More

    ಬಗರ್‌ಹುಕುಂ 200 ಅರ್ಜಿ ವಿಲೇವಾರಿ ಬಾಕಿ; ಕೂಡಲೇ ಹಕ್ಕುಪತ್ರ ವಿತರಿಸಿ: ಅಧಿಕಾರಿಗಳಿಗೆ ಶಾಸಕ ಹಾಲಪ್ಪ ಸೂಚನೆ

    ಸಾಗರ: ತಾಲೂಕಿನಲ್ಲಿ ಬಗರ್‌ಹುಕುಂ ಅರ್ಜಿಗಳನ್ನು ಪರಿಶೀಲಿಸಿದ್ದು, 200 ಅರ್ಜಿಗಳು ಬಾಕಿ ಇದ್ದು, ಕೂಡಲೇ ವಿಲೇವಾರಿ ಮಾಡುವಂತೆ ಅಧಿಕಾರಿಗಳಿಗೆ ಶಾಸಕ ಹರತಾಳು ಹಾಲಪ್ಪ ಸೂಚಿಸಿದರು.
    ಸಾಮರ್ಥ್ಯ ಸೌಧದಲ್ಲಿ ಮಂಗಳವಾರ ಬಗರ್‌ಹುಕುಂ, 94ಸಿ, ವಸತಿ ಯೋಜನೆಗೆ ಸಂಬಂಧಿಸಿದ ಕಂದಾಯ ಇಲಾಖೆ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.
    94ಸಿ ಮತ್ತು 94ಸಿಸಿ ಅರ್ಜಿಗಳನ್ನು ತಕ್ಷಣ ವಿಲೇವಾರಿ ಮಾಡಬೇಕು. ಅರ್ಜಿ ಸಲ್ಲಿಸಿದವರಿಗೆ ಸುಳ್ಳು ಮಾಹಿತಿ ನೀಡದೆ ವಾಸ್ತವ ಅಂಶವನ್ನು ತಿಳಿಸಬೇಕು. ಅನಗತ್ಯವಾಗಿ ಕಚೇರಿಗೆ ಅಲೆಸುವುದು ಬೇಡ. ಬಗರ್‌ಹುಕುಂ, 94ಸಿ ಅಡಿ ಅರ್ಜಿ ಸಲ್ಲಿಸಿದ ಬಹುತೇಕ ಸಂದರ್ಭದಲ್ಲಿ ಕಾನೂನಿನ ತೊಡಕು ಇರುತ್ತದೆ. ಕಾನೂನು ತೊಡಕು ತಿಳಿಸದೆ, ಶಾಸಕರ ಕಡೆ ಬೆರಳು ತೋರಿಸುವ ಕೆಲಸ ಮಾಡಬೇಡಿ ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು. ಕಾನೂನಿನ ವಿಚಾರದಲ್ಲಿ ಇರುವ ಸತ್ಯವನ್ನು ಅವರಿಗೆ ತಿಳಿಸುವ ಕೆಲಸ ಮಾಡಿ ಎಂದರು.
    ಸಾಗರ ತಾಲೂಕಿನಲ್ಲಿ ವಸತಿರಹಿತರನ್ನು ಗುರುತಿಸಿ ಅವರಿಗೆ ಮನೆ ಕೊಡುವ ಸಂಬಂಧ ವಸತಿ ಸಚಿವರ ಜತೆ ಚರ್ಚಿಸಲಾಗಿದೆ. ಕ್ಷೇತ್ರ ವ್ಯಾಪ್ತಿಯ 40ಕ್ಕೂ ಹೆಚ್ಚು ಗ್ರಾಪಂಗಳಲ್ಲಿ ವಸತಿರಹಿತರನ್ನು ಗುರುತಿಸುವ ಕೆಲಸವಾಗಬೇಕು. ಪಂಚಾಯಿತಿಯೊಂದಕ್ಕೆ ಕನಿಷ್ಠ 50 ಮನೆಯನ್ನಾದರೂ ತರುವ ಉದ್ದೇಶವಿದ್ದು, ಸಚಿವರು ಮೌಖಿಕ ಒಪ್ಪಿಗೆ ನೀಡಿದ್ದಾರೆ ಎಂದು ಹೇಳಿದರು.
    ಕೇಂದ್ರ ಸರ್ಕಾರ ದೇಶದಲ್ಲಿ ನಾಲ್ಕು ಜಿಲ್ಲೆಗಳಿಗೆ ಗ್ರಾಮಾಂತರ ಪ್ರದೇಶಗಳಿಗಾಗಿ ನೆಟ್‌ವರ್ಕ್ ಕಲ್ಪಿಸುವ ಯೋಜನೆ ರೂಪಿಸಿದ್ದು, ಅದರಲ್ಲಿ ಸಾಗರವೂ ಸೇರಿದೆ. ಇಂತಹ ಅಪರೂಪದ ಅವಕಾಶವನ್ನು ನಾವು ಬಳಸಿಕೊಳ್ಳಬೇಕು. ಗ್ರಾಪಂ ಮೂಲಕ ಅರ್ಜಿ ಸ್ವೀಕರಿಸಲು ಅವಕಾಶ ಕಲ್ಪಿಸಲಾಗಿದೆ. ಗ್ರಾಮಸ್ಥರಿಗೆ ಮಾಹಿತಿ ನೀಡಿ ನ.30ರೊಳಗೆ ಅರ್ಜಿ ಪಡೆಯಲು ಪಿಡಿಒ ಮತ್ತು ಕಾರ್ಯದರ್ಶಿ ಗಮನ ಹರಿಸಬೇಕು ಎಂದು ನಿರ್ದೇಶನ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts