More

    ಬಣ್ಣದಲ್ಲಿ ಮಿಂದೆದ್ದ ಹಳಿಯಾಳ

    ಹಳಿಯಾಳ: ತಾಲೂಕಿನಾದ್ಯಂತ ಮಂಗಳವಾರ ಹೋಳಿ ಹಬ್ಬದ ಬಣ್ಣ ದೋಕುಳಿಯನ್ನು ಸಂಭ್ರಮ ಸಡಗರದಿಂದ ಆಚರಿಸಲಾಯಿತು. ಪರಸ್ಪರ ಬಣ್ಣ ಎರಚಿ ಜನರು ಬಣ್ಣದಲ್ಲಿ ಮಿಂದೆದ್ದರು. ಮುಂಬರುವ ದಿನಗಳು ಎಲ್ಲರಿಗೂ ವರ್ಣಮಯ ವಾಗಿರಲಿ ಪರಸ್ಪರ ಶುಭಾಶಯ ಕೋರಿದರು.

    ಪಟ್ಟಣದ ವಿವಿಧ ಬಡಾವಣೆಗಳಲ್ಲಿ ಬೆಳಗ್ಗೆಯಿಂದಲೆ ರಂಗಿನಾಟ ರಂಗು ಪಡೆದಿತ್ತು. ಚಿಣ್ಣರು ಮನೆಯೆದರು ವಠಾರದಲ್ಲಿ ಪಿಚಕಾರಿ ಹಿಡುದು ಓಕುಳಿಯಾ ಡಿದರೆ, ಯುವಕರು ಸ್ನೇಹಿತರ ಜತೆಗೂಡಿ ಬೈಕ್​ನಲ್ಲಿ ಪಟ್ಟಣದಾದ್ಯಂತ ಸುತ್ತಾಡಿ ಕೇಕೆ ಹಾಕುತ್ತ ಬಣ್ಣ ಎರಚುತ್ತ ಹೋಳಿ ಹಬ್ಬಕ್ಕೆ ಮೆರಗು ತಂದರು. ವಿವಿಧ ವೇಷ, ವಿಗ್ ಧರಿಸಿ, ಗುರುತು ಸಿಗದ ಹಾಗೇ ಮುಖಕ್ಕೆಲ್ಲ ಕಾಮನಬಿಲ್ಲಿನ ಬಣ್ಣ ಹಚ್ಚಿಕೊಂಡು ಯುವ ಪೀಳಿಗೆ ಸಂಭ್ರಮಿಸಿತು. ವಯಸ್ಸಿನ ಮಿತಿಯಿಲ್ಲದೇ ಮಕ್ಕಳಿಂದ ಹಿಡಿದು ಯುವತಿಯರು, ಹಿರಿಯರು, ಜನಪ್ರತಿನಿಧಿ ಗಳು, ಅಧಿಕಾರಿಗಳು ರಂಗಿನಾಟದಲ್ಲಿ ಪಾಲ್ಗೊಂಡಿದ್ದರು. ಇದಕ್ಕೂ ಮುನ್ನ ಯುವಕರು ಆಯಾ ಬಡಾವಣೆಗಳಲ್ಲಿ ಪ್ರತಿಷ್ಠಾಪಿಸಿದ ರತಿ- ಮನ್ಮಥರ ಪಲ್ಲಕಿಯನ್ನು ಹೊತ್ತು ಮೆರವಣಿಗೆ ಮಾಡಿದರು. ಮೆರವಣಿಗೆಯ ಕೊನೆಯಲ್ಲಿ ಕಾಮದಹನ ನಡೆಯಿತು. ಕಾಮದಹನದ ನಂತರ ಜಲವರ್ಣದ ಎರೆಚಾಟ ಆರಂಭವಾಯಿತು.

    ಡಿಜೆ- ಕೃತಕ ಮಳೆ: ಪಟ್ಟಣದ ಮುಖ್ಯ ರಸ್ತೆಯಲ್ಲಿ ಇಲ್ಲಿಯ ಜವಾಹರ ರಸ್ತೆ ಕ್ರಾಸ್​ನಲ್ಲಿ ಕೆನರಾ ಬ್ಯಾಂಕ್ ಸಮೀಪ ಈ ಬಾರಿ ಬಣ್ಣದಾಟಕ್ಕೆ ಇಲ್ಲಿನ ಉತ್ಸಾಹಿ ಗೆಳೆಯರ ಬಳಗ ವಿಶೇಷ ವ್ಯವಸ್ಥೆ ಕಲ್ಪಿಸಿತ್ತು. ಡಿಜೆ ಮ್ಯೂಸಿಕ್ ಜತೆಯಲ್ಲಿ ಕೃತಕ ಮಳೆ ಸುರಿಸುವ ವ್ಯವಸ್ಥೆ ಮಾಡಲಾಗಿತ್ತು. ಯುವತಿಯರು ಹಾಗೂ ಯುವಕರು ಡಿಜೆ ಸಂಗೀತಕ್ಕೆ ತಕ್ಕಂತೆ ಕೃತಕ ಮಳೆ ನೀರಿನಲ್ಲಿ ಕುಣಿದು ಸಂಭ್ರಮಿಸಿದರು.

    ಹೋಳಿ ಬಣ್ಣದೋಕುಳಿ
    ಸಿದ್ದಾಪುರ:
    ಕರೊನಾ ಹಾಗೂ ಮಂಗನ ಕಾಯಿಲೆಯ ಆತಂಕದಿಂದಾಗಿ ಈ ವರ್ಷದ ಹೋಳಿ ಹಬ್ಬದ ಆಚರಣೆಯಲ್ಲಿ ಹಿಂದಿನ ವರ್ಷಗಳಂತೆ ರಂಗು ಕಾಣಿಸಲಿಲ್ಲ. ಪಟ್ಟಣದ ಹಾಳದಕಟ್ಟಾ ಹಾಗೂ ತಿಮ್ಮಪ್ಪ ನಾಯಕ ವೃತ್ತ, ಬಸ್ ನಿಲ್ದಾಣದ ಹತ್ತಿರ ಯಾವುದೇ ವಿಶೇಷ ಆಡಂಬರ ಇಲ್ಲದೆ ಹತ್ತಾರು ಜನ ಸೇರಿ ಕೇವಲ ಒಬ್ಬರಿಗೊಬ್ಬರು ಬಣ್ಣ ಎರಚಿ ಸಂಭ್ರಮಿಸಿದರು.

    ಜಾತ್ರೆ ವೇಳೆ ಹೋಳಿಯಿಲ್ಲ
    ಶಿರಸಿಯಲ್ಲಿ ದೇವಿಯ ಜಾತ್ರೆ ನಡೆಯುವ ವರ್ಷ ಹೋಳಿ ಆಚರಣೆ ನಿಶಿದ್ಧ. ಸಾಂಪ್ರದಾಯಿಕವಾಗಿ ನಡೆದು ಬಂದ ಪದ್ಧತಿಯಂತೆ ಪ್ರಸಕ್ತ ವರ್ಷ ಹೋಳಿ ಆಚರಣೆ ಮಾಡಿಲ್ಲ. ಕೇವಲ ನಗರವೊಂದೇ ಅಲ್ಲದೆ ಇಡೀ ತಾಲೂಕಿನಲ್ಲಿ ಹೋಳಿ ಸಂಭ್ರಮ ಇರುವುದಿಲ್ಲ. ಇಡೀ ದೇಶ ಹೋಳಿ ಸಂಭ್ರಮಿಸಿದರೆ ಶಿರಸಿಗರು ಮಾತ್ರ 2 ವರ್ಷಕ್ಕೊಮ್ಮೆ ಮಾತ್ರ ಹೋಳಿಯ ಆಚರಣೆಯನ್ನು ಬೇಡರ ವೇಷದೊಟ್ಟಿಗೆ ವಿಶಿಷ್ಟವಾಗಿ ಆಚರಿಸುತ್ತಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts