More

    ಬಗರ್‌ಹುಕುಂ ಅರ್ಜಿ ಬೇಕಾಬಿಟ್ಟಿ ವಜಾ; ಕಾಗೋಡು ಹೊರತುಪಡಿಸಿ ಯಾರೂ ಸಾಗುವಳಿದಾರರ ಪರ ಮಾತಾಡುತ್ತಿಲ್ಲ: ತೀ.ನ.ಶ್ರೀನಿವಾಸ್ ಬೇಸರ

    ಶಿರಾಳಕೊಪ್ಪ: ತಾಯಿಯನ್ನು ದೇವರೆಂದು ಗೌರವಿಸುವ ನಾವು ಭೂಮಿ ತಾಯಿನ್ನೂ ಅಷ್ಟೇ ಗೌರವಿಸುತ್ತೇವೆ. ಆದ್ದರಿಂದ ನಮ್ಮ ಬಗರ್‌ಹುಕುಂ ಭೂಮಿಯನ್ನು ಬಿಡಿಸಲು ಯಾರೇ ಬಂದರೂ ಅದನ್ನು ನಮ್ಮ ತಾಯಿಗೆ ಆದ ದ್ರೋಹವೆಂದು ಭಾವಿಸಿ ಅದನ್ನು ಉಳಿಸಿಕೊಳ್ಳಲು ಯಾವ ಹೋರಾಟಕ್ಕಾದರೂ ಸಿದ್ಧರಾಗಬೇಕಿದೆ ಎಂದು ಮಲೆನಾಡು ಬಗರ್‌ಹುಕುಂ ಸಾಗುವಳಿದಾರರ ಹೋರಾಟ ಸಮಿತಿ ಸಂಚಾಲಕ ತೀ.ನ. ಶ್ರೀನಿವಾಸ ಹೇಳಿದರು.
    ಪಟ್ಟಣದಲ್ಲಿ ಬಗರ್‌ಹುಕುಂ ಹೋರಾಟ ಸಮಿತಿ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ರೈತರ ಸಭೆಯಲ್ಲಿ ಮಾತನಾಡಿದ ಅವರು, 2019ರಲ್ಲಿ ಸುಪ್ರೀಂಕೋರ್ಟ್ ಅರಣ್ಯ ಭೂಮಿಯಲ್ಲಿ ಸಾಗುವಳಿ ಮಾಡುತ್ತಿರುವ ಬಗರ್‌ಹುಕುಂ ಸಾಗುವಳಿದಾರರ ಅರ್ಜಿ ವಜಾ ಆಗಿರುವವರನ್ನು ಹೊರಹಾಕಿ ಎಂದು ಆದೇಶ ನೀಡಿತ್ತು. ನಂತರ ಮೇಲ್ಮನವಿ ಸಲ್ಲಿಸಿ ಅರಣ್ಯ ಭೂಮಿ ಸಾಗುವಳಿ ಮಾಡುತ್ತಿರುವವರು ಬಡವರು, ಅರಣ್ಯವಾಸಿಗಳು, ನಿಗರ್ತಿಕರು ಎಂದು ಮನವರಿಕೆ ಮಾಡಿದಾಗ ತಡೆಯಾಜ್ಞೆ ನೀಡಿತ್ತು. ನಂತರ ರಾಜ್ಯ ಸರ್ಕಾರ ಬಗರ್‌ಹುಕುಂ ಅರ್ಜಿಗಳನ್ನು ವಿಚಾರಣೆ ಮಾಡದೆ ಬೇಕಾಬಿಟ್ಟಿ ವಜಾ ಮಾಡುತ್ತಿದೆ ಎಂದು ದೂರಿದರು.
    ಸಾಗರ ಉಪವಿಭಾಗಾಧಿಕಾರಿ ಶಿಕಾರಿಪುರ ತಾಲೂಕಿನ ಬಗರ್‌ಹುಕುಂ ರೈತರ 9 ಸಾವಿರ ಅರ್ಜಿಗಳನ್ನು ವಿಚಾರಣೆ ಮಾಡದೆ ವಜಾ ಮಾಡಿದ್ದಾರೆ. ಇತರ 3 ಸಾವಿರ ಅರ್ಜಿಗಳನ್ನೂ ವಜಾ ಮಾಡಲಾಗಿದೆ. ಈ ಅರ್ಜಿಗಳನ್ನು ಯಾಕೆ ವಜಾ ಮಾಡಿದ್ದಾರೆಂಬುದನ್ನು ಸ್ಪಷ್ಟಪಡಿಸಲಿ ಎಂದು ಆಗ್ರಹಿಸಿದರು.
    ಜಿಲ್ಲೆಯಲ್ಲಿ ಕಾಗೋಡು ತಿಮ್ಮಪ್ಪ ಒಬ್ಬರನ್ನು ಬಿಟ್ಟು ಬಗರ್‌ಹುಕುಂ ರೈತರ ಬಗ್ಗೆ ಯಾರೂ ಮಾತನಾಡುತ್ತಿಲ್ಲ. ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ರಾಜಕೀಯ ಪಕ್ಷದಲ್ಲಿ ಬಗರ್‌ಹುಕುಂ ಬಗ್ಗೆ ಹೋರಾಡುವವರು ಇಲ್ಲದಂತಾಗಿದೆ. ಜಿಲ್ಲೆಯಲ್ಲಿ 90 ಸಾವಿರ ಅರ್ಜಿಗಳಲ್ಲಿ 67 ಸಾವಿರ ಅರ್ಜಿ ವಜಾ ಮಾಡಲಾಗಿದೆ. ಸುಪ್ರೀಂಕೋರ್ಟ್ ಸಾಗುವಳಿದಾರರಿಗೆ ಸಾಮಾಜಿಕ ನ್ಯಾಯ ಒದಗಿಸಿ ಎಂದು ಆದೇಶ ನೀಡಿ ಮೂರು ವಷರ್ ಕಳೆದರೂ ಯಾವುದೆ ಕ್ರಮ ಕೈಗೊಂಡಿಲ್ಲ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೇಂದ್ರಕ್ಕೆ ಈ ಕುರಿತು ಮಾಹಿತಿ ಕೊಡುವುದಾಗಿ ಹೇಳಲು 9 ತಿಂಗಳು ಸಮಯ ತೆಗೆದುಕೊಂಡರು ಎಂದು ಕಿಡಿಕಾರಿದರು.
    ಸಮಿತಿ ಪ್ರಮುಖ ಹಿರೇಜಂಬೂರು ಚಂದ್ರಣ್ಣ ಮಾತನಾಡಿ, ನಾನು ನಿಜವಾದ ಬಗರ್‌ಹುಕುಂ ರೈತರ ಪರವಾಗಿ ಹೋರಾಡಲು ಮುದಾಗಿದ್ದೇನೆ. ನಾನು ಬಗರ್‌ಹುಕುಂ ರೈತನಲ್ಲ. ನೀವು ಹೋರಾಟಕ್ಕೆ ಸಿದ್ಧರಿದ್ದರೆ ಜಯ ಸಿಗುವವರೆಗೆ ನಾನು ನಿಮ್ಮ ಹೋರಾಟದಲ್ಲಿ ಜತೆಗೆ ಇರುತ್ತೇನೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts