More

    ಬಡವರ ಉದ್ಧಾರಕ್ಕೆ ಶ್ರಮಿಸಿ

    ಅಥಣಿ, ಬೆಳಗಾವಿ: ದೇವದಾಸಿ ಮಕ್ಕಳ ಸೇವೆ ದೇವರ ಸೇವೆಯಾಗಿದೆ. ನಿರ್ಮಲ ಹೃದಯದಿಂದ ನೀಡಿರುವ ದಾನ ಪವಿತ್ರ ಕೆಲಸಗಳಿಗೆ ಸ್ಫೂರ್ತಿಯಾಗಿ, ಬಡಜನರ ಉದ್ಧಾರಕ್ಕೆ ಸಮರ್ಪಿತವಾಗಬೇಕು. ಇದಕ್ಕೆ ಸಂತರಾಮ ಮಹಾವಿದ್ಯಾಲಯ ಸಾಕ್ಷಿಯಾಗಿದೆ ಎಂದು ಗುಜರಾತಿನ ಉಮರೇಥ ಸಂತರಾಮ ಮಂದಿರದ ಸಂತ ಗಣೇಶ ದಾಸ ಮಹಾರಾಜರು ಅಭಿಪ್ರಾಯಪಟ್ಟರು.

    ಪಟ್ಟಣದ ಹೊರವಲಯದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸಂತರಾಮ ಪ.ಪೂ. ಮಹಾವಿದ್ಯಾಲಯದ ದಶಮಾನೋತ್ಸವ ಮತ್ತು ಬಿ.ಎಲ್.ಪಾಟೀಲ ಅವರ ಅಮೃತ ಮಹೋತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

    ದೇವದಾಸಿ ಮಕ್ಕಳ ಸೇವೆ ಮಾಡುತ್ತಿರುವ ಸಂತರಾಮ ಮಹಾವಿದ್ಯಾಲಯದ ಪ್ರೇರಕ ಶಕ್ತಿಯಾಗಿರುವ ಬಿ.ಎಲ್.ಪಾಟೀಲ ಅವರ ಸೇವಾಕಾರ್ಯ ಇತಿಹಾಸ ಪುಟದಲ್ಲಿ ದಾಖಲಾಗಿದೆ. ಇಂದು ನಾವು ಗಳಿಸುವ ಸಂಪತ್ತು ನಮ್ಮದಲ್ಲ ಅದು ದೇವರಿಗೆ ಸಲ್ಲಬೇಕು. ನಾವು ನಿಮಿತ್ತ ಮಾತ್ರ. ಎಷ್ಟೇ ಸಂಪತ್ತಿನ ಒಡೆಯರಾದರೂ ಒಂದು ದಿನ ಖಾಲಿ ಕೈಯಿಂದಲೇ ಹೋಗಬೇಕು. ಇದು ಸೃಷ್ಟಿಯ ನಿಯಮ. ಇರುವಾಗ ಸಮಾಜ ಸೇವೆಗೆ ನಾವು ಸಂಪಾದಿಸಿರುವ ಹಣವನ್ನು ದಾನ-ಧರ್ಮಗಳಿಗೆ ಬಳಸಬೇಕು ಎಂದರು.

    ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಸಿ.ಸೋಮಶೇಖರ ಮಾತನಾಡಿ, ಕರ್ನಾಟಕ ಇತಿಹಾಸ ಒಂದು ಭಾಗವಾಗಿ ಬಿ.ಎಲ್.ಪಾಟೀಲ ಅವರು ಸಾಮಾಜಿಕ ಬದುಕಿನಲ್ಲಿ ವಿಶಿಷ್ಟ ಛಾಪು ಮೂಡಿಸಿದ್ದಾರೆ. ದೇವದಾಸಿ ಮಕ್ಕಳ ಬದುಕಿಗೆ ಬೆಳಕಾಗಿ ಗಡಿಭಾಗದಲ್ಲಿ 35 ವರ್ಷ ನಿರಂತರವಾಗಿ ಸಾಮಾಜಿಕ, ಅನಿಷ್ಟ ಪದ್ಧತಿಗಳ ವಿರುದ್ಧ ಹೋರಾಟ ಮಾಡಿ ವಿದ್ಯೆ, ಅನ್ನ ಹಾಗೂ ಆಶ್ರಯ ನೀಡಿದ ಮಹಾನ್ ವ್ಯಕ್ತಿ. ಅವರ ಸೇವೆಗೆ ಕೇಂದ್ರ ಸರ್ಕಾರ ಪದ್ಮಶ್ರೀ ಪ್ರಶಸ್ತಿ ನೀಡಬೇಕು ಎಂದು ಒತ್ತಾಯಿಸಿದರು.

    ಬಿ.ಎಲ್.ಪಾಟೀಲ ದಂಪತಿ ಹಾಗೂ ಪದ್ಮಶ್ರೀ ಪುರಸ್ಕೃತ ಸೀತವ್ವ ಜೋಡಟ್ಟಿ ಅವರನ್ನು ಸತ್ಕರಿಸಲಾಯಿತು. ಹಿರಿಯರಾದ ಅರವಿಂದರಾವ ದೇಶಪಾಂಡೆ, ಸಾಹಿತಿ ಡಾ. ವಿ.ಎಸ್.ಮಾಳಿ ಮಾತನಾಡಿದರು. ಶಾಸಕ ಮಹೇಶ ಕುಮಠಳ್ಳಿ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಸಂಸದ ಅಮರಸಿಂಹ ಪಾಟೀಲ, ಮಾಜಿ ಸಚಿವ ಎ.ಬಿ.ಪಾಟೀಲ, ಮಾಜಿ ಶಾಸಕರಾದ ಶಹಜಹಾನ ಡೊಂಗರಗಾಂವ, ಬಿ.ಆರ್.ಪಾಟೀಲ ಹಾಗೂ ಚಂದ್ರಕಾಂತ ಬೆಲ್ಲದ, ಶರದ ಸವದಿ, ಬಾಳಾಸಾಹೇಬ ಲೋಕಾಪುರ, ಎಲ್.ವಿ.ಕುಲಕರ್ಣಿ, ಅರುಣ ಯಲಗುದ್ರಿ, ಕೆ.ಎ.ವನಜೋಳ, ಡಾ.ಭಾರತಿ ಬಿಜಾಪುರ, ಗಜಾನನ ಮಂಗಸೂಳಿ, ಡಾ. ಎಂ.ಜಿ.ಹಂಜಿ, ಪ್ರಕಾಶ ಪಾಟೀಲ, ಗುಜರಾತಿನ ದೇವಾಂಗಬಾಯಿ ಪಟೇಲ್, ಪುರುಷೋತ್ತಮ ಪಟೇಲ್, ಭೂಪೇಂದ್ರ ಪಟೇಲ್, ಮೌಲಿಕ ವ್ಯಾಸ, ಕೃಷ್ಣಕಾಂತ ಸೋನಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts