More

    ಕಲ್ಯಾಣ ದೊಡ್ಡ ಅನುಭವ ಲೋಕ

    ಬಸವಕಲ್ಯಾಣ: ಭಾಷಾ ಜ್ಞಾನ ಜತೆಗೆ ವ್ಯವಹಾರಿಕ ಜ್ಞಾನವೂ ಹೊಂದಿರಬೇಕು. ಲೋಕ ಜ್ಞಾನದ ಆಂತರ್ಯವನ್ನು ಭಾಷೆ ಕಟ್ಟಿಕೊಡುತ್ತದೆ. ಭಾಷೆಗೆ ಯಾವುದೇ ಹಂಗಿಲ್ಲ. ಎಲ್ಲರಿಗೂ ಅನ್ವಯಿಸುವಂಥ ಗುಣ ಎಲ್ಲ ನುಡಿಗಳಿಗಿದ್ದು, ಕಲಿಕೆ ಪ್ರಯತ್ನ ಮುಖ್ಯ ಎಂದು ಬಿಹಾರದ ಪಟ್ನಾ ವಿಶ್ವವಿದ್ಯಾಲಯ ನಿವೃತ್ತ ಪ್ರಾಧ್ಯಾಪಕ ಹಾಗೂ ಖ್ಯಾತ ಹಿಂದಿ ಕವಿ ಪ್ರೊ.ಅರುಣ ಕಮಲ್ ಹೇಳಿದರು.

    ಬಸವಕಲ್ಯಾಣ ಇಂಜಿನಿಯರಿಂಗ್ ಕಾಲೇಜಿನಲ್ಲಿ ಡಾ.ಜಯದೇವಿತಾಯಿ ಲಿಗಾಡೆ ಪ್ರತಿಷ್ಠಾನ ಸಹಯೋಗದಡಿ ಶನಿವಾರ ಏರ್ಪಡಿಸಿದ್ದ ಸಾಹಿತ್ಯ ಮತ್ತು ಸಮಕಾಲೀನ ಸಂದರ್ಭ ಕುರಿತ ಪ್ರತಿಷ್ಠಾನದ ೭೭ನೇ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿದ ಅವರು, ಭಾಷೆ ಯಾವುದಾದರೂ ಸರಿ, ಜ್ಞಾನ ಪರಂಪರೆ ಇದ್ದೇ ಇರುತ್ತದೆ. ಹೆಚ್ಚು ಭಾಷೆ ತಿಳಿದಷ್ಟು ಹೆಚ್ಚು ಜ್ಞಾನ ಪರಂಪರೆ ಅರಿಯಬಹುದು ಎಂದರು.

    ಕಲ್ಯಾಣ ಎಂಬುದು ಬಹುದೊಡ್ಡ ಅನುಭವ ಲೋಕ. ಇಲ್ಲಿ ಬಸವ, ಅಲ್ಲಮ, ಅಕ್ಕ ಸೇರಿ ಹಲವರು ನಡೆಸಿದ ಚರ್ಚೆ, ಚಿಂತನೆಗಳು ಜಗತ್ತಿನ ಚಲನಶೀಲತೆಗೆ ಚಾಲಕಶಕ್ತಿಗಳಾಗಿವೆ. ಕಲ್ಯಾಣ ತೀರ್ಥಯಾತ್ರೆಯ ನೆಲೆ. ಅಧ್ಯಯನ ನೆಲೆಯಲ್ಲಿ ಕಲ್ಯಾಣ ಅನುಭವ ಮತ್ತು ತಾತ್ವಿಕ ಲೋಕವಾಗಿದೆ ಎಂದು ವಿಶ್ಲೇಷಿಸಿದರು.
    ಸಿಯುಕೆ ಪ್ರಾಧ್ಯಾಪಕ ಪ್ರೊ.ವಿಕ್ರಮ ವಿಸಾಜಿ ಮಾತನಾಡಿ, ಬರಹಗಾರರು, ವಿಜ್ಞಾನಿಗಳ ಮಾತು ಕೇಳಿಸಿಕೊಳುವುದು ಶಿಕ್ಷಣದ ಭಾಗ. ದೊಡ್ಡವರ ಮಾತು ಮತ್ತು ಆಲೋಚನೆಗಳು ಅನೇಕ ಹೊಸ ದಾರಿ, ಹೊಳಹು ತೋರಿಸುತ್ತವೆ. ಸಾಹಿತ್ಯದಲ್ಲಿ ಬದುಕಿನ ಸಮಾಜದ ಹಲವು ಮುಖಗಳು ಅಡಕವಾಗಿರುತ್ತವೆ. ಅದನ್ನು ಅರಿಯುವ ಸೂಕ್ಷö್ಮತೆ ಗಂಭೀರ ಓದಿನಿಂದ ಸಾಧ್ಯ ಎಂದು ಹೇಳಿದರು.

    ಸಿಯುಕೆ ಪ್ರಾಧ್ಯಾಪಕ ಪ್ರೊ.ಬಿ.ಬಿ. ಪೂಜಾರಿ ಮಾತನಾಡಿ, ಆಲೋಚಿಸುವ, ಮಾತನಾಡುವ, ಬರೆಯುವ ಸಾಮರ್ಥ್ಯ ಕೇವಲ ಮನುಷ್ಯನಿಗೆ ಒದಗಿದ ವರ. ಒಳ್ಳೆಯದನ್ನು ಆಲೋಚಿಸಿ ಬರೆದು ಮಾತನಾಡುತ್ತ ತನ್ನ ಸೃಜನಶೀಲತೆ ಬೆಳೆಸಿಕೊಂಡವರು ಉತ್ತಮ ಬರಹಗಾರರಾಗುತ್ತಾರೆ. ಮನುಷ್ಯನ ವ್ಯಕ್ತಿತ್ವ ಅವನ ಸೃಜನಶೀಲ ಕೆಲಸಗಳಿಂದ ರೂಪುಗೊಳ್ಳುತ್ತದೆ ಎಂದರು.

    ಡಾ.ಭೀಮಾಶಂಕರ ಬಿರಾದಾರ ಮಾತನಾಡಿ, ಸಾಹಿತ್ಯ ತನ್ನ ಕಾಲದ ಹಲವು ತಲ್ಲಣಗಳಿಗೆ ಅತ್ಯಂತ ಪ್ರಜ್ಞಾಪೂರ್ವಕವಾಗಿ ಸ್ಪಂದಿಸುವ ಗುಣ ಹೊಂದಿದೆ. ಜಾಗತಿಕ, ಭಾರತೀಯ ಮತ್ತು ಕನ್ನಡ ಸಾಹಿತ್ಯದ ಮೂಲ ಸತ್ವ ಮಾನವೀಯತೆ ಆಗಿದೆ ಎಂದು ಹೇಳಿದರು.

    ಪ್ರಾಚಾರ್ಯ ಡಾ.ಅಶೋಕಕುಮಾರ ವಣಗೀರೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಡಾ.ಎನ್.ಆರ್. ಕೋಡ್ಲೆ, ಪ್ರತಿಷ್ಠಾನದ ನಿರ್ದೇಶಕ ಡಾ.ಶಿವಾಜಿ ಮೇತ್ರೆ, ಫತ್ತೇಪುರದ ವಿಮಲಕುಮಾರ ಇತರರಿದ್ದರು. ಉಪ ಪ್ರಾಚಾರ್ಯ ಡಾ.ಅರುಣಕುಮಾರ ಯಲಾಲ್ ಸ್ವಾಗತಿಸಿದರು. ಬಿಇಸಿ ಕುಲಸಚಿವ ಪ್ರೇಮಸಾಗರ ಪಾಟೀಲ್ ವಂದಿಸಿದರು. ಕಾರ್ಯದರ್ಶಿ ದೇವೇಂದ್ರ ಬರಗಾಲೆ ನಿರೂಪಣೆ ಮಾಡಿದರು.

    ತಂತ್ರಜ್ಞಾನ, ವೈದ್ಯಕೀಯ, ಸಾಹಿತ್ಯ ಯಾವುದೇ ವಲಯವಾದರೂ ನಿರೂಪಣೆ, ಕಥನ, ಅಭಿವ್ಯಕ್ತಿಗೆ ನುಡಿಯೇ ದಾರಿಯಾಗಿದೆ. ತಂತ್ರಜ್ಞಾನ ಎಷ್ಟೇ ಮುಂದುವರಿದರೂ ಅದರ ನಿಯಂತ್ರಣ ಮತ್ತು ಬಳಕೆಗೆ ಮನುಷ್ಯನ ಅಗತ್ಯವಿದೆ. ಮಾನವೀಯ ಎಲ್ಲಕ್ಕಿಂತ ಹೆಚ್ಚು ಮಹತ್ವದ್ದು. ಬಸವಣ್ಣನವರ ನೆಲದಲ್ಲಿ ಮಾನವೀಯತೆ ಮತ್ತು ಜ್ಞಾನ ಪರಂಪರೆ ಎರಡೂ ಚಲನಶೀಲವಾಗಿವೆ.
    | ಪ್ರೊ.ಅರುಣ ಕಮಲ್ ಪ್ರಸಿದ್ಧ ಹಿಂದಿ ಕವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts