More

    ಬಳ್ಳಾರಿ, ಹುಬ್ಬಳ್ಳಿ ತಂಡಗಳಿಗೆ ಪ್ರಶಸ್ತಿ, ಆಯುಷ್ ಸೌಹಾರ್ದ ಕ್ರಿಕೆಟ್ ಪಂದ್ಯಾವಳಿ

    ಹುಬ್ಬಳ್ಳಿ: ಕ್ರೀಡೆಯಲ್ಲಿ ಏಕಾಗ್ರತೆ ಮುಖ್ಯವಾಗಿದ್ದು ಮನಸ್ಸು ಗುರಿ ಇಟ್ಟರೆ ದೇಹ ಅದಕ್ಕೆ ತಾನಾಗಿಯೇ ಸಹಕರಿಸುತ್ತದೆ. ಜತೆಗೆ ಸತತ ಪ್ರಯತ್ನ ಇದ್ದರೆ ಗೆಲುವು ಸುಲಭವಾಗಲಿದೆ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.

    ಹುಬ್ಬಳ್ಳಿ ಆಯುರ್ವೆದ ಸೇವಾ ಸಮಿತಿಯ ಆಯುರ್ವೆದ ಮಹಾವಿದ್ಯಾಲಯ ಹಾಗೂ ಆಸ್ಪತ್ರೆ, ವಿಆರ್​ಎಲ್ ಲಾಜಿಸ್ಟಿಕ್ಸ್ ಲಿಮಿಟೆಡ್, ವಿಭವ ಸೇರಿ ವಿವಿಧ ಸಂಘಟನೆಗಳ ಆಶ್ರಯದಲ್ಲಿ ಇಲ್ಲಿಯ ಕರ್ನಾಟಕ ಜಿಮ್ಾನಾ ಮೈದಾನದಲ್ಲಿ ಭಾನುವಾರ ಆಯೋಜಿಸಲಾಗಿದ್ದ ಮೂರು ದಿನಗಳ ಆಯುಷ್ ಸೌಹಾರ್ದ ಕ್ರಿಕೆಟ್ ಪಂದ್ಯಾವಳಿಯ ಸಮಾರೋಪದಲ್ಲಿ ಅವರು ಮಾತನಾಡಿದರು.

    ದೇಶಿ ಆಟಗಳಿಗೆ ಮಹತ್ವ ಕೊಡಬೇಕು. ಸೋಲು ಗೆಲುವಿನ ಬಗ್ಗೆ ಆಲೋಚಿಸದೇ ಆಟ ಆಡುವುದರತ್ತ ಗಮನ ಕೊಡಬೇಕು. ಆಯುಷ್ಮಾನ ಭಾರತದ ಪ್ರತೀಕವಾಗಿ ಆಯುಷ್ ಸಂಸ್ಥೆಯವರು ಕ್ರಿಕೆಟ್ ಪಂದ್ಯಾವಳಿ ಆಯೋಜಿಸಿರುವುದು ಅಭಿನಂದನೀಯ ಎಂದರು.

    ವಿಜೇತರು: ಆಯುಷ್ ಸೌಹಾರ್ದ ಕ್ರಿಕೆಟ್ ಟೂರ್ನಿಯ ಪುರುಷರ ವಿಭಾಗದಲ್ಲಿ ಬಳ್ಳಾರಿಯ ತಾರಾನಾಥ ಆಯುರ್ವೆದ ಮೆಡಿಕಲ್ ಕಾಲೇಜು ಹಾಗೂ ಮಹಿಳೆಯರ ವಿಭಾಗದಲ್ಲಿ ಹುಬ್ಬಳ್ಳಿಯ ಆಯುರ್ವೆದ ಮಹಾವಿದ್ಯಾಲಯ ಹಾಗೂ ಆಸ್ಪತ್ರೆಯ ತಂಡ ಟ್ರೋಫಿ ಪಡೆಯಿತು.

    ರನ್ನರ್​ಅಪ್ ಆಗಿ ಪುರುಷರಲ್ಲಿ ಆಯುಷ್ ಡೈರೆಕ್ಟರೇಟ್ ತಂಡ ಹಾಗೂ ಮಹಿಳೆಯರಲ್ಲಿ ಶಿವಮೊಗ್ಗದ ಸರ್ಕಾರಿ ಆಯುರ್ವೆದಿಕ್ ಮೆಡಿಕಲ್ ಕಾಲೇಜ್ ತಂಡದವರು ಪ್ರಶಸ್ತಿ ಪಡೆದರು.

    ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಬಳ್ಳಾರಿಯ ಡಾ. ಕೃಷ್ಣಾ ನಾಯ್ಕ, ಹುಬ್ಬಳ್ಳಿಯ ಡಾ. ನಂದಿತಾ ಹಿರೇಮಠ ಪಡೆದುಕೊಂಡರು. ಬೆಸ್ಟ್ ಬ್ಯಾಟರ್ ಬಳ್ಳಾರಿಯ ಕಾರ್ತಿಕ, ಬೆಸ್ಟ್ ಬೌಲರ್ ಬೆಂಗಳೂರಿನ ವಿಶ್ವನಾಥ, ಮಹಿಳೆಯರ ವಿಭಾಗದಲ್ಲಿ ಹುಬ್ಬಳ್ಳಿಯ ನಂದಿತಾ ಹಾಗೂ ಡಾ. ಅನಿತಾ ಅವರಿಗೆ ಪ್ರಶಸ್ತಿ ನೀಡಲಾಯಿತು.

    ಡಾ. ಪಿ.ಕೆ. ಗಂಡಮಾಲಿ, ಸಂತೋಷ ಯಡಹಳ್ಳಿ. ಡಾ. ಮಹೇಶ ಸಾಲಿಮಠ. ಡಾ. ಸೌರಬ, ಡಾ. ರಾಜಶೇಖರ ಗಾಣಗೇರ, ಪಿ.ಆರ್. ಕುಲಕರ್ಣಿ, ಎಸ್.ಆರ್. ಮಾಮಲೆದೇಶಪಾಂಡೆ. ಡಾ. ಎ.ಎಸ್. ಪ್ರಶಾಂತ, ಬಯೊಟೆಕ್ ಕಂಪನಿಯ ಪಾಂಡುರಂಗ, ಅಸ್ಲಂ ಪಾಶಾ ಇತರರು ಪಾಲ್ಗೊಂಡಿದ್ದರು. ಡಾ. ಜಿ.ಆರ್. ಜೋಶಿ ಸ್ವಾಗತಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts