದ ನಗರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಮೂರ್ತಿ ಅನಾವರಣಗೊಳಿಸಿ ಮಾತನಾಡಿ, ಅನಿಷ್ಠ ಪದ್ಧತಿಗಳ ವಿರುದ್ಧ ಮತ್ತು ಸಮಸಮಾಜ ನಿರ್ಮಾಣಕ್ಕಾಗಿ 12ನೇ ಶತಮಾನದಲ್ಲಿ ಬಸವಣ್ಣನವರು ಕ್ರಾಂತಿ ನಡೆಸಿದರು. ಬಸವಣ್ಣನವರ ಎಲ್ಲ ವಿಚಾರಗಳನ್ನು ಸಂವಿಧಾನದ ಮೂಲಕ ಅಂಬೇಡ್ಕರ್ ಜಾರಿಗೆ ತಂದರು ಎಂದರು.

    ಡಾ.ಅಂಬೇಡ್ಕರ್ ದೇಶದ ಅಮೂಲ್ಯ ರತ್ನ. ಸ್ವಾತಂತ್ರೃ ಪೂರ್ವ, ನಂತರ ದೇಶವನ್ನು ಒಗ್ಗೂಡಿಸಿ ಒಕ್ಕೂಟ ವ್ಯವಸ್ಥೆಯಲ್ಲಿ ತಂದು ಸರ್ವ ಜನಾಂಗಕ್ಕೆ ಸಂವಿಧಾನದ ಮೂಲಕ ಅವಕಾಶ ನೀಡಿದ್ದರಿಂದ ಇಂದು ಭಾರತ 136 ಕೋಟಿ ಜನಸಂಖ್ಯೆ ಹಾಗೂ ಹಲವು ಭಾಷೆ, ಸಂಸ್ಕೃತಿಯಿಂದ ಕೂಡಿದ್ದರೂ ಶಾಂತಿಯುತವಾಗಿದೆ. ಇದಕ್ಕೆ ಅಂಬೇಡ್ಕರ್ ಕಾರಣ ಎಂದು ಸ್ಮರಿಸಿದರು.
    ಪ್ರಸ್ತುತ ಜಗತ್ತಿನ ಹಲವು ದೇಶಗಳಲ್ಲಿ ಪ್ರಜಾಪ್ರಭುತ್ವ ಅತಂತ್ರದಲ್ಲಿದೆ. ಆದರೆ ಭಾರತದಲ್ಲಿ ಮಾತ್ರ ದಿನೇದಿನೆ ಗಟ್ಟಿಗೊಳ್ಳುತ್ತಿದೆ. ದೇಶದಲ್ಲಿ ಯಾವುದೇ ಪಕ್ಷ ಅಧಿಕಾರಕ್ಕೆ ಬಂದರೂ ಸೌಹಾರ್ದದಿಂದ ಹಸ್ತಾಂತರ ಪ್ರಕ್ರಿಯೆ ನಡೆಯುತ್ತಿದೆ ಎಂದರು.

    ಶಾಸಕ ಶರಣು ಸಲಗರ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ಕೇಂದ್ರ ಸಚಿವ ಭಗವಂತ ಖೂಬಾ, ಜಿಲ್ಲಾ ಉಸ್ತುವಾರಿ ಸಚಿವ ಶಂಕರ ಪಾಟೀಲ್ ಮುನೇನಕೊಪ್ಪ, ಪಶು ಸಂಗೋಪನೆ ಸಚಿವ ಪ್ರಭು ಚವ್ಹಾಣ್, ಶಾಸಕರಾದ ಈಶ್ವರ ಖಂಡ್ರೆ, ರಾಜಶೇಖರ ಪಾಟೀಲ್, ಬಂಡೆಪ್ಪ ಖಾಶೆಂಪುರ, ರಹೀಮ್ ಖಾನ್, ದತ್ತಾತ್ರೇಯ ಪಾಟೀಲ್ ರೇವೂರ, ವಿಧಾನ ಪರಿಷತ್ ಸದಸ್ಯರಾದ ರಘುನಾಥರಾವ ಮಲ್ಕಾಪುರೆ, ಅರವಿಂದಕುಮಾರ ಅರಳಿ, ಡಾ.ಚಂದ್ರಶೇಖರ ಪಾಟೀಲ್, ಮರಾಠ ಅಭಿವೃದ್ಧಿ ನಿಗಮ ಅಧ್ಯಕ್ಷ ಎಂ.ಜಿ. ಮುಳೆ, ಕೆಎಸ್ಐಐಡಿಸಿ ಅಧ್ಯಕ್ಷ ಡಾ.ಶೈಲೇಂದ್ರ ಬೆಲ್ದಾಳೆ, ನಗರಸಭೆ ಅಧ್ಯಕ್ಷೆ ಶಹಜಾನ್ ಶೇಖ, ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ರಾಜಕುಮಾರ ಪಾಟೀಲ್ ಸಿರಗಾಪುರ, ಪ್ರಮುಖರಾದ ಡಿ.ಕೆ. ಸಿದ್ರಾಮ, ಡಾ.ಸಿದ್ದು ಪಾಟೀಲ್, ರವೀಂದ್ರ ಗಾಯಕವಾಡ, ಶಿವರಾಜ ಗಂದಗೆ, ಅನೀಲ ಭೂಸಾರೆ, ದೀಪಕ ಗಾಯಕವಾಡ, ಡಿಸಿ ಗೋವಿಂದರೆಡ್ಡಿ, ಎಸ್ಪಿ ಕಿಶೋರಬಾಬು, ಜಿಪಂ ಸಿಇಒ ಜಹೀರಾ ನಸೀಮ್, ಸಹಾಯಕ ಆಯುಕ್ತ ರಮೇಶ ಕೊಳಾರ, ತಹಸೀಲ್ದಾರ್ ಸಾವಿತ್ರಿ ಸಲಗರ, ಪೌರಾಯುಕ್ತ ಶಿವಕುಮಾರ ಇತರರಿದ್ದರು. ನವಲಿಂಗ ಪಾಟೀಲ್ ನಿರೂಪಣೆ ಮಾಡಿದರು.

    ಸರ್ವರಿಗೆ ಸಮಾನತೆ ನೀಡಿದ ಸಂವಿಧಾನ ಶಿಲ್ಪಿ: ಡಾ.ಬಿ.ಆರ್. ಅಂಬೇಡ್ಕರ್ ಸಂವಿಧಾನ ಮೂಲಕ ದೇಶದ ಸರ್ವರಿಗೆ ಸಮಾನತೆ ನೀಡಿದ್ದಾರೆ. ಬಡ ಕುಟುಂಬದಲ್ಲಿ ಜನಿಸಿದ ವ್ಯಕ್ತಿಯೂ ಐಎಎಸ್, ಐಪಿಎಸ್ ಮಾಡಿ ಉನ್ನತ ಸ್ಥಾನದಲ್ಲಿದ್ದಾರೆ. ಇದಕ್ಕೆ ಅಂಬೇಡ್ಕರ್ ರಚಿತ ಸಂವಿಧಾನವೇ ಕಾರಣ ಎಂದು ಶಾಸಕ ಶರಣು ಸಲಗರ ಹೇಳಿದರು. ಅಂಬೇಡ್ಕರ್ ಮೂರ್ತಿ ಅನಾವರಣವಲ್ಲ, ಇದೊಂದು ಪ್ರಜಾಪ್ರಭುತ್ವದ ಅನಾವರಣ ಕಾರ್ಯಕ್ರಮ. ಬಾಬಾಸಾಹೇಬ್ ಹಾಕಿಕೊಟ್ಟ ಮಾರ್ಗದಲ್ಲಿ ಪ್ರತಿಯೊಬ್ಬರೂ ನಡೆಯೋಣ ಎಂದರು. ನಗರ ಸೇರಿ ಕ್ಷೇತ್ರದಲ್ಲಿ ನಾನಾ ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗಿದೆ. ನೂತನ ಅನುಭವ ಮಂಟಪ, ಛತ್ರಪತಿ ಶಿವಾಜಿ ಪಾರ್ಕ್​, ತ್ರಿಪುರಾಂತ ಕೆರೆ ಪುನಶ್ಚೇತನ, ಪರುಷಕಟ್ಟೆ ನಿರ್ಮಾಣದ ಕನಸನ್ನು ಸಿಎಂ ಬೊಮ್ಮಾಯಿ, ಮಾಜಿ ಸಿಎಂ ಯಡಿಯೂರಪ್ಪ ಸಾಕಾರಗೊಳಿಸಿದ್ದಾರೆ ಎಂದರು.

    ಶಿಕ್ಷಣ, ಉದ್ಯೋಗ ಮತ್ತು ಸಮನಾದ ಅಧಿಕಾರ ಧ್ಯೇಯದೊಂದಿಗೆ ಸರ್ಕಾರ ಕೆಲಸ ಮಾಡುತ್ತಿದೆ. ರಾಜ್ಯದಲ್ಲಿ ಮಹಿಳೆಯರು ಆರ್ಥಿಕ ಚಟುವಟಿಕೆ ಮಾಡಲು ಸ್ವ-ಸಹಾಯ ಸಂಘಗಳಿಗೆ 500 ಕೋಟಿ ರೂ. ಮೀಸಲಿಡಲಾಗಿದೆ. ಇದರಿಂದ ಮಹಿಳೆಯರ ಆದಾಯ ಹೆಚ್ಚಳವಾಗಲಿದೆ.
    | ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts